ಭಾಗ - ೭ "ಭೀಷ್ಮ ಯುಧಿಷ್ಠಿರ ಸಂವಾದ: ವ್ಯಾಘ್ರಗೋಮಾಯ ಅಥವಾ ಹುಲಿ ನರಿಯ ಸಂವಾದ

ಭಾಗ - ೭ "ಭೀಷ್ಮ ಯುಧಿಷ್ಠಿರ ಸಂವಾದ: ವ್ಯಾಘ್ರಗೋಮಾಯ ಅಥವಾ ಹುಲಿ ನರಿಯ ಸಂವಾದ

       ಯುಧಿಷ್ಠಿರನ ಬಿನ್ನಹದಂತೆ ಶರಶಯ್ಯೆಯಲ್ಲಿ ಮಲಗಿದ್ದ ಪಿತಾಮಹನಾದ ಭೀಷ್ಮನು ಅವನಿಗೆ ರಾಜ ಧರ್ಮವನ್ನು ವಿವಿಧ ಕಥೆ, ದೃಷ್ಟಾಂತ, ಉಪಾಖ್ಯಾನಗಳ ಮೂಲಕ ವಿವರಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು. 
     ಯುಧಿಷ್ಠಿರನು ಕೇಳಿದನು, "ಪಿತಾಮಹಾ, ಮನುಷ್ಯರಲ್ಲಿ ಕೆಲವರು ಮೇಲ್ನೋಟಕ್ಕೆ ಸುಕೋಮಲರಂತೆ ಕಾಣಿಸುತ್ತಾರೆ ಮತ್ತು ಶಾಂತರಾಗಿ ವ್ಯವಹರಿಸುತ್ತಾರೆ ಆದರೆ ಅವರ ಮನಸ್ಸು ಬಹಳ ಕಠಿಣವಾಗಿರುತ್ತದೆ. ಇನ್ನೂ ಕೆಲವರು ನೋಡಲು ಬಹಳ ಕಠಿಣರಾಗಿರುತ್ತಾರೆ ಮತ್ತು ಅವರ ಮಾತುಗಳೂ ಸಹ ಕಠಿಣವಾಗಿರುತ್ತವೆ, ಆದರೆ ಅವರ ಮನಸ್ಸು ಬೆಣ್ಣಯಷ್ಟೇ ಮೃದುವಾಗಿರುತ್ತದೆ. ಇಂತಹ ಮನುಷ್ಯರನ್ನು ಗುರುತಿಸುವ ಬಗೆಯನ್ನು ನಾನು ಅರಿತುಕೊಳ್ಳಬೇಕೆಂದಿದ್ದೇನೆ. ನಮ್ಮ ಮೇಲೆ ಕೃಪೆದೋರಿ ಅರಹುವಂತವರಾಗಿರಿ."
      ಭೀಷ್ಮನು ಹೀಗೆ ಉತ್ತರಿಸಿದನು. "ಧರ್ಮನಂದನನೇ! ಈ ವಿಷಯದಲ್ಲಿ ಹಿರಿಯರು "ವ್ಯಾಘ್ರಗೋಮಾಯ ಅಥವಾ ವ್ಯಾಘ್ರಶೃಗಾಲ ಸಂವಾದ" ಎನ್ನುವ ಉಪಾಖ್ಯಾನವೊಂದನ್ನು ಹೇಳಿರುತ್ತಾರೆ. ನಿನ್ನ ಪ್ರಶ್ನೆಗೆ ಅದೇ ಸೂಕ್ತ ಉತ್ತರವು, ಅದನ್ನು ಕೇಳುವಂತವನಾಗು."
    "ಪೂರ್ವಕಾಲದಲ್ಲಿ ಪೌರಿಕನೆನ್ನುವ ರಾಜನಿದ್ದನು. ಅವನು ಮರಣ ಹೊಂದಿ ಮುಂದಿನ ಜನ್ಮದಲ್ಲಿ ಒಂದು ನರಿಯಾಗಿ (ಗೋಮಾಯ ಅಥವಾ ಶೃಗಾಲ) ಹುಟ್ಟಿದನು. ಆ ನರಿಗೆ ಪೂರ್ವಜನ್ಮದ ಸ್ಮೃತಿಯಿದ್ದುದರಿಂದ ಅದು ತನ್ನ ಗತ ಜನ್ಮವನ್ನು ಸ್ಮರಿಸಿಕೊಂಡು ಪಶ್ಚಾತ್ತಾಪದಿಂದ ಮಾಂಸಾಹಾರವನ್ನು ವರ್ಜಿಸಿ, ವ್ರತನಿಷ್ಠನಾಗಿ, ತಪಸ್ವಿಯ ಜೀವನವನ್ನು ಸಾಗಿಸುತ್ತಿತ್ತು. ಅದರ ಬಳಗದ ಇತರೇ ನರಿಗಳು ನೀನು ಭೇಟೆಯಾಡದಿದ್ದರೇನಂತೆ ನಾವು ನಿನಗೆ ಮಾಂಸಾಹಾರವನ್ನು ತಂದು ಕೊಡುತ್ತೇವೆ ಎಂದು ಹೇಳಿದರೂ ಸಹ ಅದು ಮಾಂಸವನ್ನು ಸ್ವೀಕರಿಸಲು ಒಪ್ಪಲಿಲ್ಲ. ಮಾಂಸಾಹಾರವನ್ನು ಮುಟ್ಟದೇ ಇರುವ ತನ್ನ ದೃಢ ನಿಶ್ಚಯದಿಂದ ಅದು ವಿಮುಖನಾಗಲಿಲ್ಲ. ನರಿಯ ಈ ಗುಣದಿಂದಾಗಿ ಅದರ ಹೆಸರು ಆ ವನದಲ್ಲೆಲ್ಲಾ ಪ್ರಖ್ಯಾತವಾಯಿತು."
    "ಒಂದು ವ್ಯಾಘ್ರವು ಅದರ ಸಂಗತಿಯನ್ನು ಕೇಳಿ, ಆಹ್ಞಾ! ಒಂದು ವೇಳೆ ಇಂತಹವನು ನನಗೆ ಮಂತ್ರಿಯಾಗಿದ್ದರೆ ಒಳಿತೆಂದು ಭಾವಿಸಿತು. ಅದರಂತೆ ಆ ಹುಲಿಯು ಆ ನರಿಯ ಬಳಿಗೆ ಹೋಗಿ ತನ್ನ ಮಂತ್ರಿಯಾಗಿರುವಂತೆ ವಿನಂತಿಸಿಕೊಂಡಿತು. ಆದರೆ ಆ ನರಿಗೆ ಹುಲಿಯ ಹತ್ತಿರ ಮಂತ್ರಿಯಾಗಿರುವುದಕ್ಕೆ ಸುತರಾಂ ಇಷ್ಟವಿರಲಿಲ್ಲ. ಏಕೆಂದರೆ ಹುಲಿ ಮಾಂಸಹಾರಿ ಪ್ರಾಣಿ, ಆದರೆ ತಾನೋ ಅಹಿಂಸಾವಾದಿ, ಮೇಲಾಗಿ ಸಸ್ಯಾಹಾರಿ. ಹುಲಿಯೇನೋ ದುಷ್ಟಬುದ್ಧಿಯುಳ್ಳದ್ದು, ಅದರ ಮುಂದೆ ತನ್ನ ಸದ್ಭುದ್ಧಿಗೆ ಬೆಲೆಯಾದರೂ ಏನಿದ್ದೀತು? ಮೇಲಾಗಿ ಆ ಹುಲಿಯ ಬಳಿ ಕೆಲಸ ಮಾಡುವ ಇತರೇ ಪ್ರಾಣಿಗಳು ನನ್ನ ಸದಾಚಾರವನ್ನು ಸಹಿಸಿಕೊಳ್ಳಬಲ್ಲವೇ? ಅವಕ್ಕೆ ನನ್ನನ್ನು ನೋಡಿ ಕಣ್ಣು ಕೆಂಪಾಗದೆ ಇರುತ್ತದೆಯೇ? ಅವಕ್ಕೆ ನನ್ನ ಮೇಲೆ ಹೊಟ್ಟೆಯುರಿಯುವುದಿಲ್ಲವೇ? ಅದಕ್ಕಾಗಿ ಅವು ನನಗೂ ಹಾಗೂ ಹುಲಿಯ ಮಧ್ಯೆ ಮಿತ್ರಭೇದವನ್ನು ಹುಟ್ಟುಹಾಕಬಹುದಲ್ಲವೇ? ಆದ್ದರಿಂದ ಆ ನರಿಯು ವ್ಯಾಘ್ರರಾಜನ ಬಳಿಯಲ್ಲಿ, "ಶಾರ್ದೂಲ ಮಹಾಪ್ರಭು! ನಾನು ನಿಮ್ಮ ಮಂತ್ರಿಯಾಗೇನೋ ಇರುತ್ತೇನೆ. ಆದರೆ ನೀನು ಚಾಡಿಕೋರರ ಮಾತುಗಳನ್ನು ಕೇಳಿ ನನಗೆ ಅಪಕಾರವನ್ನು ಮಾಡಬಹುದೆನ್ನುವ ಭಯವು ನನ್ನನ್ನು ಕಾಡುತ್ತಿದೆ. ಅದರಿಂದ ನನ್ನ ಜೀವಕ್ಕೇ ಸಂಚಕಾರ ಬರಬಹುದು. ನನ್ನ ಮಾತನ್ನು ನೀನು ಒಪ್ಪಿ ಭಾಷೆ ಕೊಡುವುದಾದರೆ ಮಾತ್ರ ನಾನು ನಿನ್ನ ಬಳಿ ಮಂತ್ರಿಯಾಗಿರುತ್ತೇನೆ" ಎಂದು ಹೇಳಿತು. ಅದಕ್ಕೆ ಹುಲಿಯು ಅಂಗೀಕರಿಸಿ ಅದನ್ನು ತನ್ನ ಮಂತ್ರಿಯಾಗಿ ನೇಮಿಸಿಕೊಂಡಿತು."
      "ನರಿ ಈಗ ಮಂತ್ರಿ. ನರಿ ಅಂದರೆ ಸಾಮಾನ್ಯವಾದ ನರಿಯಲ್ಲ ಅದು. ಹೀಗೆ ಸದಾಚಾರ ಸಂಪನ್ನವಾದ ನರಿ ಇರುತ್ತದೆ ಎಂದು ಯಾರು ತಾನೇ ಊಹಿಸಬಲ್ಲರು? ಹೀಗೆ ನರಿಯು ಹುಲಿಗೆ ಮಂತ್ರಿಯಾಗಿ ಅದಕ್ಕೆ ಸೂಕ್ತ ಸಲಹೆ ಸಹಕಾರಗಳನ್ನು ಕೊಡುತ್ತಿದ್ದಾಗ ಸಹಜವಾಗಿಯೇ ಇತರ ಪ್ರಾಣಿಗಳಿಗೆ ಕಣ್ಕಿಸುರಾಯಿತು. ಈ ನರಿ ಏನು, ಈಗ ಹೊಸದಾಗಿ ಸೇರಿಕೊಂಡು ಹುಲಿಗೆ ಆಪ್ತ ಸಮಾಲೋಚಕನಾಗುವುದೆಂದರೇನು? ಈ ವಿಷಯವನ್ನು ಆ ಪ್ರಾಣಿಗಳಿಗೆ ಜೀರ್ಣಿಸಿಕೊಳ್ಳಲಾಗಲಿಲ್ಲ. ಆ ಪರಿಸ್ಥಿತಿಯನ್ನು ಅಡವಿಯಲ್ಲಿದ್ದ ಇತರೇ ವೃದ್ಧ ಜಂಬೂಕಗಳು, ಕ್ರುದ್ಧ ಗಾರ್ದಭ, ಭಲ್ಲೂಕಗಳು, ಎಲ್ಲವೂ ಸೇರಿಕೊಂಡು ಆ ನರಿಯನ್ನು ತೊಲಗಿಸುವ ಸಂಚನ್ನು ರೂಪಿಸಿದವು. ಒಂದು ದಿನ  ನರಿ ವಿರೋಧಿ ಪಾಳಯದ ಪ್ರಾಣಿಗಳು, ಹುಲಿಗಾಗಿ ಮೀಸಲಿರಿಸಿದ್ದ ಮಾಂಸವನ್ನು ಅದರ ಗುಹೆಯಿಂದ ಕದ್ದೊಯ್ದು ನರಿಯು ವಾಸವಾಗಿದ್ದ ಪೊಟರೆಯೊಳಗೆ ಬಚ್ಚಿಟ್ಟವು. ಹುಲಿಯ ಆಹಾರವನ್ನು ಸಂಗ್ರಹಿಸಿಡುತ್ತಿದ್ದ ಉಗ್ರಾಣದ ಹೊಣೆಗಾರಿಕೆಯು ಆ ಸಾದು ನರಿಯದೇ ಆಗಿತ್ತು. ಈ ನರಿ ಮಂತ್ರಿ ಬಂದು ಉಗ್ರಾಣದಲ್ಲಿ ನೋಡಿದಾಗ ಅದರಲ್ಲಿ ಮಾಂಸವು ನಾಪತ್ತೆಯಾಗಿತ್ತು. ನರಿಯು ಕೂಡಲೇ ವ್ಯಾಘ್ರರಾಜನಿಗೆ ವರದಿ ಒಪ್ಪಿಸಿತು. ಇದಕ್ಕೆ ಕಾರಣವನ್ನು ಕಂಡು ಹಿಡಿಯಲು ವ್ಯಾಘ್ರರಾಜನು ಆದೇಶಿಸಿದನು. ಅದರ ಆಣತಿಯಂತೆ ಎಲ್ಲಾ ಭೃತ್ಯ ಪ್ರಾಣಿಗಳು ಸಾಲಾಗಿ ನಿಂತವು. ಒಬ್ಬೊಬ್ಬರನ್ನಾಗಿ ವಿಚಾರಿಸಲಾಗಿ ಅವೆಲ್ಲವೂ ತಮಗೆ ಮಾಂಸದ ಸಂಗತಿ ಏನೇನೂ ತಿಳಿಯದೆಂದು ಉತ್ತರಿಸಿದವು. ಹುಲಿರಾಜ ಮೊದಲೇ ಹಸಿವೆಯಿಂದ ಕಂಗಾಲಾಗಿದ್ದ ಈಗ ಅವನ ಮುಖದಲ್ಲಿ ಕೋಪವು ಪ್ರಕಟಗೊಂಡು ತನ್ನ ಆಹಾರವನ್ನು ಕೂಡಲೇ ಹುಡುಕಿ ತರುವಂತೆ ಮಂತ್ರಿಯಾಗಿದ್ದ ನರಿಗೆ ಕಟ್ಟಪ್ಪಣೆ ಮಾಡಿದ. 
     "ಹೀಗೆ ನರಿಯು ಆಹಾರವನ್ನು ಪತ್ತೆ ಮಾಡಿಕೊಂಡು ಬರಲು ಹೋದಾಗ, ಈ ಸಮಯವನ್ನು ಉಪಯೋಗಿಸಿಕೊಂಡು ರಾಜನಿಗೆ ನರಿಯು ಆ ಆಹಾರವನ್ನು ತನ್ನ ಪೊಟರೆಯಲ್ಲಿ ಇಟ್ಟುಕೊಂಡಿರುವುದಾಗಿ ಚಾಡಿ ಹೇಳಿದವು. ನಾನು ಮಾಂಸವನ್ನು ಸೇವಿಸುವುದಿಲ್ಲ ಎಂದು ಹೇಳುತ್ತ, ಅಹಿಂಸಾ ವ್ರತವನ್ನು ಮಾಡುತ್ತೇನೆಂದು ನಟಿಸುತ್ತ ಆ ಕಪಟ ನರಿಯು ಮಾಡುತ್ತಿರುವ ಮೋಸವಿದು ಎಂದು ಅದರ ಕಿವಿಯನ್ನು ಊದಿದವು. ಇದರಿಂದ ಕೆರಳಿದ ಹುಲಿಯು ಆ ನರಿಯನ್ನು ಕೂಡಲೇ ಹಿಡಿದು ತಂದು ಅದನ್ನು ವಧಿಸುವಂತೆ ಆಜ್ಞಾಪಿಸಿತು."
      "ಆ ಹುಲಿಗೆ ವೃದ್ಧಳಾದ ತಾಯಿಯಿದ್ದಳು. ಆಕೆ ಹಿರಿಯಳು, ಅನುಭವಸ್ಥಳು. ಆಕೆ ಹೇಳಿದಳು, "ಮಗೂ, ನೋಡಿದರೆ ನನಗೇನೋ ಇದರಲ್ಲಿ ಮೋಸವಿದೆ ಎಂದು ಅನಿಸುತ್ತಿದೆ. ಆ ನರಿ ಬಹಳ ಒಳ್ಳೆಯದು, ಏಕೆಂದರೆ ಅದರ ಸಂಗತಿಯನ್ನು ನಾನು ಸಹ ಗಮನಿಸುತ್ತಿದ್ದೇನೆ, ಆದ್ದರಿಂದ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡ" ಎಂದು ಮಗನಾದ ವ್ಯಾಘ್ರರಾಜನಿಗೆ ಹಿತಬೋಧನೆ ಮಾಡಿದಳು".
       "ಅದನ್ನು ಸಾಮಾನ್ಯ ನರಿಯೆಂದು ನಾನು ಭಾವಿಸುವುದಿಲ್ಲ. ಅದು ನರಿ ಜಾತಿಯಲ್ಲಿ ಹುಟ್ಟಿರಬಹುದು, ಅದರ ವರ್ತನೆಯನ್ನು ಗಮನಿಸಿದರೆ ಅದಕ್ಕೆ ನರಿಯ ಯಾವ ಲಕ್ಷಣಗಳೂ ಇಲ್ಲ. ಅದು ಮೇಧಾವಿ, ಸಜ್ಜನ ಮತ್ತು ಎಣೆಯಿಲ್ಲದ ರಾಜಭಕ್ತಿಯುಳ್ಳದ್ದು. ಒಳ್ಳೆಯವರನ್ನು ನೋಡಿದರೆ, ಕೆಟ್ಟವರಿಗೆ ಅಸೂಯೆಯು ಉಂಟಾಗುತ್ತದೆ. ಅಂದವಾಗಿರುವವರನ್ನು ನೋಡಿದರೆ ಕುರೂಪಿಗಳಿಗೆ ದ್ವೇಷ ಉಂಟಾಗುತ್ತದೆ. ಬಲವಂತರನ್ನು ನೋಡಿದಾಗ ಬಲಹೀನರಿಗೆ ಭಯವುಂಟಾಗುತ್ತದೆ. ಆದ್ದರಿಂದ ದುಷ್ಟರು ತಮ್ಮ ಕುತ್ಸಿತ ಬುದ್ಧಿಯನ್ನು ಪ್ರದರ್ಶಿಸುತ್ತಾರೆ. ನೀನು ಏನೇ ಕೆಲಸ ಮಾಡಿದರೂ ಸಹ ಆಲೋಚಿಸಿ ನಿರ್ಣಯಗಳನ್ನು ತೆಗೆದುಕೊ."
        "ತಾಯಿ ಹೇಳಿದ ಮಾತುಗಳು ಹುಲಿಯ ಹೃದಯಕ್ಕೆ ನಾಟಿದವು. ಅದು ನರಿಯನ್ನು ಬರಹೇಳಿ, ಅದನ್ನು ಎದೆಗವಚಿಕೊಂಡು ನಡೆದ ಸಂಗತಿಗಳನ್ನು ಮರೆತು ಬಿಡುವಂತೆ ವಿನಂತಿಸಿಕೊಂಡಿತು. ಆದರೆ ಆ ನರಿ, "ರಾಜಾ ನೀನು ಚಾಡಿ ಮಾತುಗಳನ್ನು ಕೇಳುವುದಿಲ್ಲವೆಂದು ಈ ಮುಂಚೆ ಭಾಷೆಯಿತ್ತಿದ್ದೆ. ಅದನ್ನು ಮರೆತು ಚಾಡಿ ಮಾತುಗಳನ್ನು ಕೇಳಿ ನನ್ನನ್ನು ಅನುಮಾನಿಸಿದ್ದಲ್ಲದೆ ನನ್ನನ್ನು ಅಂತ್ಯಗೊಳಿಸಲು ಆದೇಶಿಸಿದೆ. ಇನ್ನು ನಿನ್ನ ಸಹವಾಸ ನನಗೆ ಸಾಕು" ಎಂದು ಹೇಳಿ ಆ ನರಿ ಅಡವಿಗೆ ಹೊರಟು ಹೋಗಿ ತನ್ನ ಸಾಧನೆಗಳಲ್ಲಿ ಮುಳುಗಿತು."
ರಾಜ್ಯಾಡಳಿತವನ್ನು ನಿರ್ವಹಿಸುತ್ತಿರುವವರು ಕೂಡಾ ಬಹಳಷ್ಟು ಬಾರಿ ವ್ಯಾಘ್ರ ರಾಜನಂತೆಯೇ ವಂದಿಮಾಗಧರ ನಯವಾದ ವಂಚನೆಯ ಮಾತುಗಳಿಗೆ ಮಾರುಹೋಗಿ ತಮ್ಮ ವಿವೇಚನೆಯನ್ನು ಕಳೆದುಕೊಂಡು ದೇಶದಲ್ಲಿನ ಉತ್ತಮವಾದ ವ್ಯಕ್ತಿಗಳ ಹಾಗು ಉನ್ನತವಾದ ಧ್ಯೇಯಗಳನ್ನುಳ್ಳ ಸಂಸ್ಥೆಗಳನ್ನು ಅನುಮಾನಿಸಿ, ಅವಮಾನ ಮಾಡುವ ಕಾರ್ಯದಲ್ಲಿ ತೊಡಗುತ್ತಾರೆ. ಆದ್ದರಿಂದ ಆಡಳಿತದ ಚುಕ್ಕಾಣಿ ಹಿಡಿದವರು, ಭೀಷ್ಮ ಪಿತಾಮಹನು ಹೇಳಿದ ಈ ವ್ಯಾಘ್ರಗೋಮಾಯ ಸಂವಾದನ್ನು ಮನನ ಮಾಡಿಕೊಳ್ಳುವುದು ಶ್ರೇಯಸ್ಕರವಾಗಿರುತ್ತದೆ. 
  
ಚಿತ್ರಕೃಪೆ:  ಗೂಗಲೇಶ್ವರ
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
 
ಹಿಂದಿನ ಲೇಖನ ಭಾಗ - ೬ "ಭೀಷ್ಮ ಯುಧಿಷ್ಠಿರ ಸಂವಾದ: ಕಾಲಕವೃಕ್ಷ ಮುನಿಯ ವೃತ್ತಾಂತವು" ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AC-%E0%B2%AD...
 

Rating
No votes yet

Comments

Submitted by makara Tue, 09/25/2018 - 08:07

ಈ ಲೇಖನದ ಮುಂದಿನ ಭಾಗ - ೮ ಭೀಷ್ಮ ಯುಧಿಷ್ಠಿರ ಸಂವಾದ: ಕರ ಸಂಗ್ರಹದ ವಿಧಾನ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AE-%E0%B2%AD...