ಪತಿ ಪತ್ನಿಯರು ಜೀವನದಲ್ಲಿ ಎಂದಾದರೂ ಅಣ್ಣ -ತಂಗಿಯರಂತಿರುವ ಅಗತ್ಯವಿದೆಯೇ?

ಪತಿ ಪತ್ನಿಯರು ಜೀವನದಲ್ಲಿ ಎಂದಾದರೂ ಅಣ್ಣ -ತಂಗಿಯರಂತಿರುವ ಅಗತ್ಯವಿದೆಯೇ?

 

ಸ್ವಾಮೀಜಿಯೊಬ್ಬರು ಪತಿ-ಪತ್ನಿಯರ ಸಂಬಂಧ, ಕುಟುಂಬ ಜೀವನ ಧರ್ಮದ ಬಗ್ಗೆ ಉಪನ್ಯಾಸವನ್ನು ಮಾಡುತ್ತಿದ್ದರು. ಉಪನ್ಯಾಸದ ಮಧ್ಯೆ ಒಂದು ಮಾತು ಹೀಗಿತ್ತು “ ಸಂತಾನ ವೃದ್ಧಿಗಾಗಿ ಮಾತ್ರ ಪತಿ-ಪತ್ನಿಯರಂತಿರಬೇಕು,ಉಳಿದಂತೆ ಅಣ್ಣ-ತಂಗಿಯಂತಿರಬೇಕು” ಅವರು ಇನ್ನೂ ಬೇರೆ ಶಬ್ಧವನ್ನೇ ಉಪಯೋಗಿಸಿದ್ದರು. ಕೆಲವು ಶಬ್ಧ ಪ್ರಯೋಗ ಮಾಡಲು ನನ್ನ ಲೇಖನಿ ನಾಚುತ್ತದೆ.
ನನಗೆ ಆಗ ನಿಜವಾಗಿ ಅನ್ನಿಸ್ತು, ಈ ಸ್ವಾಮೀಜಿಯವರ ಮಾತು ಅತಿಯಾಯ್ತು! ಇವರು ಯಾವುದೇ ಧರ್ಮಗ್ರಂಥವನ್ನು ಓದಿರಬಹುದು, ಅದರೆ ಅವ ರಿಗೆ ಯಾವ ಅನುಭವ?ಅವರಿಗೇಕೆ ಬೇಡದ ಈ ಉಸಾಬರಿ? ಹಿತವಚನ ಹೇಳುತ್ತೀನೆಂದು ಪತಿ-ಪತ್ನಿಯರ ಖಾಸಗೀ ಬದುಕಿನ ಬಗ್ಗೆಯೂ ಮಾತನಾಡಬಹುದೇ?
ನಾನು ವೇದದ ಕೆಲವು ಮಂತ್ರಗಳನ್ನು ಪರಿಶೀಲಿಸಿದಾಗ ಪತಿ-ಪತ್ನಿಯರ ನಡುವೆ ಸಂಬಂಧ ಹೇಗಿರಬೇಕು, ಎಷ್ಟು ಮಧುರವಾಗಿರಬೇಕು, ಪರಸ್ಪರ ಅರಿತು ಹೇಗೆ ಸುಖ ಅನುಭವಿಸಬೇಕು, ಮುಂತಾಗಿ ಬಹಳಷ್ಟು ವಿವರಗಳು ಲಭಿಸುತ್ತವೆ, ಆದರೆ ಸ್ವಾಮೀಜಿಯವರು ಹೇಳಿದ ಮಾತು ವೇದ ಮಂತ್ರಗಳಲ್ಲಿ ನನ್ನ ಕಣ್ಣಿಗೆ ಇನ್ನೂ,ಬಿದ್ದಿಲ್ಲ. 
ಸ್ವಲ್ಪ ವಾಸ್ತವ ಚಿಂತನೆ ನಡೆಸೋಣ. ಪತಿ-ಪತ್ನಿಯರು ಒಟ್ಟಾಗಿ ಜೀವನ ನಡೆಸುತ್ತಿದ್ದಾಗ, ಅವರಲ್ಲಿನ ಆಧ್ಯಾತ್ಮಿಕ ಚಿಂತನೆ, ಮಾನಸಿಕ ಸಮಸ್ಥಿತಿ,ಮಧುರ ವಾತಾವರಣವು ಏಕಾಂಗಿತನದಲ್ಲಿ ಉಳಿದೀತೇ? ಪ್ರಯೋಗ ಮಾಡಿ ನೋಡಿ. ಪತಿ-ಪತ್ನಿಯರು ನಿತ್ಯ ಜೀವನದಲ್ಲಿ ಸಣ್ಣ ಪುಟ್ಟ ಜಗಳವನ್ನೂ ಮಾಡಬಹುದು.ಆದರೆ ಒಂದು ಗಾದೆ ಇದೆ…“ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ” ಅಂತಾ.ಕೆಲವರು ಅದನ್ನು ಸುಳ್ಳುಮಾಡಲು ಹಟತೊಡಲೂ ಬಹುದು. ಎಷ್ಟು ದಿನ ಹಟ ಮಾಡಿಯಾರು?! ಅಂತೂ ಯಾವ ಯಾವ ಕಾಲದಲ್ಲಿ ಹೇಗಿರಬೇಕೋ ಹಾಗಿರಬೇಕು, ಎನ್ನುವುದು ಧರ್ಮ, ಅದರ ಹೊರತಾಗಿ ಪತಿ-ಪತ್ನಿಯರು ಸಂತಾನ ಪ್ರಾಪ್ತಿಗಾಗಿ ಮಾತ್ರ ಪತಿ ಪತ್ನಿಯರಂತಿರಬೇಕು.ಒಮ್ಮೆ ಅದು ಈಡೇರಿದ ಮೇಲೆ ಮತ್ತೊಂದು ಮಗು ಬೇಕೆನಿಸುವ ತನಕ ರೆಸ್ಟ್. ಮೂವತ್ತಕ್ಕೆ ಮೂರು ಮಕ್ಕಳಾಗಿದ್ದರೆ ಆಮೇಲೆ ಸಾಯುವ ತನಕ ಸಂಪೂರ್ಣ ರೆಸ್ಟ್. ಏನಂತೀರಾ?

ಹೀಗೊಂದು ಪುಟ್ಟ    ಚರ್ಚೆ ಫೇಸ್ ಬುಕ್ ನಲ್ಲಿ ನಡೆದಾಗ ಮಿತ್ರರಾದ ಶ್ರೀ ಸದ್ಯೋಜಾತ ಭಟ್ಟ, ಹೆಚ್.ಎಸ್.ಸುಬ್ರಹ್ಮಣ್ಯ, ಪ್ರಕಾಶ್ ಹೆಗ್ಡೆ,ಶ್ರೀಜಗದೀಶ್ ಮುಂತಾದ ಮಿತ್ರರು ನನ್ನ ವಾದ ಒಪ್ಪಿದರು.

ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು  ಈ ವಿಚಾರದಲ್ಲಿ ಏನು ಹೇಳ್ತಾರೆ? ಅಂತಾ ಅವರನ್ನು  ಕೇಳಿದೆ.ಅವರ ಅಭಿಪ್ರಾಯ ಈ ಕೆಳಗಿದೆ.

ಪ್ರಿಯ ಶ್ರೀಧರ್,

 ನಾನು ನಿಮ್ಮ ಮೇಲ್ ತಡವಾಗಿ ನೋಡಿದೆ. ಹಾಗಾಗಿ ತಡವಾಗಿ ಈ ಉತ್ತರ.

ಕ್ರಮಸಂನ್ಯಾಸವನ್ನು (ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ನಂತರ ಸಂನ್ಯಾಸ ಸ್ವೀಕರಿಸುವುದು) ಸ್ವೀಕರಿಸಿದವರು ಮಾತ್ರ ಗೃಹಸ್ಥಾಶ್ರಮದ ಬಗ್ಗೆ ಮಾತನಾಡುವ ಅಧಿಕಾರ ಪಡೆದಿರುತ್ತಾರಯೇ ಹೊರತು ಉಳಿದ ಸಂನ್ಯಾಸಿಗಳು ದಾರಿತಪ್ಪಿಸುವ ಮಾತುಗಳನ್ನಾಡುವ ಬದಲು ಸುಮ್ಮನಿರುವುದು ಒಳ್ಳೆಯದು. ನಿಶ್ಚಿತ ಋತುವಿನಲ್ಲಿ ಮಾತ್ರ ಸಂತಾನಾಪೇಕ್ಷೆ ಮೇಲೆದ್ದುಬರುವ ಪ್ರಾಣಿಗಳಿಗೆ, ಕೇವಲ ಶಾರೀರಿಕ ಸ್ತರದಲ್ಲಿ ಮಾತ್ರ ಜೀವಿಸುವ ಜೀವಿಗಳಿಗೆ ಮಾತ್ರ ಆ ಸ್ವಾಮೀಜಿ ಹೇಳಿದ್ದು ಹೊಂದುತ್ತದೆ. ಶಾರೀರಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ ಆಯಾಮಗಳನ್ನು ಹೊಂದಿರುವ ಮಾನವನಿಗೆ ಅದೇ ನಿಯಮಗಳನ್ನು ವಿಸ್ತರಿಸುವುದು ಅವೈಜ್ಞಾನಿಕ ಮತ್ತು ಸಾಮಾನ್ಯಜ್ಞಾನದ ಕೊರತೆ.ಮಾನವರಲ್ಲಿ ಪತಿ-ಪತ್ನಿ ಸಂಬಂಧ ಒಂದು ಪವಿತ್ರವಾದ ಸ್ನೇಹಸಂಬಂಧ. ಈ ಸಂಬಂಧದ ಉದ್ದೇಶ ಎರಡು, ಒಂದು ಸಂತಾನೋತ್ಪತ್ತಿ ಮತ್ತೊಂದು ಕಾಮಶಾಂತಿ. ಋತುವಿನ ನಿರ್ಬಂಧವಿಲ್ಲದೆ ಸಹವಾಸವನ್ನು ಬಯಸುವುದು ಮನುಷ್ಯರಲ್ಲಿದೆ. ಗರ್ಭಿಣಿಗೂ ಪತಿಯ ಸಹವಾಸದ ಅಪೇಕ್ಷೆಯುಂಟಾಗುತ್ತದೆ. ಈ ಪ್ರಕೃತಿಯ ವ್ಯವಸ್ಥೆಯನ್ನು ನೋಡಿದರೆ ಸ್ವಾಮೀಜಿಯ ಮಾತುಗಳು ಅವಾಸ್ತವಿಕವೆನಿಸುತ್ತದೆ.

ನೀವೆಂದಂತೆ ವೇದಗಳಲ್ಲಿ ಪತಿ-ಪತ್ನಿ ಸಂಬಂಧವನ್ನು ತುಂಬ ಗೌರವಾದರಗಳಿಂದ ಗುರುತಿಸಿರುವುದನ್ನು ಕಾಣಬಹುದು. ಅವರಿಬ್ಬರ ನಡುವೆ ನಡೆಯಬೇಕಾದ್ದು "ಸಂಭೋಗ", ಅರ್ಥಾತ್, ಇಬ್ಬರ ಇಚ್ಛಾಪೂರ್ವಕವಾದ ಸಹಭಾಗಿತ್ವದಿಂದ ನಡೆಯುವ ಕ್ರಿಯೆಗಳು. ಆ ಕ್ರಿಯೆಗಳು ಯಾವುದೇ ಆದರೂ ದೋಷವಿಲ್ಲ. ಅವರಿಬ್ಬರ ನಡುವಿನ ಒಮ್ಮತದ ಕ್ರಿಯೆಗಳ ವಿಚಾರಚಲ್ಲಿ ಮಡಿ-ಮೈಲಿಗೆ, ಸಭ್ಯ-ಅಸಭ್ಯಗಳ ಪ್ರಶ್ನೆಯೇ ಇಲ್ಲ. ಇಬ್ಬರ ಎಲ್ಲ ವಿಧ ಆರೋಗ್ಯರಕ್ಷಣೆಯ ವಿಚಾರವಿದೆಯಷ್ಟೆ. ಸ್ವ ಇಚ್ಛೆಯಿಂದ ಪತಿ-ಪತ್ನಿ ದೈಹಿಕವಾಗಿ ದೂರವಿದ್ದರೆ ಅದು ಅವರ ಸ್ವಾತಂತ್ರ್ಯ.

ಈ ವಿಚಾರಗಳನ್ನು ವಾಸ್ತವಿಕ ನೆಲೆಯ ಮೇಲೆ ಅರಿಯದೇ ಪತಿ-ಪತ್ನಿ ಸಂಬಂಧದ ವಿಚಾರದಲ್ಲಿ ಅನವಶ್ಯಕವಾದ ನಿಯಮಗಳನ್ನು ಅನ್ಯರು ಹೇರಿದಲ್ಲಿ ಲಂಪಟತನ, ವ್ಯಭಿಚಾರಗಳಿಗೆ ಅವಕಾಶಕೊಟ್ಟಂತೆ. ಈ ಬಗ್ಗೆ ಎಚ್ಚರಿಗೆ ಅತ್ಯಗತ್ಯ.

-ವೇದಾಧ್ಯಾಯೀ ಸುಧಾಕರಶರ್ಮ

 

Rating
No votes yet

Comments

Submitted by Aravind M.S Mon, 02/25/2013 - 15:32

ಸುಧಾಕರ ಶರ್ಮರವರ ಉತ್ತರ ಎಷ್ಟು ಸಮಂಜಸ ಆಗಿದೆ. ಅಣ್ಣ ತಂಗಿಯಂತಿರುವವರು ದಂಪತಿಗಳಾಗುವುದು ಹೇಗೆ ಸಾಧ್ಯ ? ಇದು ಅಷ್ಟು ಸರಳ ವಿಚಾರ ಅಲ್ಲವೇ ಅಲ್ಲ.

<ಅವರಲ್ಲಿನ ಆಧ್ಯಾತ್ಮಿಕ ಚಿಂತನೆ, ಮಾನಸಿಕ ಸಮಸ್ಥಿತಿ,ಮಧುರ ವಾತಾವರಣವು ಏಕಾಂಗಿತನದಲ್ಲಿ ಉಳಿದೀತೇ?> ಈ ಮಾತು ತುಂಬ ಹಿಡಿಸಿತು. ಅಣ್ಣ, ತಂಗಿ ಎಷ್ಟಾದರೂ ಬೇರೆ ಬೇರೆ. ಈ ಬೇರ್ಪಟ್ಟ ಮನಸ್ಸುಗಳು ನಿಜಕ್ಕೂ ಒಂದಾಗಲು ಸಾಧ್ಯವೇ ಆದರೆ ಅದು ಒಂದು ದುರ್ಬಲ ವಾತಾವರಣವನ್ನಷ್ಟೇ ಸೃಷ್ಟಿಸೀತು ! ಏಕೆಂದರೆ ದೇಹ, ಮನಸ್ಸುಗಳು ಬೇರೆ ಬೇರೆಯಾಗಿ ಇರೋದು ಅತಿ ಕಷ್ಟಸಾಧ್ಯ. ಮತ್ತು ಅಣ್ಣ ತಂಗಿಯ ಪರವಾನಗಿ ಇಲ್ಲದೆ ಏನೂ ಮಾಡಲಾರ. ಆದರೆ ನಿಜವಾದ ಗಂಡ ಹೆಂಡತಿಯರ ಮಧ್ಯೆ ಯಾವ ಪರವಾನಗಿಯೂ ಬೇಕಾಗಲಾಗದಷ್ಟು ಸಂಬಂಧ ಇರುತ್ತದೆ, ಇರಬೇಕು

‍‍ ಅರವಿಂದ

Submitted by Aravind M.S Mon, 02/25/2013 - 16:21

In reply to by Aravind M.S

ಮೇಲಿನ ಬರಹದಲ್ಲಿ ಸ್ವಲ್ಪ ತಪ್ಪಿದೆ ಕ್ಷಮಿಸಿ.

<ಅವರಲ್ಲಿನ ಆಧ್ಯಾತ್ಮಿಕ ಚಿಂತನೆ, ಮಾನಸಿಕ ಸಮಸ್ಥಿತಿ,ಮಧುರ ವಾತಾವರಣವು ಏಕಾಂಗಿತನದಲ್ಲಿ ಉಳಿದೀತೇ?> ಈ ಮಾತು ತುಂಬ ಹಿಡಿಸಿತು

‍‍ ಹೀಗೆ ಓದಿಕೊಳ್ಳಿರಿ.

Submitted by Aravind M.S Mon, 02/25/2013 - 16:28

In reply to by Aravind M.S

ಮೇಲಿನ ಪ್ರತಿಕ್ರಿಯೆಯಲ್ಲಿ ಸ್ವಲ್ಪ ತಪ್ಪಿದೆ ಕ್ಷಮಿಸಿ, ಈ ಕೆಳಗಿನಂತೆ ಓದಿಕೊಳ್ಳಿರಿ ‍‍_
ಸುಧಾಕರ ಶರ್ಮರವರ ಉತ್ತರ ಎಷ್ಟು ಸಮಂಜಸ ಆಗಿದೆ. ಅಣ್ಣ ತಂಗಿಯಂತಿರುವವರು ದಂಪತಿಗಳಾಗುವುದು ಹೇಗೆ ಸಾಧ್ಯ ? ಇದು ಅಷ್ಟು ಸರಳ ವಿಚಾರ ಅಲ್ಲವೇ ಅಲ್ಲ. ಪತಿ-ಪತ್ನಿಯರು ಒಟ್ಟಾಗಿ ಜೀವನ ನಡೆಸುತ್ತಿದ್ದಾಗ, ಅವರಲ್ಲಿನ ಆಧ್ಯಾತ್ಮಿಕ ಚಿಂತನೆ, ಮಾನಸಿಕ ಸಮಸ್ಥಿತಿ,ಮಧುರ ವಾತಾವರಣವು ಏಕಾಂಗಿತನದಲ್ಲಿ ಉಳಿದೀತೇ? ‍‍‍‍ಈ ಮಾತು ತುಂಬ ಹಿಡಿಸಿತು. ಅಣ್ಣ, ತಂಗಿ ಎಷ್ಟಾದರೂ ಬೇರೆ ಬೇರೆ. ಈ ಬೇರ್ಪಟ್ಟ ಮನಸ್ಸುಗಳು ನಿಜಕ್ಕೂ ಒಂದಾಗಲು ಸಾಧ್ಯವೇ ಆದರೆ ಅದು ಒಂದು ದುರ್ಬಲ ವಾತಾವರಣವನ್ನಷ್ಟೇ ಸೃಷ್ಟಿಸೀತು ! ಏಕೆಂದರೆ ದೇಹ, ಮನಸ್ಸುಗಳು ಬೇರೆ ಬೇರೆಯಾಗಿ ಇರೋದು ಅತಿ ಕಷ್ಟಸಾಧ್ಯ. ಮತ್ತು ಅಣ್ಣ ತಂಗಿಯ ಪರವಾನಗಿ ಇಲ್ಲದೆ ಏನೂ ಮಾಡಲಾರ. ಆದರೆ ನಿಜವಾದ ಗಂಡ ಹೆಂಡತಿಯರ ಮಧ್ಯೆ ಯಾವ ಪರವಾನಗಿಯೂ ಬೇಕಾಗಲಾಗದಷ್ಟು ಸಂಬಂಧ ಇರುತ್ತದೆ, ಇರಬೇಕು ‍‍ _ಅರವಿಂದ

Submitted by makara Mon, 02/25/2013 - 21:32

ಶ್ರೀಧರ್ ಸರ್,
ನೀವು ಉಪನ್ಯಾಸ ಕೇಳಿದ ಸ್ವಾಮಿಗಳು ಯಾವ ಅರ್ಥದಲ್ಲಿ ಪತಿ-ಪತ್ನಿಯರು ಅಣ್ಣ-ತಂಗಿಯರಂತಿರಬೇಕೆಂದು ಹೇಳಿದ್ದಾರೋ ನನಗೆ ತಿಳಿಯದು. ಆದರೆ ಇದೇ ಮಾತನ್ನು ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ ಬೋಧನೆಗಳಲ್ಲಿ ಅನೇಕ ಬಾರಿ ಹೀಗೆ ಹೇಳುತ್ತಿದ್ದರು, "ಒಂದೆರಡು ಮಕ್ಕಳಾದ ನಂತರ ಪತಿ-ಪತ್ನಿಯರಿಬ್ಬರೂ ಕಾಮವನ್ನು ನಿಯಂತ್ರಣದಲ್ಲಿಟ್ಟುಕೊಂಡು ದೇವರೆಡೆಗೆ ಧ್ಯಾನವನ್ನು ಕೇಂದ್ರೀಕರಿಸುತ್ತಾ ಅಣ್ಣ-ತಂಗಿಯರಂತೆ ಇರುವುದನ್ನು ಅಭ್ಯಾಸ ಮಾಡಬೇಕು". ಕೇವಲ ಸಂತಾನಾಪೇಕ್ಷೆಯಿಂದ ಮಾತ್ರವೇ ಕಾಮವೆನ್ನುವುದು ಕಷ್ಟದ ಕೆಲಸ ಆದ್ದರಿಂದಲೇ ಅದನ್ನು ತಹಬಂದಿಗೆ ತಂದಲ್ಲಿ ಆತ್ಮಸಾಕ್ಷಾತ್ಕಾರಕ್ಕೆ ಹತ್ತಿರ ಹೋಗುತ್ತೇವೆ. ಈ ದಾರಿಯಲ್ಲಿ ಸಾಗುವವರು ಅದನ್ನು ಅನುಸರಿಸಬೇಕೆನ್ನುವುದು ನಿಯಮ; ಉಳಿದವರಿಗೆ ಅದು ಖಂಡಿತಾ ಅನ್ವಯಿಸದು. ಆದ್ದರಿಂದ ಇಲ್ಲಿ ದಾಂಪತ್ಯಕ್ಕೂ ಆಧ್ಯಾತ್ಮಕ್ಕೂ ತಳುಕು ಹಾಕುವುದು ಖಂಡಿತಾ ಬೇಡ.

Submitted by hariharapurasridhar Tue, 02/26/2013 - 22:58

In reply to by makara

ಇಲ್ಲಿ ನಿಜವಾಗಿ ಗೊಂದಲ ಮಾಡುವುದು ನನ್ನ ಉದ್ಧೇಶವಲ್ಲ. ಆದರೆ ಗೃಹಸ್ಥಾಶ್ರಮದ ಬಗ್ಗೆ ಬ್ರಹ್ಮಚಾರಿ ಸ್ವಾಮೀಜಿಗಳು ಮಾತನಾಡುವುದು ಸೂಕ್ತವಲ್ಲಾ, ಎನ್ನುವುದು ನನ್ನ ಅಭಿಪ್ರಾಯ. ಶ್ರೀ ರಾಮಕೃಷ್ಣ ಪರಮಹಂಸರಾದರೋ ಗೃಹಸ್ಥರೇ ಆದರೂ ಪತಿ-ಪತ್ನಿಯರಿಬ್ಬರೂ ಇಛ್ಚಾಪೂರ್ವಕವಾಗಿ ಅಣ್ನ-ತಂಗಿಯರಂತೆ ಇದ್ದರು.ಅವರು ತಮ್ಮ ಅನುಭವದ ಮೇಲೆ ಸಾಧನಾಮಾರ್ಗದಲ್ಲಿರುವವರಿಗೆ ಒಂದಿಷ್ಟು ಸಲಹೆಕೊಡಬಹುದು. ಆದರೆ ಇಲ್ಲಿ ಹಾಗಾಗಲಿಲ್ಲ. ಈ ಸ್ವಾಮೀಜಿಯವರು ಆ ರೀತಿ ನಿಷ್ಟುರವಾಗಿಯೇ ಆದೇಶ ಮಾಡಿಬಿಟ್ಟರು. ಆಗ ನನಗಂತೂ ಅವರ ಮಾತು ಸುತಾರಾಮ್ ಇಷ್ಟವಾಗಲಿಲ್ಲ.ಈ ವಿಚಾರವನ್ನು ಇಲ್ಲಿಗೆ ಮುಗಿಸೋಣ. ಅಲ್ಲವೇ?

Submitted by makara Wed, 02/27/2013 - 08:12

In reply to by hariharapurasridhar

ಸ್ವಾಮಿ ವಿವೇಕಾನಂದರೂ ಒಂದೆಡೆ ಹೇಳಿದ್ದಾರೆ, ಒಂದೇ ಮಾತನ್ನು ಹಲವರು ಹೇಳಿದರೂ ಸಹ, ಪ್ರಾಮಾಣಿಕ ವ್ಯಕ್ತಿ ಹೇಳಿದ ಮಾತಿನಲ್ಲಿ ಶಕ್ತಿ ಇರುತ್ತದೆ. ಆದ್ದರಿಂದ ನೀವು ಹೇಳಿದಂತೆ ಆ ರೀತಿಯ ಗೊಂದಲ ನಿಮಗೆ ಉಂಟಾಗಿರಬಹುದು. ನೀವೆಂದಂತೆ ಇದನ್ನು ಅನಾವಶ್ಯಕವಾಗಿ ಎಳೆಯುವುದು ಬೇಡ ಬಿಡಿ. ವಂದನೆಗಳು, ಶ್ರೀಧರ್ ಸರ್.