ನೀರಿನ ಮುಂದೆ ನಾವ್ಯಾರು? - ಭಾಗ ಎರಡು

ನೀರಿನ ಮುಂದೆ ನಾವ್ಯಾರು? - ಭಾಗ ಎರಡು

(ಮೊದಲನೆ ಭಾಗವನ್ನು ಓದಿರದಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿರಿ http://sampada.net/node/1412)

ಕೈ ಸೋಲಲು ಆರಂಭವಾಯ್ತು, ಒಂದೇ ಒಂದು ಅರೆಚಣ (fraction of a second?) ನಿಂತರೆ ಇನ್ನೊಂದಿಷ್ಟು ಜೋರಾಗಿ ಕೈಬೀಸಬಹುದು ಎನ್ನಿಸಿ ಕಾಲು ನೆಲಕ್ಕಿಡಲು ಪ್ರಯತ್ನಿಸಿದೆ ಎದೆ ಝಲ್ಲೆಂದಿತು! ನೆಲವೇ ತಾಕುತ್ತಿಲ್ಲ ಕಾಲಿಗೆ! ಮಾತ್ರವಲ್ಲ ಅಷ್ಟು ಮಾತ್ರದ ಈಜನ್ನು ನಿಲ್ಲಿಸಿದ ಪರಿಣಾಮ ನೀರಿನ ರಭಸಕ್ಕೆ ಕೊಚ್ಚಿ ಇನ್ನೆಲ್ಲಿಗೋ ಹೋಗತೊಡಗಿದೆ. "ಮುಗೀತಲೆ ಮಗನೆ ನಿನ್ ವ್ಯವಹಾರ!" ಅಂತ ಮನಸ್ಸಿನಲ್ಲಿ ಅಂದುಕೊಂಡೆ, ಆದ್ರೂ ಜೀವದಾಸೆಯಿತ್ತಲ್ಲ? ನೋಡೋಣ ಅಂದುಕೊಂಡು ಕೈ ಎಳೆದೆಳೆದು ಹೆಣಗಾಡಿದೆ. ಏನು ಪ್ರಯೋಜನ ಸುಮ್ಮನೆ ಇನ್ನೊಂದಿಷ್ಟು ಆಯಾಸ ಹೆಚ್ಚಿತಷ್ಟೆ. ನನ್ನ ಸ್ನೇಹಿತರಿಗೆ ಇದ್ಯಾವುದರ ಪರಿವೆಯೇ ಇಲ್ಲ. ಅವರ ಪಾಡಿಗೆ ಅವರು ಇನ್ನೊಂದು ದಡದಲ್ಲಿ ಕಲ್ಲಂಗಡಿ ಹಣ್ಣನ್ನು ಮೆಲ್ಲುವುದರಲ್ಲಿ ಮಗ್ನರು :( ಈಚೆಯ ದಡದಲ್ಲಿ ಬಟ್ಟೆ ಒಗೆಯುತ್ತಿದ್ದ ಕೆಲವು ಹೆಂಗಸರೂ, ಚಡ್ಡಿಯನ್ನೋ ಇನ್ನೇನನ್ನೊ ಹಿಂಡುತ್ತಲೋ, ಬೀಡಿ ಸೇದುತ್ತಲೋ ನಿಂತಿದ್ದ ಕೆಲ ಗಂಡಸರೂ ನನ್ನ ಪರಿಸ್ಥಿತಿಯನ್ನು ಗರಬಡಿದವರ ತರಹ ನಿಂತು ನೋಡ್ತಾ ಇದ್ದಾರೆ. ಅವರಲ್ಲಿ ಕೆಲವರು ಒಳ್ಳೆಯ ಈಜುಪಟುಗಳು ಎಂಬುದು ನನಗೆ ಅಂತಹ ಸಾಯುವ ಪರಿಸ್ಥಿತಿಯಲ್ಲಿಯೂ ತಿಳಿಯಿತು. ಆದರೆ ಅವರೇ ನನ್ನನ್ನು ನೋಡಿ ಮುಗಿದ ಕಥೆ ಅಂತ ಅಂದುಕೊಳ್ಳುತ್ತಿದ್ದುದು (ಅಥವಾ ನನಗೆ ಹಾಗನ್ನಿಸಿದ್ದುದು) ನನ್ನನ್ನು ಇನ್ನಷ್ಟು ನಿರ್ವಿಣ್ಣನನ್ನಾಗಿಸಿತು. ಈ ಮಧ್ಯೆ ನೀರಿನ ಹೊಡೆತದಿಂದ ಪಾರಾಗಲು ಕೊನೆಯ ಬಾರಿ ಕೈಬೀಸಿದರಾಯ್ತು ಅಂದುಕೊಂಡೆ ಆದರೆ ಕೈಯೆತ್ತಲು ಆಗಲೇ ಇಲ್ಲ. ನೀರಿನೊಂದಿಗೆ ಕೊಚ್ಚಿಹೋಗಲು ನಾನೇ ಇನ್ನೊಂದಿಷ್ಟು ಪ್ರಯತ್ನ ಮಾಡಿದಂತಾಯ್ತು. "ಸತ್ತೇ ಹೋದರಾಯ್ತು ಬಿಡು" ಅಂದುಕೊಂಡೆ. ಆದರೆ ಕೊನೆಕ್ಷಣ ಅದೆಲ್ಲಿಂದ ಪ್ರೇರಣೆಯಾಯ್ತೋ ಏನೋ ಗೊತ್ತಿಲ್ಲ "ಜೈ ಭಜರಂಗಬಲಿ" ಎಂದು ನೀರಿನಲ್ಲಿ ಕೈ ಎಳೆದು ಹಾಕಿದೆ. ಅಷ್ಟೆ! ಯಾರೋ ನನ್ನನ್ನು ಬಲವಾಗಿ ದಡದೆಡೆಗೆ ನೂಕಿದಂತಾಯ್ತು. ಇನ್ನೊಮ್ಮೆ "ಜೈ ಭಜರಂಗಬಲಿ" ಎಂದೆ ಈ ಬಾರಿ ಇನ್ನಷ್ಟು ವೇಗದೊಂದಿಗೆ ಮುಂದೆ ಬಂದೆ. ನೋಡೋಣ ಎಂದು ಕಾಲಿಟ್ಟರೆ ನುಣುಪಾದಕಲ್ಲುರಾಶಿ ಸಿಕ್ಕೇ ಬಿಟ್ಟಿತು! ಮಾತ್ರವಲ್ಲ ಪ್ರವಾಹದ ವೇಗ ಗಣನೀಯವಾಗಿ ಕಮ್ಮಿಯಿರುವ ಜಾಗಕ್ಕೆ ಬಂದುಬಿಟ್ಟಿದ್ದೇನೆ. ಸಾಕಪ್ಪ ಸಾಕು ಎನಿಸಿ ಈಜು ನಿಲ್ಲಿಸಿ ನಡೆದುಕೊಂಡು ಬಂದು ದಡಮುಟ್ಟಿ ಹತ್ತು ನಿಮಿಷ ಕೂತುಕೊಂಡೆ. ಸ್ವಲ್ಪ ಸಮಯದ ನಂತರ ನನ್ನ ಸ್ನೇಹಿತರು ಸಹ ಒಬ್ಬೊಬ್ಬರಾಗಿ ಬಂದರು. ಎಲ್ಲರಿಗೂ ನೀರು ಸ್ವಲ್ಪ ಸ್ವಲ್ಪ ತನ್ನ ಆರ್ಭಟವನ್ನು ತೋರಿಸಿಯೇ ಬಿಟ್ಟಿತ್ತು. ಒಬ್ಬ "ಏನ್ಲೇ ನೀರು ಇದ್ಕಿದ್ದಂಗೆ ಜಾಸ್ತಿ ಆಗೇತೀ?" ಅಂದರೆ ಇನ್ನೊಬ್ಬ "ನೀನೇನ್ಲೆ ಇದ್ಕಿದ್ದಂಗೆ ಬಂದ್ಯಲ? ನೀರಿತ್ತೇನs ಆವಾಗs" ಅಂತ ಅನ್ನುವವ. ಇನ್ನೊಬ್ಬನಂತೂ "ಲೇ ನಿಂಗೇನೂ ಆಗಿಲ್ಲೇನು? ನಾನಂತ್ರೂ ಸೆಳುವಿನಾಗೆ ಸಿಕ್ಕೊಂಡೇ ಬಿಟ್ಟಿದ್ನ್ಯಲೇ, ಹೆಂಗೋ ಬಚಾವಾದೆ ನೋಡು" ಅಂದ. ಅವರ್ಯಾರಿಗೂ ಫಜೀತಿಗೀಡಾಗಿದ್ದ ನನ್ನ ಅವಸ್ಥೆ ಗೊತ್ತಾಗಿರಲೇ ಇಲ್ಲ. ನನಗೆ ದೇವರ ಶಕ್ತಿಯ ಪರಿಚಯವಾಯ್ತೋ ಇಲ್ವೋ ಅವನ ನಾಮದ ಬಲವಂತೂ ಗೊತ್ತಾಯ್ತು.

ಮನೆಯ ದಾರಿ ಹಿಡಿದ ನಾವೆಲ್ಲ ದಾರಿಯಲ್ಲೇ ಯಾರದೋ ಮರದಿಂದ ಅರ್ಧಮರ್ಧ ಹಣ್ಣಾದಂತಿದ್ದ ಪಪ್ಪಾಯಿಕಾಯಿ ಕಿತ್ತು ಗಪಗಪನೆ ತಿಂದೆವು. ಅದರಿಂದ ಒಸರಿದ ಹಾಲು ತನ್ನ ಪರಿಣಾಮ ತೋರಿ ನಾಲಿಗೆ, ತುಟಿಯೆಲ್ಲ ಒಡೆದು ಉರಿಯತೊಡಗಿತು. ಎಲ್ಲರಿಗೂ ಸಿಕ್ಕಾಪಟ್ಟೆ ಸುಸ್ತಾಗಿಹೋಗಿದ್ದರಿಂದ ಅದು ಹಣ್ಣೋ, ಕಾಯೋ ಅಥವ ಎರಡರ ಮಧ್ಯದ ಸ್ಥಿತಿಯ ದೋರಗಾಯೋ ಎಂದು ನೋಡುವ ವಿವೇಚನೆಯನ್ನೇ ಕಳೆದುಕೊಂಡಿದ್ದೆವು.

ರಾತ್ರಿ ನಾನು ನದಿಯಲ್ಲಿನ ಘಟನೆಯನ್ನೇ ನೆನೆದು ನೆನೆದು "ಶಿವ್ರಾತ್ರಿಬಂಡಿಗೆ ಹೋಗಿ ತಲೆ ಹೊಡ್ಕೊಂಡಿದ್ರ ನನ್ಕಥಿ ಮುಗದ ಹೋಗಿರsದು, ಸುಳ್ಯಾಗ ಸಿಕ್ಕೊಂಡಿದ್ರ ಅದು ನನ್ನs ತಿರ್ಗೀಸಿ ತಿರ್ಗೀಸಿ ಒಗದಿರ್ತಿತ್ತು. ಇನ್ಮ್ಯಾಲೆ ಸತ್ರೂ (!?) ನದೀಗೆ ಹೋಗಬಾರದು" ಅಂತ ಏನೇನೋ ಶಪಥಗಳನ್ನು ಮಾಡಿದೆ. ಮತ್ತೆ ಮಾರನೇ ದಿನ ಯಥಾ ಪ್ರಕಾರ ನಮ್ಮ ಸ್ನೇಹಿತರು ಮನೆ ಮುಂದೆ ಬಂದು ನಿಂತರು, ನಮ್ಮಮ್ಮ "ನಡಿಯಪ ನದಿಗೆ, ಆsದ್ರ ಸ್ವಲುಪು ಬೇಗ ಬಾ" ಅಂದರು. ಭಗವಂತ ನನ್ನ ಶಪಥಕ್ಕೆ ಕೇವಲ ಒಂದು ರಾತ್ರಿಯ ಆಯಸ್ಸನ್ನು ದಯಪಾಲಿಸಿದ್ದ.!

======================

 ಆ ದಿನ ಯಾಕೇನೋ ಗೊತ್ತಿಲ್ಲ ಸಿಕ್ಕಾಪಟ್ಟೇ ಕೈ ನೋವು ಶುರುವಾಯ್ತು. ಅದೂ ಅಲ್ದೆ ನಾನು ಬೆಳಿಗ್ಗೆ ಊರಿಗೆ ಹೋಗುವ ತುರ್ತಿನಲ್ಲಿದ್ದೆ. ನನ್ನ ಅನುಭವವನ್ನು ಪೂರ್ತಿ ವಿವರಿಸಲು ಆಗಿರಲಿಲ್ಲ.ಈಗ ಊರಿಂದ ಬಂದಾಯ್ತು, ಕೈನೋವೂ ಹೋಗಿದೆ. ಹೀಗಾಗಿ ನನ್ನ ಅನುಭವವನ್ನು ಪೂರ್ತಿಯಾಗಿ ವಿವರಿಸಿದ್ದೇನೆ. ಇದೇ ರೀತಿ ಇನ್ನೂ ಕೆಲವು ಅನುಭವಗಳು ನೆನಪಿನಾಗಸದಲ್ಲಿ ಆಗಾಗ ತೇಲಿಬಂದು ನನ್ನನ್ನು ಮುದಗೊಳಿಸುತ್ತಿರುತ್ತವೆ. ಸ್ನೇಹಿತರೇ, ನಾನು ದೇವರ ಅಸ್ತಿತ್ವದಲ್ಲಿ ನಂಬಿಕೆಯಿರುವ ವ್ಯಕ್ತಿ. ಆದರೆ ನಾನು ನಂಬಿರುವ ಸಿದ್ಧಾಂತವನ್ನು ಬಲವಂತವಾಗಿ ಇನ್ನೊಬ್ಬರ ಮೇಲೆ ಹೇರುವುದು ನನಗೆ ಇಷ್ಟವಿಲ್ಲ. ತುಂಗಭದ್ರೆಯಲ್ಲಿ ನಾನು ಕೊಚ್ಚಿ ಹೋಗಲೇಬೇಕಿತ್ತು ಎನ್ನುವ ವಿಷಯ ನಮ್ಮೂರ ನದಿಯ ಹರಹು ಪರಿಚಯವಿರುವವರಿಗೆ ಮಾತ್ರ ಮನನವಾಗುವ ಅಂಶ. ಹಾಗೆಯೆ ಶ್ರೀರಾಮದೇವರ ಭಕ್ತಾಗ್ರಣಿಯಾದ ಹನುಮನ ನಾಮದ ಬಲದಿಂದಲೇ ನಾನು ಬದುಕಿ ಉಳಿದದ್ದು ಸಾಧ್ಯ ಎನ್ನುವ ಅಂಶ ದೇವರ ಅಸ್ತಿತ್ವವನ್ನು ಅನುಭೂತಿಗೆ ತಂದುಕೊಂಡವರಿಗೆ ಮಾತ್ರ ಮನನವಾಗುವ ವಿಷಯ.

=======================

ಎನಗಿಂತ ಕಿರಿಯರಿಲ್ಲ

ರಘುನಂದನ

Rating
No votes yet