ಮತದಾರರ ಗುರುತಿನ ಚೀಟಿ

ಮತದಾರರ ಗುರುತಿನ ಚೀಟಿ

ನಾವು ಮನೆ ಬದಲಾಯಿಸಿದ್ದರಿಂದ, ನಮ್ಮ ಮತದಾರರ ಗುರುತಿನ ಚೀಟಿಯಲ್ಲಿ, ತಿದ್ದುಪಡಿ ಮಾಡಬೇಕಿತ್ತು. ಅದೂ ಅಲ್ಲದೆ ಅದರಲ್ಲಿ ತುಂಬಾ ತಪ್ಪುಗಳಿದ್ದವು. ಎಲ್ಲವನ್ನೂ ಒಟ್ಟಿಗೆ ಸರಿಪಡಿಸಬಹುದೆಂದುಕೊಂಡಿದ್ದೆವು. ಅದಕ್ಕಾಗೆ ಅವಶ್ಯಕವಾದ ಅರ್ಜಿಗಳನ್ನು ತುಂಬಿದೆವು. ಇಲ್ಲೇ ಮನೆಯ ಹತ್ತಿರವೇ, ಚುನಾವಣೆಗಾಗಿ ವಿಶೇಷ ಕಛೇರಿ, ಗಣಕ ಯಂತ್ರದ ಸಮೇತ ತೆಗೆದಿದ್ದಾರೆಂದೂ, ನಮ್ಮ ಚೀಟಿಗಳನ್ನು ತಿದ್ದಿಸಬೇಕೆಂದು, ನನ್ನವರು ಹೇಳಿದಾಗ, ನಾನು ಆ ಎಲ್ಲಾ ಕಾಗದಗಳ ಸಮೇತ ಅಲ್ಲಿಗೆ ಹೋದೆ. ಅಲ್ಲಿ ಆಗಲೇ ಮದ್ರಿಸಿದ್ದ ಮಾಹಿತಿಯಲ್ಲಿ, ನಮ್ಮ ಹೆಸರು ನಾನೇ ಹುಡುಕಿ, ಅಲ್ಲಿದ್ದ ಆ ಹುಡುಗಿಗೆ ತೋರಿಸಿದೆ ಮತ್ತು ನಮ್ಮ ಹಳೆಯ ಚೀಟಿಯಲ್ಲಿದ್ದ ತಪ್ಪುಗಳನ್ನೂ, ಅದಕ್ಕಾಗಿ ತುಂಬಿಸಿ ಕೊಟ್ಟ ಅರ್ಜಿಯ ಪ್ರತಿಗಳನ್ನೂ ಕೊಟ್ಟೆ. ಆದರೆ ನನ್ನ ಆಶ್ಚರ್ಯಕ್ಕೆ, ಆ ಹುಡುಗಿ, ಆಂಟೀ... ಇಲ್ಲಿರುವ ಗಣಕ ಯಂತ್ರದಲ್ಲಿ, ನಾನು ತಿದ್ದುಪಡಿ ಮಾಡುತ್ತೇನೆ ಆದರೆ ಅದು ಬರಿಯ ಆಂಗ್ಲದಲ್ಲಿರುವ ತಪ್ಪುಗಳನ್ನು ಮಾತ್ರ ತಿದ್ದುತ್ತದೆ, ಅದರ ಕೆಳಗೆ ಕನ್ನಡದಲ್ಲಿರುವ ಅದೇ ತಪ್ಪುಗಳನ್ನು ತಿದ್ದುವುದಿಲ್ಲ ಎಂದಳು. ನಾನು ಸದ್ಯ, ಒಂದು ಭಾಷೆಯಲ್ಲಾದರೂ, ತಿದ್ದಿಕೊಡು ಎಂದೆ ಏಕೆಂದರೆ ಅದರಲ್ಲಿ ನನ್ನವರ ತಂದೆಯ ಹೆಸರೇ ಬದಲಾಗಿ ಬಿಟ್ಟಿತ್ತು. ಅವರಿಗೇ ೫೦ ವರ್ಷ ಹತ್ತಿರ ಬಂದಿರುವಾಗ, ಹಠಾತ್ತಾಗಿ ಅವರ ತಂದೆ ಯಾರೋ "ರಾಮಕೃಷ್ಣ" ಆಗಿಬಿಟ್ಟಿದ್ದರು.:-) ಅವರ ವಯಸ್ಸು ೨೧ ವರ್ಷ ಮತ್ತು ನನ್ನ ಮಗನ ಚೀಟಿಯಲ್ಲಿ ಅವನ ವಯಸ್ಸು ೨೩ ವರ್ಷ ! ೨೧ ವರ್ಷದ ಅಪ್ಪನಿಗೆ, ೨೩ ವರ್ಷದ ಮಗ ! :-) ನನ್ನ ಚೀಟಿಯಲ್ಲಿ, ನನ್ನವರ ಹೆಸರೇ ಬೇರೇ ! ವಿಳಾಸವಂತೂ ಯಾವ ಅಂಚೆ ಕಛೇರಿಯವರೂ ಕಂಡು ಹಿಡಿಯಲಾರರು ಹಾಗಿತ್ತು ! ಮತ್ತು, ಅವರವರ ಚೀಟಿಯಲ್ಲಿರುವ ತಿದ್ದುಪಡಿಗೆ, ಅವರೇ ಹೋಗಬೇಕೆಂದು ಹೇಳಿದಾಗ, ಸರಿ, ನಾನು ಬಂದಿರುವುದರಿಂದ, ನನ್ನದಾದರೂ ಮಾಡಿಕೊಡಮ್ಮ ಎಂದೆ.... ಎಲ್ಲಾ ತಿದ್ದುಪಡಿ ಗಣಕ ಯಂತ್ರದಲ್ಲಿ ಮಾಡಿ ನನ್ನ ಫೊಟೋ ತೆಗೆದುದಾದ ಮೇಲೆ, ಚೀಟಿಯನ್ನು ಮುದ್ರಿಸುವುದಿಲ್ಲವೆಂದು ಮುಷ್ಕರ ಹೂಡಿತ್ತು, ಗಣಕ ಯಂತ್ರ. ಇಲ್ಲಿ ಆಗೋಲ್ಲ, ನೀವು ಬನಶಂಕರಿ ೨ನೇ ಹಂತದ ಮುಖ್ಯ ಕಛೇರಿಗೇ ಹೋಗಿ ಎಂದು ಬಿಟ್ಟಳು, ಆ ಅಸಹಾಯಕ ಹುಡುಗಿ.

ಸರಿ ಮತ್ತೊಂದು ದಿನ ನಾವಿಬ್ಬರೂ ಬನಶಂಕರಿಗೆ ಹೋದರೆ, ಅಲ್ಲಿ ಹನುಮಂತನ ಬಾಲದ ತರಹದ ಸರತಿ ಸಾಲು... ಹೋದ ದಾರಿಗೆ ಸುಂಕವಿಲ್ಲ ಅಂತ ವಾಪಸ್ಸು ಬಂದೆವು. ಮರುದಿನ ಬೆಳಿಗ್ಗೆಯೇ ಹೋಗಿ, ನಮ್ಮ ಕಾರಿನ ಚಾಲಕ, ಆ ಅರ್ಜಿಗಳನ್ನು ಕೊಟ್ಟಿದ್ದಕ್ಕಿದ್ದ ರಸೀತಿಯನ್ನು, ಅಲ್ಲಿಯ ಖಾತೆಯಲ್ಲಿ ಬರೆಸಿಕೊಂಡು ಬಂದ ನಂತರ, ನಾವು ಸಾಯಂಕಾಲ ಹೋಗಿ ಇನ್ನೊಂದು ಸರತಿಯಲ್ಲಿ ಒಂದು ಘಂಟೆ ಕಾಲ ನಿಂತ ನಂತರ, ನಮ್ಮ ಸರತಿ ಬಂದು, ಒಳಗೆ ಹೋಗಿ, ಮತ್ತೆ ಈ ಎಲ್ಲಾ ತಿದ್ದುಪಡಿಗಳ ಬಗ್ಗೆ ಮಾತಾಡಿದಾಗ, ಅಲ್ಲಿಯ ಗಣಕ ಯಂತ್ರದ ಮುಂದೆ ಕುಳಿತಿದ್ದ, ಹುಡುಗ, ಇಷ್ಟವಿಲ್ಲದೇ, ಅರೆ ಮನಸ್ಸಿನಿಂದಲೇ, ನೀವೇ ಹೇಳಿ, ಬದಲಾವಣೆಗಳು ಎಂದು, ತಿದ್ದುಪಡಿ ಮಾಡಿದ. ನಾವೇ ನಮ್ಮ ಹೆಸರಿನ ಸ್ಪೆಲ್ಲಿಂಗ್ ಹೇಳಿದರೂ ಕೂಡ, ಅದರಲ್ಲಿ ಇನ್ನೂ ತಪ್ಪುಗಳಿವೆ. ಪಿನ್ ಕೋಡ್ ತಪ್ಪಿದೆ, ವಿಳಾಸ ತಪ್ಪಿದೆ..... ಸಧ್ಯ ನನ್ನವರ ತಂದೆಯ ಹೆಸರೂ, ನನ್ನ ಗಂಡನ ಹೆಸರೂ ತಿದ್ದುಪಡಿಯಾಗಿದ್ದು ಕಂಡು, ಅತ್ಯಂತ ಸಂತೋಷದಿಂದ ನಾವು ಧನ್ಯವಾದೆವೆಂದು ವಾಪಸ್ಸು ಬಂದೆವು.

ಈ ದಿನ ಮತ ಚಲಾಯಿಸುವಾಗ, ಯಾವುದೇ ತೊಂದರೆ ಆಗಲಿಲ್ಲ. ಆದರೆ ನನ್ನ ಜೀವನದಲ್ಲೇ ಮೊದಲ ಬಾರಿಗೆ, ಕಮಲದ ಗುರುತಿನ ಪಕ್ಷದವರು, ಮತ ಚಲಾಯಿಸಿದಿರಾ ಎಂದು ಮನೆ ಮನೆಗೆ ಬಂದು ಕೇಳಿ, ಹ್ಹಿ ಹ್ಹಿ ಹ್ಹಿ... ನಮಸ್ಕಾರ ಎಂದು ಹೇಳುವುದ ಕಂಡು, ಅಚ್ಚರಿಯೋ ಅಚ್ಚರಿ ಆಯಿತೆನಗೆ...!!!!:-)

Rating
No votes yet