ನಿರಾಶೆ ಹರಿಯಿತು

ನಿರಾಶೆ ಹರಿಯಿತು

ಮತದಾನದ ಮುಂಚೆ ಅದೆಂತಹಾ ಆತಂಕ! ಇನ್ನು ಈ ದೇಶಕ್ಕೆ ಭವಿಷ್ಯ ವಿಲ್ಲ
ಯಾವ ಪಕ್ಷಕ್ಕೂ ಗದ್ದುಗೆ ಸುಲಭವಲ್ಲ! ಎನ್ಡಿಏ,ಯುಪಿಏ,ಮೂರನೇಕೂಟ, ನಾಲ್ಕನೇ ಕೂಟ!! ಈ ಭಾರೀ ನಮ್ಮ ದೇಶವನ್ನು ಆ ದೇವರೇ ಕಾಪಾಡಬೇಕು!!
ಎಲ್ಲಾ ಚಿಂದಿ ಚಿಂದಿ!!
ನಿಜವಾಗಿ ಚಿಂತಕರು ಆತಂಕ ಗೊಂಡಿದ್ದರು. ಆದರೆ ಹಾಗಾಗಲೇ ಇಲ್ಲ. ಜನರು ಸ್ಥಿರ ಸರ್ಕಾರ ತರಲು ನಿರ್ಧರಿಸಿದ್ದರು. ಸಾಮಾನ್ಯ ಪ್ರಜೆಗಳ ಮನದಲ್ಲಿ ಏನಿದೆ ಎಂಬುದು ಯಾರಿಗೂ ತಿಳಿಯಲೇ ಇಲ್ಲ. ಹೌದು, ಇದುವೇ ನಿಜವಾದ ಪ್ರಜಾ ಪ್ರಭುತ್ವ. ಒಂದು ಸ್ಥಿರ ಸರ್ಕಾರವನ್ನು ಜನರು ಚುನಾಯಿಸಿದ್ದಾರೆ. ದೇಶದ ಪ್ರಧಾನಿಗೆ ಇನ್ನು ನಿರಾತಂಕ. ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲು ದಾರಿ ಸುಗುಮ. ಇನ್ನು ನಾಲ್ಕಾರು ಎಂಪಿಗಳನ್ನು ಕೈಲಿಟ್ಟುಕೊಂಡು ಯಾರೂ ಸರ್ಕಾರದ ಮೇಲೆ ಗುಟುರು ಹಾಕುವಂತಿಲ್ಲ. ಎಲ್ಲಾ ಪಕ್ಷಗಳಲ್ಲೂ ಉತ್ತಮ ರಾಜಕಾರಣಿಗಳಿದ್ದಾರೆ. ಹಾಗೆಯೇ ಕೆಟ್ಟವರೂ ಕೂಡ. ಇದೀಗ ಎಲ್ಲರ ಬಂಡವಾಳ ಗೊತ್ತಾಗಬೇಕು. ಯುಪಿಏ ಸರ್ಕಾರ ನಡೆಸಬೇಕು, ವಿರೋಧ ಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ವಿರೋಧಕ್ಕಾಗಿ ವಿರೋಧವಲ್ಲ. ಸರ್ಕಾರದ ನಿರ್ಧಾರ ಸಾಮಾನ್ಯ ಜನರಿಗೆ ಮಾರಕವಾಗಿದ್ದರೆ ಸರ್ಕಾರದ ಕಿವಿ ಹಿಂಡಬೇಕು, ಪೂರಕ ವಾಗಿದ್ದರೆ ಅದನ್ನು ಗಮನಿಸಿ ರಚನಾತ್ಮಕ ಸಹಕಾರ ನೀಡಬೇಕು. ನಿಜವಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಇದು ಪರ್ವ ಕಾಲ. ಸರ್ಕಾರದಲ್ಲಿರುವ ಅಥವಾ ವಿರೋಧ ಪಕ್ಷದಲ್ಲಿರುವ ಎಲ್ಲರೂ ಹೇಗೆ ವರ್ತಿಸುತ್ತಾರೆಂಬುದರಲ್ಲಿ ದೇಶದ ಭವಿಷ್ಯ ನಿಂತಿದೆ. ಒಂದು ಸ್ಥಿರ ಸರ್ಕಾರ ಇದ್ದಾಗ ದೇಶ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಉತ್ತಮವಾಗಿರುವುದರಲ್ಲಿ ಸಂದೇಹವಿಲ್ಲ. ಇದೀಗ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಸನ್ನಿಹಿತವಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದಿದ್ದರೂ ಇನ್ನೂ ಬಡತನ ದೂರವಾಗಿಲ್ಲ. ಬ್ರಷ್ಟಾಚಾರಕ್ಕೆ ಕಡಿವಾಣ ಹಾಕಿಲ್ಲ. ಶ್ರೀಸಾಮಾನ್ಯನ ಬದುಕಿನಲ್ಲಿ ನೆಮ್ಮದಿ ಇಲ್ಲ. ಎಲ್ಲೆಲ್ಲೂ ಸರ್ಕಾರಿ ಯಂತ್ರಕ್ಕಿಂತ ಹೆಚ್ಚಾಗಿ ಪುಡಾರಿಗಳ ಮರಿ ಪುಡಾರಿಗಳ ದರ್ಬಾರು ನಡೆಯುತ್ತಿರುವುದು ಸುಳ್ಳಲ್ಲ.ಸರ್ಕಾರದ ಯೋಜನೆಗಳು ಸಾರ್ಥಕವಾಗುತ್ತಿಲ್ಲ. ಎಲ್ಲೆಲ್ಲೂ ಮಧ್ಯವರ್ತಿಗಳದ್ದೇ ಕಾಟ. ಇದಕ್ಕೆ ರಾಜ್ಯ ಸರ್ಕಾರವೂ ಹೊರತಲ್ಲ.

ಹೊಸ ಸರ್ಕಾರದ ಮುಂದೆ ಇಂತಹಾ ನೂರಾರು ಸವಾಲುಗಳು. ದೇಶದ ಅಖಂಡತೆಗೆ ಧಕ್ಕೆ ತರುವ ಭಯೋತ್ಪದನೆ, ಮತಾಂಧತೆ, ರಾಷ್ಟ್ರವಿರೋಧೀ ಕೃತ್ಯಗಳು, ಎಲ್ಲವನ್ನೂ ಬಗ್ಗು ಬಡೆಯಲು ಸದವಕಾಶ.ದೇಶದ ಬಡ ರೈತ, ಕೂಲಿ ಕಾರ್ಮಿಕರ ಮುಖದ ಮೇಲೆ ಮಂದಹಾಸ ಮೂಡುವ ಯೋಜನೆಗಳು ಅನುಷ್ಠಾನವಾಗಬೇಕಿದೆ. ಸರ್ಕಾರೀ ಯೋಜನೆಗಳ ದುರುಪಯೋಗ ಮಾಡಿಕೊಂದವರಿಗೆ ತಕ್ಕ  ಶಿಕ್ಷೆ ಆಗಬೇಕಿದೆ. ಕೇಂದ್ರದ ಹೊಸ ಸರಕಾರವು ಈ ಎಲ್ಲಾ ದಿಕ್ಕುಗಳಲ್ಲೂ ಗಮನ ಹರಿಸುತ್ತದೆಂಬ  ನಿರೀಕ್ಷೆಯಲ್ಲಿ  ಶ್ರೀ ಸಾಮಾನ್ಯನಿದ್ದಾನೆ. ಹೊಸ ಸರಕಾರಕ್ಕೆ ಶುಭವಾಗಲೀ.ಶ್ರೀ ಸಾಮಾನ್ಯನ  ನಿರೀಕ್ಷೆಗೆ ಕಾಲವೇ ಉತ್ತರ ನೀಡಬಲ್ಲದು.

Rating
No votes yet

Comments