ಬೆಂಗಳೂರು ಅಳಿಯ ಬೇಕಾ?

ಬೆಂಗಳೂರು ಅಳಿಯ ಬೇಕಾ?

ದೂರದ ಹಳ್ಳಿಗಳಲ್ಲಿ ನೆಮ್ಮದಿಯಿಂದ ಇರುವ ಕನ್ಯಾಪಿತೃಗಳೇ,
ಮದುವೆ ಸೀಸನ್ ಬಂತು. ನಿಮ್ಮ ಸುಂದರಿ, ಸುಕೋಮಲ, ಸುಕುಮಾರಿಗೆ
ಬೆಂಗಳೂರು ಕಡೆಯಿಂದ ಗಂಡು ಬಂದರೆ ಕಣ್ಣು ಮುಚ್ಚಿ ಹೇಳಿ
"ನಮಗೆ ಬೆಂಗಳೂರು ಗಂಡು ಬೇಡವೇಬೇಡ"!!
ನೂರಕ್ಕೂ ಮೀರಿ ಸಿನಿಮಾ ಮಂದಿರಗಳು,ಲಾಲ್ ಭಾಗ್..ಪಾರ್ಕ್ ಗಳು,
ಮನೆಬಾಗಿಲಿಗೇ ತರಕಾರಿ ಸಾಮಾನುಗಳು,ಪಕ್ಕದಲ್ಲೇ ಕಾನ್ವೆಂಟು ಸ್ಕೂಲುಗಳು
ಎಂದು ಕನಸು ಕಾಣುವ ಹುಡುಗಿಯರೇ, ಬೆಂಗಳೂರು ಬಲೆಗೆ ಬೀಳದಿರಿ.
ತೊಂದರೆಗಳು ಬೆಳ್ಳಂಬೆಳಗ್ಗೆನೇ ಸುರುವಾಗುವುದು. ೨-೩-೪..ದಿನಕ್ಕೊಮ್ಮೆ
ಬರುವ ನೀರಿಗೆ ಕ್ಯೂ,ನಂತರ ಜಗಳದಿಂದ ಹೊಡೆದಾಟದ ಹಂತ ತಲುಪುವಾಗ
ನೀರು ಬರುವುದು ನಿಲ್ಲುವುದು. ಇದ್ದ ನೀರಲ್ಲಿಯೇ ಅಡುಗೆ,ಸ್ನಾನ...ಮುಗಿಸಿ
ಮಾರನೇದಿನಕ್ಕೂ ಉಳಿಸಿಕೊಳ್ಳಬೇಕು.
ಈ ಸ್ವಚ್ಚ(?) ಬೆಂಗಳೂರಲ್ಲಿ ಕಸ ಬಿಸಾಡಲೂ ಎಷ್ಟು ತಾಪತ್ರಯ ನೋಡಿ-
ಬೀದಿಗಳ ತೊಟ್ಟಿಗಳನ್ನು ತೆಗೆದು ಹಾಕಿ, ಮನೆ ಬಾಗಿಲಿಗೆ ಕಸ ತೆಗೆದುಕೊಳ್ಳುವ
ಗಾಡಿ ಬರುವುದು. ಅದು ೬ ಗಂಟೆಯಿಂದ ನಂತರ ಎಷ್ಟು ಹೊತ್ತಿಗೂ ಬರಬಹುದು.
ಊರಲ್ಲಿಯಂತೆ ರೇಡಿಯೋದಲ್ಲಿ ನ್ಯೂಸ್,ಸುಪ್ರಭಾತ ಕೇಳಿಕೊಂಡಿರಲು ಸಾಧ್ಯವಿಲ್ಲ.
ಒಂದು ಕಿವಿ ರಸ್ತೆಗೇ ಇಟ್ಟುಕೊಂಡು ಇರಬೇಕು. ತಿಂಗಳಿಗೆ ೫-೧೦ ರೂ,
ಹಬ್ಬದ ಬೋನಸ್, ಹಳೇಬಟ್ಟೆ ಇತ್ಯಾದಿ ಕೊಟ್ಟರೂ ಅವರಿಗೆ ಸಮಾಧಾನ/ಸಮಯವಿಲ್ಲ.
೧ ನಿಮಿಷವೂ ಕಾಯದೇ ಬೆಂಗಳೂರು ಮೈಸೂರು ರಾಜಹಂಸ ಬಸ್ಸಿಗಿಂತ ವೇಗವಾಗಿ
ಹೋಗುವರು. ನಿಮ್ಮ ಹಣೆ ಬರಹವನ್ನು ಹಳಿದುಕೊಂಡು ಮಾರನೇದಿನದವರೆಗೆ ಕಾಯಬೇಕು.
ಇದು ಬೆಳಗ್ಗಿನ ಒಂದು ಎರಡು ಗಂಟೆಯ ಝಲಕ್.
ಇನ್ನು ಇಡೀ ದಿನದ ತಾಪತ್ರಯ ಕೇಳುವ ತಾಳ್ಮೆ ಇದೆಯೇ.
ಬೆಂಗಳೂರಿನ ಹೆಣ್ಣುಗಳು ಇದನ್ನು ಓದಿದರೆ ತಮ್ಮ ಅನಿಸಿಕೆಯನ್ನೂ ಇದಕ್ಕೆ ಸೇರಿಸಿ.

Rating
No votes yet

Comments