ಮದುಮಗಳೇ ಮೆಹಂದಿ ಹಚ್ಚಿಕೊಳ್ಳ ಬೇಡ
ಕಳೆದ ತಿಂಗಳು ನನ್ನ ತಂಗಿಯ ಮಗಳ ಮದುವೆಗೆ ಹೋಗಿದ್ದೆ. ಅದಾದ ಹದಿನೈದು ದಿನಗಳ ನಂತರ ಏನೋ ಕಾರಣಕ್ಕೆ ತಂಗಿಯ ಮನೆಗೆ ಫೋನ್ ಮಾಡಿದೆ. ಆ ಕಡೆಗೆ ತಂಗಿಯ ಮಗಳೇ ಹಲೋ ಎಂದಳು. ನನಗೆ ಆಶ್ಚರ್ಯವಾಯಿತು. ನನ್ನ ಲೆಕ್ಕಾಚಾರದಲ್ಲಿ ಅವಳು ಆಗಲೇ ಗಂಡನ ಜೊತೆಗೆ ಇಂಗ್ಲಂಡಿನಲ್ಲಿ ಇರಬೇಕಾಗಿತ್ತು. ಯಾಕೇ , ಕೈ ಹಿಡಿದ ಗಂಡನ ಜೊತೆಗೆ ಇಂಗ್ಲಂಡಿಗೆ ನೀ ಹೋಗಲಿಲ್ಲ? ಕೇಳಿದೆ. ಅದಕ್ಕವಳು ಮಾವಾ ಕೈ ಕೈ ಕೊಟ್ಟಿತು ಎಂದಳು. ಏನು ಎತ್ತ ಎಂದು ವಿಚಾರಿಸಿದಾಗ ತಿಳಿದ ಬಂದ ಮಾಹಿತಿಯನ್ನು ಮಹಿಳೆಯರಿಗಾಗಿ ನೀಡುತ್ತಿದೇನೆ
ಇಂಗ್ಲಂಡಿಗೆ ಹೋಗುವಾಗ ವೀಸಾ ಪಡೆಯುವಾಗ ಫಿಂಗರ್ ಪ್ರಿಂಟನ್ನು ತೆಗೆದು ಕೊಳ್ಳುತ್ತಾರೆ. (ಭಾರತೀಯರು ಕಳ್ಳರು ಎಂಬ ಭಾವನೆಯೋ? -ಗೊತ್ತಿಲ್ಲ.) ಕೇವಲ ಹೆಬ್ಬಟ್ಟಲ್ಲ. ಸಂಪೂರ್ಣ ಅಂಗೈಯನ್ನು ಸ್ಕ್ಯಾನ್ ಮಾಡುತ್ತಾರೆ. ಅಂಗೈಯಲ್ಲಿ ಮೆಹಂದಿ ಇದ್ದರೆ ಸ್ಕ್ಯಾನ್ ಸಾಧ್ಯವಿಲ್ಲ. ಆದ್ದರಿಂದ ಅಗೈಯಿಂದ ಮೆಹಂದಿ ಸಂಪೂರ್ಣವಾಗಿ ಮಾಯವಾಗುವವರೆಗೂ ವೀಸಾ ಅಪ್ಲಿಕೇಶನ್ನು ಸ್ವೀಕರಿಸಲಾಗುವುದಿಲ್ಲ. ಹೀಗಾಗಿ ಗಂಡನ ಮನೆಗೆ ಹೋಗಲು ಎರಡು ಮೂರು ತಿಂಗಳಗಳು ತಡವಾಗ ಬಹುದು. ಅಲ್ಲಿಯ ವರೆಗೂ ವಿರಹಾ ಆಆಆಅ ನೂರು ನೂರು ತರಹಾ ಆಆಆ ಎಂದು ಹಾಡುವುದೊಂದೇ ಗತಿ. ಜೊತೆಗೆ ಗಂಡನನ್ನು ಮೋಹ ಪಾಶದಲ್ಲಿ ಕೆಡವಲು ಹಚ್ಚಿಕೊಂಡ ಮೆಹಂದಿಯೇ ಗಂಡನನ್ನು ದೂರಮಾಡಿದ್ದಕ್ಕೆ ಮೆಹಂದಿಗೆ ಹಿಡಿ ಶಾಪ ಹಾಕುತ್ತ ದಿನ ದೂಡಬೇಕು.