ಪಂಕ್ತಿಭೇದ: ಪೇಜಾವರರ ಪ್ರಶ್ನೆ
ಧರ್ಮಸ್ಥಳ, ಸುಬ್ರಹ್ಮಣ್ಯಗಳಲ್ಲೂ ಇದು ಇರುವಾಗ, ‘ಪಂಕ್ತಿಭೇದದ ವಿಚಾರದಲ್ಲಿ ತಮ್ಮನ್ನೇ ಏಕೆ ಗುರಿ ಮಾಡಲಾಗುತ್ತಿದೆ?’ ಎಂದು ಪೇಜಾವರ ಸ್ವಾಮಿಗಳು ಪ್ರಶ್ನಿಸಿದ್ದಾಗಿ ಜ. 7 ರ ಪ್ರಜಾವಾಣಿಯಲ್ಲಿ ಸುದ್ದಿ ಪ್ರಕಟವಾಗಿದೆ. ಈ ಪ್ರಶ್ನೆಗೆ ಕಾರಣವಿದೆ ಮತ್ತು ಆ ಕಾರಣ, ಕೇವಲ ವ್ಯಂಗ್ಯದ ಸವಾಲು ಮಾತ್ರಾ ಆಗಿರದೆ, ಪ್ರಾಮಾಣಿಕ ಉತ್ತರದ ಭರವಸೆ ಹೊಂದಿರುವುದೂ ಆಗಿದೆ.
‘ಮಧ್ವರ ಸಿದ್ಧಾಂತದಂತೆ ಎಲ್ಲರಿಗೂ ಭಕ್ತಿದೀಕ್ಷೆ ನೀಡಲು ಸಿದ್ಧನಿದ್ದೇನೆ’ ಎನ್ನುವ ಮಾತನ್ನೂ ಸ್ವಾಮಿಗಳು ಪುನರುಚ್ಚರಿಸಿದ್ದಾರೆ. ಮನೋವಾಕ್ಕಾಯಗಳಲ್ಲಿ ಪರಿಶುದ್ಧರಾದ ಯಾರಿಗೂ ಭಕ್ತಿ ದೀಕ್ಷೆ ನೀಡುವ ಸ್ವಾಮಿಗಳ ಸಂಕಲ್ಪ ಉದಾತ್ತವಾದದ್ದೇ. ಅದಕ್ಕೂ ಮೊದಲು ಈ ವಯೋವೃದ್ಧ, ಜ್ಞಾನವೃದ್ಧ ಮಾಧ್ವ ಸಂನ್ಯಾಸಿ ಮಾಡಬೇಕಾದ ಅರ್ಜೆಂಟ್ ಕೆಲಸವಿದೆ. ಅದೆಂದರೆ ಮಧ್ವಾಚಾರ್ಯರ ‘ಭೇದಸಿದ್ಧಾಂತ’ದ ಬಗ್ಗೆ, ಸಮಾಜದಲ್ಲಿರುವ ಪೂರ್ವಾಗ್ರಹವನ್ನು ಹೋಗಲಾಡಿಸುವುದು. ಉತ್ತಮ, ಮಧ್ಯಮ, ಅಧಮ ಎಂಬ ಚೇತನ ವ್ಯತ್ಯಾಸ, ಯಾವುದೇ ಸಮಾಜದಲ್ಲೂ ಇರುವ ಸಾರ್ವತ್ರಿಕ ಸತ್ಯವೇ ಹೊರತು, ಮಧ್ವಾಚಾರ್ಯರು ಅದನ್ನು ಹುಟ್ಟಿಹಾಕಿದ್ದಲ್ಲ. Lower, Lower-middle, Middle, Upper-middle ಮತ್ತು Upper class ಎಂಬ ವರ್ಗೀಕರಣ, ಪಾಶ್ಚಾತ್ಯ, ಪೌರ್ವಾತ್ಯ, ಮಧ್ಯಪ್ರಾಚ್ಯ ಸಮುದಾಗಳಲ್ಲೆಲಾ ಇರುವಂಥದಲ್ಲವೇ? ಹಾಗೆಯೇ ‘ಜೀವ-ಜೀವ ಭೇದ’ – Individual differences – ಸಹ ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ. ಅದಕ್ಕೆ ಕೃತಕವಾಗಿ ‘ಜಾತಿ’ ತಳಕು ಹಾಕುವ ಪಾತಕ, ಪಟ್ಟಭದ್ರರದ್ದೇ ಹೊರತು ಆಚಾರ್ಯರು ಅವರ ಪರ ಎಂದು ಭಾವಿಸಬೇಕಾದ್ದಿಲ್ಲ. ಒಬ್ಬ ಕಬೀರ್, ಒಬ್ಬ ಜೇಡರ ದಾಸಿಮಯ್ಯ ಹುಟ್ಟಿದ ಕಾರಣಕ್ಕಾಗಿ ಇಡೀ ನೇಕಾರ ಕುಲವೇ ‘ಸಜ್ಜನ’ ಎಂದು ಹೇಳಬರುವುದಿಲ್ಲ; ಒಬ್ಬ ಕನಕದಾಸ, ಕೇವಲ ಕುರುಬಜಾತಿ ಮಾತ್ರದ ಸ್ವತ್ತಾಗುವುದಿಲ್ಲ. ಇದು ಆಯಾ ಮಹತ್ಮರ ತಪಸ್ಸಾಧನೆ, ಯೋಗಸಾಧನೆ ಮತ್ತು ಕ್ಷುದ್ರ ಸಮಾಜವನ್ನು ಮೆಟ್ಟಿ ನಿಲ್ಲುವ ಸ್ವಂತದ, ಸಾತ್ವಿಕ ಛಲ. ಹಾಗೆಯೇ ಬ್ರಹ್ಮಕುಲದ ಆಢ್ಯತೆಯಲ್ಲಿ ಸಹ ಪಾಪಿಷ್ಟಾತಿ ಪಾಪಿಷ್ಟರು ಇದ್ದರು, ಇದ್ದಾರೆ, ಇರುತ್ತಾರೆ! ಆದ್ದರಿಂದ ಭ್ರಷ್ಟ ರಾಜಕೀಯದ ‘ಜಾತಿಭೇದ’ಕ್ಕೂ, ಆಚಾರ್ಯರ ‘ಪಂಚಭೇದ ಸಿದ್ಧಾಂತ’ಕ್ಕೂ ಸಂಬಂಧವಿಲ್ಲ ಎಂಬ ‘ಐಹಿಕ ಸತ್ಯ’ವನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡಬೇಕು. ಈ ಉದ್ದೇಶ ಸಾಧನೆಯಾಗಬೇಕಾದರೆ, ಶಾಸ್ತ್ರವಾಕ್ಯಗಳನ್ನು ಅಸಂಬದ್ಧವಾಗಿ ಉದುರಿಸುವ, ಪಟ್ಟಭದ್ರ ಶಾಲುಪಂಡಿತರುಗಳ ಬಾಯಿ ಮುಚ್ಚಿಸುವ ಅಗತ್ಯ ಬಹಳವಾಗಿದೆ.
ಮಾಂಸ-ಮದ್ಯಗಳನ್ನು ತ್ಯಜಿಸುವ, ದಲಿತರಾದಿಯಾಗಿ ಯಾರಿಗೂ ವೈಷ್ಣವದೀಕ್ಷೆ ನೀಡುವ ಸ್ವಾಮಿಗಳ ಷರತ್ ಸಹ ಒಪ್ಪತಕ್ಕದ್ದೇ. ಆದರೆ ‘ವೈಷ್ಣವದೀಕ್ಷೆ’ಯ ಆಧ್ಯಾತ್ಮಿಕ ಪ್ರಯೋಜನವಾದರೂ ಏನು? ಮಠದಲ್ಲಿ ವೇದ-ವಾಯುಸ್ತುತಿಗಳನ್ನು ಹೇಳುವ ಬ್ರಾಹ್ಮಣ ವಟು-ಗೃಹಸ್ಥರೆಲ್ಲಾ, ನರಸಿಂಹ ಮೆಹ್ತಾ ಹೇಳುವ ‘ವೈಷ್ಣವ ಜನತೋ...’ ಅರ್ಥದಲ್ಲಿ ‘ವೈಷ್ಣವಜನ’ ಆಗಿದ್ದಾರೆಯೇ?
ದಲಿತರೋ, ಜಾತಿ-ವೈಷ್ಣವ ಮಹಾಮಹೋಪಾಧ್ಯಾಯರೂ, ಊರ್ಧ್ವಪುಂಡ್ರ, ಜನಿವಾರಮಾತ್ರದಿಂದ ಸಜ್ಜನರಾಗಿಬಿಡುತ್ತಾರೆಯೇ; ಹಾಗೆಯೇ ವೇಷ ಕಟ್ಟದವರೆಲ್ಲಾ ಪಾಪಿ-ಪಾಮರರೇ?
ಪ್ರಾಜ್ಞರಾದ ಸ್ವಾಮಿಗಳು, ಸಾಮಾಜಿಕ ಬಗ್ಗಡದ ಈ ಪ್ರಶ್ನೆಯನ್ನೂ ತಿಳಿಗೊಳಿಸಬಹುದೇ?