ಬೇಡವಾದ ಕನಸು..

ಬೇಡವಾದ ಕನಸು..

ಬೆಚ್ಚಗಿರಲೊಂದು ಗೂಡು,
ನಚ್ಚಗಿರಲೊಂದು ಹಾಡು,
ಕಣ್ತೆರೆದಾಗೊಂದು ಗಾನ,
ಕಣ್ಮುಚ್ಚುವಾಗಿನ್ನೊಂದೇ ತಾನ,
ನಡುವೆ ಅರಿವಿನ ಸೀಮೆಯಾಚೆಗಿನ
ಯಾವುದೋ ತನನ;
ನನ್ನ ತಲೆಯಾನಿಸಲೆಂದೇ
ಹರವಿ ನಿಂತ ನಿನ್ನೆದೆ,
ನನ್ನ ಹಿಡಿದಿಡಲೆಂದೇ
ಬಳಸಿ ನಿಂದ ನಿನ್ನ ಭದ್ರಬಾಹು .....

ಉಹ್... ಇವೆಲ್ಲ
ನಾನು ಕಂಡ ಕನಸಿನ
ಸ್ಕೆಚ್ಚೇ ಹೌದು
ಈ ಚಂದದ ಗೆರೆಗಳಿಗೆ
ಆ ರಾಡಿ ಬಣ್ಣಗಳನ್ನ
ಎರಚಿದ್ಯಾರು..? ಯಾಕೆ..?

ಗೂಡಿಗೊಂದು ಬೀಗ,
ಹಾಡಿಗೆ ಸೆಟ್ ಮಾಡಿಟ್ಟ ಫ್ರೀಕ್ವೆನ್ಸಿ,
ರಾಗಗಳಿಗೆ ರಿಮೋಟು,
ಮನಸಿನಂಗಳಕ್ಕೆ ಭದ್ರ ಬೇಲಿ,
ಬಳಸಿನಿಂದ ಕೈಗಳಲ್ಲಿ ರೇಶಿಮೆ ಸರಪಳಿ ...

ಇದೆಲ್ಲ ಯಾವಾಗಾಯ್ತು..?
ಹೇಗೆ..?

ಹುಂ, ಈ ಎಲ್ಲದರ ಮಧ್ಯೆ
ನಾನು ಇನ್ನೊಂದು
ಹೊಸದೇ ಕನಸಿಗೆ ಅಡಿಯಿಡುವವಳಿದ್ದೆ;
ಹೊಸ ಮೊಳಕೆಗೆ
ನೀರೆರೆಯುವವಳಿದ್ದೆ;
ಪುಟ್ಟದೊಂದು ಲಾಲಿಹಾಡಿಗೆ
ರಾಗ ಸಂಯೋಜಿಸುವವಳಿದ್ದೆ.... ....;

ಆದ್ರೆ ಇದೇನು?

ನೀನು ಯಾರೋ ಆಗಿ,
ಸದಾ ಕಚಗುಳಿಯಿಟ್ಟ
ನಿನ್ನ ಕಣ್ಣು ಚೂರಿಯಾಗಿ,
ಸವಿಮಾತುಗಳನ್ನುಣಿಸಿದ ನಿನ್ನ ನಾಲಗೆ
ಕತ್ತಿಯಲುಗಾಗಿ,

ಓಹ್!
ನನ್ನ ಕನಸು
ಚೆದುರಿಹೋಯಿತಲ್ಲಾ . ..
ಮೊಳಕೆ ಅಪ್ಪಚ್ಚಿ. ..
ರಾಗ ಚೆಲ್ಲಾಪಿಲ್ಲಿ. ..

ಅದು ಹ್ಯಾಗೋ..
ಜೀವ ಕಳಚದೆ ಉಳಿದಿದೆ ಇನ್ನೂ-
ಈ ಸಿಕ್ಕಿನಲ್ಲಿ,
ಬೇಡವಾದ ಕನಸಿನಲ್ಲಿ.

Rating
No votes yet