ಪದಬೆಳಗು: ೩: ಸಜ್ಜನ

ಪದಬೆಳಗು: ೩: ಸಜ್ಜನ

ಸಜ್ಜನ ಅನ್ನುವ ಮಾತಿಗೆ ‘ಹೆಂಡತಿ' ಎಂಬ ಅರ್ಥವಿದೆ!

ಇದು ತಿಳಿದದ್ದು ಡಾ. ಎಲ್. ಬಸವರಾಜು ಅವರು ಸಂಪಾದಿಸಿರುವ ಸರಳ ಪಂಪಭಾರತವನ್ನು ಬಳಸಿಕೊಂಡು
ಇತ್ತೀಚೆಗೆ ರಂಗಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೊಡನೆ ಚರ್ಚಿಸುತ್ತಿರುವಾಗ.

ಪಂಪಭಾರತದ ಒಂಬತ್ತನೆಯ ಆಶ್ವಾಸದ ೪೬ನೆಯ ಪದ್ಯದಲ್ಲಿ ಅದು ಸಜ್ಜನ ಎಂಬ ಪದ ಬಳಕೆಯಾಗಿದೆ.
ಅದಕ್ಕೆ ಬಸವರಾಜು ಅವರು ಹೆಂಡತಿ ಅನ್ನುವ ಅರ್ಥ ನೀಡಿದ್ದಾರೆ, ಆ ಪ್ರಸಂಗಕ್ಕೆ ಅದು
ಹೊಂದಿಕೊಳ್ಳುತ್ತದೆ.

ಪದ್ಯ ಹೀಗಿದೆ [ಓದಿಕೊಳ್ಳಲು ಅನುಕೂಲವಾಗುವಂತೆ ಸಾಲುಗಳನ್ನು ವಿಂಗಡಿಸಿ, ಪದಗಳನ್ನು ಬೇರೆ
ಮಾಡಿ ಕೊಟ್ಟಿದೆ. ಮೂಲದಲ್ಲಿ ಇದು ಉತ್ಪಲಮಾಲಾ ವೃತ್ತ]

ಭಾಗಮನ್ ಆಸೆವಟ್ಟು ಅಳಿಪಿ ಬೇೞ್ಪುದು ನಿನ್ನಯ ಕಲ್ತ ವಿದ್ಯೆ

ನೀನ್ ಆಗಳುಮ್ ಅಣ್ಣ ಬೇಡಿದಪೆ

ಸಜ್ಜನದಂತೆ ಎನಗೆ ಎಕ್ಕಭಾಗೆ ನೋಡು

ಈಗಳಿಳಾ ಲತಾಂಗಿ ಪುದುವಲ್ಲಳ್

ಆದಂತೆ ನೀಂ

ಮುನ್ನ ನೂಲ ತೋಡಾಗದೆ ಕೆಟ್ಟು ಪೋದವರನ್

ಇಂ ಮಗುೞ್ದುಂ ನಿಱಿಪಂತು ಬೆಳ್ಳನಯ್. [ಸರಳ ಪಂಪಭಾರತ, ಸಂಪಾದಕರು: ಡಾ. ಎಲ್.ಬಸವರಾಜು,
೯.೪೫. ಸಾಲುಗಳ ವಿಂಗಡಣೆಯಲ್ಲಿ ಅರ್ಥ ಸ್ಪಷ್ಟತೆಗಾಗಿ ಕೊಂಚ ಬೇರೆ ದಾರಿ ಹಿಡಿದಿರುವೆ.]

 

ಹೊಸಗನ್ನಡ ಅರ್ಥ:

ಸಂಧಾನಕ್ಕಾಗಿ ಬಂದ ಕೃಷ್ಣನಿಗೆ ದುರ್ಯೋಧನ ತನ್ನ ಸಭೆಯಲ್ಲಿ ಕೋಪದಿಂದ ಹೇಳುವ ಮಾತು ಇದು.

‘ಭಾಗಕ್ಕಾಗಿ
ಆಸೆಪಟ್ಟು (ಅಳಿಪಿ) ಅಣ್ಣಾ ಯಾವಾಗಲೂ ನೀನು ಬೇಡುತ್ತೀಯೆ. ಈ ಭೂಮಿ ಹೆಂಡತಿ (ಸಜ್ಜನ)ಯಂತೆ ನಾನು
ಒಬ್ಬನೇ ಅನುಭವಿಸಬೇಕಾದದ್ದು (ಎಕ್ಕಭಾಗೆ-ಏಕ ಭಾಗ್ಯೆ ಅನ್ನುವುದರ ತತ್ಭವ). ಅವಳು (ಭೂಮಿ ಮತ್ತು
ಹೆಂಡತಿ) ಕಂಡವರೊಡನೆ ಹಂಚಿಕೊಳ್ಳುವಂಥವಳಲ್ಲ (ಪುದುವಲ್ಲಳ್). ಈ ಮೊದಲೇ ನೂಲು ಸಿಕ್ಕಾಗಿ ಕೆಟ್ಟು
ಹೋದವರನ್ನು (ನನ್ನೊಡನೆ ಹೊಂದಿಕೆಯಾಗದ ಪಾಂಡವರನ್ನು) ಮತ್ತೆ ಎತ್ತಿನಿಲ್ಲಿಸುವಷ್ಟು ಪೆದ್ದನೇ?

 

ಸಾಹಿತ್ಯ ಪರಿಷತ್ತಿನ ದೊಡ್ಡ ನಿಘಂಟಿನಲ್ಲಿ ಇದೇ ಅರ್ಥದ ಇತರ ಪ್ರಯೋಗಗಳು ದೊರೆಯುತ್ತವೆ
ಎಂದು ಕಿರಂ ತಿಳಿಸಿದರು. ನೋಡಲು ಆಗಿಲ್ಲ.

 

ಇರಲಿ. ಸಜ್ಜನ ಅನ್ನುವುದು ಸುಜಾತಾ ಅನ್ನುವುದರ ಇನ್ನೊಂದು ರೂಪವಿರಬಹುದಲ್ಲವೆ? ಬೆಂಗಳೂರಿನ
ಸಜ್ಜನರಾವ್ ಸರ್ಕಲ್ ಜ್ಞಾಪಿಸಿಕೊಳ್ಳಿ! ಅದು ಹೆಸರಾಗಿಯೂ ಬಳಕೆಯಲ್ಲಿದೆ. ಸುಜಾತಾ ಒಳ್ಳೆಯ
ಹುಟ್ಟಿನ ಹೆಣ್ಣು. ಹಾಗೆಯೇ ಸಜ್ಜನ ಒಳ್ಳೆಯ ನಡತೆಯ ಹೆಣ್ಣಿನ ಮಗ.

ಮಕ್ಕಳನ್ನು ತಾಯಿಯ ನಡತೆ, ವರ್ತನೆಗಳ ಮೂಲಕ ಗುರುತಿಸಿ ಹೆಸರಿಡುವ ಸಂಪ್ರದಾಯದ ಕುರುಹು
ಎಂಬಂತೆ ಈ ಪದಗಳು ಇವೆಯಲ್ಲವೆ?

 

Rating
No votes yet

Comments