ಬೈಲುದಾರಿ

ಬೈಲುದಾರಿ

ನಸುಕಿನ ಚುಮು ಚುಮು ಬಿಸಿಲಿನಲ್ಲಿ ಆ ದಾರಿಯಲ್ಲಿ ನಡೆದರೆ ಅಕ್ಷರಶ: ವಜ್ರ ಮುತ್ತುಗಳನ್ನು ದಾರಿಯುದ್ದಕ್ಕೂ ಕಾಣಬಹುದು! ಇರುಳೆಲ್ಲ ಬಿದ್ದ ಇಬ್ಬನಿಯು ದಾರಿಯ ಇಕ್ಕೆಲಗಳಲ್ಲೂ ಹುಲ್ಲಿನ ಮೇಲೆ ಮುತ್ತಿನ ಮಣಿಗಳಂತೆ ಕೂತಿರುತ್ತಿದ್ದವು. ಬೆಳಗಿನ ಬಿಸಿಲಿನಲ್ಲಿ ಫಳಫಳನೆ ವಜ್ರಗಳಂತೆ ಮಿನುಗುತ್ತಿದ್ದವು. ಆ ದಾರಿಯಲ್ಲಿ ನಡೆದಂತೆಲ್ಲ ಆ ಮುತ್ತು - ವಜ್ರಗಳು ನಮ್ಮ ಕಾಲಿಗೆ ತಾಗಿ ನಲುಗಿ, ಪಾದಗಳನ್ನು ತೊಳೆಯುತ್ತಿದ್ದವು.

    ನಮ್ಮ ಮನೆಗೆ ಸಾಗುವ ಬೈಲುದಾರಿಯಲ್ಲಿ ನಡೆಯುವುದೆಂದರೆ, ಅದೊಂದು ವಿನೂತನ ಅನುಭವ; ಪ್ರಕೃತಿಯೊಂದಿಗೆ ಅನಿವಾರ್ಯವಾಗಿ ಬೆರೆಯುವ ಒಂದು ಅನುಭೂತಿ. ನಿಸರ್ಗದ ಪರಿಶುದ್ದ ಗಾಳಿಯನ್ನು ಸೇವಿಸುತ್ತಾ ಬಯಲಿನಲ್ಲಿ ಹಸಿರಾಗಿ ಬೆಳೆದ ಬೆಳೆಯನ್ನು ನೋಡುತ್ತಾ, ಪಚ್ಚೆ ಸಿರಿಯ ನಡುವೆ ಬೈತಲೆಯಂತೆ ಹಾದು ಹೋದ ದಾರಿಯಲ್ಲಿ ನಡೆಯುವಾಗ ಹಕ್ಕಿಗಳು ಕೂಗುತ್ತಿರುತ್ತವೆ, ಕೀಟಗಳು ಕಿಚಗುಡುತ್ತವೆ, ತೋಡಿನ ನೀರು ಜುಳು ಜುಳು ಎನ್ನುತ್ತಾ ಹರಿಯುತಿರುತ್ತದೆ. ಆ ಬೈಲುದಾರಿಯ ನಡುಗೆಯೇ ಒಂದು ನಿರಂತರ ಕವನವೆನ್ನಬಹುದು.

    ನಾನು ಶಾಲೆಗೆ ಹೋಗಿ ಬರುತ್ತಿದ್ದಾಗ, ನಮ್ಮ ಮನೆಗೆ ಇದ್ದುದು ಅದೊಂದೇ ದಾರಿ - ಆ ಬೈಲುದಾರಿ. ನಂತರದ ವರ್ಷಗಳಲ್ಲಿ ಗುಡ್ಡದ ಮೇಲೆ ಸಾಗಿ ಬರುವ, ಕಾಡಿನ ನಡುವಿನ ಮತ್ತೊಂದು ದಾರಿ ತಯಾರಾದರೂ, ಮೊದಮೊದಲ ಕೆಲವು ವರ್ಷಗಳಲ್ಲಿ, ಅನಿವಾರ್ಯವಾಗಿ ಆ ದಾರಿಯಲ್ಲಿ ಒಂದು ಕಿ.ಮೀ. ನಡೆದ ನಂತರವಷ್ಟೇ, ನಮ್ಮ ಮನೆಯ ಹೊಸ್ತಿಲನ್ನು ತುಳಿಯಬಹುದಾಗಿತ್ತು. ಆ ಬೈಲುದಾರಿ, ಅದೆಷ್ಟೋ ನೂರು ವರ್ಷಗಳಿಂದಲೂ ಹಾಗೇ ಇತ್ತೆಂದು ಅನಿಸುತ್ತದೆ. ಆ ಬೈಲಿನ ಒಂದು ತುದಿಯಲ್ಲಿ ನಮ್ಮ ಮನೆಯಿತ್ತು - ಅಥವಾ ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ನಮ್ಮ ಮನೆಯಿಂದ ಉತ್ತರದಿಕ್ಕಿಗೆ ಒಂದು ಕಿ.ಮೀ.ನಷ್ಟು ದೂರಕ್ಕೆ ಗದ್ದೆ ಬಯಲು ಸಾಗಿತ್ತು - ಮತ್ತು ಪೂರ್ವಕ್ಕೆ ಸಹಾ ಒಂದು ಕಿ.ಮೀ. ಅದೇ ಗದ್ದೆ ಬೈಲು ಮುಂದುವರಿದಿತ್ತು. ಪೂರ್ವಕ್ಕೆ ಸಾಗಿದರೆ, ಬೈಲು ದಾಟಿದ ನಂತರ ಹರನಗುಡ್ಡೆ ಎಂಬ ಎತ್ತರದ ಗುಡ್ಡ ಮತ್ತು ಕಾಡು. ಉತ್ತರಕ್ಕೆ ಸಾಗುವ ದಾರಿಯು ಒಂದು ಕಿ.ಮೀ. ಮುಂದುವರಿದು, ಕಾಡನ್ನು ದಾಟಿಸಿ, ಹಾಲಾಡಿಯನ್ನು ತಲುಪಿಸುತ್ತಿದ್ದುದರಿಂದ,ನಾವು ಹಾಲಾಡಿ ಶಾಲೆಗೆ ಹೋಗುವಾಗ ಅದೇ ದಾರಿಯನ್ನು ಹಿಡಿಯುತ್ತಿದ್ದೆವಾದ್ದರಿಂದ, ಈ ಬೈಲು ದಾರಿ ನಿಜಕ್ಕೂ ಜನಪ್ರಿಯ ದಾರಿ! ಬೇಸಗೆ, ಮಳೆಗಾಲ, ಚಳಿಗಾಲದಲ್ಲಿ ವಿವಿಧ ರೂಪ ಪಡೆಯುತ್ತಿದ್ದ ಈ ಬೈಲು ದಾರಿಯು, ನಮ್ಮ ಶಾಲಾ ದಿನಗಳಲ್ಲಿ ನನಗೆ ಓರ್ವ ಅಮೂರ್ತ ಸಂಗಾತಿಯೇ ಆಗಿತ್ತು. ವಿವಿಧ ಋತುಗಳಲ್ಲಿ ಬದಲಾಗುತ್ತಿದ್ದ ಆ ಬಯಲಿನ ಸ್ವರೂಪವು ಸ್ಪಷ್ಟವಾಗಿ ಒಂದು ನಿಸರ್ಗ ಪಾಠಶಾಲೆಯಾಗಿತ್ತು. ಬೇಸಗೆಯಲ್ಲಿ ಬೋಳು ಬೋಳಾಗಿ, ಧೂಳಿನಿಂದ ತುಂಬುವ ಇಡೀ ಬಯಲು. ಆಗ ಗದ್ದೆಗಳಲ್ಲಿ ಉಳುಮೆ ನಂತರ ಹರಡಿದ ಮಣ್ಣಿನ ಹೆಂಟೆಗಳ ಅಡಿಯಲ್ಲಿ ಜುಟ್ಟಿನ ಗುಬ್ಬಿ ಗೂಡು ಕಟ್ಟುವುದೂ ಉಂಟು. ವಸಂತ ಮಾಸ ಕಳೆದ ನಂತರ, ಒಣಗಿ ನಿಲ್ಲುವ ಇಡೀ ಬೈಲು ಮಧ್ಯಾಹ್ನದ ಹೊತ್ತಿನಲ್ಲಿ ಬಿರುಬಿಸಿಲಿಗೆ ಕುಣಿಯುತ್ತಿರುವಂತೆ ಕಾಣುತ್ತಿತ್ತು! ಆ ಬೈಲಿನ ಮಧ್ಯೆ ಸಾಗುವ ದಾರಿ ಬೇಸಗೆಯ ಬಿಸಿಲಿಗೆ ಒಣಗಿ ಬೆಂಡಾಗುತ್ತಿತ್ತು.

    ಬೈಲಿನ ತುದಿಯಲ್ಲಿ ನಮ್ಮ ಮನೆ. ಸಹಜವಾಗಿ ಒಂದು ಕಿ.ಮೀ. ದೂರದ ತನಕ ಬೈಲುದಾರಿಯು ಮನೆಯ ಮುಂದೆ ನಿಂತರೆ ಕಾಣುತ್ತಿತ್ತು. "ಮಕ್ಕಳೇ, ಬೈಲುದಾರಿಯಲ್ಲಿ ಯಾರೋ ನಡ್ಕಂಡು ಬತ್ರ್, ಕಾಣಿ!" ಎನ್ನುತ್ತಿದ್ದರು ಅಮ್ಮಮ್ಮ. ನಾವೆಲ್ಲ ಚಿಟ್ಟೆಯ ತುದಿಯಲ್ಲಿ ನಿಂತು, ಆ ಬೈಲುದಾರಿಯನ್ನು ನೋಡುತ್ತಾ, ಅಲ್ಲಿ ನಡೆದುಕೊಂಡು ಬರುವವರು ಯಾರು ಎಂದು ಊಹಿಸತೊಡಗುತ್ತಿದ್ದೆವು. ದೂರದಲ್ಲಿ ಕಟ್ಟಿನಗುಂಡಿಯ ಹತ್ತಿರ ನಡೆದು ಬರುತ್ತಿದ್ದ ಆಕೃತಿ ಮೊದಮೊದಲಿಗೆ ಚಿಕ್ಕದಾಗಿ ಕಾಣುತ್ತಿತ್ತು; ಆ ಆಕೃತಿ ನಡೆಯುತ್ತಾ ನಿಧಾನವಾಗಿ ಹತ್ತಿರ ಬಂದಂತೆ, " ಹೋ, ಇದು . . . . . ಇವರೇ ಅಲ್ದಾ?" ಎಂದು ಗುರುತಿಸುವಷ್ಟು ಸ್ಪಷ್ಟವಾಗತೊಡಗುತ್ತದೆ. ಇನ್ನೂ ಹತ್ತಿರ ಬಂದು, ಕಂಬಳಗದ್ದೆಯ ಕಂಟದಲ್ಲಿ ನಡೆದು ಬರುವಾಗ, ಬೈಲು ದಾರಿಯಲ್ಲಿ ಬರುತ್ತಿರುವವರು "ಇಂಥವರೇ" ಎಂದು ಸ್ಪಷ್ಟವಾಗುತ್ತದೆ. ನಮ್ಮ ಮನೆಗೆ ಬರುವವರಾದರೆ ಖುಷಿ; ಇನ್ನೂ ಮುಂದೆ ಅದೇ ಬೈಲುದಾರಿಯನ್ನು ತುಳಿದು ಚೇರ್ಕಿಗೆ ಹೋಗುವವರು ಹೋಗುತ್ತಿದ್ದರು. ಸುಮಾರು ಕಾಲು ಗಂಟೆಯ ತನಕ ಬೈಲುದಾರಿಯಲ್ಲಿ ನಡೆದು ಬರುವವರನ್ನು ಆಗಾಗ ಇಣುಕಿ ನೋಡುವುದೇ ಮಕ್ಕಳ ಕೆಲಸ. ಬೇಸಗೆಯಾದರೆ, ಅಷ್ಟು ದೂರ ನಡೆದುಬರುವವರು, ಬಿಸಿಲಿಗೆ ಬೆವರಿಳಿದು ಬಸವಳಿದು ಹೋಗುತ್ತಾರೆ! ಮನೆಗೆ ಬಂದವರಿಗೆ, ಮುದ್ದೆಬೆಲ್ಲದ ಜೊತೆ ನೀರನ್ನು ಕೊಡುವುದು ಅಂದಿನ ಸಂಪ್ರದಾಯ.

    ಇದೇ ದಾರಿಯಲ್ಲಿ ಮಳೆಗಾಲದಲ್ಲಿ ನಡೆದು ಬರುವುದು ಮತ್ತೊಂದೇ ಅನುಭವ. ಇಡೀ ಬಯಲನ್ನು ಹಸಿರು ಹಚ್ಚಡದಂತೆ ಹೊದ್ದಿರುವ, ಗಾಳಿಗೆ ಓಲಾಡುವ ಬತ್ತದ ಬೆಳೆ. ನಡುವೆ ಗದ್ದೆಯ ಅಂಚಿನಲ್ಲಿ ಸಾಗುವ ದಾರಿ; ದಾರಿಯುದ್ದಕ್ಕೂ ನೀರಿನದ್ದೇ ರಾಜ್ಯ. ಗದ್ದೆ ಅಂಚುಗಳನ್ನು ಅಲ್ಲಲ್ಲಿ ಕಡಿದು ನೀರು ಸಾಗಲು ಮಾಡಿರುವ "ನೀರ್ ಕಡು" ಗಳನ್ನು ನೋಡಿಕೊಂಡು, ದಾಟಿ ನಡೆಯಬೇಕು. ನೋಡದೇ ಕಾಲಿಟ್ಟರೆ, ಗದ್ದೆಗೆ ಬೀಳುವ ಸಾಧ್ಯತೆ! ಕೆಸರಿನ ಸ್ನಾನ! ಇಂಥ ಗದ್ದೆ ಅಂಚಿನಲ್ಲಿ ನಾವು ಮಕ್ಕಳು ಸಾಲಾಗಿ ಶಾಲೆಗೆ ಹೋಗುವ ಪರಿಯನ್ನು ನೋಡಬೇಕಿತ್ತು. ಒಬ್ಬರ ಹಿಂದೆ ಒಬ್ಬರು, ಕಪ್ಪನೆಯ ಕೊಡೆಯನ್ನು ಮಳೆಗೆ ಎದುರಾಗಿ ಹಿಡಿದು, ಮಾತನಾಡುತ್ತಾ ಶಾಲೆಗೆ ಹೋಗುವ ಅನುಭವವೇ ಅನುಪಮ. ಎಷ್ಟೊಂದು ಮಕ್ಕಳು ಆಗ ನಡೆದೇ ಶಾಲೆಗೆ ಹೋಗುತ್ತಿದ್ದರು! ನಾನು, ಇಂದಿರಾ, ಭಾರತಿ, ವಸಂತಿ, ವೇದಾವತಿ, ಗೌರೀಶ ಉಪ್ಪೂರ, ಸುರೇಶ ಉಪ್ಪೂರ, ದಿನೇಶ ಉಪ್ಪೂರ, ದುಗ್ಗ ನಾಯಕ........ ... ಈ ರೀತಿ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮಳೆಗಾಲದಲ್ಲಿ ನೆರೆ ಬಂದಾಗ ಒಂದು ರೀತಿಯ ಪಜೀತಿ; ಆದರೂ ಗಮ್ಮತ್ತು! ತುಂಬಾ ಮಳೆ ಬಂದಾಗ, ಶಾಲೆಗೆ ರಜಾ ಕೊಡುವುದು ನಾವು ಶಾಲೆಗೆ ಹೋದ ನಂತರವೇ! ಮಳೆಗಾಗಿ ಒಂದು ದಿನ ರಜಾ ಎಂದಾಗ, ನಾವೆಲ್ಲಾ ಸಾಲಾಗಿ ವಾಪಸು ಹೊರಡುವೆವು. ಈ ಬೈಲುದಾರಿಯ ಹತ್ತಿರ ಬಂದು ನೋಡಿದರೆ, ಮಳೆಯಿಂದಾಗಿ ಬೈಲು ತುಂಬಾ ನೆರೆ! ಬೈಲು ದಾರಿಯು ಅರ್ಧಕ್ಕರ್ಧ ಮಾಯ! ಬಯಲಿನ ಪಕ್ಕದ ತೋಡಿನ ನೀರು ಉಕ್ಕಿ ಹರಿದು, ಈ ದಾರಿಯು ನೀರಿನ ಅಡಿ ಅಂತರ್ಧಾನವಾಗಿತ್ತು. ಒಬ್ಬರ ಕೈ ಒಬ್ಬರು ಹಿಡಿದು, ಪ್ರತಿದಿನ ಆ ದಾರಿಯಲ್ಲಿ ನಡೆದು ಹೋದ ಅಂದಾಜಿನ ಮೇಲೆ ಹಗೂರ ನಡೆಯುತ್ತಾ, ಕೆಸರು ನೀರಿನ ಅಡಿಯಲ್ಲಿ ಅಂತರ್ಧಾನವಾಗಿದ್ದ ಗದ್ದೆಯ ಅಂಚಿನ ಮೇಲೆ ನಡೆಯಬೇಕಾಗುತ್ತಿತ್ತು. ತಗ್ಗಿನ ಜಾಗವಾದ ಕಟ್ಟಿನಗುಂಡಿಯ ಹತ್ತಿರ ಈ ರೀತಿ, ದಾರಿಯು ಒಂದೆರಡು ಫರ್ಲಾಂಗಿನಷ್ಟು ದೂರ ನೀರಿನಲ್ಲಿ ಮುಳುಗಿಹೋಗುತ್ತಿತ್ತು. ಇತ್ತ ಮನೆಯ ಹತ್ತಿರದ ಬೈಲುದಾರಿ ಎತ್ತರವಾದ ಜಾಗದಲ್ಲಿದ್ದುದರಿಂದ, ಮುಳುಗುತ್ತಿರಲಿಲ್ಲ. ಗಾಳಿಯ ಹೊಡೆತ ತಡೆದು,ಮಳೆನೀರು ತಲೆಯ ಮೇಲೆ ಬೀಳದಂತೆ ಕೊಡೆಯನ್ನು ಹಿಡಿದು ಮನೆಗೆ ಬರುವುದೇ ಒಂದು ದೊಡ್ಡ ಕೆಲಸ. ಮನೆಗೆ ಬಂದು, ಚಂಡಿ ಮುದ್ದೆಯಾದ ಬಟ್ಟೆ ಬದಲಿಸಿ, ನೀರಿನಲ್ಲಿ ನೆನೆದ ಪುಸ್ತಕಗಳನ್ನು ಗರಂ ಮಾಡುವ ಕೆಲಸವೂ ಮುಖ್ಯವೇ. ನೆರೆಯ ನೀರಿನಲ್ಲಿ ಓಡುತ್ತಿದ್ದ ಒಳ್ಳೆಹಾವು, ಕಪ್ಪೆ, ಏಡಿ, ಮೀನುಗಳನ್ನು ನೋಡುವ ಮಜವೇ ಮಜ. ಮಳೆಯ ದಿನಗಳಲ್ಲಿ ತೋಡಿನ ಬದಿಯ ಮುಂಡುಕನ ಹಿಂಡಲಿನಲ್ಲಿ ಕೂಗುತ್ತಿದ್ದ ವಾಂಟೆ ಕೋಳಿ, ನೀರು ಕೋಳಿಗಳ ಕೂಗು ಮಳೆಯ ಸದ್ದಿನ ಜೊತೆ ಮೇಳೈಸುತ್ತಿತ್ತು.

    ಬೈಲುದಾರಿಯು ಚಳೀಗಾಲದಲ್ಲಿ ಮತ್ತೊಂದು ರೂಪವನ್ನು ಪಡೆಯುತ್ತಿತ್ತು. ಸುಂದರ ನೀಲ ಗಗನ, ಬಯಲ ತುಂಬಾ ಹಸಿರುಕ್ಕಿಸುವ ಭತ್ತದ ಗದ್ದೆ, ಗದ್ದೆಯಾಚೆಗಿನ ದಟ್ಟವಾದ ಕಾಡು. ಸಂಜೆಯ ಆರು ಗಂಟೆಗಾಗಲೇ, ಅಂದರೆ, ನಾವು ಶಾಲೆಯಿಂದ ನಡೆದುಕೊಂಡು ಹಿಂತಿರುಗುವ ಸಮಯಕ್ಕೆ, ಒಂದೊಂದು ಇಬ್ಬನಿಯನ್ನು ಮುತ್ತಿನಂತೆ ಹಿಡಿದಿಟ್ಟ ಭತ್ತದ ಗಿಡಗಳು. ಅದೊಂದು ಸುಂದ‘ರ ಲೋಕ. ಅನತಿ ದೂರದಲ್ಲಿ ಆಲೆಮನೆಯಲ್ಲಿ ಒಳಲು ಹಾಕುವ ಸದ್ದು, ಕೋಣನ ಕುತ್ತಿಗೆಯ ಗಗರದ ಸದ್ದು, ಅಲ್ಲಿ ಆಲೆಮನೆಯವರು ವಿಶ್ವಾಸದಿಂದ ಕೊಟ್ಟ ಕಬ್ಬಿನ ಹಾಲು ಕುಡಿದು, ಅವರು ಕೊಡುವ ಕಬ್ಬನ್ನು ತಿನ್ನುತ್ತಾ ಆ ಬೈಲು ದಾರಿಯಲ್ಲಿ ನಡೆಯುವ ಅನುಭವವೇ ವಿಶಿಷ್ಟ.

     ಅಂಥ ಸುಂದರ ಬೈಲು ದಾರಿ ಕ್ರಮೇಣ ನಶಿಸಿ ಹೋಯ್ತು. ಮೊದಲಿಗೆ ಬೈಲಿಗೆ ಅಡ್ಡವಾಗಿ, ಗದ್ದೆಗಳೆಲ್ಲಾ ವಿಶಾಲವಾದ ಅಡಿಕೆ ತೋಟಗಳಾದವು. ತೋಟಕ್ಕೆ ಬೇಲಿ ಹಾಕಿದರು. ಬೈಲಿನ ಉದ್ದಕ್ಕೂ ಮನೆ ಕಟ್ಟಿಕೊಂಡು ಇದ್ದವರಲ್ಲಿ ಕೆಲವರು ಗದ್ದೆ ಮತ್ತು ಜಾಗ ಮಾರಿ, ಪೇಟೆಯತ್ತ ಮುಖಮಾಡಿದರು. ಆ ಬೈಲುದಾರಿಯನ್ನು ದಿನವೂ ತುಳಿದು, ಅಲ್ಲಿ ನಿಸರ್ಗ ಪಾಠಗಳನ್ನು ಹೇಳಿಸಿಕೊಳ್ಳುತ್ತಾ, ಶಾಲೆಯಲ್ಲಿ ಪರೀಕ್ಷೆ ಪಾಸು ಮಾಡಿದ ನನ್ನಂತಹ ಹಲವು, ಆ ವಿದ್ಯಾಭ್ಯಾಸದ ಸರ್ಟಿಫಿಕೇಟಿನ ಆಧಾರದ ಮೇಲೆ, ಪೇಟೆಯಲ್ಲಿ ಕೆಲಸಕ್ಕೆ ಸೇರಿದರು.ಬೈಲು ದಾರಿಯ ಬದಲು ಗುಡ್ಡದ ದಾರಿಯಲ್ಲಿ ಬೈಕು, ಆಟೊರಿಕ್ಷಾದ ಮೂಲಕ ಪೇಟೆಗೆ ಮತ್ತು ಶಾಲೆಗೆ ಹೋಗುವವರು ಹೆಚ್ಚಾದರು. ಬೈಲುದಾರಿ ಕ್ರಮೇಣ ತೆರೆಗೆ ಸರಿಯಿತು.     ಚಿತ್ರಕೃಪೆ: gurudongma.com               

                                                                                                                                                                                                                                                      -ಶಶಿಧರ ಹೆಬ್ಬಾರ ಹಾಲಾಡಿ.

Rating
No votes yet

Comments