ಬಾಟಲಿ ಭೂತ‌

ಬಾಟಲಿ ಭೂತ‌

ಹೋದ ವರ್ಷ ದೀಪಾವಳಿ ಹಬ್ಬಕ್ಕೆ ಒಳ್ಳೆ ಕೆಂಪು ಮಣ್ಣು ತರೋಕ್ಕೆ ಅಂತ ಹೋಗಿ, ಅಲ್ಲಿ ಮೊಬೈಲ್ನಲ್ಲಿ ಬಂದ ಎಸೆಂಎಸ್  ಶಬ್ದ ಕೇಳಿ ಬೇಸ್ತು ಬಿದ್ದಿದ್ದು ನಿಮಗೆಲ್ಲ ಗೊತ್ತಿರುವ ವಿಷ್ಯನೇ. ಈ ಸರ್ತಿ ದೀಪಾವಳಿಗೆ ರಜಾ ಇದ್ದಾಗ ನಡೆದ ಘಟನೆಯನ್ನು ನಿಮಗೆ ಹೇಳೇ ಇಲ್ಲ ಅಲ್ವೆ ಹಾಗಾದ್ರೆ ಹೇಳ್ತೀನಿ ಕೇಳಿ.
ಹಬ್ಬದ ಹಿಂದಿನ ದಿನ ನನ್ನಾಕೇನ ನಾನೆ ಕೇಳ್ದೆ.

ಏನೇ ನಿಂಗೆ ಮಣ್ಣೇನಾದ್ರು ಬೇಕಿತ್ತಾ?॒

ವಿಚಿತ್ರವಾಗಿ ನನ್ನನ್ನು ಮೇಲಿಂದ ಕೆಳಕ್ಕೆ ನೋಡಿ,

ಮಣ್ಣಾ...? ನಂಗಾ...? ಏಕೆ ಈ ದೀಪಾವಳಿಗೆ ಅದ್ರದ್ದೆ ಊರ್ಣದ ಒಬ್ಬಟ್ಟು ನಿಮಗೆ ಮಾಡ್ಬೇಕಾ..ಇಲ್ಲ ಮಡ್ ಬಾತ್ ಪ್ರಯೋಗ ಏನಾದ್ರೂ ಪ್ಲಾನ್ ಮಾಡಿದ್ದೀರಾ...?
ಅಯ್ಯೋ ಹಾಗಲ್ವೇ.., ಹೋದ್ಸಲ ಗಿಡದ ಪಾಟ್ಗೆ ಹಾಕಕ್ಕೆ ಬೇಕು ಅಂತಿದ್ದಾಲ್ಲ. ಯಾವಾಗ್ಲೂ ನಾನು ಅರ್ತ್ಕೊಂಡು ಕೆಲ್ಸ ಮಾಡಲ್ಲ ಅಂತಿಯಲ್ಲ, ಅದಕ್ಕೆ ಈ ಸರ್ತಿ ನೀನು ಕೇಳೋಕ್ಕೆ ಮುಂಚೇನೇ ನಾನೇ...ಆ...ಹ.. ಹ.. ಇಂತ ವಿಚಾರದಲ್ಲಿ ನಿಮಗೆ ಅರ್ತ್ಕೊಂಡು ಮಾಡೋದು ಚೆನ್ನಾಗಿ ಹೊಳೆಯುತ್ತೆ, ಅದೆ ಹೆಂಡ್ತಿಗೆ ಒಂದು ರೇಶ್ಮೆ ಸೀರೆ ತಂದ್ಕೊಡೋಣ, ಇಲ್ಲ ಹುಟ್ಟಿದ ಹಬ್ಬಕ್ಕೆ ಬಂಗಾರದ ಬಳೆ ತಂದ್ಕೊಡೋಣ ಇವೆಲ್ಲ ಅರಿವಿಗೆ ಬರೋಲ್ಲ, ಬರೋದು ಹೋಗ್ಲಿ ನಾವೇ ಬಾಯ್ಬುಟ್ಟು ಕೇಳಿದ್ರೂ, ಏನೂ ಕೇಳಿಸಿಲ್ವೇನೋ ಅನ್ನೋ ಹಾಗೆ ಮೈ ಮೇಲಿನ ಅರಿವೂ ಹೋಗ್ಬಿಟ್ಟಿರುತ್ತೆ ಅಲ್ವೆ.. ರಾಯ್ರಿಗೆ ? ಏನೂ ಬೇಡ ಸ್ವಾಮಿ, ಹೋದ ಸಲ ಹೋಗಿ ದೆವ್ವ ಕೂಗ್ತು ಅಂತ ಹೆದ್ರಿ ಓಡಿ ಬಂದಿದ್ರಲ್ಲ. ಇನ್ನು ಈ ಸರ್ತಿ ಮತ್ತೇನಾದ್ರೂ ತರ್ಲೆ ಮಾಡ್ಕೊಂಬರೋದು ಬೇಡ. ರಜ ಇದೆ ನೆಮ್ಮದಿಯಾಗಿ, ತೆಪ್ಪಗೆ ಮನೇಲಿ ಇರಿ, ದೊಡ್ಡ ಉಪಕಾರ ಆಗುತ್ತೆ.

ನೀನ್ ಬಿಡು ಯಾವಾಗ್ಲೂ ನನ್ನನ್ನು ಅಣಗಿಸೋದೆ. ಹ್ಮ್॒॒॒॒ ॒ನಾನಾಗೋ ಹೊತ್ಗೆ ಸರಿ ಹೋಯ್ತು ಬೇರೆ ಯಾರದ್ರೂ ಆಗಿದಿದ್ರೆ ಅಷ್ಟೆ. ಹೋಗ್ಲಿ ಬಿಡು ಬೆಳಿಗ್ಗೆ ಮುಂಚೇನೆ ಎದ್ದು  ತುಂಬಾ ದಿನ ಆಯ್ತು, ಹೇಗೂ ರಜ ಇದೆ ನಾಳೆ ಬೆಳಿಗ್ಗೆ ಒಂದು ರೌಂಡ್ ಹೋಗಿ ಬರ್ತೀನಿ.
ಅಪ್ಪ ರೌಂಡ್ ಅಂದ್ರೆ, ಮೊನ್ನೆ ರಾತ್ರಿ ನಿನ್ನ ಫ್ರೆಂಡ್ ಯಾರೋ ಫೋನಲ್ಲಿ ಮಾತಾಡ್ತಿದ್ರಲ್ಲ, ಅದೇನೋ ಇಷ್ಟೊತ್ಗೆ ಮೂರು ರೌಂಡ್ ಮುಗ್ಸಿ ಬಿಟ್ರ ಅಂತಿದ್ಯಲ್ಲ ಆ ತರ ರೌಂಡ್ ಏನಪ್ಪ.
ಸಾಕು ಸುಮ್ನಿರೆ ನಿಮ್ಮಮ್ಮನ ಜೊತೆ ನೀನೂ ಸೇರ್ಕೋ ಬೇಡ. ಅವ್ನು ಮಾತಾಡ್ತಿದಿದ್ದು ಗುಂಡಿನ ರೌಂಡ್, ನಾನು ಹೇಳ್ತಿರೋದು
ವಾಕಿಂಗ್ ರೌಂಡ್. ಬೇಕಾದ್ರೆ ನೀನೂ ಬಾ.

ಯಪ್ಪ ನಿನ್ನ ಜೊತೆಲಾ...? ಬೇಡಪ್ಪ. ನೀನು ಹೋಗ್ಬಾ.
ಓ.. ಹೋ ಅದಕ್ಕೆ ಇರ್ಬೇಕು.. ನಿಮ್ಮಪ್ಪ ಇವತ್ತು ಬೆಳಿಗ್ಗೇನೆ ಎದ್ದು ದೇವರ ಮನೇಲಿ ಅದೇನೋ ಗುಂ ಗುಟುಕ್ ಸ್ವಾಹಾ ತಟ್ ಪಟ್ ಅಂತ ಏನೇನೋ ಮಂತ್ರ ಹೇಳ್ಕಳ್ತಿದ್ರು. ನಾಳೆ ಬೆಳಿಗ್ಗೇನೇ ಹೋಗೋಕ್ಕೆ ತಯಾರಿ ಅಂತ ಕಾಣುತ್ತೆ. ಹೋದ ಸಲ ಹೆದರಿಕೆ ಆದ ಹಾಗೆ ಈಸರ್ತಿ ಏನೂ ಆಗೋದು ಬೇಡ ಅಂತ ಪುಕ್ಕಲು ಇರ್ಬೇಕು.
ಲೇ..ಲೇ..ನಂಗೇನೂ ಭಯ ಇಲ್ಲ ಕಣೆ. ಅದು ಆಂಜನೇಯ ಸ್ತೋತ್ರ ಕಣೆ. ಸುಮ್ನೆ ಹೇಳ್ಕೋತಿದ್ದೆ ಅಷ್ಟೆ. ಹೋಗ್ಲಿ ಬಿಡು ನಿಂಗೇನು ಒಪ್ಪಿಸೋದು. ನನ್ನ ಪಾಡಿಗೆ ನಾನು ರೌಂಡ್ ಅಲ್ಲ ವಾಕಿಂಗ್ ಹೋಗಿ ಬರ್ತೀನಿ. ಸರಿ ಹೊತ್ತಾಯ್ತು ಇನ್ನು ಮಲಗಿ ಸಾಕು. ನಾನು ಸ್ವಲ್ಪ ಹೊತ್ತು ಟೀವಿ ನೋಡಿ ಮಲಗಿಬಿಡ್ತಿನಿ.   

॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒ಮಾರಮೆ ದಿನ ಬೆಳಿಗ್ಗೇನೇ ಎದ್ದು ನಿತ್ಯ ಕರ್ಮ ಮುಗಿಸಿ ಮನೆಯಿಂದ ಹೊರ್ಗೆ ಹೊರಟೆ. ಪೂರ್ತಿ ಕತ್ತಲು. ಅಂಗಡಿ ರಸ್ತೆಯನ್ನು ದಾಟಿ ಮುಂದೆ ಬಂದವನು, ಈಸರ್ತಿ ಆ ಕೆರೆ‍ಏರಿಯ ಕಡೆ ಹೋಗೋದೇ ಬೇಡ, ಈ ಆಂಜನೇಯ ದೇವಸ್ಥಾನದ ಹಿಂದೆ ಇದ್ದ ಗುಡ್ಡ ಕಡಿದು ಹೊಸ ಬಡಾವಣೆ ಮಾಡ್ತಾ‍ಇದ್ದಾರಂತಲ್ಲ ಆ ಕಡೆ ಹೋಗೋಣ ಅಂತ ಯೋಚಿಸಿ, ದೇವಸ್ಥಾನವನ್ನು ಹಾಯ್ದು ಗುಡ್ಡ ಕಡಿದು ಹೊಸ ರಸ್ತೆ ಮಾಡಿದ್ದ ಜಾಡಿನಲ್ಲಿ ಹೊರಟೆ. ಪರ್ವಾಗಿಲ್ಲ ಆಗ್ಲೆ ಗುಡ್ಡವನ್ನು ಅರ್ಧ ಕರಗಿಸಿ ಬಿಟ್ಟಿದ್ದಾರೆ. ಈ ಬೆಂಗ್ಳೂರ್ನಲ್ಲಿ ಯಾವ ಗುಡ್ಡ ಬೆಟ್ಟ  ಗಿಡ ಮರ ಕೆರೆ ಬಾವಿ ಏನನ್ನೂ ಬಿಡೋಲ್ಲ. ಎಲ್ಲವನ್ನೂ ಕರಗಿಸಿ ಬಿಲ್ಡಿಂಗಳನ್ನ ಕಟ್ಬಿಡ್ತಾರೆ. ಛೇ ಛೇ ಏನಪ್ಪ ನಮ್ಮ ಜನಗಳು ಪ್ರಕೃತಿ ಹೀಗೆ ನಾಶ ಮಾಡ್ತಾ‍ಇದ್ದಾರೆ. ಅಲ್ಲ ಇದೇ ತರ ಜಾಗಾನೆಲ್ಲ ನಾವುಗಳು ಆವರಿಸಿಕೊಂಡು ಹೋದ್ರೆ ಮುಂದೆ ಬೆಳೆ ಬೆಳೆಯೋ ಜಾಗ ಎಲ್ಲ ಖಾಲಿ ಆದ್ರೆ, ಹೊಟ್ಟೆಗೆ ತಿನ್ನೋಕ್ಕೆ ಏನು ಮಾಡೋದು..? ದುಡ್ಡನ್ನ ಎಷ್ಟು ದುಡಿದ್ರೂ ತಿನ್ನೊಕ್ಕೆ ಆಗೋಲ್ಲ. ಏಕೆ ನಮಗೆ ಇದು ಅರ್ಥ ಆಗ್ತಿಲ್ಲ, ಹ್ಮು॒॒॒॒ ॒ಆ ದೇವ್ರೆ ನಮ್ಮನ್ನ ಕಾಪಾಡ್ಬೇಕು.

ಅಯ್ಯೋ ಅವನೆಲ್ಲಿ ಕಾಪಾಡ್ತಾನೆ..?  ಇದಕ್ಕೆಲ್ಲ ಕಾರ್ಣ ಆ ದೇವ್ರೆ ಅಂಥ ಅವನ ಇಚ್ಚೆ ಇಲ್ಲದೆ ಏನೂ ನಡೆಯೋಲ್ಲ ಅಂಥ ತುಂಕೂರಿನ ಸತೀಶ್ ಹೇಳ್ತಿರ್ತಾರೆ.
ಅದು ಸರೀನೆ ಎಲ್ಲ ಆ ದೇವ್ರೆ ಮಾಡ್ಸಿದ ಮೇಲೆ ನಮ್ದೇನ್ ಇದೆ, ಬೆಟ್ಟ ಗುಡ್ಡ ಪ್ರಕೃತಿ ಎಲ್ಲವನ್ನೂ ಮಾಡಿರೋನು ಅವ್ನೆ, ಅದನ್ನ ಉಳಿಸೋದು ಅಳಿಸೋದು ಎಲ್ಲ ಅವ್ನೆ ಅಲ್ವಾ? ಅವ್ನ ಬೆಟ್ಟ ಅವ್ನ ಗುಡ್ಡ ಅವ್ನೇ ಇಟ್ಟ ಅವ್ನೇ ಕಡ್ದ ನಮ್ದೇನ್ ಹೋಯ್ತು.
ಮತ್ತೆ ಈ ಪಾರ್ಥ ಅವರೇನೋ ನಾನು, ನಾನು. ಈ `ನಾನು` ಮಗುವಾಗಿದ್ದೆ ವಿಧ್ಯಾರ್ಥಿಯಾಗಿದ್ದೆ, ಸ್ನೇಹಿತ್ನಾಗಿದ್ದೆ, ಅಪ್ಪನಾಗಿದ್ದೆ ಅದಾಗಿದ್ದೆ ಇದಾಗಿದ್ದೆ ಅಂಥ ಬೇರೆ ಹೇಳ್ತಿದ್ರು. ಹಾಗದ್ರೆ ಅವರ ಪ್ರಕಾರ  ಗುಡ್ಡ ಬೆಟ್ಟ ಎಲ್ಲ ಇಟ್ಟಿದ್ದೂ ಪ್ರಕೃತಿಯ ರೂಪಿನ `ನಾನು` ಮತ್ತೆ ಅದನ್ನು ಕಡಿದು ಬರಿದು ಮಾಡುತ್ತಿರುವವನೂ `ನಾನು`

ಓ॒॒॒॒.॒ ಇದೇನೋ ಬರಿ ಗೋಜಲು ಆ ಸತೀಶ್ ಹೇಳಿದ್ದನ್ನ ಕೇಳೋಣ್ವಾ...? ಇಲ್ಲ ಪಾರ್ಥರು ಹೇಳಿದ್ದನ್ನ ನಂಬೋಣ್ವಾ..?
ಹೋಗಿ ತಿಂಬ್ಬಟ್ಟು ಸ್ವಾಮಿಗಳನ್ನೆ ಕೇಳೋಣ ಅಂದ್ರೆ, ಅವ್ರು ಬರಿ ತಿನ್ನೊ ಬಗ್ಗೆನೇ ಹೇಳ್ತಾರೆ,
ಯೋಚಿಸುತ್ತಾ ಯೋಚಿಸುತ್ತಾ ಸುಮಾರು ದೂರ ಬಂದ್ಬಿಟ್ಟೆನಲ್ಲ. ಒಮ್ಮೆ ಹಿಂತಿರುಗಿ ನೋಡಿದೆ, ಗಾಡಾಂಧಕಾರ ಗುಡ್ಡದ ಮತ್ತೊಂದು ಬದಿಗೆ ಬಂದಿದ್ದೇನೆ. ಸುತ್ತಾಮುತ್ತಾ ಯಾರೂ ಕಾಣುತ್ತಿಲ್ಲ.  ಛೇ ಹೀಗೆ ಒಂಟಿಯಾಗಿ ಇಷ್ಟು ದೂರ ಬರಬಾರದಾಗಿತ್ತು. ಕತ್ಲು ಬೇರೆ ವಾಪಸ್ಸು ಹೊರ್ಟು ಬಿಡ್ಲಾ.
ಹ್ಮ್॒॒॒॒ ॒ಮನದಲ್ಲಿ ಯೋಚನೆ ಇದ್ದಾಗ ಬಂದ ದಾರಿ ಸವೆದಿದ್ದು ಗೊತ್ತಾಗ್ಲಿಲ್ಲ. ಅದ್ರೆ ಈಗ ಮನಸ್ಸು ಎದ್ದು ವಾಸ್ತವಕ್ಕೆ ಬಂದಿದೆ, ಹಾಗಾಗಿ ಮುಂಡೆದು ಈ `ನಾನು` ದೇಹಾತ್ಮ ಬುದ್ದಿ, ಬಂದ ದಾರಿಯಲ್ಲಿ ಮರಳಲು ಹಿಂದೇಟು ಹಾಕುತ್ತಿದೆ. ಆಗ ಅನ್ನಿಸಿತು ಈ ಪಾರ್ಥರು ಹೇಳಿದ `ನಾನು` ಇದೇ ಇರ್ಬೇಕು. ಭಯ ಪಡ್ತಿದೆ.

ಇರ್ಲಿ ಏನಾಗುತ್ತೆ ನೋಡೆ ಬಿಡೋಣ ಆ ಸತೀಶ್ ಅವ್ರು ಹೇಳಿದ ಹಾಗೆ ಎಲ್ಲ ಆ ದೇವರೆ ಆಗಿರುವಾಗ ಅವನೆ ಎಲ್ಲ ನೋಡ್ಕೋತಾನೆ ನನ್ನದೇನು ಅಂತ ನಿರ್ಧಾರ ಮಾಡಿ, ತಿಂಬ್ಬಟ್ಟು ಸ್ವಾಮಿಗಳ ತಿನ್ನೊ ವಿಷ್ಯನ ಮನದಲ್ಲಿ ನೆನೆಯುತ್ತಾ ಬಂದ ದಾರಿಯಲ್ಲೆ ವಾಪಸ್ಸು ಹೆಜ್ಜೆ ಹಾಕತೊಡಗಿದೆ. ಪಕ್ಕದಲ್ಲಿ ಸಾಲಾಗಿ ನಿಂತ ಹೊಂಗೆ ಮರಗಳು, ಅದರ ಹಿಂದೆ ಅನತಿ ದೂರದಲ್ಲಿ ಸರ್ವೆ ತೋಪು, ಅದರ ಹಿಂದಕ್ಕೆ ಕೆರೆಯ ಏರಿ ಕಾಣುತ್ತಿದೆ. ಸರ್ವೆ ಮರಗಳ ಮಧ್ಯದಿಂದ ತೂರಿ ಬರುತ್ತಿರುವ ಸಣ್ಣನೆ, ತಣ್ಣನೆ ಗಾಳಿ ವಿಚಿತ್ರವಾದ ಶಬ್ದವನ್ನು ಮೂಡಿಸುತ್ತಿದೆ.
ಇನ್ನೂ ಸುತ್ತಾ ಮುತ್ತಾ ಕತ್ತಲಿನ, ಮತ್ತು ಮನುಷ್ಯ ಪ್ರಾಣಿಗಳ ಓಡಾಟವಿಲ್ಲದ ಮೌನ ವಾತಾವರಣ, ಹಾಗಾಗಿ ಗಿಡ ಮರದಲ್ಲಿನ ಕೀಟಗಳ ಶಬ್ದವೂ ಸ್ಪಷ್ಟವಾಗಿ ಕೇಳುತ್ತಿದೆ. ಅದು ಹೇಗೆ, ಹೋಗುವಾಗ ಇದೇ ದಾರಿಯಲ್ಲಿ ಸಾಗಿ ಹೋಗಿದ್ದೇನೆ ಯಾವ ಶಬ್ದವೂ ಇರಲಿಲ್ಲ, ಸರ್ವೆ ತೋಪಿನ ಗಾಳಿಯ ಸದ್ದೂ ಕೇಳಿಸಲಿಲ್ಲ, ಹೊಂಗೆ ಮರದ ಸಾಲೂ ವಿಚಿತ್ರವಾದ ಯಾವ ಭಾವನೆಯನ್ನೂ ಮೂಡಿಸಲಿಲ್ಲ, ಈಗೇಕೆ ಹೀಗೆ ಬಾಸವಾಗುತ್ತಿದೆ. ಭಹುಷಃ ಇದೇ ಇರಬೇಕು. ಸತೀಶ್ ಅವರು ಹೇಳಿದ `ದೇವರು`, ಮತ್ತು ಪಾರ್ಥರು ಹೇಳಿದ `ನಾನು`.
ಇದೇ ದಾರಿಯಲ್ಲಿ ನಡೆದು ಹೋಗುವಾಗ `ನಾನು` ಯೋಚನೆಯಲ್ಲಿ ಮುಳುಗಿತ್ತು, ಹಾಗಾಗಿ ಸುತ್ತ ಮುತ್ತ ಏನನ್ನೂ ಗಮನಿಸಿಲ್ಲ ಅಂದರೆ (ದೇವರೊಂದಿಗೆ) ಸಮಾಧಿ ಯಲಿತ್ತು, ಈಗ ಅದು ವಾಸ್ತವದಲ್ಲಿ ಎದ್ದು ಹೀಗೆ ಸುತ್ತ ಮುತ್ತ ಎಲ್ಲವನ್ನು ಗಮನಿಸಿ ಗಲಿಬಿಲಿಗೊಳ್ಳುತ್ತಿದೆ,

ಹೀಗೆ ಅಂದುಕೊಳ್ಳುವ ಹೊತ್ತಿಗೆ ನನ್ನ ಎಡ ಭಾಗದ ಮರದ ಬಳಿ ಗಾಜಿನ ಬಾಟಲಿ ಉರುಳಾಡಿದ ಶಬ್ದವಾಯ್ತು. ಏನು ಯಾವುದೋ ಖಾಲಿ ಬಾಟಲಿ ಉರುಳಿದ ಶಬ್ದವಾಗುತ್ತಿದೆ. ಯಾರಾದ್ರೂ ರಾತ್ರಿ ಕುಡಿದ ಮತ್ತಿನಲ್ಲಿ ಬಾಟ್ಲಿ ಪಕ್ಕದಲ್ಲಿ ಇಟ್ಕೊಂಡು ಇಲ್ಲೇ ಮಲಗಿಬಿಟ್ಟಿದ್ದಾರಾ..? ಏನ್ಮಾಡ್ಲಿ.. ಹತ್ರ ಹೋಗಿ ನೋಡ್ಲಾ? ಯೋಚಿಸುತ್ತಿದ್ದೆ, ಇದ್ದಕ್ಕಿದ್ದಂತೆ ಮರದ ಕಡೆಯಿಂದ ಬಾಟಲಿಯೊಂದು ಉರುಳಿಕೊಂಡು ನನ್ನ ಕಾಲ ಬಳಿ ಬಂತು, ಅದರೊಳಗೆ ಬಿಳಿ ಹೊಗೆ ತುಂಬಿಕೊಂಡು ಬೆಳ್ಳಗೆ ಹೊಳೆಯುತ್ತಿದೆ. ಏನಿದು ವಿಚಿತ್ರವಾಗಿದೆಯಲ್ಲ, ಇರಲಿ ನೋಡೋಣ, ಬಾಟಲಿ ಕೈಗೆ ತೆಗೆದುಕೊಂಡೆ.

ಆಶ್ಚರ್ಯ!? ಇದೇನಿದು ಈ ಬಾಟಲಿ ಒಳಗೆ ಒಳ್ಳೆ ಅಲ್ಲಾವುದ್ಧೀನನ ಅಧ್ಬುತ ದೀಪದಿಂದ ಬರುವ ಭೂತದ ಆಕೃತಿ ಕಾಣುತ್ತಿದೆಯಲ್ಲ .. ಏನಿದು? ಹೌದು ಅದರೊಳಗಿನ ಆಕೃತಿ ಏನೋ ಹೇಳುತ್ತಿದೆ. ಬಾಟಲಿಯನ್ನು ಹತ್ತಿರಕ್ಕೆ ತಂದು ನೋಡಿದೆ ಹೌದು.. ಬಾಟಲಿನ ಮೇಲಿನ ಬಿರಡೆ ತೆಗೆಯುವಂತೆ ಯಾಚಿಸುತ್ತಿದೆ. ಏನು ಮಾಡ್ಲಿ ಬಿರ್ಡೆ ತೆಗೆಯಲಾ?ಬೇಡವಾ?. ತೆಗೆದರೆ ಏನಾದ್ರೂ ಯಡವಟ್ಟಾದ್ರೆ ಏನ್ಮಾಡೋದು..? ಬೇಡಪ್ಪ ಯಾವ ಗ್ರಹಚಾರ, ಒಂದು ಪಕ್ಷ ಅಕಸ್ಮಾತಾಗಿ ಇದರಿಂದ ಒಳ್ಳೇದಾದ್ರೆ.  ಬಾಟಲಿ ಕಡೆಗೆ ಮತ್ತೆ ನೋಡಿದೆ ..ಪಾಪ ಕೈ ಮುಗಿದು ನನ್ನೆಡೆಗೆ ದೈನ್ಯತೆಯಿಂದ ನೋಡುತ್ತಿದೆ ಆ ಆಕೃತಿ. ಅದೇನಾಗುತ್ತೋ ನೋಡೇಬಿಡೋಣ ಅಂತ ನಿರ್ಧರಿಸಿದವನೆ,
ಜೈ ಹನುಮಾನ್ ಎಂದು ಮಾರುತಿಯನ್ನು ಮನದಲ್ಲಿ ನೆನೆದು, ಬಾಟಲಿನ ಬಿರಡೆಗೆ ಕೈ ಹಾಕಿ ಎಳೆದೆ.
 ವು.. ಹ್ಮು,.. ಅಲ್ಲಾಡುತ್ತಿಲ್ಲ. ಎಷ್ಟು ದಿನದಿಂದ ಹಿಡ್ಕೊಂಡಿದ್ಯೋ ಗಟ್ಟಿಯಾಗಿದೆ ಬರ್ತಾ ಇಲ್ಲ. ಏನಾದ್ರೂ ಬಿಡ್ಬಾರ್ದು.. ಮತ್ತೊಮ್ಮೆ ಬಲವನ್ನೆಲ್ಲ ಸೇರಿಸಿ ಎಳೆದೆ. ಬಡ್ ಎಂಬ ಶಬ್ದದೊಂದಿಗೆ ಬಿರಡೆ ತೆಗೆದು ಕೊಂಡಿತು. ಬಾಟಲಿಯೊಳಗಿಂದ ಹೊಗೆ ನಿಧಾನವಾಗಿ ಹೊರ ಬಂದು ಆಕಾರ ಪಡೆಯ ತೊಡಗಿತು. ಜೊತೆಗೆ
ಆ...ಹ...ಹಹಹ... ಆ...ಹಹಹ.. ಆ...ಕಾ.. ಆ...ಹ..ಹಹಹ.. ಸುತ್ತಮುತ್ತ ವಾತಾವರಣವೆಲ್ಲ ನಡುಗುವಂತ ಗಟ್ಟಿ ಮತ್ತು ಪ್ರತಿಧ್ವನಿಸುವ ವಿಚಿತ್ರವಾದ ನಗುವಿನ ಧ್ವನಿಯೊಂದಿಗೆ
ಬಾಟಲಿಯ ಬಾಯಿ ಬಾಲದ ತುದಿಗೆ ಆಧಾರವಿದ್ದಂತೆ, ಆ ಆಕೃತಿ ಮರದೆತ್ತರಕ್ಕೆ ಬೆಳೆದು.. ನನ್ನೆದುರು ನಿಂತಿತು.
ತಕ್ಷಣ ಬಾಟಲಿಯನ್ನು ಕೆಳಕ್ಕೆ ಎಸೆದೆ. ನಿಧಾನವಾಗಿ ಗಾಳಿಯಲ್ಲಿ ತೇಲಾಡಿದಂತೆ ನನ್ನೆದುರು ನಿಂತಿರುವ ಆ ಭೂತವನ್ನು ನೋಡಿ ಒಮ್ಮೆ ನನ್ನ ಮೈ ಜುಮ್ ಎಂದಿತು. ಮುಂದೆ ಏನಾಗುತ್ತೋ ಅನ್ನೊ ಭಯ ಮನದಲ್ಲಿ ಮೂಡಿತು. ಬಾಯಿಂದ ಮಾತೇ ಹೊರಡುತ್ತಿಲ್ಲ. ಏನು ಮಾಡುವುದು ತಿಳಿಯುತ್ತಿಲ್ಲ. ಅದನ್ನೆ ನೋಡುತ್ತಾ ಸುಮ್ಮನೆ ನಿಂತಿದ್ದೆ.

 ಸಾಹೋಧಣಿ.. ಸಾಹೋಧಣಿ...!..ಆ...ಕಾ... ಸಾಹೋಧಣಿ .ನನ್ನಿಂದ ಸೇವೆ ಏನಾಗ್ಬೇಕು..ಹೇಳಿ.. ಸಾಹೋಧಣಿ..ಅಂತು ಆ ಭೂತ.
ಒ.. ಹೋ.. ಅಂದ್ರೆ ಇದರಿಂದ ಯಾವ್ದೇ ತೊಂದ್ರೆ ಇಲ್ಲ ನನಗೆ ಕೆಲ್ಸ ಮಾಡಿಕೊಡುತ್ತೆ ಅಂದ ಹಾಗಾಯ್ತು ಏನು ಮಾಡ್ಸಿಕೊಳ್ಳೋಣ..ಹ್ಮು.. ಏನ್ಹೇಳ್ಲಿ. ಛೆ ಛೆ.. ಏನೂ ಬೇಡ, ಅದನ್ನ ಬಂಧನದಿಂದ ಬಿಡಿಸಿದ್ದೇನೆ, ಅದಕ್ಕೆ ಪ್ರತ್ಯುಪಕಾರ ಮಾಡ್ಸಿಕೊಂಡ್ರೆ, ನಾನು ಅದಕ್ಕೆ ಮಾಡಿರುವ ಸಹಾಯಕ್ಕೆ ಬೆಲೆ ಬರೋಲ್ಲ, ಆದ್ರಿಂದ ಏನೂ ಕೇಳೋದು ಬೇಡ
ಅನ್ಕೊಂಡು..ನೊ ನೊ ಏನೂ ಬೇಡ. ಪರ್ವಾಗಿಲ್ಲ..  ನಿನ್ನ ಇಷ್ಟ ಬಂದ ಕಡೆಗೆ ಹೋಗ್ಬಹುದು ನೀನು ಹೊರಡು..
... ಸಾಹೋಧಣಿ.. ಸಾಹೋಧಣಿ..ಅದಾಗದು. ತಮ್ಮ ಇಷ್ಟದ, ನನಗೆ ಕಷ್ಟದ, ಕೆಲಸವೊಂದಾಗದೆ ನನಗೆ ಬಿಡುಗಡೆ ಇಲ್ಲ.. ಎಂದು ನನ್ನ ಮುಂದೆ ತಲೆ ಬಾಗಿಸಿತು.
ಎನು ನನಗೆ ಇಷ್ಟವಾದ ನಿನಗೆ ಕಷ್ಟವಾದ ಕೆಲಸವೆ ಯಾವುದದು? ಏನ್ಹೇಳ್ಲಿ ಇದಕ್ಕೆ. ಅದಾಗದೆ ಬಿಡುಗಡೆ ಇಲ್ಲ ಅಂತಿದೆ...ಯಾವ ಕೆಲ್ಸ ಮಾಡ್ಸಿಕೊಳ್ಳಲಿ..ಆ..  ಹಾ.. ಹೊಳಿತು.
ಆ ಗಣೇಶ್ ಜಿ ಎಲ್ಲರಿಂದ ತಪ್ಪಿಸಿಕೊಂಡು ಯಾರಿಗೂ ಸಿಗದೆ, ಸಂಪದದಲ್ಲಿ ಫೋಟೋನೂ ಹಾಕಿಕೊಳ್ಳದೆ ಓಡಾಡ್ತಾ ಇದ್ದಾರೆ. ಅವರನ್ನು ನೋಡ್ಬೇಕು ಅಂತ ಸಂಪದದ ಬಹಳಷ್ಟು ಮಂದಿ ಕಾಯ್ತಿದ್ದಾರೆ, ನನಗೂ ಈ ಕೆಲ್ಸ ಇಷ್ಟ . ಈ ಕೆಲವು ತಿಂಗಳ ಹಿಂದೆ ಸಪ್ತಗಿರಿವಾಸಿಗಳನ್ನು ಭೇಟಿ ಮಾಡಿದ್ರಂತೆ ಅನ್ನುವ ಸುದ್ದಿಯಾಗಿ ಕೊನೆ ಹಂತದಲ್ಲಿ ಅವ್ರು ಹೈದ್ರಾಬಾದಿನ ಸಂಪದ ಗೆಳೆಯರು ಅಂತ ವಿಷ್ಯ ತಿಳೀತು. ಹಾಗಾಗಿ ಇದು ಸ್ವಲ್ಪ ಕಷ್ಟ ಕೂಡ. ಈಗ ಹೇಗೂ ಈ ಭೂತ ನನಗೆ ಇಷ್ಟವಾದ ಮತ್ತು ಅದಕ್ಕೆ ಕಷ್ಟವಾದ ಕೆಲ್ಸ ಕೇಳ್ತಿದೆ. ಆದ್ರಿಂದ ಇದೇ ಸರಿಯಾದ ಕೆಲ್ಸ. ಹಾಗೇ ಮಾಡೋಣ ಅನ್ಕೊಂಡು,
ಹ್ಮು.. ನೋಡಯ್ಯ ಭೂತ ರಾಜ, ಎಲ್ಲಿದ್ರೂ ಸರಿ, ಹೋಗಿ ಆ ಗಣೇಶ್‍ಜಿನ ಕರ್ಕಂಬಂದ್ಬಿಡು, ಇದೆ ನೀನು ನನಗೆ ಮಾಡಿಕೊಡಬೇಕಾಗಿರುವ ಕೆಲ್ಸ... ಯಾವ ಗಣೇಶ್ ಜಿ ಧಣಿ,..? ಪರಮೇಶ್ವರ ಪುತ್ರ ಗಣೇಶ್ ಜಿ ನಾ..? ಇಲ್ಲ ಮುಂಗಾರುಮಳೆ ಗಣೇಶನಾ..? ಅಲ್ಲ ಅಲ್ಲ, ನಾನು ಹೇಳ್ತಿರೋದು ಆ ನಮ್ಮ ಸಂಪದದಲ್ಲಿ ಬರೀತಾರಲ್ಲ... ಅದೇ ಇತ್ತೀಚೆಗೆ ಅಂಭಂಬ್ರ ಸ್ವಾಮಿ ಅಂತ ಖ್ಯಾತರಾಗಿದ್ದಾರೆ ನೋಡು ಅವ್ರು ಆ ಗಣೇಶ್ ಜಿ, ನಾನು ಹೇಳಿದ್ದು ಅವ್ರನ್ನ ಕರ್ಕಂಬಾ ಅಂತ.

ಆ.. ಗಣೇಶ್ ಜಿನಾ..ತನ್ನ ತಲೆ ಮೇಲೆ ಕೈ ಇಟ್ಟು ಎರಡು ನಿಮಿಷ ಯೋಚಿಸಿದ ಭೂತ, ಸರ್ ಅಂತ ನನ್ನೆದುರಿನಿಂದ ಮಾಯವಾಯ್ತು. ಅಹಾ.. ಗಣೇಶ್ ಜಿ ಈಗ ಸಿಕ್ಕಿ ಹಾಕಿಕೊಂಡ್ರ, ಆ ಭೂತ ನಿಮ್ಮನ್ನ ಇಲ್ಲಿಗೆ ಹೊತ್ತು ತರುತ್ತೆ. ನನ್ನ ನಿಮ್ಮ ಭೇಟಿಯಾಗುತ್ತೆ.
ಇದರ ಬಗ್ಗೆ ಒಳ್ಳೆ ಕಥೆ ಬರೆಯಬಹುದು. ಹೌದು ಹೌದು ಅದೇ ಸರಿ, ಆ ಸಪ್ತಗಿರಿವಾಸಿಗಳು ಮಾಡಿದ ಹಾಗೆ ನಾನೂ ಕೂಡ ಕುತೂಹಲ ಬರುವ ಹಾಗೆ ಬರೆದು ಸಂಪದಿಗ ಮಿತ್ರರನ್ನೆಲ್ಲಾ ಸೆಳೆಯಬೇಕು. ಅಂತು ಕೊನೆಗೂ ಗಣೇಶ್ ಜಿನ ಭೇಟಿಯಾಗೊ ಕಾಲ ಬಂದೆ ಬಿಡ್ತು, ಸಖತ್ ತ್ರಿಲ್ ಅನ್ನಿಸುತ್ತಿದೆ. ಭಹುಷಃ ಇದುವರೆಗೂ ಸಂಪದಿಗರನೇಕರಿಗೆ ಕಾಣ ಸಿಗದಿರುವ ಇವರನ್ನು ನಾನು ಭೇಟಿ ಮಾಡ್ತಿದ್ದೇನೆ. ಈ ಸಲ ದೀಪಾವಳಿಗೆ ಒಳ್ಳೆ ಬಂಪರ್ ಬಹುಮಾನ ವಾರೆ.. ವ್ಹಾ..ಛೆ.. ಛೆ.. ಇಂಥಹ ಸಮಯದಲ್ಲಿ ಕ್ಯಾಮರ ಜೊತೆಯಲಿಲ್ಲ, ಹೋಗ್ಲಿ ಮೊಬೈಲಾದ್ರೂ ಇದಿದ್ರೆ ಅದರಲ್ಲಿ ಫೋಟೋ ತೆಗೆಯಬಹುದಿತ್ತು, ಒಳ್ಳೆ ಯಡವಟ್ಟಾಯ್ತು...ಹ್ಮು...ಪರ್ವಾಗಿಲ್ಲ ಮೊದಲು ಅವ್ರು ಬರ್ಲಿ, ಹೇಗೂ ಮನೆ ಹತ್ರ ತಾನೆ ಅಲ್ಲಿಗೆ ಕರ್ಕಂಡು ಹೋದ್ರೆ ಆಯ್ತು.

ಅರೆ ಇದೇನು ಇಷ್ಟೊತ್ತಾಯ್ತು, ಇನ್ನು ಬರಲಿಲ್ಲ ಈ ಭೂತ, ಎಲ್ಲಿಗೆ ಹೋಯ್ತು..ಗಣೇಶ್ ಜಿನ ಹುಡ್ಕೋದು ಅದಕ್ಕೂ ಅಷ್ಟೊಂದು ಕಷ್ಟಾನಾ? ಏನಾಗ್ತಿದೆ? ಹ್ಮಾ..
ಸುತ್ತ ಮುತ್ತ ನೋಡ್ದೆ ಯಾರೂ ಕಾಣಲಿಲ್ಲ, ಆ ಭೂತವೂ ಇಲ್ಲ, ಕೆಳಗೆ ಬಗ್ಗಿ ನೋಡಿದೆ ಬಾಟ್ಲಿಯೂ ಇಲ್ಲ. ಎಲ್ಲಿ ಹೋಯ್ತು ಬಾಟ್ಲಿ ಇಲ್ಲೆ ಕೆಳಗೆ ಬಿಸಾಕಿದ್ದೆನಲ್ಲ. ಹೌದು ಮರದ ಬುಡದಲ್ಲಿ ನಿಧಾನವಾಗಿ ಉರುಳುತ್ತಾ ಹಿಂದಕ್ಕೆ ಸರಿಯುತ್ತಿದೆ ಬಾಟ್ಲಿ. ಎಲ ಇದ್ರ ಹೊರಗೆ ತಂದಿದ್ದಕ್ಕೆ ಸಹಾಯ ಮಾಡ್ತಿನಿ ಅಂದಿದ್ದು ಈಗೇನೋ ಹೊಸ ಆಟ ಕಟ್ತಿದೆ ಅನ್ಕೊಂಡು ಅದರ ಹತ್ತಿರಕ್ಕೆ ನಡೆದೆ, ಈಗ ಆ ಬಾಟಲಿ ಜೋರಾಗಿ ಉರುಳಲಿಕ್ಕೆ ಪ್ರಯತ್ನಿಸುತ್ತಿದೆ ಆದರೆ ಮರದ ಬುಡ ಅದನ್ನು ತಡೆಯುತ್ತಿದೆ. ಬಿಡಬಾರ್ದು ಅಂದುಕೊಂಡವನೆ.

 ಏ ನಿಂತ್ಕೋ.. ಓಡೋಹೋಗ್ಬೇಡ ಅಲ್ಲೇ ನಿಂತ್ಕೋ.. ಹತ್ತಿರ ಹೋಗಿ ಬಾಟ್ಲಿಯನ್ನು ಕೈಯಲ್ಲಿ  ತೆಗೆದು ಕೊಂಡೆ, ಹೌದು ಭೂತ ಒಳಗೆ ಸೇರಿ ಬಿಟ್ಟಿದೆ. ಬಾಟಲಿಯ ಬಿರಡೆ ತೆಗೆಯಲು ನೋಡಿದೆ. ವು ಹ್ಮು ಬರುತ್ತಿಲ್ಲ ಭದ್ರವಾಗಿ ಮುಚ್ಚಿದೆ. ಜೊತೆಗೆ ನಾನು ಹೊರಗೆ ಎಳೆಯುತ್ತಿದ್ದರೆ ಅದು ಒಳಗಿನಿಂದ ಭದ್ರವಾಗಿ ಬಿರಡೆಯ ತುದಿಯನ್ನು ಒಳಕ್ಕೆ ಎಳೆಯುತ್ತಿದೆ.
ಏ..ಬಾ‍ಇಲ್ಲಿ ನೀನು ಹೊರಕ್ಕೆ ಬಾ.. ಗಣೇಶ್ ಜಿನ ಕರ್ಕೊಂಬಾ, ಬಾ...ಇಲ್ಲಿ, ಆಟ ತೋರಿಸ್ಬೇಡ. ಅಂತಿದ್ರೆ ಅದು ಒಳಗಡೆ ನನ್ನ ಕೈಲಿ ಆಗೋಲ್ಲ ಬಿಟ್ಬಿಡು ಅನ್ನುವ ರೀತಿ ಕೈ ಮುಗಿದು ಬೇಡಿ ಕೊಳ್ಳುತ್ತಿದೆ.
ಇದೇನು ಈ ಗಣೇಶ್ ಜಿ ನ ಹಿಡ್ಯೊ ಕೆಲ್ಸ ಈ ಭೂತಕ್ಕೂ ಕಷ್ಟಾನಾ!?.
ಏನಾದ್ರೂ ಬಿಡ್ಬಾರ್ದು, ಏ ನಿನ್ನ ಬಿಡೋಲ್ಲ, ಬಾ ಆಚೆ ಆ ಗಣೇಶ್ ಜಿ ನ ಕರ್ಕೊಂಬಾ.. ಬಿಡಲ್ಲ ನಿನ್ನ ಏ ಬಾಟ್ಲಿ ಭೂತ.. ಬಾ ಆಚೆ, ಬಾ ಆಚೆ.
ಅಪ್ಪ ಏಳಪ್ಪ, ಎಚ್ರ ಮಾಡ್ಕೊ ಎದ್ದೇಳು, ಹಾಸ್ಗೆ ಹಾಸಿದ್ದೀನಿ ಮಲ್ಗೇಳು. ಏನಪ್ಪ ನೀನು ಕುರ್ಚಿಲಿ ತೂಕಡಿಸ್ತನೇ ಇಷ್ಟೊಂದು ಕನ್ಸು ಕಾಣ್ತೀಯ, ಅದೇನೊ ಬಾಟ್ಲಿ, ಬಾ ಗಣೇಶ್, ಭೂತ ಏನೇನೋ ಬಡ್ಬಡಿಸ್ತೀಯ...
ಅಯ್ಯೋ ಇದೂ ಕನ್ಸಾ..ಹ್ಮು ಕನ್ಸಲ್ಲೂ ಕಾಣ್ಸಲ್ಲ ಅಂತಾರೆ ಆ ಗಣೇಶ್ ಜಿ.
ಸರಿ ಮಲ್ಗ್ತೀನಿ ಬಿಡಮ್ಮ...

Rating
No votes yet

Comments

Submitted by veena wadki Mon, 02/25/2013 - 11:46

ನಿಮ್ಮ ಕನಸೂ, ಕಥೆನೂ ಸಖತ್ತಾಗಿದೆ ಸರ್. ನಿಮ್ಮ ಹಾಗೆ ಇನ್ನು ಎಷ್ಟು ಜನರನ್ನ ಕನಸಲ್ಲಿ ಕಾಡ್ತಿದಾರೋ ಈ ಗಣೇಶಜಿ ಯಾವ‌ ಸ್ಟಾರ್ ಗೂ ಕಡಿಮೆಯಿಲ್ಲ ಬಿಡಿ :):)

Submitted by venkatb83 Mon, 02/25/2013 - 17:31

In reply to by veena wadki

ಗಣೇಶ್ ಅಣ್ಣ ಅವರ ಬಗ್ಗೆ ಸಂಪದದಲ್ಲಿ ಬಂದ ಬರಹಗಳಲ್ಲಿ ಹಲವು ಬರಹಗಳು ಅವರ ಹುಡುಕಾಟದ ಕುರಿತದ್ದೇ..ಆ ಬಗ್ಗೆ ನಾನು(ಸಪ್ತಗಿರಿವಾಸಿ-ವೆಂಕಟೇಶ) ಗುರುಗಳಾದ ಶ್ರೀಯುತ ಪಾರ್ಥಸಾರಥಿ ಅವರು-ಈ ಬರಹದ ಕತೃ ರಾ-ಮೋ ಅವರು-(ಈ ಮೊದಲೇ ಆ ಬಗ್ಗೆ ಎರಡು ಬರಹ ಬರೆದಿರುವರು ಅನ್ಸುತ್ತೆ) ಬರೆದಿರುವೆವು....
ಮೆಜೆಸ್ತಿಕ್ಕ್ಕಲ್ಲಿ ಶ್ರೀಯುತ ಶ್ರೀಧರ್ ಜೀ ಅವರನ್ನು ಭೆಟ್ಟಿ ಆಗುವಾಗ ಈ ಭೇಟಿ ನನ್ನ ಮತ್ತು ಗಣೇಶ್ ಅಣ್ಣ ಅವರ ಭೇಟಿ ರೀತಿ ತೋರಲಿ ಸಂಶಯ ಬರಲಿ ಎಂದು ಆ ಬಗ್ಗೆ ಶ್ರೀಧರ್ ಜೀ ಅವರಿಗೂ ತಿಳಿಸದೇ ಬರೆದೆ...!!!
ಅದನ್ನು ಹಲವರು ಓದಿದರೂ ಕೆಲವರು ಗೆಸ್ ಮಾಡಿದರೂ-ನನ್ನ ಪುಣ್ಯಕ್ಕೆ ಅದನ್ನು ಶ್ರೀಧರ್ ಜೀ ಮತ್ತು ಗಣೇಶ್ ಅಣ್ಣ ಓದಿರಲಿಲ್ಲ ಮತ್ತು ಅವರಿಬ್ಬರ ಅನುಪಸ್ಥಿತಿ ಕಾರಣವಾಗಿ ಹಲವರಿಗೆ ಗೊಂದಲವಾಗಿ ಬಹುಶ ಯಾರ್ಗೂ ಸಿಗದ ಗಣೇಶ್ ಅಣ್ಣ ಸಪ್ತಗಿರಿವಾಸಿಗೆ ಸಿಕ್ಕಿರುವ ಹಾಗಿದೆ -ಫೋಟೋ ಸಹಾ ಬರಬಹುದು ಎಂದು ಕಾದಿದ್ದೆ ಬಂತು....
ಆದ್ರೆ ಕೊನೆಗೆ ಅದು ಗಣೇಶ್ ಅಣ್ಣ ಅಲ್ಲ ಜೀ ಎಂದು ಗೊತ್ತಾಗಿ ಮತ್ತೆ ಮೊದಲಿನ ನಿರಾಶೆ ಆಯ್ತು...:((
ಸಮಸ್ಯೆ ಮತ್ತೆ ಸ್ಕ್ವಯರ್ ಒನ್ ..!!

ನಿಮೆಲ್ಲರಂತೆ ನನಗೂ ಗಣೇಶ್ ಅಣ್ಣ ಅವರನ್ನ ನೋಡೋ ಆಶೆ...ದುರಾಶೆ ಅಂದ್ರೂ ಅಡ್ಡಿ ಇಲ್ಲ.!!
ಈಗೀಗ ನನಗೊಂದು ಭಯಂಕರ ಸಂಶಯ ಡೌಟು ಬಂದಿದೆ...ಅದು ಶ್ರೀಕರ್ ಜೀ ಮತ್ತು ಗಣೇಶ್ ಅಣ್ಣ ಡಬಲ್ ಪಾರ್ಟ ? ಅಂತಾ....!!
ಅವರಿಬ್ಬರ ಪ್ರತಿಕ್ರಿಯೆ ಮರು ಪ್ರತಿಕ್ರಿಯೆಗಳನ್ನು ಗಮನಿಸಿ...!

ಅದೊಮ್ಮೆ ಕೆಲವರಿಗೆ ನಾನು ಮತ್ತು ಗಣೇಶ್ ಅಣ್ಣ ಒಂದೇನಾ? ಎನ್ನುವ ಸಂಶಯ ಬಂದಿತ್ತು....!!
ಅವರವರೆ-ನಾನು ನಾನೇ..!

ರಾ ಮೊ ಅವರೇ-ಗಣೇಶ್ ಅಣ್ಣ ಅವರನ್ನು ಹಿಡಿಯುವ ನೋಡುವ ನಿಮ್ಮ ಅಮೋಘ ೨-೩ ನೆ ಯತ್ನ!!!!
ದೆವ್ವಕ್ಕೂ -ಅದ್ಭುತ ಶಕ್ತಿಯ ಭೂತಕ್ಕೂ ಸಿಗದ 'ಅವರು' ನಮಗೇಗೆ ಸಿಕ್ಕಾರು..??
ಸಿಗಲೇಬೇಕು ಹುಡುಕಲೇಬೇಕು ಎನ್ನುವಿರಾದರೆ ಪಾರ್ಕು-ಮಾಲು ಇತ್ಯಾದಿ ಕಡೆ ಹುಡುಕಬೇಕು...ಆಗಾಗ ಮಲೆನಾಡ ಪಶಿಮ ಘಟ್ಟಗಳ ಪ್ರದೇಶಗಳಲ್ಲಿ ನಾಕಾಬಂದಿ ಹಾಕಿ ಬರುವ ಹೋಗುವ ಗಾಡಿಗಳನ್ನು ತಪಾಸಿಸಬೇಕು....
ಗಣೇಶ್ ಅಣ್ಣ ಅವರನ್ನು ಹುಡುಕುವ ಮುಂದಿನ ಯತ್ನಗಳಿಗೆ ಜಯವಾಗಲಿ..!!

ಶುಭವಾಗಲಿ..

\।

Submitted by RAMAMOHANA Tue, 02/26/2013 - 10:46

In reply to by venkatb83

ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸಪ್ತಗಿರಿಗಳೆ. ಸುಮ್ನೆ ಕುಳಿತು ಹಾಗೆ (ಕೊ)ಬರೆದೆ ನೋಡೋಣ‌ ಅ0ತ‌. ನಾನು ಸಿಕ್ಕಿಹಾಕಿಕೊ0ಡಿದ್ದ ಭೂತದಿ0ದ‌ ಹೇಗೆ ಬಿಡಿಸಿ ಕೊಳ್ಳಬೇಕೆ0ದು ಯೋಚಿಸಿದಾಗ‌ ಸಿಕ್ಕ ಕೊನೆಯ‌ ಸೂತ್ರ `ಗಣೇಶ್ ಜಿ` ಮ‌ತ್ತು ಕನಸು, ಹಾಗಾಗಿ ಅದು ಹೀಗೆ ಕೊನೆಯಾಯ್ತು.
ತಮ್ಮವ‌ ರಾಮೋ.

Submitted by ಗಣೇಶ Wed, 02/27/2013 - 00:34

In reply to by veena wadki

ಇಲ್ಲ ವೀಣಾ ಅವರೆ, ನನ್ನ ಸ್ಟಾರೇ ಚೆನ್ನಾಗಿಲ್ಲಾ...:( ನಿನ್ನೆ ರಾಮೋಜಿ ಅವರ ಈ ಲೇಖನ ಓದುತ್ತಾ, ಎದ್ದು ಬಿದ್ದು ನಗುತ್ತಾ ಇದ್ದೆ. "ರೀ..ರೀಈ...ರ್ರೀಈಈಈಈಈಈಈ", "ಏನೇ...?" "ಪಾತ್ರೆಗಳ ರಾಶಿ ಹಾಗೇ ಬಿದ್ದಿದೆ." "ನಾಳೆ ಬೆಳಗ್ಗೆ ತೊಳೆಯುತ್ತೇನೇ.." ಎಂದು ಓದು ಮುಂದುವರೆಸಿದೆ. "ನಾಳೆ ನೀರು ಬೇರೆ ಬರುತ್ತದೆ, ನೀರು ತುಂಬಬೇಕು." " ಆಯ್ತು ಮಾಡ್ತೇನೇ". "ಬಟ್ಟೆಗಳಿಗೆ ಇಸ್ತ್ರೀನೂ ಹಾಕಿಯಾಗಿಲ್ಲಾ" "ಆಯ್ತು ಮಾಡ್ತೇನೆ". "ಶೂ ಪಾಲೀಸ್ ಸಹ ಆಗಿಲ್ಲ". "ಆಯ್ತೇ ನಾಳೆ ಮಾಡುವೆ" ....."ಆಯ್ತೇ ನಾಳೆ ಮಾಡುವೆ". "ನಾನು ಏನೂ ಹೇಳಿಲ್ಲಾ?" "ಆಯ್ತೇ ನಾಳೆಮಾಡ್ತೇನೆ"...ಆಶ್ವಾಸನೆ ಕೊಡುತ್ತಾ ಹೋದೆ. ಬೆಳಗ್ಗೆ ಬೇಗ ಏಳದಿದ್ದರೆ ಇದ್ಯಾವ ಕೆಲಸವೂ ಆಗುವುದಿಲ್ಲ, ಎಂದಾಲೋಚಿಸಿ ರಾಮೋಜಿ ಕತೆ ಕೊನೆ ಓದದೇ, ಅಲಾರ್ಮ್ ೫ ಗಂಟೆಗೆ ಇಟ್ಟು ಮಲಗಿದೆ. ನಿದ್ರೆಯೇನೋ ಚೆನ್ನಾಗೇ ಬಂತು. ಅಲಾರ್ಮ್ ಆಗುವುದಕ್ಕೂ ಕಾಯದೇ ಎಚ್ಚರವಾದ ಕೂಡಲೇ ಅಡುಗೆಕೋಣೆ ಹೊಕ್ಕೆ. ಸಿಂಕ್ ತುಂಬಿದ ಪಾತ್ರೆಗಳು ಅಕ್ಕಪಕ್ಕದ ಜಾಗವೆಲ್ಲಾ ಆಕ್ರಮಿಸಿದ್ದವು. ಟೀ ಮಾಡೋಣ ಎಂದರೆ ತೊಳೆದ ಪಾತ್ರೆ ಒಂದೂ ಇಲ್ಲ. ತಡಮಾಡಿದರೆ ಆಫೀಸಿಗೆ ರಜೆ ಹಾಕಬೇಕಾಗುವುದೆಂದು, "ಜೈ ಭಜರಂಗಬಲಿ" ಎಂದು ಪಾತ್ರೆ ತಿಕ್ಕಲು ಪ್ರಾರಂಭಿಸಿದೆ. ಆಶ್ಚರ್ಯ! ಭೂತವೊಂದು ನನ್ನೆದುರು ಪ್ರತ್ಯಕ್ಷವಾಗಿ "ರಾಮೋಜಿ ಕರೆಯುತ್ತಾರೆ. ಬನ್ನಿ ಹೋಗೋಣ" ಎನ್ನಬೇಕೆ. ರಾಮೋಜಿಗೆ ಮನಸ್ಸಲ್ಲೇ ಥ್ಯಾಂಕ್ಸ್ ಹೇಳಿ, "ಕೆಲಸ ತುಂಬಾ ಇದೆ. ಮುಗಿಸಿ ಬರುವೆ." ಅಂದೆ. "ಹೇಳಿ ಹುಜೂರ್. ನಾನು ಮಾಡುತ್ತೇನೆ." ಎಂದಿತು. ಆ ಮಾತನ್ನೇ ಕಾಯುತ್ತಿದ್ದ ನಾನು, " ಈ ಪಾತ್ರೆಗಳನ್ನೆಲ್ಲಾ ತೊಳೆದಿಡು" ಎಂದೆ. ಜಂಂಯ್...ಸಿಂಕ್ ಖಾಲಿ! "ಇದೆಲ್ಲಾ ಆಗದು, ನನ್ನ ಹೆಂಡತಿಗೆ ಸಂಶಯ ಬರುವುದು.ನಾನು ತೊಳೆಯುವ ಹಾಗೇ, ಅಲ್ಲಿರುವ ಸಬೀನಾ ಹಾಕಿ ಒಂದೊಂದೇ ಪಾತ್ರೆ ತೊಳೆದಿಡು."ಎಂದೆ. "ಹಾಗೇ ನೀರು ಬರುವ ಹಾಗಿದೆ. ಅದನ್ನು ತುಂಬಿಸಿ, ಟೀ ಮಾಡಿ ಎಬ್ಬಿಸು"ಎಂದು ಹೇಳಿ ಪುನಃ ಮಲಗಲು ಹೊರಟೆ. ಅಯ್ಯೋ ನನ್ನಾ..ಬರೀ ಟೀ ಮಾಡಲು ಹೇಳಿದ್ದಾ... ಪುನಃ ಹೋಗಿ " ಟೀ ಜತೆ ತಿನ್ನಲು ಮಸಾಲೆ ದೋಸೆ, ಇಡ್ಲಿ ವಡೆ, ಕ್ಷೀರ ಸಹ ಮಾಡಿಡು" ಎಂದು ಬಂದೆ. ಅರೆ ಇಸ್ತ್ರಿ ಮಾಡಲು ಬಾಕಿ ಇದೆಯಲ್ಲಾ. ವಾರಕ್ಕೆ ಬೇಕಾದ ಪ್ಯಾಂಟ್ ಷರ್ಟ್ ಎಲ್ಲಾ ಟೇಬ್‌ಲ್ ಮೇಲೆ ಇಟ್ಟು "ಪಕ್ಕದ ಬೀದಿ ನಾಲ್ಕನೇ ಮನೆ ಸಪ್ತಗಿರಿದ್ದು. ಅಲ್ಲಿ ಹೋಗಿ ಅವನು ಏಳುವ ಮೊದಲೇ ಈ ಬಟ್ಟೆಗೆಲ್ಲಾ ಅವನ ಇಸ್ತ್ರಿ ಪೆಟ್ಟಿಗೆಯಲ್ಲಿ ಇಸ್ತ್ರಿ ಹಾಕಿ ತಂದಿಡು. ನಂತರ ನನ್ನನ್ನು ಆಫೀಸಿಗೆ ಕರಕೊಂಡು ಹೋಗಬೇಕು. ಅಲ್ಲೂ ಸುಮಾರು ಕೆಲಸವಿದೆ. ಅದು ಮುಗಿದ ಮೇಲೆ ರಾಮೋಜಿ ಬಳಿ ಹೋಗೋಣ" ಎಂದು ಹೇಳಿ ಹಾಸಿಗೆ ಮೇಲೆ ಹಾಯಾಗಿ ಮಲಗಿದೆ.:) ನಂತರದ ಟ್ರ್ಯಾಜಡಿ ಬಗ್ಗೆ ಹೇಳದಿದ್ದರೇ ಒಳ್ಳೆಯದು.:( ಆದರೆ ನೀವು ಬಿಡಬೇಕಲ್ಲಾ. ಭೂತ ಕೈಕೊಟ್ಟದ್ದು ನನಗೆ ಗೊತ್ತೇ ಇಲ್ಲಾ.. ಬೆಳಗೆದ್ದ ನನ್ನಾಕೆ, ಇನ್ನೂ ಮಲಗಿರುವ ನನ್ನನ್ನು, ತುಂಬಿ ತುಳುಕಾಡುತ್ತಿರುವ ಸಿಂಕ್ ನೋಡಿ ಕೋಪಾವೇಶದಿಂದ ಚಂಡಿ ಅವತಾರ ತಾಳಿ... "ಭೂತ ಟೀ ಆಯ್ತಾ?" " ಏ ಭೂತಾ ಯಾಕಿಷ್ಟು ಲೇಟು?" ಎಂದು ಕಣ್ಣು ಮುಚ್ಚಿಯೇ ಕೇಳುತ್ತಿದ್ದ ನನ್ನ............:(((((((((

Submitted by makara Wed, 02/27/2013 - 08:38

In reply to by ಗಣೇಶ

@ಗಣೇಶ್..ಜಿ/ಭೂತಾ (?) ನನಗೊಂದು ಸಣ್ಣ ಅನುಮಾನ, ನಿಮ್ಮ ಕೆಲಸಗಳನ್ನೆಲ್ಲಾ ಭೂತಕ್ಕೆ ಹಚ್ಚಿ ನೀವು ನಿದ್ರೆ ಮಾಡಲು ಬಾಟಿಲ್ ಹೊಕ್ಕಿದ್ದೀರಾ ಅಂತಾ! ಅದಕ್ಕೇ ರಾಮೋ ಅವರು ಎಷ್ಟೇ ಕರೆದರೂ ನಿಮ್ಮ ಸುಖನಿದ್ರೆಗೆ ಭಂಗ ಬರುತ್ತದೆಂದು ಬಿರಡೆಯನ್ನು ಒಳಗಿನಿಂದ ಗಟ್ಟಿಯಾಗಿ ಎಳೆದುಕೊಳ್ಳುತ್ತಾ ಇದ್ದಿರಿ ಅಂತಾ :))

@ವೀಣಾ ಅವರೆ, ನೀವೆಂದಂತೆ ಗಣೇಶರು ಯಾವ ಸ್ಟಾರ್‌ಗೂ ಕಡಿಮೆಯಿಲ್ಲ ಬಿಡಿ. ಒಮ್ಮೆ ಸಪ್ತಗಿರಿಯವರು ಬರಹವೊಂದಕ್ಕೆ ಪ್ರತಿಕ್ರಿಯಿಸುತ್ತಾ ಸಂಪದವೆಲ್ಲಾ ಗಣೇಶಮಯವಾಗಿದೆ ಎಂದಿದ್ದರು. ಯಾರು ಎಲ್ಲೇ ಹೋಗಲಿ ಅದು ಮತ್ತೆ ಗಣೇಶರ ಕಡೆ ಹೋಗಿ ನಿಲ್ಲುತ್ತದೆ.
@ರಾಮೋ ಸರ್, ಗಣೇಶರು ಸ್ಟಾರ್ ಆಗಲು ಒಪ್ಪಲಿ ಬಿಡಲಿ. ನಿಮ್ಮ ಲೇಖನವಂತೂ ಐದು ಸ್ಟಾರ್‌ಗಳ ಬಳಗಕ್ಕೆ ಸೇರಲು ಅರ್ಹವಾಗಿದೆ. ಅದರ ಗುಂಡಿಯನ್ನು ನಾನಾಗಲೇ ಒತ್ತಿದ್ದೇನೆ. ನಿಮ್ಮ ಅದ್ಭುತ ಕಲ್ಪನೆಗೆ ಹ್ಯಾಟ್ಸಾಫ್.

Submitted by RAMAMOHANA Wed, 02/27/2013 - 13:29

In reply to by ಗಣೇಶ

ನಿಮ್ಮ ಪರಿಸ್ಥಿತಿಗಿ0ತ‌, ಬಾಟಲೊಳಗಿನ‌ ತನ್ನ ಪರಿಸ್ಥಿತಿಯೆ ವಾಸಿ ಎ0ದೆನಿಸಿ `ಪುನರಪಿ ಸ್ವಸ್ಥಾನ0` ಮಾಡ್ತು ಅ0ತ‌ ಕಾಣುತ್ತೆ ಆ ಭೂತ‌.
ಬಾಗಿಲಿಗೆ ಬ0ದ‌ ಅತಿಥಿಯನ್ನ ಹಾಗಿ ದಿಗಿಲು ಬೀಳಿಸಬಾರದು ತಾವು, ಗಣೇಶ್ ಜಿ
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ರಾಮೋ.

Submitted by RAMAMOHANA Mon, 02/25/2013 - 15:27

In reply to by sathishnasa

ದೈವೀಚ್ಚೆ ಒ0ದು, ಇಲ್ಲಿ ನೋಡಿದ್ರೆ ದೆವ್ವಕ್ಕೂ ಬೆದರಿಕೆ ಇದೆ ನೋಡಿ ಅವ್ರ ವಿಷ್ಯದಲ್ಲಿ.
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸತೀಶ್ ಅವ್ರೆ.
ರಾಮೋ.

Submitted by kavinagaraj Tue, 02/26/2013 - 11:29

ಆ ಬಾಟಲಿ ಭೂತಕ್ಕೆ ಗಣೇಶರನ್ನು ಕರೆತರಲು ಭಯವಾಗಿದ್ದಕ್ಕೆ ಅದು ಭೂತವಾಗಲು ಗಣೇಶರೇ ಕಾರಣವಿರಬಹುದೇ ಎಂದು ಪತ್ತೇದಾರಿ ಪಾರ್ಥರು ತನಿಖೆ ನಡೆಸಲಿದ್ದಾರಂತೆ!! :))

Submitted by ಗಣೇಶ Tue, 02/26/2013 - 23:49

In reply to by kavinagaraj

>>>ಆ ಬಾಟಲಿ ಭೂತಕ್ಕೆ ಗಣೇಶರನ್ನು ಕರೆತರಲು ಭಯವಾಗಿದ್ದಕ್ಕೆ ಅದು ಭೂತವಾಗಲು ಗಣೇಶರೇ ಕಾರಣವಿರಬಹುದೇ ಎಂದು ಪತ್ತೇದಾರಿ ಪಾರ್ಥರು ತನಿಖೆ ನಡೆಸಲಿದ್ದಾರಂತೆ!! :)) -:) ರಾಮಮೋಹನರೆ, ನಿಮ್ಮ ಬೆಂಬಿಡದ ಭೂತ ( http://sampada.net/blog/%E0%B2%AC%E0%B3%860%E0%B2%AC%E0%B2%BF%E0%B2%A1%E0%B2%A6-%E0%B2%AD%E0%B3%82%E0%B2%A4-%E2%80%8D/28/10/2011/33987 ) ನೋಡಿದ ಮೇಲೆ ನಮಗೆ ಎಲ್ಲಿ ಕೆಮ್ಮಣ್ಣು ನೋಡಿದರೂ ನಿಮ್ಮ ನೆನಪಾಗಿ ನಗು ತನ್ನಷ್ಟಕ್ಕೇ ಬರುವುದು. ಈ ಬಾಟಲಿ ಭೂತನೂ ನಸುನಗುವಿನ ಅಲೆಯೊಂದಿಗೆ ಆರಂಭವಾಗಿ ನಗುವಿನ ಸುನಾಮಿನೇ ಉಂಟು ಮಾಡಿತು.:) >>>ವು ಹ್ಮು ಬರುತ್ತಿಲ್ಲ ಭದ್ರವಾಗಿ ಮುಚ್ಚಿದೆ. ಜೊತೆಗೆ ನಾನು ಹೊರಗೆ ಎಳೆಯುತ್ತಿದ್ದರೆ ಅದು ಒಳಗಿನಿಂದ ಭದ್ರವಾಗಿ ಬಿರಡೆಯ ತುದಿಯನ್ನು ಒಳಕ್ಕೆ ಎಳೆಯುತ್ತಿದೆ.
ಏ..ಬಾ‍ಇಲ್ಲಿ ನೀನು ಹೊರಕ್ಕೆ ಬಾ.. ಗಣೇಶ್ ಜಿನ ಕರ್ಕೊಂಬಾ, ಬಾ...ಇಲ್ಲಿ, ಆಟ ತೋರಿಸ್ಬೇಡ. ಅಂತಿದ್ರೆ ಅದು ಒಳಗಡೆ ನನ್ನ ಕೈಲಿ ಆಗೋಲ್ಲ ಬಿಟ್ಬಿಡು ಅನ್ನುವ ರೀತಿ ಕೈ ಮುಗಿದು ಬೇಡಿ ಕೊಳ್ಳುತ್ತಿದೆ.....:) :) :)ವ್ಹಾ.. ಸೂಪರ್ ಅಲ್ಲಾ....ಸೂಪರ್ ಸೆ ಊಪರ್:)>>>ತಿಂಬ್ಬಟ್ಟು ಸ್ವಾಮಿಗಳ ತಿನ್ನೊ ವಿಷ್ಯನ ಮನದಲ್ಲಿ ನೆನೆಯುತ್ತಾ ಬಂದ ದಾರಿಯಲ್ಲೆ ವಾಪಸ್ಸು ಹೆಜ್ಜೆ ಹಾಕತೊಡಗಿದೆ. :)ಹಾಸ್ಯದ ಜತೆ ತಮ್ಮ ಭಕ್ತಿಗೂ ಮೆಚ್ಚಿದೆ. ಮುಂದಿನ ಬಾರಿ ಭರ್ಜರಿ ತಿನ್ನೋವಾಗ ನಿಮಗೆ ಆಶೀರ್ವದಿಸುವೆವು. -ತಿಂಬಟ್ ಸ್ವಾಮಿ.