ಭಾಗ - ೮ ಭೀಷ್ಮ ಯುಧಿಷ್ಠಿರ ಸಂವಾದ: ಕರ ಸಂಗ್ರಹದ ವಿಧಾನ
ಯುಧಿಷ್ಠಿರನ ಬಿನ್ನಹದಂತೆ ಶರಶಯ್ಯೆಯಲ್ಲಿ ಮಲಗಿದ್ದ ಪಿತಾಮಹನಾದ ಭೀಷ್ಮನು ರಾಜ ಧರ್ಮವನ್ನು ವಿವಿಧ ಕಥೆ, ದೃಷ್ಟಾಂತ, ಉಪಾಖ್ಯಾನಗಳ ಮೂಲಕ ಅವನಿಗೆ ವಿವರಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.
ಯುಧಿಷ್ಠಿರನು ಕೇಳಿದನು, "ಪಿತಾಮಹಾ! ರಾಜನು ಸಮರ್ಥನಾದವನು, ರಾಜ್ಯದಲ್ಲಿ ಅವನಿಗೆ ಎದುರಾಳಿಗಳಿಲ್ಲ, ಶತ್ರುಗಳೂ ಇಲ್ಲ, ಅವನು ಹೇಳಿದ್ದೇ ಶಿಲಾಶಾಸನ, ಆದರೂ ಸಹ ಅವನ ಆಡಳಿತವು ಸುಗಮವಾಗಿ ಸಾಗಬೇಕೆಂದರೆ ಪ್ರಭುತ್ವಕ್ಕೆ ಆದಾಯವಿರಬೇಕಲ್ಲವೆ? ಕೋಶಾಗಾರದಲ್ಲಿ ದ್ರವ್ಯವಿಲ್ಲದಿದ್ದರೆ ಪ್ರಜೆಗಳಿತ್ತ ವಾಗ್ದಾನವನ್ನು ನೆರವೇರಿಸುವುದು ಕಷ್ಟವಾಗುತ್ತದೆ. ರಾಜನು ಪ್ರಜಾರಂಜಕನಾಗದೇ ಇದ್ದರೆ ಪ್ರಜೆಗಳಿಗೆ ಅವನ ಮೇಲಿನ ವಿಶ್ವಾಸವು ಕುಂಠಿತಗೊಳ್ಳುತ್ತದೆ. ಆದ್ದರಿಂದ ರಾಜನು ಸಮರ್ಥನಾಗಿದ್ದರೂ ಸಹ ರಾಜ್ಯದ ಆದಾಯವನ್ನು ವೃದ್ಧಿಸಿಕೊಳ್ಳಬೇಕಾದ ಅವಶ್ಯಕತೆ ಖಂಡಿತವಾಗಿಯೂ ಇರುತ್ತದೆ. ಆ ಕಾರ್ಯವನ್ನು ಹೇಗೆ ಮಾಡಬೇಕು? ಕೋಶಾಗಾರವನ್ನು ತುಂಬಿಸುವ ಮಾರ್ಗಗಳೇನು? ದಯಮಾಡಿ ತಿಳಿಸುವಂತಹವರಾಗಿ."
ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮನಂದನನೇ! ರಾಜನಾದವನು ತಾನು ಸಮರ್ಥನೆಂದು ತಿಳಿದು ಅಥವಾ ಪ್ರಜೆಗಳಿಗೆ ತನ್ನ ಮೇಲೆ ಎಣೆಯಿಲ್ಲದಷ್ಟು ವಿಶ್ವಾಸವಿದೆ ಎಂದುಕೊಂಡು ಇಷ್ಟ ಬಂದಂತೆ ಬದಲಾವಣೆಗಳನ್ನು ತರುತ್ತೇನೆ, ಮನಸ್ಸಿಗೆ ಬಂದಂತೆ ಕರವನ್ನು ವಿಧಿಸುತ್ತೇನೆ, ಎಲ್ಲರನ್ನೂ ಶಿಸ್ತಿಗೆ ಒಳಪಡಿಸುತ್ತೇನೆ ಎಂದು ಭಾವಿಸಿದರೆ ಅದು ಬೆಂಕಿಯೊಡನೆ ಸರಸವಾಡಿದಂತೆಯೇ ಸರಿ. ಧರ್ಮವನ್ನು ಅನುಸರಿಸತಕ್ಕದ್ದೇ! ಆದರೆ ದೇಶಕಾಲ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ತನಗಿರುವ ಬುದ್ಧಿಬಲ, ಬಾಹುಬಲಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಜಾಹಿತ ಕಾರ್ಯಗಳನ್ನು ಅನುಷ್ಠಾನಕ್ಕೆ ತರಬೇಕು. ಪ್ರಜೆಗಳೂ, ಪ್ರಭುತ್ವೋದ್ಯೋಗಿಗಳೂ ಶಿಸ್ತಿನಿಂದ ವರ್ತಿಸುವಂತೆ ನೋಡಿಕೊಳ್ಳಬೇಕು, ಹಾಗೆಂದು ಆತುರದ ನಿರ್ಧಾರಗಳನ್ನು ಕೈಗೊಳ್ಳಬಾರದು!".
"ಅಷ್ಟೇ ಅಲ್ಲಾ ಯುಧಿಷ್ಠಿರಾ! ತಾನು ಕೈಗೊಳ್ಳಲಿರುವ ಕಾರ್ಯಗಳು ಯಾವ ವಿಧವಾಗಿ ಪ್ರಜೆಗಳಿಗೆ ಪ್ರಯೋಜನಕಾರಿ ಎನ್ನುವುದರ ಕುರಿತು ಮೊದಲೇ ವಿಸ್ತೃತವಾಗಿ ಪ್ರಜೆಗಳಿಗೆ ಪ್ರಚುರಪಡಿಸಬೇಕು! ಹಾಗೆ ಮಾಡಿ ಅವರ ಮನಸ್ಸನ್ನು ಅದಕ್ಕೆ ಸಿದ್ಧಗೊಳಿಸಬೇಕು. ಹಾಗಾದಾಗ ಮಾತ್ರ ಪ್ರಜೆಗಳು ಬದಲಾವಣೆಯನ್ನು ಆನಂದದಿಂದ ಸ್ವೀಕರಿಸಬಲ್ಲರು. ಇಲ್ಲದಿದ್ದರೆ ’ಊರಿಗೊಂದು ದಾರಿಯಾದರೆ ಮೂರ್ಖನಿಗೇ ಒಂದು ದಾರಿ’ ಎಂದು ಪ್ರಜೆಗಳು ಭ್ರಮಿಸುವ ಅಪಾಯವಿದೆ!"
"ಕರಗಳನ್ನು ವಿಧಿಸಿ ತನ್ಮೂಲಕ ಆದಾಯವನ್ನು ವೃದ್ಧಿಸಿಕೊಳ್ಳಲಿಚ್ಛಿಸುವ ಪ್ರಭುವು ಅದರ ಕುರಿತು ದೀರ್ಘವಾದ ಮಂಥನ ನಡೆಸಿ ಉಪಾಯವಾಗಿ ಅದನ್ನು ಅನುಷ್ಠಾನಕ್ಕೆ ತರಬೇಕು. ಕೆಲವೊಂದು ಉದಾಹರಣೆಗಳ ಮೂಲಕ ನಿನಗೆ ಅದನ್ನು ವಿಶದಪಡಿಸುತ್ತೇನೆ"
"ಜೇನು ನೊಣಗಳು ಹೂವುಗಳ ಮೇಲೆ ವಾಲಿ ಜೇನನ್ನು ಶೇಖರಿಸುತ್ತವೆ. ಅದರಿಂದ ಹೂವುಗಳಲ್ಲಿರುವ ಜೇನು ಖಾಲಿಯಾಗದು. ಅದರಿಂದ ಗಿಡವು ನಾಶವಾಗದು. ಇದ್ದಿಲಿಗಾಗಿ ಮರವನ್ನು ಕೊಡಲಿಯಿಂದ ಕತ್ತರಿಸಿದಂತಲ್ಲದೆ ಜೇನು ಹುಳುವು ಅತ್ಯಂತ ಮೃದುವಾಗಿ ಹೂವುಗಳ ಮೇಲೆ ವಾಲಿ ಅದರಿಂದ ಮಧುವನ್ನು ಹೀರುವ ತೆರದಿ ರಾಜನು ಕರವನ್ನು ಸಂಗ್ರಹಿಸಬೇಕು."
"ಹಸುಗಳಿಂದ ಹಾಲು ಹಿಂಡಿಕೊಳ್ಳುವವನು ಮೊದಲು ಕರುವನ್ನು ಮುಂದೆ ಬಿಡುತ್ತಾನೆ. ಕರುವಿಗೆ ಹಾಲು ಕುಡಿಯಲು ಅನುಕೂಲ ಮಾಡಿಕೊಡುತ್ತಾನೆ. ಕರುವಿನ ರೀತಿಯಲ್ಲಿಯೇ ಅವನೂ ಸಹ ಹಸುವಿನಿಂದ ಹಾಲನ್ನು ಹಿಂಡಿಕೊಳ್ಳುತ್ತಾನೆ ಆದರೆ ಹಾಗೆ ಮಾಡುವಾಗ ಅವನು ಹಸುವಿನ ಕೆಚ್ಚಲನ್ನು ನೆತ್ತರು ಒಸರುವವರೆಗೆ ಹಿಂಡುವುದಿಲ್ಲ. ಮೃದುವಾಗಿ ಹಾಲನ್ನು ಕರೆಯುತ್ತಾನೆ. ರಾಜನೂ ಸಹ ಅದೇ ವಿಧವಾಗಿ ವ್ಯವಹರಿಸಬೇಕು.
"ಮೂಷಿಕದ ದಂತಗಳು ಬಹಳ ಮೊನಚಾಗಿರುತ್ತವೆ. ಆದರೂ ಸಹ ನಿದ್ರಾವಸ್ಥೆಯಲ್ಲಿರುವ ವ್ಯಕ್ತಿಯನ್ನು ಇಲಿಯು ಕಚ್ಚಿದರೆ ನಿದ್ದೆ ಮಾಡುತ್ತಿರುವವನು ತನ್ನ ಕಾಲನ್ನು ಸ್ವಲ್ಪ ಅತ್ತಿತ್ತ ಸರಿಸುತ್ತಾನೆ. ಅಷ್ಟೇ ಹೊರತು ಅವನಿಗೆ ನೋವು ಹೆಚ್ಚಾಗಿ ಉಂಟಾಗದು. ಹಾಗೆ ನೋವಿಲ್ಲದಂತೆ ರಾಜನು ಕರವನ್ನು ಶೇಖರಿಸಬೇಕು.
"ಮೊದಲು ಅಲ್ಪ ಕರವನ್ನು ವಿಧಿಸಬೇಕು. ಅದನ್ನು ಕ್ರಮೇಣ ಹೆಚ್ಚಿಸಬೇಕು. ಆಗ ಅದರ ಭಾರವು ಅರಿವಿಗೆ ಬಾರದು".
"ಹೊಸ ಎತ್ತನ್ನು ನೊಗಕ್ಕೆ ಹೂಡುವ ಮುನ್ನ ಅದನ್ನು ಪಳಗಿಸುವ ರೀತಿಯಲ್ಲಿ ಪ್ರಜೆಗಳು ಕರವನ್ನು ಭರಿಸುವುದನ್ನು ರಾಜನು ಅಭ್ಯಾಸ ಮಾಡಿಸಬೇಕು"
"ಕುಂತಿನಂದನನೇ! ಮತ್ತೊಂದು ಪ್ರಮುಖವಾದ ವಿಷಯವನ್ನು ನಿನ್ನ ದೃಷ್ಟಿಗೆ ತರುವ ಅವಶ್ಯಕತೆಯಿದೆ. ರಾಜ್ಯದಲ್ಲಿ ಬೃಹತ್ತಾದ ಮಾರ್ಪಾಡುಗಳನ್ನು ತರಬೇಕೆಂದು ನೂತನವಾಗಿ ಅಭಿಷಿಕ್ತಗೊಂಡ ರಾಜನಿಗೆ ಉತ್ಕಂಠತೆಯಿರುತ್ತದೆ. ತನ್ನ ಕೆಳಗೆ ಕಾರ್ಯ ನಿರ್ವಹಿಸುವ ಮಂತ್ರಿಗಳನ್ನು, ಉದ್ಯೋಗಿಗಳನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಬೇಕೆಂಬ ತುಡಿತವಿರುತ್ತದೆ. ಅದು ಸಹಜವಾದುದೇ, ಆದರೆ ಎಲ್ಲರನ್ನೂ ಒಂದೇ ಬಾರಿಗೆ ಸರಿದಾರಿಗೆ ತರುವುದು ಕಷ್ಟ. ಆಯಾ ಶಾಖೆಗಳಿಗೆ ಅಧಿಪತಿಗಳಾದ ಪ್ರಧಾನಾಧಿಕಾರಿಗಳನ್ನು ಮೊದಲು ಪರಿಶೀಲಿಸಬೇಕು. ಅವರನ್ನು ಮೃದು-ಮಧುರ ಮಾತುಗಳಿಂದ ಪ್ರಸನ್ನರಾಗಿಸಿಕೊಂಡು ಅವರ ಮನಸ್ಸನ್ನು ಗೆಲ್ಲಬೇಕು. ಆಗ ಅವರು ರಾಜನ ಅಧೀನಕ್ಕೊಳಪಡುತ್ತಾರೆ ತನ್ಮೂಲಕ ಅವರು ತಮ್ಮ ಕೈಕೆಳಗಿರುವ ಉದ್ಯೋಗಿಗಳನ್ನು ಹದ್ದುಬಸ್ತಿನಲ್ಲಿಡುತ್ತಾರೆ. ಅದನ್ನು ಬಿಟ್ಟು ಮೂರ್ಖನಂತೆ ಸೊಕ್ಕಿನ ತುರಗವನ್ನೇರಿ ಅದನ್ನು ಅಂಕೆಯಲ್ಲಿಡುತ್ತೇನೆಂದುಕೊಂಡರೆ ಅದರಿಂದ ಪ್ರಮಾದವೇ ಉಂಟಾಗುತ್ತದೆ, ತಸ್ಮಾತ್ ಜಾಗ್ರತ!"
"ಇನ್ನೊಂದು ವಿಷಯವನ್ನು ಸಹ ನಿನಗೆ ತಿಳಿಸಲಿಚ್ಛಿಸತ್ತೇನೆ. ರಾಜ್ಯದಲ್ಲಿ ಮಧುಶಾಲೆ, ದ್ಯೂತಗೃಹಗಳನ್ನು ನಿರ್ವಹಿಸುವವರೂ, ಕಳ್ಳಕಾಕರೂ, ಮೊದಲಾದವರೂ ಇರುತ್ತಾರೆ. ಅಂಥಹವರ ಮೇಲೆ ಹದ್ದಿನ ಕಣ್ಣಿಟ್ಟರೆ ಅರ್ಧ ಕೆಲಸ ಮುಗಿದಂತೆಯೇ! ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ವ್ಯವಹರಿಸಬೇಕೆ ಅಥವಾ ದಂಡನೀತಿಯನ್ನನುಸರಿಸಿ ಅವರನ್ನು ಹತ್ತಿಕ್ಕಬೇಕೆ ಎನ್ನುವುದನ್ನು ಆಲೋಚಿಸಿ ನಿರ್ಧರಿಸು. ಅವರನ್ನು ನಿಯಂತ್ರಿಸದಿದ್ದಲ್ಲಿ ಆ ಪಾಪಾತ್ಮರು ಮಾಡುವ ಕೃತ್ಯಗಳಲ್ಲಿ ನಾಲ್ಕನೇ ಒಂದು ಭಾಗದ ಪಾಪವನ್ನು ನೀನೂ ಸಹ ಅನುಭವಿಸಬೇಕಾಗುತ್ತದೆನ್ನುವುದನ್ನು ಅರಿತುಕೋ. ಪುಣ್ಯವಾಗಲಿ-ಪಾಪವಾಗಲಿ ಅದರಲ್ಲಿ ನಿನಗೂ ಪಾಲಿದೆ ಎನ್ನುವುದನ್ನು ಮರೆಯಬೇಡ!"
"ರಾಜ್ಯದಲ್ಲಿ ಧನಿಕರಾದವರನ್ನು ರಾಜನಾದವನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರನ್ನು ಔತಣಗಳಿಂದಲೂ, ಸತ್ಕಾರಗಳಿಂದಲೂ, ನಯವಿನಯಗಳಿಂದಲೂ ಜಯಿಸಬೇಕು. "ಅಯ್ಯಾ! ನೀವು ನನಗೆ ಸಹಕರಿಸಬೇಕು. ಪ್ರಜೋಪಕಾರಿಯಾದ ಕಾರ್ಯಗಳಲ್ಲಿ ನಿಮ್ಮೆಲ್ಲರ ಸಹಾಯ ಸಹಕಾರಗಳು ಅತ್ಯವಶ್ಯಕ. ನಿಮ್ಮ ಧನಬಲವನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸುವುದು ಶ್ರೇಯಸ್ಕರ" ಎಂದು ಹೇಳಿ ಅವರ ಸಹಕಾರವನ್ನು ಪಡೆಯಬೇಕು. ಧನಿಕವರ್ಗವು ರಾಜ್ಯದಲ್ಲಿ ಬಹಳ ಪ್ರಮಾದಕರವಾದ ವರ್ಗ, ಏಕೆಂದರೆ ಧನವಂತನು ಸಮಾಜದಲ್ಲಿ ಪ್ರಮುಖನಾಗಿರುತ್ತಾನೆ".
"ಮೇಧಾವಿಗಳು, ಶೂರರು, ಧನವಂತರು, ತಪಸ್ವಿಗಳು, ಇವರನ್ನು ನೀನು ಹಗುರವಾಗಿ ಪರಿಗಣಿಸಬಾರದು. ಅವರೆಲ್ಲರ ಸಹಕಾರದಿಂದ ರಾಜ್ಯವನ್ನು ಪರಿಪಾಲಿಸಬೇಕು. ಅವರು ಸಮಾಜದ ಶತ್ರುಗಳಲ್ಲ ಆದರೆ ಮಿತ್ರರು".
"ನೀನು ಎಲ್ಲರನ್ನೂ ಪ್ರೇಮದಿಂದ ಗೆಲ್ಲಬೇಕು. ಸತ್ಯ, ಜನರಲ್ಲಿ ಬೆರೆತುಹೋಗುವ ಗುಣ, ಅಕ್ರೋಧ, ದಯೆ, ಮೊದಲಾದ ನಿನ್ನ ಸದ್ಗುಣಗಳೇ ನಿನ್ನನ್ನು ಕಾಪಾಡುತ್ತವೆ."
ಈ ವಿಧವಾಗಿ ಭೀಷ್ಮ ಪಿತಾಮಹನು ಕರ ಸಂಗ್ರಹಣೆಯ ವಿಷಯದಲ್ಲಿ ಯುಧಿಷ್ಠಿರನ ಸಂಶಯವನ್ನು ನಿವಾರಣೆ ಮಾಡಿದನು.
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).
ಚಿತ್ರಕೃಪೆ: ಗೂಗಲೇಶ್ವರ
ಹಿಂದಿನ ಲೇಖನ ಭಾಗ - ೭ "ಭೀಷ್ಮ ಯುಧಿಷ್ಠಿರ ಸಂವಾದ: ವ್ಯಾಘ್ರಗೋಮಾಯ ಅಥವಾ ಹುಲಿ ನರಿಯ ಸಂವಾದ" ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AD-%E0%B2%AD...
Comments
ಉ: ಭಾಗ - ೮ ಭೀಷ್ಮ ಯುಧಿಷ್ಠಿರ ಸಂವಾದ: ಕರ ಸಂಗ್ರಹದ ವಿಧಾನ
ಈ ಲೇಖನದ ಮುಂದಿನ ಭಾಗ - ೯ ಭೀಷ್ಮ ಯುಧಿಷ್ಠಿರ ಸಂವಾದ: ಒಂಟೆಯ ಉಪಾಖ್ಯಾನಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%AF-%E0%B2%AD...
ಉ: ಭಾಗ - ೮ ಭೀಷ್ಮ ಯುಧಿಷ್ಠಿರ ಸಂವಾದ: ಕರ ಸಂಗ್ರಹದ ವಿಧಾನ
ಭೀಷ್ಮ ಯುಧಿಷ್ಠಿರ ಸಂವಾದ ಸರಣಿಯ ಈ ಲೇಖನವನ್ನೂ ಸಹ ವಾರದ ವಿಶೇಷ ಬರಹಗಳಲ್ಲೊಂದಾಗಿ ಆಯ್ಕೆ ಮಾಡಿದ ಸಂಪದ ನಿರ್ವಹಣಾ ಮಂಡಳಿಗೆ ನಾನು ಚಿರಋಣಿ. ಎಂದಿನಂತೆ ನನ್ನ ಬರಹಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಸಂಪದದ ಮಿತ್ರರಿಗೂ ಧನ್ಯವಾದಗಳು -^-