ಬುದ್ಧ ಮತ್ತು ಹಿಂದೂ ಧರ್ಮ: ಕೆಲವು ಚಿಂತನೆಗಳು

ಬುದ್ಧ ಮತ್ತು ಹಿಂದೂ ಧರ್ಮ: ಕೆಲವು ಚಿಂತನೆಗಳು

ಬುದ್ಧ ಮತ್ತು ಹಿಂದೂ ಧರ್ಮ: ಕೆಲವು ಚಿಂತನೆಗಳು

'ವಿಕ್ರಾಂತ ಕರ್ನಾಟಕ'ದ ಕಳೆದ ಸಂಚಿಕೆಯಲ್ಲಿ, ಮೈಸೂರಿನಲ್ಲಿ ಕೆಲವು ವಾರಗಳ ಹಿಂದೆ ಕೆಲವು ದಲಿತ ಗೆಳೆಯರ ನೇತೃತ್ವದಲ್ಲಿ ಎರಡು ಸಾವಿರ ಜನರು ಬೌದ್ಧ ಧರ್ಮಕ್ಕೆ ಮತಾಂತರವಾದ ಘಟನೆ ಬಗ್ಗೆ ಎರಡು ಬರಹಗಳಿವೆ. ಒಂದು, ಸಹಾನುಭೂತಿಪರವಾದ ವರದಿಯಂತಿದ್ದರೆ, ಇನ್ನೊಂದು ಅದನ್ನು ವಿಮರ್ಶಿಸುವ ಸಂಪಾದಕೀಯ ಲೇಖನವಾಗಿದೆ. ಮತಾಂತರ ಇಂದು ಭಾವನೆಗಳನ್ನು ಕೆರಳಿಸುವ ವಿದ್ಯಮಾನವೆನಿಸಿದ್ದರೆ, ಅದಕ್ಕೆ ಕಾರಣ ಬಹುಪಾಲು ಎಲ್ಲ ಮತಾಂತರಗಳೂ ಬಹು ಸಂಖ್ಯಾತ ಹಿಂದೂ ಧರ್ಮದಿಂದ ಇತರ ಧರ್ಮಗಳಿಗೆ ಆಗುತ್ತಿರುವುದೂ ಮತ್ತು ಇವುಗಳ ಹಿಂದೆ ಧಾರ್ಮಿಕ ಕಾರಣಗಳಿಗೆ ಹೊರತಾದ ಬೇರೆಯೇ ಕಾರಣಗಳಿವೆ ಎಂಬ ನಂಬಿಕೆಯೇ ಆಗಿದೆ. ಆದರೆ, ಬೌದ್ಧ ಧರ್ಮಕ್ಕೆ ಆಗುವ ಮತಾಂತರಗಳ ಬಗ್ಗೆ ಹಿಂದೂ ಧರ್ಮಪಾಲಕರಲ್ಲಿ ಅಷ್ಟೇನೂ ಕ್ಷೊಭೆ ಉಂಟಾಗದಿರಲು, ಅದು ಹಿಂದೂ ಧರ್ಮದ ಒಂದು ಭಾಗವೇ ಆಗಿದೆ ಎಂಬ ಸುಪ್ತ ಭಾವನೆಯೇ ಕಾರಣವಾಗಿದೆ. ಹತ್ತಾರು ಜನ ಹಿಂದೂಗಳು ಕ್ರಿಶ್ಚಿಯನ್ನರೋ, ಮುಸಲ್ಮಾನರೋ ಆಗ ಹೊರಟಾಗ ಹಿಂದೂ ಸಂಘಟನೆಗಳು ಮಾಡುವ ರಾದ್ಧಾಂತ, ಐವ್ವತ್ತು ವರ್ಷಗಳ ಹಿಂದೆ ಅಂಬೇಡ್ಕರ್ ಅವರು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಆರಂಭಿಸಿದ ಬೌದ್ಧ ಧರ್ಮದೆಡಗಿನ ಮತಾಂತರದಿಂದ ಹಿಡಿದು ಮೊನ್ನೆಯ ಮೈಸೂರಿನ ಮತಾಂತರದವರೆಗೆ ಎಲ್ಲಿಯೂ ಕಂಡುಬಂದಿಲ್ಲ ಎಂಬುದು ಗಮನಾರ್ಹ. ರವೀಂದ್ರ ರೇಷ್ಮೆಯವರ ಸಂಪಾದಕೀಯದಲ್ಲಿ ಕಾಣಬರುವ 'ಇದರಿಂದೇನು ಪ್ರಯೋಜನ?' ಎಂಬಂತಹ ಗೊಣಗಾಟಗಳ ಹೊರತಾಗಿ ಮತ್ತಾವ ರೀತಿಯ ಉಗ್ರ ಪ್ರತಿಕ್ರಿಯೆಗಳನ್ನೂ ಈ ಮತಾಂತರಗಳು ಎದುರಿಸಿಲ್ಲ.
ಹಾಗೆ ನೋಡಿದರೆ, ಭಾರತ ತನ್ನ ಇತಿಹಾಸದಲ್ಲಿ ಇಂತಹ ಅನೇಕ ಮತಾಂತರಗಳನ್ನು ಕಂಡಿದೆ. ಬದುಕಿನ ಅರ್ಥವನ್ನು ತಿಳಿಯುವ ಮನುಷ್ಯನ ಮೂಲಭೂತ ಹಂಬಲದಿಂದ ಪ್ರೇರಿತವಾದ ತಾತ್ವಿಕ ಅನ್ವೇಷಣೆಯ ಪರಿಣಾಮವಾಗಿ ನಡೆದ ಮತಾಂತರಗಳು ಮನುಷ್ಯನ ಬದುಕನ್ನು ಹೆಚ್ಚೆಚ್ಚು ಸಂಪನ್ನಗೊಳಿಸಿವೆ. ಕ್ರಿ.ಪೂ. ಮೂರರಿಂದ ಆರನೇ ಶತಮಾನದವೆರೆಗೆ ಭಾರತದಲ್ಲಿ ನಡೆದ ಇಂತಹ ತಾತ್ವಿಕ ಅನ್ವೇಷಣೆಗಳು ಶ್ರಮಣ ಸಂಸ್ಕೃತಿಯ ರೂಪದಲ್ಲಿ ಭಾರತೀಯ ತತ್ವಜ್ಞಾನಕ್ಕೆ ಅನೇಕ ಅಭೂತಪೂರ್ವ ಕೊಡುಗೆಗಳನ್ನು ನೀಡಿದೆ. ಭಾರತೀಯ ತತ್ವಜ್ಞಾನದ ಷಡ್ದರ್ಶನಗಳು ಸ್ಪಷ್ಟ ರೂಪು ತಳೆದದ್ದೇ ಇಂತಹ ಅನೇಕ 'ಮತಾಂತರ'ಗಳ ಮೂಲಕ. ಮತಾಂತರ ಎಂದರೆ, ಬದುಕನ್ನು ಕುರಿತ ಹೊಸ ಒಳನೋಟಗಳ ಮೂಲಕ ತನ್ನ ಆಧಾರ ನಂಬಿಕೆಗಳನ್ನು ಬದಲಿಸಿಕೊಳ್ಳುವುದು ಎಂದರ್ಥ. ಆದರೆ, ನಂತರದ ದಿನಗಳಲ್ಲಿ ಅಲ್ಲಲ್ಲಿ ಹರಡಿ ಹೋಗಿದ್ದ ಜನಸಮುದಾಯಗಳು, ನಾಗರೀಕತೆಯ ಬೆಳವಣಿಗೆಯೊಂದಿಗೆ (ಇದರಲ್ಲಿ ಸಂಸ್ಕೃತಿ ವಿಸ್ತರಣೆಯೂ ಸೇರಿದೆ) ಪರಸ್ಪರ ಸಂಪರ್ಕ ಸಾಧಿಸಿಕೊಂಡು ಬೆರೆಯುವ ಅನಿವಾರ್ಯತೆ ಉಂಟಾದಾಗ; ನಂಬಿಕೆಗಳ ಮೇಲಾಟ ಶುರುವಾಗಿ ಮತನಿಷ್ಠೆ ರಾಜಕೀಯ ನಿಷ್ಠೆಯಾಗಿ ಪರಿವರ್ತಿತವಾಗತೊಡಗಿ, ಮತಾಂತರದ ಅರ್ಥವೇ ಬದಲಾಯಿತು.
ಇದರ ಪರಿಣಾಮಗಳು ತಾತ್ವಿಕ ಅನ್ವೇಷಣೆಯ ರೀತಿ-ನೀತಿಗಳ ಮೇಲೂ ಆಗದಿರಲಿಲ್ಲ. ಹೀನಯಾನ-ಮಹಾಯಾನ-ವಜ್ರಯಾನ, ಥೇರವಾದ, ಯೋಗಾಚಾರ, ಚಾರ್ವಾಕ, ಶೈವ, ವೈಷ್ಣವ, ಶಾಕ್ತ, ಕಾಳಾಮುಖ ಮುಂತಾಗಿ ಉಂಟಾದ ಸೂಕ್ಷ್ಮ ಉಪ ವಿಂಗಡಣೆಗಳು ಮತ್ತು ಅವಕ್ಕೆ ಸಂಬಂಧಪಟ್ಟ ಶಾಸ್ತ್ರಾಚಾರಗಳೂ ಇದರ ಫಲಗಳೇ ಆಗಿವೆ. ಗುಡಿಗಳು, ವಿಹಾರಗಳು, ಬಸದಿಗಳು ಕೇವಲ ಮತಶ್ರದ್ಧೆಯ ಕೇಂದ್ರಗಳಾಗದೆ, ರಾಜಕೀಯ ಶಕ್ತಿ ಕೇಂದ್ರಗಳೂ ಆಗತೊಡಗಿದ್ದೂ, ಪುರೋಹಿತಶಾಹಿಯೆಂಬ ಮಧ್ಯವರ್ತಿ ವರ್ಗವೊಂದು ಸೃಷ್ಟಿಯಾದದ್ದೂ, ಮತ ಮತ್ತು ರಾಜಕಾರಣ ಪರಸ್ಪರ ಹಾಸು ಹೊಕ್ಕಾಗತೊಡಗಿದ್ದೂ ಈ ಸಂಕ್ರಮಣ ಕಾಲಘಟ್ಟದಲ್ಲೇ. ಈ ಪ್ರಕ್ರಿಯೆಯಲ್ಲಿ ಜನಸಮುದಾಯದ ಮಟ್ಟಿಗೆ ಅನೇಕ ತಾತ್ವಿಕ ಸೂಕ್ಷ್ಮಗಳು ಸ್ಥೂಲಗೊಂಡು ಆವರೆಗಿನ ಎಲ್ಲ ತಾತ್ವಿಕ ಪ್ರಯೋಗಗಳೂ ಕಲಸು ಮೇಲೋಗರವಾಗಿ; ಒಂದು ಭೂಪ್ರದೇಶದ(ಭರತ ಖಂಡದ) ಜೀವನ ಕ್ರಮದ ಒಂದು ಸಗಟು ಹೊರ ರೂಪದಲ್ಲಿ, ಸಿಂಧು ನದಿಯಾಚೆಯ ಜನ ಸಮುದಾಯದ ಜೀವನ ಕ್ರಮ ಎಂಬರ್ಥದಲ್ಲಿ 'ಹಿಂದೂ ಧರ್ಮ'ವೆಂಬುದು ಗುರುತಿಸಲ್ಪಟ್ಟು, ವಿಕಾಸ ಹೊಂದುತ್ತಾ ನಡೆಯಿತು.
ಈ ಸಂಕ್ರಮಣ ಸಂದರ್ಭದಲ್ಲಿ ಹೊರಗಿನಿಂದ ಬಂದ ಅನೇಕ ಕುಲಗಳು(ಉದಾ: ಹೂಣರು, ಕುಶಾನರು ಇತ್ಯಾದಿ) ಇಲ್ಲಿನ ಈ ಮತ-ರಾಜಕಾರಣದ ಸಂಘರ್ಷದಲ್ಲಿ ತಾವೂ ಭಾಗಿಯಾಗಿ ಅದರ ಫಲವಾದ ಹೊಸ ಮತೀಯ ರಾಜಕೀಯ ವ್ಯವಸ್ಥೆಯ ಭಾಗವೇ ಆಗಿ ಇಲ್ಲಿನ ಕುಲಗಳೊಳಕ್ಕೇ ಸೇರಿಹೋದರು. ಆದರೆ, ಈ ಮತ-ರಾಜಕೀಯ ವ್ಯವಸ್ಥೆಯು ಪುರಾತನ ವರ್ಣವ್ಯವಸ್ಥೆಯಿಂದ ಕಾಲಾನುಕ್ರಮದಲ್ಲಿ ಮೂಡಿದ ಜಾತಿವ್ಯವಸ್ಥೆಯ ರೂಪದಲ್ಲಿ ಒಂದು ಸ್ಥಿರ ಸ್ಥಿತಿಗೆ ಬಂದ ನಂತರ ವಿವಿಧ ಉದ್ದೇಶಗಳಿಂದ ಬರಲಾರಂಭಿಸಿದ ಕುಲಗಳು(ಉದಾ: ಅರಬ್ಬರು, ಪರ್ಷಿಯನ್ನರು, ಯೂರೋಪಿಯನ್ನರು) ಬರಿ ಕುಲಗಳಾಗಿರದೆ, ಮತನಿಷ್ಠ ಸಮುದಾಯಗಳೂ ಆಗಿದ್ದುದರಿಂದ, ಭಾರತದಲ್ಲಿ ಮತ-ರಾಜಕಾರಣದ ಮತ್ತೊಂದು ತಳಮಳ ಶುರುವಾಯಿತು. ಯಾವ ಜಾತಿ ಪದ್ಧತಿ ಈ ಮುನ್ನ ಭಾರತೀಯ ಕುಲ ವ್ಯವಸ್ಥೆಯ ಸ್ಥಿರತೆಗೆ ಕಾರಣವಾಗಿತ್ತೋ, ಅದೇ ಜಾತಿ ಪದ್ಧತಿ ಈಗ ಈ ಹೊಸ ತಳಮಳದ ವೇಗವರ್ಧಕವಾಗಿ ಕೆಲಸ ಮಾಡುವ ವಿಪರ್ಯಾಸ ಸೃಷ್ಟಿಯಾಯಿತು. ಸಾಮಾಜಿಕ ಒಪ್ಪಂದದಂತಿದ್ದ ಜಾತಿ ಪದ್ಧತಿ ಕಾಲಕ್ರಮದಲ್ಲಿ ಸಾಮಾಜಿಕವಾಗಿ ಶ್ರೇಣೀಕರಣಗೊಂಡ ಪ್ರತ್ಯೇಕತೆಗಳನ್ನು ನಿರ್ಮಿಸಿದ್ದುದರಿಂದ, ಈ ಹೊಸ ಮತೀಯ ಕುಲಗಳೊಂದಿಗೆ ಆತ್ಮವಿಶ್ವಾಸದಿಂದ ಅನುಸಂಧಾನ ನಡೆಸುವ ಅವಕಾಶವನ್ನೂ, ಶಕ್ತಿಯನ್ನೂ ಈ 'ಹಿಂದೂ ಧರ್ಮ' ಕಳೆದುಕೊಂಡಿದ್ದುದರಿಂದಾಗಿ ಈ ತಳಮಳದಲ್ಲಿ ಅನುಸಂಧಾನಕ್ಕಿಂತ ಸಂಘರ್ಷವೇ ಮೇಲುಗೈ ಪಡೆಯಿತು.
ಭಕ್ತಿ ಪಂಥ, ಸೂಫಿ ಪಂಥ, ಮಿಷನರಿ ಸೇವೆ ಮತ್ತು ಹೊಸ ವೈಚಾರಿಕತೆ-ವೈಜ್ಞಾನಿಕತೆಗಳ ಅನಾವರಣ ಈ ತಳಮಳದ ಅಂಗವಾಗಿ ನಡೆದ ಅನುಸಂಧಾನಗಳ ಸಿಹಿ ಫಲಗಳಾಗಿದ್ದರೆ; ರಾಜಕೀಯ ಪ್ರೇರಿತ ಮತಾಂತರಗಳು, ಅವು ಸಾಮಾಜಿಕ ಜೀವನದಲ್ಲಿ ಉಂಟು ಮಾಡಿದ ಅನೇಕ ರೀತಿಯ ಅನಾಹುತಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಭಾರತವೆಂಬ ಆಧುನಿಕ ರಾಜ್ಯ ವ್ಯವಸ್ಥೆಯ ಉದಯದೊಂದಿಗೇ ಸಂಭವಿಸಿದ ರಾಷ್ಟ್ರ ವಿಭಜನೆ ಈ ತಳಮಳ ಉಂಟು ಮಾಡಿದ ಸಂಘರ್ಷದ ಕಹಿ ಫಲಗಳಾಗಿವೆ. ಆದರೆ, ಸಿಹಿ ಫಲಗಳ ಸಿಹಿಗಿಂತ ಕಹಿ ಫಲಗಳ ಕಹಿಯೇ ಹೆಚ್ಚಾಗಿದ್ದರೆ, ಅದಕ್ಕೆ ಈ ತಳಮಳದಲ್ಲಿ ಮತ ಮತ್ತು ರಾಜಕಾರಣಗಳು ಅನುಸಂಧಾನಗೊಳ್ಳದೆ, ಕ್ರಮೇಣ ಏಕೀಕರಣಗೊಳ್ಳುತ್ತಾ ಹೋದುದೇ ಕಾರಣವಾಗಿದೆ. ಇದಕ್ಕೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹುಟ್ಟಿಕೊಂಡ ಕೋಮುವಾದಿ ಎಂದು ಕರೆಯಲಾಗುವ ಸಂಸ್ಥೆಗಳು ಎಷ್ಟು ಕಾರಣವೋ, ಈ ಹೋರಾಟದ ನೇತೃತ್ವ ವಹಿಸಿದ್ದ ಕಾಂಗ್ರೆಸ್ನ ಅನೇಕ ನಾಯಕರ ವರ್ತನೆಗಳೂ ಕಾರಣವಾಗಿತ್ತು. ಸ್ವತಃ ಮಹಾತ್ಮ ಗಾಂಧಿಯವರು ಹೋರಾಟದ ಆರಂಭದಲ್ಲಿ ತಮ್ಮ ಹೊಸ ರಾಜಕಾರಣದ ಬಲವೃದ್ಧಿಗಾಗಿ; ಹಿಂದೂ-ಮುಸ್ಲಿಂ ಐಕ್ಯತೆಯನ್ನು ವರ್ಧಿಸುವುದೆಂದು ತಪ್ಪಾಗಿ ಭಾವಿಸಿ, ಜಾಗತಿಕ ಮುಸ್ಲಿಂ ಆಂದೋಲನದ ಬೀಜರೂಪದಂತಿದ್ದ ಖಿಲಾಫತ್ ಆಂದೋಲನಕ್ಕೆ ಬೆಂಬಲ ಘೋಷಿಸಿ ಜನ ಸಂಘಟನೆಯನ್ನು ತಪ್ಪು ಹೆಜ್ಜೆಯೊಂದಿಗೆ ಆರಂಭಿಸಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ನಂತರ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಹೊಸ ವೈಚಾರಿಕತೆ-ವೈಜ್ಞಾನಿಕತೆಗಳು ಪರಿಚಯಿಸಿದ 'ಸೆಕ್ಯುಲರಿಸಂ' ಎಂಬ ಪರಿಕಲ್ಪನೆಯ ಮೂಲಕ ಮತ ಮತ್ತು ರಾಜಕಾರಣಗಳನ್ನು ಸಂಪೂರ್ಣವಾಗಿ ಪ್ರತ್ಯೇಕಿಸಲು ಮಾಡಲಾದ ಎಡಬಿಡಂಗಿ ಪ್ರಯತ್ನಗಳು, ಭಾರತದ ಬಹು ಮತೀಯ ಸಂದರ್ಭದಲ್ಲಿ ಉಂಟು ಮಾಡಿದ ಸಾಮಾಜಿಕ-ಸಾಂಸ್ಕೃತಿಕ ಬಿಗುವುಗಳು ಕೋಮುವಾದಿ ರಾಜಕಾರಣದ ಮೂಲಕ ಅಭಿವ್ಯಕ್ತಿ ಕಂಡುಕೊಳ್ಳುತ್ತಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಹೀಗಾಗಿ ಹಳೆಯ ಮತೀಯತೆ ಮತ್ತು ಹೊಸ ಆಧುನಿಕತೆಯ ನಡುವಣ ಸಂವೇದನಾಹೀನ ಹಾಗೂ ಸಂವಾದಹೀನ ಸಂಬಂಧವೇ ಇಂದಿನ ಎಲ್ಲ ಮತೀಯ(ಮತ್ತು ಜಾತೀಯ) ವಿಕೃತಿಗಳಿಗೆ ಕಾರಣವಾಗಿದೆ ಎನ್ನಬಹುದು. ಮೈಸೂರಿನ ಬೌದ್ಧ ಮತಾಂತರ ಕೂಡ ಇಂತಹ ವಿಕೃತಿಗಳ ಬಗೆಗಿನ ಒಂದು ಸ್ಥಳೀಯ ಪ್ರತಿಕ್ರಿಯೆಯೇ ಆಗಿದೆ. ಇದಕ್ಕೆ ಸದ್ಯದ ಪ್ರೇರೇಪಣೆ ಭೈರಪ್ಪನವರು 'ಆವರಣ'ದ ಮೂಲಕ ಪ್ರಯತ್ನಿಸಿದ 'ಸತ್ಯಾನ್ವೇಷಣೆ' ಎಂಬ ವಿಕೃತಿಯೇ ಆಗಿದ್ದರೆ ಆಶ್ಚರ್ಯ ಪಡಬೇಕಿಲ್ಲ. ಏಕೆಂದರೆ, ದಲಿತರ ಒಂದು ಸಂಘಟಿತ ಗುಂಪು ಅಂಬೇಡ್ಕರ್ರ ಮತಾಂತರದ ಐವ್ವತ್ತನೇ ವರ್ಷದ ಸಂದರ್ಭದಲ್ಲಿ 'ಮರಳಿ ಮನೆಗೆ' ಎಂಬ ಆಂದೋಲನದಡಿ ಸಾಮೂಹಿಕವಾಗಿ ಬೌದ್ಧರಾಗುವ ಕಾರ್ಯಕ್ರಮ ರೂಪಿಸಿದೆಯಾದರೂ, ಅದಿನ್ನೂ ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳುವ ಮುನ್ನವೇ ಇದ್ದಕ್ಕಿದ್ದಂತೆ ಈ ಮತಾಂತರ ನಡೆದಿದೆ!
ಅದೇನೇ ಇರಲಿ, ಈ ಮತಾಂತರವು ಸ್ಥಳೀಯ ಹಿಂದೂ ಮೂಲಭೂತವಾದಿಗಳಿಗೆ ಒಂದು ಸ್ಥಳೀಯ ಎಚ್ಚರಿಕೆ ಕೊಟ್ಟಿದ್ದರ ಹೊರತಾಗಿ ಸಾಧಿಸಿದ್ದಾದರೂ ಏನು? ಇಂದಿನ ಸಂದರ್ಭದಲ್ಲಿ ಮತಾಂತರ ಅಂದರೆ, ಒಂದು ಪುರೋಹಿತಶಾಹಿಯಿಂದ ಇನ್ನೊಂದು ಪುರೋಹಿತಶಾಹಿ ವಶಕ್ಕೆ ಹೋದಂತೆ ಅಲ್ಲವೆ? ಕೆಲವು ವರ್ಷಗಳ ಹಿಂದೆ ನಮ್ಮ ಕೆ.ಬಿ.ಸಿದ್ಧಯ್ಯನವರ ಮಗಳ ಮದುವೆ ಬೌದ್ಧ ವಿಧಿಗಳಿಗನುಸಾರ, ಯಾರಿಗೂ ಅರ್ಥವಾಗದ ಪಾಳಿ ಭಾಷೆಯಲ್ಲಿ ಹಾಗೂ ವೈದಿಕ ಆಚರಣೆಗಳನ್ನೂ ನಾಚಿಸುವಂತಹ ಶಾಸ್ತ್ರಾಚಾರಗಳೊಂದಿಗೆ ನಡೆದ ರೀತಿ ನೋಡಿ ಗಾಬರಿಯಾಗಿದ್ದ ನಾನು ಈಗ, ದೇವನೂರ ಮಹಾದೇವ ಸದರಿ ಮತಾಂತರದ ಸಮಾರಂಭದಲ್ಲಿ ತಮ್ಮ ಗೆಳೆಯರೊಂದಿಗೆ ಬೌದ್ಧ ಪುರೋಹಿತರ ಮಧ್ಯೆ ಬುದ್ಧ ಪ್ರತಿಮೆಯ ಮುಂದೆ ಕೈಮುಗಿದು ನಿಂತ ಭಂಗಿ ನೋಡಿ ಮತ್ತಷ್ಟು ಗಾಬರಿಯಾದೆ. ಅವರನ್ನು ಹತ್ತಾರು ವರ್ಷಗಳಿಂದ ಹತ್ತಿರದಿಂದ ಬಲ್ಲ ನನಗೆ ಅವರ ಈ ಭಂಗಿ ನಗೆಯನ್ನೂ, ಮರುಕವನ್ನೂ ಒಟ್ಟಿಗೆ ಉಂಟು ಮಾಡಿತು. ಹಾಗಾದರೆ, ಮಹಾದೇವ ಇನ್ನು ಮುಂದೆ ನಂಬಿಕೆಗಳಲ್ಲಿ, ಅವರ ಹಾಗೆ ಮತಾಂತರಗೊಳ್ಳದ ನಮಗಿಂತ ಭಿನ್ನವೇ? ಯಾವ ರೀತಿ? ಬಹುಶಃ ಇದನ್ನೇ ತಮ್ಮ ಸಂಪಾದಕೀಯ ಶೀರ್ಷಿಕೆಯಲ್ಲ್ಲಿ ರೇಷ್ಮೆಯವರು 'ಧರ್ಮ ಬದಲಾದರೆ, ಮನೋಧರ್ಮ ಬದಲಾದೀತೆ?' ಎಂದು ಕೇಳಿರುವುದು. ಇದನ್ನೇ ಇನ್ನೊಂದು ರೀತಿಯಲ್ಲಿ ದಲೈಲಾಮ ಹೀಗೆ ಹೇಳಿರುವುದು: ಬೌದ್ಧನಾಗಲು ಯಾರೇ ತಮ್ಮ ಧರ್ಮ ಬದಲಾಯಿಸುವ ಅಗತ್ಯವಿಲ್ಲ. ಇದರರ್ಥ, ಬೌದ್ಧ ಧರ್ಮ ಮೂಲತಃ ಒಂದು ಮನೋಧರ್ಮವಾಗಿದ್ದು, ಸಾರತಃ ಮತೀಯ ವಿಧಿ-ವಿಧಾನಗಳಿಂದ ಹೊರತಾಗಿದೆ. ಹಾಗಾಗಿ, ಬೌದ್ಧನಾಗಲು ಬೌದ್ಧಮತಕ್ಕೆ ಔಪಚಾರಿಕವಾಗಿ ಸೇರುವ ಅಗತ್ಯವಿಲ್ಲ.
ಹಿಂದೂ ಧರ್ಮವೆನ್ನುವುದು ಹಲವು ಮತಗಳ ಕಲಸು ಮೇಲೋಗರವಾಗಿದ್ದು, ಇದರಲ್ಲಿ ಬೌದ್ಧ ಧರ್ಮವೂ ತನ್ನ ಅನೇಕ ಆವೃತ್ತಿಗಳ ರೂಪದಲ್ಲಿ ಹಾಸುಹೊಕ್ಕಾಗಿದ್ದು, ಅದು ಹಿಂದೂ ಧರ್ಮ ವೈದಿಕ ಧರ್ಮವಾಗಿ ಪರಿವರ್ತಿತವಾಗದಂತೆ ತಡೆಯುತ್ತಿರುವ ಶಕ್ತಿಯಾಗಿ ಅನೇಕ ರೂಪಗಳಲ್ಲಿ ಕೆಲಸ ಮಾಡುತ್ತಿದೆ. ಹಾಗೆ ನೋಡಿದರೆ, ಭಾರತದಲ್ಲಿ ಬೌದ್ಧ ಧರ್ಮ ಅನೇಕ ರೂಪಾಂತರಗಳನ್ನು ಕಂಡು ತನ್ನ ಮೂಲ ಚಹರೆಗಳನ್ನು ಕಳೆದುಕೊಳ್ಳುತ್ತಾ, ಕಾಲಕ್ರಮದಲ್ಲಿ ಸನಾತನ ಧರ್ಮ(ಅಂದರೆ, ಆದಿ ಧರ್ಮ ಎಂಬರ್ಥದಲ್ಲಿ)ದೊಂದಿಗೆ ಅನುಸಂಧಾನಗೊಳ್ಳುತ್ತಾ ಹೋದ ಪರಿಣಾಮವಾಗಿ; ವೈದಿಕ ಧರ್ಮವೂ ಅನೇಕ ರೂಪಾಂತರಗಳನ್ನು ತಾಳಿ, ತನ್ನ ಮೂಲ ಚಹರೆಗಳನ್ನು ಕಳೆದುಕೊಂಡಿದೆ. ಹಿಂದೂ ಕೋಮುವಾದಿ ತಾತ್ವಿಕತೆಯ ಮೂಲ ಸಿಟ್ಟೂ ಇದೇ ಆಗಿದ್ದು, ಇತರ ಮತಗಳನ್ನು ಕುರಿತ ಅದರ ಅಸಹನೆ ಈ ಮೂಲದಿಂದಲೇ ಬಂದಂತಹದಾಗಿದೆ.(ಹೆಚ್ಚಿನ ವಿವರಗಳಿಗಾಗಿ ಭೈರಪ್ಪನವರ 'ಸಾರ್ಥ' ಓದಿ). ಮುಖ್ಯವಾಗಿ, ಅನಾತ್ಮವಾದಿಯಾದ ಬೌದ್ಧ ಧರ್ಮ ಆತ್ಮವಾದಿಯಾದ ವೈದಿಕ ಧರ್ಮದ ಆತ್ಮ ಮೀಮಾಂಸೆಯನ್ನು ಅದ್ವೈತ, ದ್ವೈತ, ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತ ಮುಂತಾದ ಅನೇಕಾನೇಕ ಮೀಮಾಂಸಾ 'ವಿಕ್ಷೇಪ'ಗಳಿಗೆ ಸಿಲುಕಿಸಿ ಅಲುಗಾಡಿಸಿತು. ಇದರಿಂದಾಗಿ ವೈದಿಕ ಧರ್ಮದ ಸಾಮಾಜಿಕ ರಚನೆಗೆ ಅಡಿಗಲ್ಲಿನಂತಿದ್ದ ವರ್ಣ ವ್ಯವಸ್ಥೆಯ ತಾತ್ವಿಕ ಆಧಾರಗಳೇ ಅಲುಗಾಡಿ, ಜಾತಿ ವ್ಯವಸ್ಥೆ ಪ್ರಶ್ನಾರ್ಹವೆನಿಸಿಕೊಂಡಿತು.
ಹೀಗೆ ಬೌದ್ಧ ಧರ್ಮ ಹಿಂದೂ ಧರ್ಮದ ಒಂದು ಒಳಕುದಿಯಾಗಿಯೇ ಕೆಲಸ ಮಾಡುತ್ತಾ, ಕರ್ಮಕಾಂಡದ ರೂಪದಲ್ಲಿದ್ದ ಅದರ 'ಅವಿದ್ಯೆ'ಯನ್ನು ತನ್ನ ಜ್ಞಾನ ಕಾಂಡದ ಮೂಲಕ ನಿವಾರಿಸುವ ಪ್ರಯತ್ನ ಮಾಡಿತು. ಇಂದಿನ ನಮ್ಮ ಅನೇಕ ದೇವರುಗಳು, ಅದರ ಮೂರ್ತಿಗಳು, ಸಂನ್ಯಾಸ, ಮಠ, ಪೂಜೆ, ಧ್ಯಾನ, ಪ್ರಾರ್ಥನೆ, ವ್ರತ, ಹರಕೆ, ಜಾತ್ರೆ, ಅನೇಕ ಜಾನಪದ ಆಚರಣೆಗಳು, ಪ್ರದರ್ಶಕ ಕಲೆಗಳು; ಪ್ರಜ್ಞಾಶಾಸ್ತ್ರವಾಗಿ ಬೆಳೆದಿದ್ದ ಬೌದ್ಧ ಧರ್ಮದ ವಿವಿಧ ಆವೃತ್ತಿಗಳ ಮೂಲಕ ಮಾನಸಿಕ ಚಿಕಿತ್ಸಾ ರೂಪಗಳಲ್ಲಿ ಹಿಂದೂ ಧರ್ಮಕ್ಕೆ ದತ್ತವಾದವು ಮತ್ತು ಇವುಗಳಲ್ಲಿ ಕೆಲವು ಮೌಢ್ಯಾಚರಣೆಗಳಾಗಿದ್ದರೆ, ಅದಕ್ಕೆ ಆಯಾ ಬೌದ್ಧ ಆವೃತ್ತಿಗಳೇ ಹೊಣೆಯಾಗಿವೆ ಎಂಬುದನ್ನು ನಾವು ಮರೆಯಬಾರದು. ಹೀಗಾಗಿ ಬೌದ್ಧ ಧರ್ಮವನ್ನು ಭಾರತದಿಂದ ಓಡಿಸಲಾಯಿತು ಎಂಬುದು ಅರ್ಧ ಸತ್ಯ ಮಾತ್ರವಾಗಿದ್ದು, ಏಷ್ಯಾದ ವಿವಿಧ ದೇಶಗಳಲ್ಲಿ ಅದು ವಿವಿಧ ರೂಪಗಳಲ್ಲಿದ್ದಂತೆ ಅದು ಭಾರತದಲ್ಲೂ ಹಿಂದೂ ಧರ್ಮದ ಬಹುಮುಖಿ ಆಚರಣೆ-ನಂಬಿಕೆಗಳಲ್ಲಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ. ಶಂಕರನಿಂದ ಹಿಡಿದು ನಮ್ಮ ಅಲ್ಲಮ-ಬಸವರೂ ಸೇರಿದಂತೆ, ಪರಮಹಂಸ - ವಿವೇಕಾನಂದ - ಮಹಾತ್ಮ ಗಾಂಧಿ - ರಮಣರವರೆಗೆ ಬುದ್ಧ ಭಾರತೀಯ ಜೀವನ ಮತ್ತು ದರ್ಶನಗಳಲ್ಲಿ ವಿವಿಧ ಪ್ರಮಾಣಗಳಲ್ಲಿ ಮತ್ತು ಹದದಲ್ಲಿ ಅಭಿವ್ಯಕ್ತಗೊಂಡಿದ್ದಾನೆ. ಬಹುಸಂಖ್ಯಾತ ಹಿಂದೂಗಳ ಮನೆಯಲ್ಲಿ ಬುದ್ಧನ ಚಿತ್ರವೋ, ಪ್ರತಿಮೆಯೋ ಇರುವುದರ ಅರ್ಥವಾದರೂ ಏನು?
ಇಂದು ಹಿಂದೂ ಕೋಮುವಾದಿಗಳೆನಿಸಿಕೊಂಡವರು, ತಮ್ಮ ಕೃತ್ಯಗಳ ಸಮರ್ಥನೆಯಾಗಿ ತಮ್ಮ ಧರ್ಮ ಇತರ ಧರ್ಮಗಳಿಗೆ ಹೋಲಿಸಿದರೆ, ಸಹನಶೀಲ, ಪ್ರಬುದ್ಧ, ಉದಾರಿ ಎಂದು ಹೇಳಿಕೊಳ್ಳುತ್ತಿದ್ದರೆ, ಅದಕ್ಕೆ ಅದರೊಳಗೆ ಕ್ರಿಯಾಶೀಲವಾಗಿರುವ ಬೌದ್ಧ ಧಾರೆಯೇ ಕಾರಣವಾಗಿದೆ ಎಂಬುದನ್ನು ಅರಿಯದವರಾಗಿದ್ದಾರೆ. ಹಾಗೆ ನೋಡಿದರೆ, ಡಾ|| ಅಂಬೇಡ್ಕರ್ರ ಮತಾಂತರಕ್ಕೆ ಚಾರಿತ್ರಿಕ ಮಹತ್ವವಿದ್ದಷ್ಟು ಧಾರ್ಮಿಕ ಮಹತ್ವವಿರಲಾರದು. ಏಕೆಂದರೆ, ಅವರು ಮಾರ್ಕ್ಸ್ ವಾದಿ ಮೀಮಾಂಸೆಯ ನೆಲೆಯಲ್ಲಿ ಬೌದ್ಧ ಧರ್ಮದ ಮೂಲ ಆಧಾರ ಕಲ್ಪನೆಯಾದ 'ದುಃಖ'ವನ್ನು ಆಸ್ತಿಗೆ ಸಮೀಕರಿಸುವ ಮೂಲಕ ಅದರ ಭೌತವಾದಿ ನಿರೂಪಣೆಯನ್ನಷ್ಟೇ ಮಂಡಿಸಿ, ಅದಕ್ಕೆ ತಮ್ಮನ್ನೊಪ್ಪಿಸಿಕೊಂಡವರು. ಆದರೆ, ಬೌದ್ಧ ಧರ್ಮದ ಯಾವ ಜಿಜ್ಞಾಸುವೂ ಅಂಬೇಡ್ಕರರ ಈ ನಿರೂಪಣೆಯನ್ನು ಒಪ್ಪಿಲ್ಲ. ಅವರೇ ಹೇಳಿಕೊಂಡಂತೆ, 'ದ್ವೇಷ'ದ ಮೇಲೇ(...ದ್ವೇಷ ಭಾವನೆಯಲ್ಲಿಯೇ ನನ್ನ ನಿಜವಾದ ಶಕ್ತಿ ಅಡಗಿದೆ... ಈ ದ್ವೇಷವೇ ನಾನು ಬಲವಾಗಿ ನಂಬಿರುವಂತಹ ತತ್ವಗಳು ಮತ್ತು ಧ್ಯೇಯಗಳ ಬಗ್ಗೆ ನಾನು ಹೊಂದಿರುವ ಪ್ರೀತಿಯ ಪ್ರತಿಬಿಂಬಗಳಾಗಿವೆ.: 'ರಾನಡೆ,ಗಾಂಧಿ ಮತ್ತು ಜಿನ್ನಾ' ಪುಸ್ತಕದ ಪ್ರಸ್ತಾವನೆ) ತಮ್ಮ ರಾಜಕಾರಣವನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಕ್ಕಿದ್ದ ಅಂಬೇಡ್ಕರ್, ತಮ್ಮ ಜೀವನದ ಕೊನೆಯ ದಿನಗಳಲ್ಲಿ ತಮ್ಮ ಮಾತನ್ನು ಉಳಿಸಿಕೊಳ್ಳಲು ಮಾತ್ರವೆಂಬಂತೆ, ಎಲ್ಲ 'ದುಃಖ'ದ ಅಂತಿಮ ಪರಿಹಾರವಾಗಿ 'ಕರುಣಾ'ವನ್ನು (ಅಂದರೆ, ಸಕಲ ಜೀವರಾಶಿಯೊಂದಿಗೆ ಸಹ-ಅನುಭೂತಿ) ಬೋಧಿಸಿದ ಧರ್ಮದ ಮೊರೆ ಹೋಗಬೇಕಾದುದು ಒಂದು ರೀತಿಯಲ್ಲಿ ಸಹಜ ಧಾರ್ಮಿಕ ನ್ಯಾಯವೇ ಹೌದು! ಆದರೆ ಆನಂತರ ಅವರ ಅನುಯಾಯಿಗಳು ಪ್ರತೀಕಾರ-ಪ್ರತಿಭಟನಾರ್ಥವಾಗಿ ಬೌದ್ಧ ಧರ್ಮ ಸೇರಿ ಏನಾಯಿತು? ನವ ಬೌದ್ಧರೆಂಬ ಹೊಸ 'ಜಾತಿ' ಸೃಷ್ಟಿಯಾಗಿ, ಮತ್ತೆ ಜಾತಿ-ಅಸ್ಪೃಶ್ಯತೆಗಳ ಶಾಪ-ತಾಪಗಳನ್ನು ತಪ್ಪಿಸಿಕೊಳ್ಳಲು ಮೀಸಲಾತಿಗಾಗಿ ಹೊಡೆದಾಡುವ ಸಂದರ್ಭ ಉಂಟಾಯಿತು. ಬುದ್ಧ ಹೇಳಿದ ಮೊದಲ ಆರ್ಯ ಸತ್ಯವಾದ 'ಸಂಸಾರ ದುಃಖಮಯ' ಎಂಬುದು ಆಳವಾಗಿ ಮನವರಿಕೆಯಾಗದ ಹೊರತು ಯಾರೂ ಬೌದ್ಧರೆನಿಸಿಕೊಳ್ಳಲಾರು ಮತ್ತು ಬುದ್ಧನ ಹಾದಿಯಲ್ಲಿ ಒಂದು ಹೆಜ್ಜೆಯನ್ನೂ ಮುಂದಿಡಲಾರರು. ಅಲ್ಲಿಯವರೆಗೆ ಅವರಿಗೆ ಹಿಂದೂ ಧರ್ಮವೇ ಸರಿಯಾದ ಜಾಗ; ಅಭ್ಯಾಸ ಕ್ಷೇತ್ರ!
ಪರಿಸ್ಥಿತಿ ಹೀಗಿರುವಾಗ, ಮೈಸೂರಿನ ಮತಾಂತರದ ಸಂದರ್ಭದಲ್ಲಿ ಮಹಾದೇವ ಅವರು ಹೇಳಿದ 'ಇದರಿಂದ ದಲಿತರೇನೂ ಕಳೆದುಕೊಳ್ಳುವುದಿಲ್ಲ' ಎಂಬ ಮಾತು ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಗಳ ಮೇಲಿನ ಸಿಟ್ಟಿನ ನೆಲೆಯಲ್ಲಿ ಮಾತ್ರ ಸತ್ಯವೆನಿಸುವ ಮಾತು. ಇಂತಹ ಮತಾಂತರದಿಂದ ಅಸ್ಪೃಶ್ಯರು ಆ ಸಿಟ್ಟಿನ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತಾರೆ ಮಾತ್ರವಲ್ಲ; ತಮ್ಮಂತೆ ಸಾಂಕೇತಿಕವಾಗಿ ಮತಾಂತರಗೊಳ್ಳಲಾಗದಿರುವ ಅಸಂಖ್ಯಾತ ಅಸ್ಪೃಶ್ಯ ಶ್ರೀಸಾಮಾನ್ಯರನ್ನು ತಬ್ಬಲಿಗಳನ್ನಾಗಿ ಮಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಇವರು ತಮ್ಮ ಪ್ರತಿಭಟನೆ ಹಾಗೂ ಪರಿಷ್ಕಾರಗಳ ಮೂಲಕ ಹಿಂದೂ ಧರ್ಮದೊಳಗಿನ ಬೌದ್ಧ ಆವೃತ್ತಿಯನ್ನೇ ಸುಧಾರಿಸುತ್ತಾ, ಅದನ್ನು ಬಹು ಸಂಖ್ಯಾತರ 'ನಿಜ'ವೆನ್ನಿಸುವ ಬೌದ್ಧ ಧರ್ಮವನ್ನಾಗಿ ವಿಸ್ತರಿಸುವ ಐತಿಹಾಸಿಕ ಕರ್ತವ್ಯದಿಂದ ಕಳ್ಳ ತಪ್ಪಿಸಿಕೊಂಡು ಹೋಗಿ, ಭಾರತದಲ್ಲಿ ಸಾಂಕೇತಿಕವಾಗಿ ಮಾತ್ರ ಅಸ್ತಿತ್ವದಲ್ಲಿರುವ 'ಅಧಿಕೃತ' ಬೌದ್ಧ ಧರ್ಮದ ಹುದಲಲ್ಲಿ ಕಳೆದು ಹೋಗುತ್ತಾರೆ.
ಇಷ್ಟೆಲ್ಲ ಹೇಳಿದ ಮೇಲೆ ರೇಷ್ಮೆಯವರ ಸಂಪಾದಕೀಯದಲ್ಲಿನ ಒಂದು ಮಾತನ್ನು ಬಲವಾಗಿ ಅಲ್ಲಗೆಳೆಯಲೇ ಬೇಕಿದೆ. ಬೌದ್ಧ ಧರ್ಮವಿರುವ ದೇಶಗಳು ಸರ್ವಾಧಿಕಾರಿ ರಾಷ್ಟ್ರಗಳೋ ಅಥವಾ ಜಪಾನಿನಂತೆ ಉಪಗ್ರಹ ರಾಷ್ಟ್ರವೋ ಆಗಿವೆ ಎಂಬ ಅವರ ಮಾತು, ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಒಂದು ಧರ್ಮದ ಬಗ್ಗೆ ಅರ್ಧ ಶತಮಾನದ ಆಧುನಿಕ ರಾಜಕೀಯ ಇತಿಹಾಸವನ್ನಷ್ಟೇ ಗಮನದಲ್ಲಿಟ್ಟುಕೊಂಡು ಆಡಿರುವ ತುಂಬಾ ಸುಲಭದ ಹಾಗೂ ಬಿಡುಬೀಸಾದ ಮಾತಾಗಿದೆ. ಹಾಗೆ ನೋಡಿದರೆ, ಜಗತ್ತಿನ ಎಲ್ಲ ಧಾರ್ಮಿಕ ಸಮಾಜಗಳೂ ಎಲ್ಲ ತೆರೆನ ರಾಜಕೀಯ ಪ್ರಯೋಗಗಳಿಗೂ ಒಳಗಾಗುತ್ತಾ ಬಂದಿವೆ. ಭಾರತದಲ್ಲಿ ಸಾಮ್ರಾಜ್ಯ ಸ್ಥಾಪನೆಯ ಮೊದಲ ಪ್ರಯತ್ನ ನಡೆಯುತ್ತಿದ್ದ ಸಂದರ್ಭದಲ್ಲಿ ಧರ್ಮ ಪ್ರಚಾರ ಆರಂಭಿಸಿದ ಬುದ್ಧ, ಇಂತಹ ಪ್ರಯತ್ನಗಳ ವಿರುದ್ಧ ರಕ್ಷಣೆಯಾಗಿ ಗ್ರಾಮ ಗಣ ರಾಜ್ಯಗಳ ಮಹಾಪೋಷಕನಾಗಿದ್ದ ಎಂಬುದನ್ನು ನಾವು ಮರೆಯಬಾರದು. ಹಾಗೇ, ಪ್ರಪಂಚದ ಏಕೈಕ 'ಹಿಂದೂ ರಾಷ್ಟ್ರ'ವೆನಿಸಿದ್ದ ನೇಪಾಳ ನಿನ್ನೆ ಮೊನ್ನೆಯವರೆಗೂ 'ಅಣಕು ಪ್ರಜಾಪ್ರಭುತ್ವ'ವೆನಿಸಿಕೊಂಡು ರಾಜಶಾಹಿ ರಾಷ್ಟ್ರವಾಗಿಯೇ ಉಳಿದಿತ್ತು ಎಂಬುದನ್ನು ಕೂಡ.
ಅಂದಹಾಗೆ: 'ಆಸ್ತಿ' ಎಂಬುದೇ 'ದುಃಖ'ವೆಂದು ಸಾರಿ ಬೌದ್ಧ ಧರ್ಮ ಸೇರಿದ ಅಂಬೇಡ್ಕರರ ವಾರಸುದಾರಿಕೆಯಲ್ಲಿ ಬುದ್ಧನ ಹೆಸರು ಹೇಳಿಕೊಂಡು ರಾಜ್ಯಭಾರ ಮಾಡತೊಡಗಿರುವ ಮಾಯಾವತಿಯವರ 'ಅಧಿಕೃತ' ಆಸ್ತಿ ಕಳೆದೆರಡು ಮೂರು ವರ್ಷಗಳಲ್ಲಿ ನಾಲ್ಕುನೂರು ಪಟ್ಟು ಹೆಚ್ಚಿ, 52 ಕೋಟಿ ರೂಪಾಯಿಗಳನ್ನು ತಲುಪಿದೆ!

Rating
No votes yet

Comments