ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!

ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!

ಮಹಿಳಾ ಮೀಸಲಾತಿ ಇನ್ನೂ ಅನಿವಾರ್ಯವೇ? ಹೀಗೊಂದು ಪ್ರಶ್ನೆ ನನ್ನ ತಲೆಯಲ್ಲಿ ಗಿರಕಿ ಹೊಡೆಯಲು ಪ್ರಾರಂಭಿಸಿದ್ದು ಮೊನ್ನೆ ಬಸಲ್ಲಿ ಕುಳಿತಿದ್ದ ನನ್ನನ್ನು ಇದು ಲೇಡೀಸ್ ಸೀಟು ಸಾರ್ ಎಂದು ಮಹಿಳೆಯೊಬ್ಬಳು ಎಬ್ಬಿಸಿದ ನಂತರ!ಥಟ್ಟನೆ ಅಕ್ಕ ಗುನುಗುತ್ತಿದ್ದ ಮಹಿಳೆಗೆ ಎಷ್ಟೇ ಮೀಸಲಾತಿ ಕೊಟ್ಟರೂ ಅತ್ತೆ ಮನೆಯಲ್ಲಿ ದಬ್ಬಳಿಕೆ ಸಹಿಸಿಕೊಂಡು ಇರುವ ಮಹಿಳೆಗೆ ಆ ಸಂಕೋಲೆಯಿಂದ ಹೊರಬಂದು ಮೀಸಲಾತಿ ಉಪಯೋಗಿಸಿಕೊಳ್ಳುವುದು ತುಂಬಾನೇ ಕಷ್ಟ ಅನ್ನೋ ಡೈಲಾಗ್ ನೆನಪಾಯಿತು!ಅತ್ತೆ ಮನೆಯಲ್ಲಿ ಸಂಕಷ್ಟ ಇರೋ ಮಹಿಳೆಗೆ ಮೀಸಲಾತಿ ಉಪಯೋಗ ಆಗೋದು ಬಸ್ಸಿನ ಸೀಟಲ್ಲಿ ಮಾತ್ರ ಅನ್ನಿಸಿತು!
ಅಂದಹಾಗೇ ಕಲಿಯುಗವಪ್ಪಾ ಅಂತಾ ಕರೆಯುವ ಈ ಕಾಲದಲ್ಲೂ ಮಹಿಳೆಗೆ ಮೀಸಲಾತಿ ಬೇಕಾ? ಮೀಸಲಾತಿ ಅನ್ನೋ ಪದದ ಅರ್ಥವೇ ಕೆಳವರ್ಗದ ಜನರನ್ನು ಮೇಲಕ್ಕೆ ತರುವುದಂತೆ! ಮಹಿಳೆ ಕೆಳವರ್ಗಕ್ಕೆ ಸೇರಿದವಳಾ? ಒಂದು ಕಾಲದಲ್ಲಿ ಸೌಟು ಹಿಡಿದು ಅಡುಗೆ ಮನೆಯಲ್ಲಿ ಕುಳಿತ್ತಿದ್ದ ಮಹಿಳೆ ಇಂದು ಎಲ್ಲಾ ರಂಗಕ್ಕೂ ಕಾಲಿಟ್ಟಿದ್ದಾಳೆ. ಯಾವ ರಂಗದಲ್ಲೂ ತಾನು ಪುರುಷನಿಗಿಂತ ಕಡಿಮೆಯಲ್ಲ ಅನ್ನೋದನ್ನ ಸಾಬೀತು ಪಡಿಸಿದ್ದಾಳೆ. ಎಲ್ಲದರಲ್ಲೂ ಅಂದರೆ ಕುಡಿತ, ಸಿಗರೇಟು ಸೇದುವುದು, ಕ್ಲಬ್‌ಗೆ ಹೋಗುವುದರಿಂದ ಹಿಡಿದು ಐ.ಪಿ.ಎಸ್ ಅಧಿಕಾರಿಯಾಗುವವರೆಗೂ! ಹೀಗಿರುವಾಗ ನಾವಿನ್ನೂ ಆಕೆಯನ್ನು ಹಿಂದುಳಿದವಳು ಅಂತಾ ಟ್ರೀಟ್ ಮಾಡೋದು ಸರಿನಾ?!
ಒಂದು ಕಾಲದಲ್ಲಿ ಮಾವನ ಮನೆಯ ಕೂಪದಿಂದ ಹೊರಬರುತ್ತಿರಲ್ಲಿಲ್ಲ ಮಹಿಳೆ, ಗಂಡನನ್ನೇ ದೇವರು ಅಂತಾ ಆರಾಧಿಸುತ್ತಿದ್ದಳು. ಅವ ಎಂಥಾ ಗಂಡನಾದರೂ ಕೂಡಾ! ಆದರೆ ಇವತ್ತು ಆಕೆ ಆ ಕೂಪದಿಂದ ಹೊರಬಂದಿದ್ದಾಳೆ. ತನ್ನ ಹಕ್ಕುಗಳ ಕುರಿತಾಗಿ ಅರಿತುಕೊಳ್ಳುವಷ್ಟರ ಮಟ್ಟಿಗೆ ಬೆಳೆದುನಿಂತಿದ್ದಾಳೆ. ಗಂಡನ್ನ ಬಿಟ್ಟು ಕೂಡಾ ಇದೇ ಪ್ರಪಂಚದಲ್ಲಿ ಬದುಕಬಹುದು ಅನ್ನುವ ವಿಚಾರವೊಂದು ಅವಳಿಗೆ ಗೊತ್ತಾಗುವಷ್ಟರ ಮಟ್ಟಿಗೆ ಆಕೆ ಮುಂದಿವರೆದಿದ್ದಾಳೆ. ಇಂತಹ ಮಹಿಳೆಯನ್ನು ನಾವು ಇನ್ನೂ ಹಿಂದುಳಿದವಳು, ಮುಂದೆ ಬರಲು ಮೀಸಲಾತಿ ಬಯಸುವವಳು ಅಂತೆಲ್ಲಾ ಶೋಷಿಸುವುದು ಸರಿನಾ?
ಪ್ರತಿಭೆಯಿದ್ದು ಬೆಳೆಯುವ ತಾಕತ್ತಿರುವ ಮಹಿಳೆಗೆ ಮೀಸಲಾತಿಯ ಅಗತ್ಯವಿಲ್ಲ ಅನ್ನುವುದು ಮಹಿಳೆಯರೇ ಒಪ್ಪುತ್ತಾರೆ. ಇನ್ನೂ ಇವತ್ತಿಗೂ ಅತ್ತೆ ಮನೆ ಅಂಗಳದಲ್ಲಿ ಕೊಳೆಯುವ ಮಹಿಳೆಗೆ ಅಕ್ಕಾ ಹೇಳಿದ ಹಾಗೇ ಮೀಸಲಾತಿ ಕೊಟ್ಟರೂ ಪ್ರಯೋಜನವಿಲ್ಲ. ಒಟ್ಟಲ್ಲಿ ಹೇಳೋದಾದರೆ ಸ್ವಾಭಿಮಾನಿ ಅನ್ನಿಸಿಕೊಂಡಿರುವ ಮಹಿಳೆಯರಿಗೆ ಮೀಸಲಾತಿ ಕೊಡುವುದು ಅವಮಾನವೀಯ ಸಂಗತಿ. ಯಾವುದೋ ಅನುಕಂಪದ ಮೇಲೆ ಕರುಣೆಯ ಮೇಲೆ ತಾನು ಮುಂದುಬರುವುದನ್ನು ಯಾರು ಬಯಸುತ್ತಾರೆ ಹೇಳಿ? ಎಲ್ಲರಿಗೂ ಒಂಚೂರಾದರೂ ಸ್ವಾಭಿಮಾನ ಇರತ್ತೆ ಅಲ್ವಾ?
ಮೀಸಲಾತಿಯ ಹಂಗಿಲ್ಲದೇ ಯಾರದ್ದು ಕರುಣೆ ಅನುಕಂಪಗಳಿಲ್ಲದೇ ಬೆಳೆದು ನಿಂತಿರುವ ಅನೇಕ ಮಹಿಳೆಯರು ನಮ್ಮ ನಡುವೆ ಇದ್ದಾರೆ.ಅಂತಹವರನ್ನು ಮುಂದಿಟ್ಟುಕೊಂಡು ಕೂಡಾ ನಾವು ಇನ್ನೂ ಮೀಸಲಾತಿ ದಾಸರಾಗಿರುವುದು ಎಷ್ಟು ಸಮಂಜಸ? ಪಕ್ಷದವರು ಟಿಕೇಟ್ ಕೊಡಲಿಲ್ಲ ಅಂತಾ ಕೂಗಾಡುವುದು ಎಷ್ಟು ಸರಿ? ಅನ್ನೋದನ್ನಾ ಮಹಿಳಾವಾದಿಗಳಾದ ಪ್ರಮೀಳನೇಸರ್ಗಿ, ಲಲಿತಾ ನಾಯಕ್‌ರಂತಹವರನ್ನೇ ಕೇಳಬೇಕು! ಅಂದಹಾಗೇ ಆ ಮಹಿಳಾ ವಾದಿಗಳೆಲ್ಲಾ ಬೆಳೆದಿದ್ದು ಮೀಸಲಾತಿಯಿಂದಾನೂ ಅಲ್ಲ. ಪ್ರತಿಭೆಯಿಂದಾನೂ ಅಲ್ಲ. ಮತ್ತ್ಯಾವುದರಿಂದ ಅಂತಾ ಪ್ರತ್ಯೇಕವಾಗಿ ಹೇಳೋದು ಬೇಡ ಅಲ್ವಾ?!

Rating
No votes yet

Comments