ಪತ್ರಿಕೆಗಳಿಗೆ ದುರ್ದೆಸೆ ಬಂದಿದೆಯೇ?

ಪತ್ರಿಕೆಗಳಿಗೆ ದುರ್ದೆಸೆ ಬಂದಿದೆಯೇ?

ಮೊನ್ನೆ ಮಣಿಪಾಲದಲ್ಲಿ ನಡೆದ ಮುದ್ರಕರ ಸಮಾವೇಶದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀ ಎಂ . ವಿ. ಕಾಮತ್‌, ನಾಳಿನ ದಿನಗಳಲ್ಲಿ ಪತ್ರಿಕೆಗಳ ಭವಿಷ್ಯದ ಬಗ್ಗೆ ಮಾತನಾಡುತ್ತ "ಇನ್ನು ಮುಂದೆ ನಾವು ಎಲ್ಲವನ್ನೂ ಕೇಳುತ್ತೇವಷ್ಟೆ, ನೋಡಲಾಗುವುದಿಲ್ಲ," ಎಂದು ಕಳಕಳಿಯನ್ನು ವ್ಯಕ್ತ ಪಡಿಸಿದ್ದಾರೆ (ಡೆಕ್ಕನ್‌ ಹೆರಾಲ್ಡ್‌, ೩೧.೩.೨೦೦೭).

ಪತ್ರಿಕೆಗಳೇ ಇಲ್ಲದಿದ್ದ ಪ್ರಪಂಚ ಹೇಗಿದ್ದೀತು? ಬಹುಶಃ, ಬೆಳಗಿನ ಕಾಫಿ ತುಸು ರುಚಿ ಕೆಡಬಹುದು. ನಿತ್ಯ ಸಂಡಾಸಿಗೆ ಪತ್ರಿಕೆ ಹೊತ್ತೊಯ್ಯುವವರಿಗೆ ಕಾಂಸ್ಟಿಪೇಶನ್‌ ಹೆಚ್ಚಾಗಬಹುದು! ಸವಿ ನಿದ್ರೆಯ ಹೊತ್ತಿನಲ್ಲಿ ಧಡ್ಡನೆ ಕಿಟಕಿಯ ಮೇಲೆ ಪತ್ರಿಕೆ ಬಿಸಾಡುವ ಹುಡುಗನಿಗೆ ಬಯ್ಗುಳ ಕಡಿಮೆ ಆದೀತು. ಸಂಪಾದನೆಯೂ ಇಲ್ಲವಾದೀತು. 'ಕೈಯಲ್ಲಿ ಪೇಪರು ಇದ್ದರೆ ಸಾಕು, ಪ್ರಪಂಚವೇ ಮರೆತು ಹೋಗುತ್ತದೆ. ಮನೆಯಲ್ಲಿ ಹಾಲಿಲ್ಲ. ಡೈರಿಗೆ ಹೋಗಿ ಬನ್ನಿ' ಎನ್ನುವ ಸುಪ್ರಭಾತ ಸೊರಗಿ ಹೋದೀತು.  ಅಂತಹ ದಿನಗಳು ಬಂದಾವೇ?

ಮೊನ್ನೆ ಯಾವುದೋ ಮಾತಿಗೆ ಇದೇ ವಿಷಯವನ್ನು ಖ್ಯಾತ ವಿಜ್ಞಾನ ಬರೆಹಗಾರ ಅಡ್ಯನಡ್ಕ ಕೃಷ್ಣಭಟ್ಟರೂ ಚರ್ಚಿಸಿದ್ದರು. ಮಾಧ್ಯಮ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಓದುಗರ, ಅದರಲ್ಲೂ ವಿಶೇಷವಾಗಿ ಕನ್ನಡ ಓದುಗರ, ಸಂಖ್ಯೆ ಕಡಿಮೆ ಆಗಲಿದೆಯೇ? ಕನ್ನಡ ಪತ್ರಿಕೆಗಳ ಸಂಖ್ಯೆ ಕಡಿಮೆ ಆಗಲಿದೆಯೇ?

ಸುಮಾರು ೨೫ ವರುಷಗಳ ಹಿಂದೆ ಪ್ರಸಾರಭಾರತಿ (ಅಂದಿನ ದೂರದರ್ಶನ) ಟೀವಿ ಪ್ರಸಾರವನ್ನು ಆರಂಭಿಸಿದಾಗಲೂ ಇದೇ ಕಳವಳ ಇತ್ತು. ಅಮೆರಿಕೆಯಲ್ಲಿ ಜಾನ್‌ ಬೇರ್ಡ್‌ ಮೊದಲ ಬಾರಿಗೆ ಚಿತ್ರವನ್ನು ಪ್ರಸಾರ ಮಾಡಿದಾಗ, ಅಲ್ಲಿಯೂ ಇದೇ ಪ್ರಶ್ನೆ ಎದ್ದಿತ್ತು. ಅಂದಿನಿಂದ ಇಂದಿಗೆ ಸುಮಾರು ೮೦ ವರುಷಗಳು ಕಳೆದಿವೆ. ಪತ್ರಿಕೆಗಳು ಇನ್ನೂ ಅಸ್ತಿತ್ವದಲ್ಲಿವೆ. ಆದರೆ ಪತ್ರಿಕೆಗಳ ಪ್ರಸಾರ ಕಡಿಮೆಯಾಗುತ್ತಿರುವುದಂತೂ ನಿಜ. ವೀಕಿಪೀಡಿಯಾದಲ್ಲಿನ ಲೇಖನದ ಪ್ರಕಾರ ಅಮೆರಿಕೆಯಲ್ಲಿ ೧೯೨೦ರ ಸುಮಾರಿನಲ್ಲಿ ಪ್ರತಿ ಮನೆಯೂ ಸರಾಸರಿ ೧.೩ ಪತ್ರಿಕೆಗಳನ್ನು ತರಿಸುತ್ತಿತ್ತು. ಇಂದು (೨೦೦೦ನೇ ಇಸವಿಯಲ್ಲಿ) ಅದು ೦.೫ಕ್ಕೆ ಕುಸಿದಿದೆ. ಅಂದರೆ ಎರಡು ಮನೆಗಳಲ್ಲಿ ಒಂದು ಮನೆಯವರು ಮಾತ್ರ ಪತ್ರಿಕೆಯನ್ನು ಕೊಳ್ಳುತ್ತಿದ್ದಾರೆ. ಇದಕ್ಕೆ ಟೀವಿ, ಇಂಟರ್‌ನೆಟ್‌ಗಳಂತಹ ಹೊಸ ಮಾಧ್ಯಮಗಳ ಬೆಳೆವಣಿಗೆ ಮತ್ತು ಅವುಗಳ ಜೊತೆಗಿನ ಸ್ಪರ್ಧೆ ಕಾರಣ ಎನ್ನಲಾಗಿದೆ.

ಆದರೆ ಪತ್ರಿಕೆಗಳು ಡೈನೋಸಾರ್‌ಗಳಂತೆ ಮರೆಯಾಗಿಬಿಡುವುವೇ? ಇದು ತುಸು ನಂಬಲಾಗದ ವಿಷಯ. ಮಾನವ ಸಮಾಜದಲ್ಲಿ ಬಳಕೆಯಲ್ಲಿರುವ ಪ್ರತಿಯೊಂದು ಮಾಧ್ಯಮವೂ, ಮತ್ತೊಂದು ಮಾಧ್ಯಮಕ್ಕೆ ಪೂರಕವಾಗಿ ಬೆಳೆದಿರುವುದನ್ನು ನಾವು ಕಾಣಬಹುದು. ಇದಕ್ಕೆ ವಿಶೇಷ ಅಧ್ಯಯನವೇನೂ ಬೇಕಿಲ್ಲ. ಉದಾಹರಣೆಗೆ, ಪತ್ರಿಕೆಗಳು ಬೆಳೆಯುತ್ತಿದ್ದ ಕಾಲದಲ್ಲಿ ಮೊದಲಿಗೆ ಬಂದ ರೇಡಿಯೋ ಎಲ್ಲರ ಕೈಗೆಟುಕುವಂತಾದಾಗ, ಪತ್ರಿಕೆಗಳು ಮರೆಯಾಗಲಿಲ್ಲ. ಆದರೆ ರೇಡಿಯೋಗಳ ಪ್ರಚಾರ, ರೇಡಿಯೋ ಕಾರ್ಯಕ್ರಮಗಳ ವಿಮರ್ಶೆ ಮಾಡುವ ಪರಿಪಾಠ ಬೆಳೆಯಿತು. ಅರ್ಥಾತ್‌, ರೇಡಿಯೊ ಮಾಧ್ಯಮ ಪತ್ರಿಕಾ ಮಾಧ್ಯಮದ ನೆರವು ಪಡೆಯಿತು ಎನ್ನಬಹುದು.

ಇಂದಿನ ಟೀವಿಯನ್ನೂ ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ಸುದ್ದಿಯನ್ನು ಬಿತ್ತರಿಸುವ ನ್ಯೂಸ್‌ ಚಾನಲ್‌ಗಳು ಪತ್ರಿಕೆಗಳನ್ನು ಅರೆದು ತಿಂದೆವೆಯೇ? ಇಲ್ಲ. ಇವುಗಳಲ್ಲಿಯೂ, ಅಂದಿನ ದಿನಪತ್ರಿಕೆಗಳ ಪ್ರಮುಖ ಸುದ್ದಿಗಳು ಬಿತ್ತರಗೊಳ್ಳುತ್ತವೆ. ಪತ್ರಿಕೆಗಳಲ್ಲಿ ಟೀವಿ ಚಾನೆಲ್‌ಗಳಲ್ಲಿನ ಕಾರ್ಯಕ್ರಮಗಳಿಗಾಗಿಯೇ ಪುಟವನ್ನು ಮೀಸಲಾಗಿಡಲಾಗುತ್ತದೆ.

ಮಾಧ್ಯಮಗಳ ನಡುವಣ ಈ ಪೂರಕ ಸಂಬಂಧವನ್ನು ಇಂದಿನ ಇಂಟರ್‌ನೆಟ್‌ ನಲ್ಲಿಯೂ ಕಾಣಬಹುದು. ಪತ್ರಿಕೆಗಳನ್ನಷ್ಟೆ ಪ್ರಕಟಿಸುತ್ತಿದ್ದವರು ಇಂದು ಇಂಟರ್‌ನೆಟ್‌ನಲ್ಲಿ ಈ-ಪತ್ರಿಕೆಯನ್ನು ಆರಂಭಿಸಿದ್ದಾರೆ. ಈ ಪತ್ರಿಕೆಗಳ ಸ್ವರೂಪ, ಮುದ್ರಿಸಿದ ಪತ್ರಿಕೆಗಳಿಗಿಂತಲೂ ತುಸು ಭಿನ್ನವಾಗಿತ್ತಷ್ಟೆ. ಅದು ಎಲ್ಲರಿಗೂ ಹಿತವಾಗಲಿಲ್ಲವೆಂದೋ ಏನೋ? ಮುದ್ರಿತ ಪತ್ರಿಕೆಯ ಸ್ವರೂಪವನ್ನೇ ತೋರುವ ಇ-ಪತ್ರಿಕೆಗಳು (ಉದಾ: ದಿ ಹಿಂದೂ, ಹಿಂದೂಸ್ತಾನ ಟೈಂಸ್‌ ಇತ್ಯಾದಿ) ಬಂದಿವೆ.  ಓದುವ ಸ್ಥಳ ಕಂಪ್ಯೂಟರ್‌ ಮಾನಿಟರ್‌ ಇರಬಹುದು. ಆದರೆ ಸಂಪೂರ್ಣ ಮುದ್ರಿತ ಪತ್ರಿಕೆಯಂತೆಯೇ ಇವು ಕಾಣುತ್ತವೆ.

ಚಾಪೆಯಂತೆ ಸುರುಳಿ ಸುತ್ತಿಡಬಲ್ಲ ಮಾನಿಟರ್‌ಗಳು ತಯಾರಾಗುತ್ತಿವೆ. ಕೆಲವೇ ವರುಷಗಳಲ್ಲಿ ಅವು ಮಾರುಕಟ್ಟೆಯಲ್ಲಿ ಲಭ್ಯವಾಗಬಲ್ಲುವು. ಆಗ ಬಹುಶಃ ಇಂಟರ್‌ನೆಟ್‌ ಪತ್ರಿಕೆಗಳನ್ನೂ ನಾವು ಸಂಡಾಸಿಗೆ ಕೊಂಡೊಯ್ಯಬಹುದು!

ಒಟ್ಟಾರೆ ಮಾಧ್ಯಮಗಳ ಬೆಳೆವಣಿಗೆಗೂ, ತಂತ್ರಜ್ಞಾನದಲ್ಲಿನ ಸುಧಾರಣೆಗೂ ನೇರ ಸಂಬಂಧವಿದೆ. ಮಾಧ್ಯಮಗಳು ಸಮುದಾಯಿಕ ಸಂವಹನದ ಸಾಧನಗಳಷ್ಟೆ.  ಒಂದು ಮತ್ತೊಂದಕ್ಕೆ ಪೂರಕವಾಗಿ ಇವು ಬೆಳೆಯುವುದು ಸಹಜ ಮತ್ತು ಅನಿವಾರ್ಯ ಎನ್ನಿಸುತ್ತದೆ.

Rating
No votes yet

Comments