ಪ.ಪೂ. ಶ್ರೀ ಶ್ರೀ ವಿರಜಾನಂದಜೀ ಮಹಾರಾಜ್

ಪ.ಪೂ. ಶ್ರೀ ಶ್ರೀ ವಿರಜಾನಂದಜೀ ಮಹಾರಾಜ್

ಬೆಂಗಳೂರು ಬಳಿಯ ವರ್ತೂರಿನಲ್ಲಿ ಜನಿಸಿದ ಪೂಜ್ಯರ ಪೂರ್ವಾಶ್ರಮದ ಹೆಸರು  ಶ್ರೀ ಕೃಷ್ಣಮೂರ್ತಿ,ಬಿ.ಎಸ್. ಆಂಗ್ಲಭಾಷೆಯಲ್ಲಿ ಎಂ.ಎ. ಪದವಿ ಗಳಿಸಿದರೂ ಲೌಕಿಕ ನೌಕರಿಗಳ ಬಗೆಗೆ ಅವರಿಗೆ ಒಲವು ಮೂಡಲೇ ಇಲ್ಲ. ಹೊಳೆನರಸೀಪುರದಲ್ಲಿರುವ ಪ.ಪೂ.ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮೀಜಿಯವರು ಸಂಸ್ಥಾಪಿಸಿದ ಅಧ್ಯಾತ್ಮಪ್ರಕಾಶ ಕಾರ್ಯಾಲಯಕ್ಕೆ ತೆರಳಿ ಅಲ್ಲಿ ಸಂಸ್ಥಾಪಕರ ನೇರಶಿಷ್ಯರಾಗಿದ್ದ ಪೂಜ್ಯ ವೇ||ಬ್ರ||ಶ್ರೀ|| ಲಕ್ಷ್ಮೀನರಸಿಂಹಮೂರ್ತಿಗಳವರಿಂದ ಪ್ರಸ್ಥಾನತ್ರಯ ಭಾಷ್ಯಾಭ್ಯಾಸ ಮಾಡಿದರು. ಭಗವಾನ್ ರಮಣಮಹರ್ಷಿಗಳ ಉಪದೇಶಾಮೃತದ ಅಧ್ಯಯನವನ್ನು ಕೈಗೊಂಡರು. ದಿವ್ಯತ್ರಯರ ಜೀವನ ಮತ್ತು ಉಪದೇಶಗಳ ಅಧ್ಯಯನವನ್ನೂ ಮಾಡಿದರು.

ಪೂಜ್ಯರು ಆ ಉಪದೇಶಾಮೃತವನ್ನು ಉಳಿದವರಿಗೂ ಉಣಬಡಿಸಲೆಂದು ಆದಿಶಂಕರರು, ದಿವ್ಯತ್ರಯರು, ಭಗವಾನ್ ರಮಣಮಹರ್ಷಿಗಳು - ಇವರೆಲ್ಲರ ಜೀವನ ಹಾಗೂ ಉಪದೇಶಗಳನ್ನು ಕುರಿತು ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಸಂಚರಿಸುತ್ತಾ ಅನೇಕ ಉಪನ್ಯಾಸಮಾಲಿಕೆಗಳನ್ನು ನೀಡಿದ್ದಾರೆ. ಆ ವೇಳೆಗೆ ಅವರು ಕನಕಪುರ ತಾಲ್ಲೂಕಿನ ಪುಟ್ಟಗ್ರಾಮವಾದ ದೊಡ್ಡಮುದವಾಡಿಯಲ್ಲಿರುವ ಶ್ರೀ ದತ್ತಸದಾನಂದಾಶ್ರಮದಲ್ಲಿ ತಪಗೈಯುತ್ತಿದ್ದ ಸ್ವಾಮಿ ಸಹಜಾನಂದ ಸರಸ್ವತೀ ಮಹಾರಾಜ್ ರವರ ನಿಕಟ ಸಂಪರ್ಕಕ್ಕೆ ಬಂದಿದ್ದರು. ಉಪನ್ಯಾಸಗಳನ್ನು ನಡೆಸಿದ್ದರಿಂದ ಬಂದ ಕಾಣಿಕೆಯನ್ನೆಲ್ಲಾ ಆ ಆಶ್ರಮದ ಅಭಿವೃದ್ಧಿಗಾಗಿ ವಿನಿಯೋಗಿಸಿದರು.

ಪೂಜ್ಯರು 1996 ರ ಫೆಬ್ರವರಿ 17 ರಂದು ಮಹಾಶಿವರಾತ್ರಿಯ ಶುಭದಿನದಂದು ಪೂಜ್ಯ ಸ್ವಾಮಿ ಸಹಜಾನಂದಜೀ ಮಹಾರಾಜ್ ರವರಿಂದ ವಿಧಿಪೂರ್ವಕವಾಗಿ ಸಂನ್ಯಾಸದೀಕ್ಷೆಯನ್ನು ಶ್ರೀ ದತ್ತಸದಾನಂದಾಶ್ರಮದಲ್ಲಿ ಸ್ವೀಕರಿಸಿದರು. ಶಾಸ್ತ್ರಬದ್ಧವಾಗಿ ದಂಡ-ಕಮಂಡಲುಗಳನ್ನು ವಿಸರ್ಜಿಸಿದ ಪೂಜ್ಯರು ಭಕ್ತರ ಪಾಲಿನ ಕಾಮಧೇನುವಾಗಿ ಅವರೊಂದಿಗೇ ಅತ್ಯಂತ ಸರಳ ಹಾಗೂ ಸಹಜ ಸಹಬಾಳ್ವೆಯನ್ನು ನಡೆಸುತ್ತಾ ಬಂದಿದ್ದಾರೆ. ಭಕ್ತರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಅವರೇ ಭಕ್ತರು ಬಯಸಿದ ಊರು (ಬೆಂಗಳೂರು, ಮಧುಗಿರಿ, ತಿರುವಣ್ಣಾಮಲೈ, ಹೊಳೆನರಸೀಪುರ, ಕೊಳ್ಳೇಗಾಲ, ಭದ್ರಾವತಿ) ಗಳಿಗೆ ತೆರಳಿ ಅಲ್ಲಿ ಹಲವು ಕಾಲ ತಂಗಿದ್ದು ಪ್ರತಿದಿನ ಸತ್ಸಂಗ ನಡೆಸಿ ಜಾತಿ ಮತಗಳ ಭೇದವಿಲ್ಲದೆ ಎಲ್ಲರಿಗೂ ವಿವಿಧ ವಿಷಯಗಳಲ್ಲಿ ಮಾರ್ಗದರ್ಶನ ನೀಡಿ ಕೃಪೆಗೈದಿದ್ದಾರೆ. ಭಕ್ತರಿಗೆ ಮಾರ್ಗದರ್ಶನ ನೀಡುವ ಹಲವಾರು ತಿರ್ಥಕ್ಷೇತ್ರಗಳ ಯಾತ್ರೆಯನ್ನೂ ಮಾಡಿದ್ದಾರೆ.   

ಪೂಜ್ಯರು ಜಿಜ್ಞಾಸುಗಳಿಗಾಗಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವೆಲ್ಲಾ ಒಂದೊಂದೂ ಬಹು ಅಮೂಲ್ಯವಾಗಿವೆ. ಹಲವಾರು ರೂಪಕಗಳನ್ನೂ ಸಹ ರಚಿಸಿದ್ದಾರೆ. ಆಂಗ್ಲಭಾಷೆಯಲ್ಲಿರುವ ಕೆಲವು ಅಮೂಲ್ಯ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಕೃಪೆಗೈದಿದ್ದಾರೆ. ಹಲವಾರು ಆಧ್ಯಾತ್ಮಿಕ ಗೀತೆಗಳೂ ಸಹ ಪೂಜ್ಯರಿಂದ ರಚಿಸಲ್ಪಟ್ಟಿವೆ. ಹಲವರಿಗೆ ಅಂತಹ ಕಾರ್ಯ ಕೈಗೊಳ್ಳಲು ಪ್ರೇರಣೆ ನೀಡಿ ಕೃಪೆಗೈದಿದ್ದಾರೆ. ಅನುಭಾವಿಯ ಅಮೃತ ಬಿಂದುಗಳು, ಸದ್ಗುಣ ಸಂವರ್ಧನೆ, ಭಕ್ತಿಯಾತ್ರೆ, ಗುರುಕೃಪಾ ಸಿಂಚನ, ಭಕ್ತಾಷ್ಟಕ ಅವರು ಹೊರ ತಂದಿರುವ ಇತ್ತೀಚಿನ ಜನಪ್ರಿಯ ಕೃತಿಗಳಾಗಿವೆ.

ಕಳೆದ ಒಂದು ವರ್ಷದಿಂದ ಪೂಜ್ಯರು ಮೈಸೂರಿನ ಹಿನಕಲ್ ನಲ್ಲಿರುವ ‘’ಸದ್ಗುರು ಸದನ’’ ಆಶ್ರಮದಲ್ಲಿ ನೆಲೆಸಿ ಅಲ್ಲಿಯ ಜಿಜ್ಞಾಸುಗಳಿಗೆ ಅದರಲ್ಲಿಯೂ ಮುಖ್ಯವಾಗಿ ಮಕ್ಕಳಿಗೆ ವಿಶೇಷ ಮಾರ್ಗದರ್ಶನ ನೀಡುತ್ತಿದ್ದಾರೆ.

ಮುಂದುವರಿಯುವುದು........ ಚಿತ್ರಕೃಪೆ: ಶ್ರೀ ಪ್ರಶಾಂತ, ಹೊಳೆನರಸೀಪುರ.

Rating
No votes yet

Comments