ಪ್ಯಾರಿಸ್ ಪ್ರಸಂಗ
ನನ್ನ ಮೊದಲ ನೌಕರಿ ಚೆನ್ನೈನಲ್ಲಿ ಆಗಿತ್ತು. ಈ ಘಟನೆ ನಡೆದದ್ದು ನಾನು ಚೆನ್ನೈಗೆ ಕಾಲಿಟ್ಟ ಮೊದಲ ದಿನವೇ. ಗೆಳೆಯ ವಿಕ್ರಮ್ ಪಾಟೀಲ ಅದಾಗಲೇ ಅಲ್ಲಿ ನೌಕರಿ ಮಾಡುತ್ತಿದ್ದು, 'ಬ್ಯಾಚೆಲರ್ಸ್ ಪ್ಯಾರಡೈಸ್' ಎಂದು ಕರೆಸಿಕೊಳ್ಳುತ್ತಿದ್ದ ಟ್ರಿಪ್ಲಿಕೇನ್-ನಲ್ಲಿ ವಾಸವಾಗಿದ್ದ. ಮಧ್ಯಾಹ್ನ ಸುಮಾರು ೨ ಗಂಟೆಗೆ ಚೆನ್ನೈ ತಲುಪಿದ ನನ್ನನ್ನು ಸ್ಟೇಷನ್-ನಿಂದ ರೂಮಿಗೆ ತಲುಪಿಸಿ ಮತ್ತೆ ಆಫೀಸಿಗೆ ತೆರಳಿ ಸಂಜೆ ಹಾಜರಾದ. ಬಂದವನೇ,'ಇಲ್ಲೇ ಹೋಗಿ ಬರುತ್ತೇನೆ. ನನ್ನ ಗೆಳೆಯನೊಬ್ಬ ಬರಲಿದ್ದಾನೆ. ಕಾಯಲು ಹೇಳು' ಎಂದು ತಿಳಿಸಿ ಎಲ್ಲೋ ಹೋದ.
ಬೆಂಗಳೂರಿನಲ್ಲಿ 'ಮಜೆಸ್ಟಿಕ್', ಮಂಗಳೂರಿನಲ್ಲಿ 'ಸ್ಟೇಟ್-ಬ್ಯಾಂಕ್' ಇದ್ದಂತೆ ಚೆನ್ನೈನ ನಗರ ಬಸ್ಸು ನಿಲ್ದಾಣಕ್ಕೆ 'ಪ್ಯಾರೀಸ್' ಎನ್ನುತ್ತಾರೆ ಎಂದು ನನಗೆ ಗೊತ್ತೇ ಇರಲಿಲ್ಲ.
ಸ್ವಲ್ಪ ಹೊತ್ತಿನಲ್ಲಿ ಆ ಗೆಳೆಯ ಆಗಮಿಸಿದ. ವಿಕ್ರಮ್ ಈಗ ಬರಲಿದ್ದಾನೆ, ಸ್ವಲ್ಪ ಹೊತ್ತು ಕಾಯುವಿರಂತೆ ಎಂದು ಕೂತುಕೊಳ್ಳಲು ಹೇಳಿದೆ. 'ನೋ ಪ್ರಾಬ್ಲೆಮ್, ಐ ವಿಲ್ ವೈಟ್. ಬೈ ದ ವೇ ಐ ಯಾಮ್ ಪುರುಷೋತ್ತಮ್, ಯು ಕ್ಯಾನ್ ಕಾಲ್ ಮಿ ಪುರುಷ್' ಎಂದು ನನ್ನನ್ನು ದಂಗುಬಡಿಸಿದ! ಕಡೆಗೆ ನಾನು ಕನ್ನಡಿಗನೆಂದು ತಿಳಿದ ಬಳಿಕ ಕನ್ನಡದಲ್ಲಿ ಮಾತನಾಡಲು ಶುರುಮಾಡಿದ.
ನಾನು: ನೀವು ವಿಕ್ಕಿಗೆ ಹೇಗೆ ಪರಿಚಯ
ಪುರುಷ್: ಒಟ್ಟಿಗೆ ಧಾರವಾಡದಲ್ಲಿ ಓದಿದ್ವಿ.
ನಾನು: ಓ. ಈಗ ಏನು ಮಾಡ್ತಾ ಇದ್ದೀರಾ?
ಪುರುಷ್: ಸಿ.ಎ ಮಾಡ್ತಾ ಇದ್ದೀನಿ.
ನಾನು: ಎಲ್ಲಿ?
ಪುರುಷ್: ಪ್ಯಾರೀಸ್-ನಲ್ಲಿ
ನಾನು: ಓ. ಪ್ಯಾರಿಸ್! (ನಾನು ಯೋಚನೆ ಮಾಡ್ತಾ ಇದ್ದಿದ್ದು ಫ್ರಾನ್ಸ್ ರಾಜಧಾನಿ - ಆತ ಪುರುಷ್ ಎಂದು ಪರಿಚಯ ಮಾಡಿಕೊಂಡಿದ್ದು ನಾನು ಈ ತರಹ ಯೋಚಿಸಲು ಇನ್ನಷ್ಟು ಪುಷ್ಟಿ ನೀಡಿತು). ಈಗ 'ಅಲ್ಲಿಂದಾ' ಬಂದ್ರಾ?!
ಪುರುಷ್: ಯಾ.
ನಾನು: ಮತ್ತೆ ಈಗ? ನೈಟ್ ಬಸ್ಸಲ್ಲಿ ಬೆಂಗ್ಳೂರ್ಗಾ?
ಪುರುಷ್: ಬೆಂಗ್ಳೂರಾಆಆಅ?! ಇಲ್ಲಪ್ಪಾ. ವಾಪಸ್ ಪ್ಯಾರೀಸ್-ಗೆ.
ನಾನು: (ಎಲಾ ಇವನಾ. ತಮಾಷೆ ಮಾಡ್ತಿದ್ದಾನೋ ಹೇಗೆ ಎಂದು ಮತ್ತಷ್ಟು ಗೊಂದಲಕ್ಕೊಳಗಾದೆ) ವಾಪಸ್ ಪ್ಯಾರಿಸ್? ಮತ್ತೆ ಅಷ್ಟು ದೂರಾ ಬಂದಿದ್ದು ಬರೀ ವಿಕ್ಕಿನ ಭೇಟಿ ಮಾಡ್ಲಿಕ್ಕೋ?
ಪುರುಷ್: ಇಲ್ಲ. ಸ್ವಲ್ಪ ಝೆರಾಕ್ಸ್ ಮಾಡ್ಲಿಕ್ಕೆ ಇತ್ತು. ಅದ್ಕೆ ಬಂದೆ. ಹಾಗೆ ವಿಕ್ಕಿ ಭೇಟಿ ಮಾಡೋಣ ಎಂದು ಈ ಕಡೆ ಬಂದೆ.
ನಾನು: (ಈಗಂತು ನನಗೆ ಫುಲ್ಲು ತಲೆ ಕೆಟ್ಟೋಗಿತ್ತು. ಬರೀ ಝೆರಾಕ್ಸ್ ಮಾಡ್ಲಿಕ್ಕೆ ಪ್ಯಾರಿಸ್-ನಿಂದ ಇಲ್ಲಿಗೆ ಬರೋದು ಅಂದ್ರೆ... ಎಲ್ಲಿ ವಿಮಾನದಲ್ಲಿ ಫುಲ್ ಲೋಡ್ ತಂದಿದ್ದಾನೋ ಎಂಬ ಎಕ್ಸ್-ಟ್ರೀಮ್ ಯೋಚನೆಗಳೆಲ್ಲಾ ತಲೆಯಲ್ಲಿ ಬರತೊಡಗಿದವು) ಏನು??????????? ಝೆರಾಕ್ಸ್ ಮಾಡ್ಲಿಕ್ಕಾ!!!!!!!!!!
ಪುರುಷ್: ಹೌದು. ಬಲ್ಕ್ ಝೆರಾಕ್ಸ್ ಮಾಡಿದ್ರೆ ಇಲ್ಲಿ ಸ್ವಲ್ಪ ಕಡಿಮೆ.
ನಾನು: ( ಈಗಂತೂ ತಲೆ ಕೂದಲನ್ನು ಹಿಡಿದು ಜಗ್ಗುವಷ್ಟು ತಲೆ ಕೆಟ್ಟಿತ್ತು. ಇಂವ ನನ್ನನ್ನು ಫೂಲ್ ಮಾಡ್ತಿದ್ದಾನೋ ಹೇಗೆ? ಏನ್ರೀ ತಮಾಷೆ ಮಾಡ್ತಿದ್ದೀರಾ ಎಂದು ಗದರಿಸಿಬಿಡೋಣವೆನಿಸಿದರೂ ಸುಮ್ಮನಾದೆ. ಪ್ಯಾರಿಸ್ ದುಬಾರಿ ಊರಾದರೂ ಝೆರಾಕ್ಸ್-ಗೋಸ್ಕರ ಇಷ್ಟು ದೂರ.... ಛೇ ಇರಲಿಕ್ಕಿಲ್ಲ ಎಂದೆನಿಸಿತು.ಅದರೆ ಪುರುಷ್ ಗಂಭೀರನಾಗಿ ಮಾತನಾಡುತ್ತಿದ್ದ. ನನ್ನ ಮನಸ್ಸು ಗೊಂದಲದ ಗೂಡಾಗಿತ್ತು)
ಆಗ ವಿಕ್ರಮ್ ಬಂದು, ಅವರಿಬ್ಬರು ಮತ್ತೆಲ್ಲೋ ಹೋದರು. ನಂತರ ವಿಕ್ರಮ್ ಮರಳಿದ ಬಳಿಕ ನಾನು ಆತನಿಗೆ ನಡೆದದ್ದನ್ನು ತಿಳಿಸಿದಾಗ, ಆತ ಹೊಟ್ಟೆ ಹುಣ್ಣಾಗುವಂತೆ ನಕ್ಕು, 'ಲೇ ಹಾಪ, ಪ್ಯಾರೀಸ್ ಇಲ್ಲೇ ಐತ್-ಲೇ. ಬಸ್-ಸ್ಟ್ಯಾಂಡಿಗೆ ಪ್ಯಾರೀಸ್ ಅಂತಾರೆ' ಅಂದು ಮತ್ತೆ ಮತ್ತೆ ನಕ್ಕ. ಅಷ್ಟಕ್ಕೆ ಸುಮ್ಮನಾಗದೆ, ಟ್ರಿಪ್ಲಿಕೇನ್-ನಲ್ಲಿ ವಾಸವಾಗಿದ್ದ ಎಲ್ಲಾ ಕನ್ನಡಿಗರಿಗೆ ಮುಂದಿನ ನಾಲ್ಕೈದು ದಿನಗಳವರೆಗೆ ಈ 'ಪ್ಯಾರಿಸ್ ಪ್ರಸಂಗ'ವನ್ನು ವಿವರಿಸಿ ಮತ್ತಷ್ಟು ನಕ್ಕ.
Comments
ಉ: ಪ್ಯಾರಿಸ್ ಪ್ರಸಂಗ