ನೀತಿ ಕತೆ

ನೀತಿ ಕತೆ

ಗಡದ್ದಾಗಿ ಊಟ ಮುಗಿಸಿ, ಕೈ ತೊಳೆದು ದೀಪದ ಮುಂದೆ ಕೂತೆ. ನಿದ್ದೆ ಬರುಷ್ಟರಲ್ಲಿ ಒಂದು ನೀತಿ ಕತೆ ಬರೀಬೇಕು ಅಂತ ಮನಸ್ಸು ಬಂತು.

ಹೇಗಿರಬೇಕಪ್ಪಾಂದರೆ, ಎಂಥವರಿಗೂ ನೀತಿ ಹೇಳೋ ಕತೆ ಆಗಿರಬೇಕು. ಧರ್ಮಿಷ್ಠ ಪಿಕ್‌ಪಾಕಟ್‌ರಿಗೂ, ಕಳ್ಳ ನೀತಿವಂತರಿಗೂ. ಮತ್ತು ಇವೆರಡು ಆಗಿದ್ದೂ ಎರಡಕ್ಕೂ ಸೇರದವರಿಗೂ ಅದು ಸಲ್ಲಬೇಕು.

ಹೇಗಿರಬೇಕಪ್ಪಾಂದರೆ, ಚುಚ್ಚಬೇಕು, ಹೊಳೆಸಬೇಕು, ಮಿಡಿಬೇಕು. ಕತೆಯ ಕೊನೆ ಸಾಲು ಮುಗಿಯೋ ಅಷ್ಟರಲ್ಲಿ ಓದಿದವರು ಬದಲಾಗಿ ಬಿಟ್ಟಿರಬೇಕು. ನೀತಿವಂತರು ಕಳ್ಳರಾಗಬೇಕು. ಕಳ್ಳರು ನೀತಿವಂತರಾಗಬೇಕು.

ಹೇಗಿರಬೇಕಪ್ಪಾಂದರೆ, ಬರೀ ಈವತ್ತಿನವರಿಗೆ ಮಾತ್ರ ಆದರೆ ಸಾಲದು. ಸಾವಿರಾರು ವರ್ಷದ ಹಿಂದಿನವರಿಗೂ, ಮುಂದೆ ಬರೋ ಸಾವಿರಾರು ವರ್ಷದವರೆಗೂ ಸಲ್ಲಬೇಕು. ಈವತ್ತಿನ ಬೆಳಕು ಯಾವತ್ತಿಗೂ ಬಿದ್ದು ಕತ್ತಲೆಯ ಒಳಗನ್ನ ಬೆಳಗಬೇಕು.

ಹೇಗಿರಬೇಕಪ್ಪಾಂದರೆ, ಮತ್ತೆ ಮತ್ತೆ ಓದಿದವರಿಗೆ ಬೇರೆ ಬೇರೆ ನೀತಿ ಹೇಳೋ ಅಂಥ ಕತೆ ಆಗಬೇಕು. ಮೊದಲ ಸಲ ಓದಿದಾಗ ಒಳ್ಳೇವ್ರಾದೋರು, ಎರಡನೇ ಸಲ ಓದಿದಾಗ ಕೆಟ್ಟವರಾಗಬೇಕು. ಮೂರನೇ ಸಲ ಓದಿದಾಗ ಕೆಟ್ಟವ್ರು ಒಳ್ಳೇವ್ರು ಒಟ್ಟೊಟ್ಟಿಗೆ ಆಗಬೇಕು. ಒಂದೇ ಸಲ ಕೆಟ್ಟವರೂ ಒಳ್ಳೆವರೂ ಆಗೋದು ಹ್ಯಾಗೆ ಅನ್ನೋ ಪ್ರಶ್ನೇನೆ ನಾಶ ಆಗಿಬಿಡಬೇಕು. ಅಂಥ ಕತೆ ಆಗಿರಬೇಕು.

ಅಂಥ ಕತೆ ಬರೆದು ಮುಗಿಸೋ ಅಷ್ಟರಲ್ಲಿ ನಾನು ಏನೇನು ಆಗಿರಬೇಕಾಗತ್ತಲ್ಲ ಅಂತ ವರಿ ಮಾಡಿಕೊಂಡು ಕೂತೆ. ಎದುರಿಗಿದ್ದ ದೀಪ ವಾಲಾಡ್ತಾ ಇತ್ತು.

Rating
No votes yet