ಮಿಥ್ಯ ಬಸಿರು

ಮಿಥ್ಯ ಬಸಿರು

ಕಾವೇರಿ ಮಗುವನ್ನೇ ದಿಟ್ಟಿಸಿ ನೋಡುತ್ತಿದ್ದಳು. ಅವಳ ಕಣ್ಣಾಲಿಗಳು ತುಂಬಿ ಬಂದವು. ಹೀಗೊಂದು ಪರಿಸ್ಥಿತಿ ತನಗೆ ಒದಗಿ ಬರಬಹುದೆಂದು ಅವಳು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಮಗುವಿನ ಮುದ್ದಾದ ಮುಖ ನೋಡಿ ಇನ್ನಷ್ಟು ಸಂಕಟ ಹೆಚ್ಚಾಯಿತು.
ಚೆಕಪ್‍ಗೆಂದು ಡಾಕ್ಟರ್ ಲತಾ ಪ್ರಕಾಶ್ ಬಳಿ ಉಷಾ ಮತ್ತು ರಾಜೇಶ್ ಬಂದಾಗ ತಾನು ಅಲ್ಲೇ ಇದ್ದೆ. ರಾಜೇಶ್ ಹೇಳುತ್ತಿದ್ದ, “ಡಾಕ್ಟರ್ ನಮಗೆ ಮದುವೆ ಆಗಿ 15 ವರ್ಷಗಳೇ ಕಳೆದು ಹೋಗಿವೆ. ಅಪರೂಪಕ್ಕೆ ಈಗ ಮಗುವಾಗುವಂತಾಗಿದೆ.”
ಡಾಕ್ಟರ್, “ ಈಗ ಎಷ್ಟು ತಿಂಗಳು?” ಎಂದು ಕೇಳಿದರು.
ಉಷಾ, “ಎರಡು ತಿಂಗಳು ಅಂತ ಕಾಣತ್ತೆ.”
“ಸರಿ ಬನ್ನಿ ನೋಡೋಣ”
ಚೆಕ್ ಮಾಡಿ ಬಂದ ಮೇಲೆ ಡಾಕ್ಟರ್ ಏನೂ ಮಾತಾಡಲಿಲ್ಲ.
ಉಷಾ ಅವರನ್ನೇ ನೋಡುತ್ತಿದ್ದವಳು “ಹೇಳಿ ಡಾಕ್ಟರ್ ನಾನು ಗರ್ಭಿಣಿ ತಾನೇ?”
ಅವಳ ಪ್ರಶ್ನೆಯಲ್ಲಿದ್ದ ಆಸೆ, ಕಾತುರ ನೋಡಿ ಡಾಕ್ಟರ್‍ಗೆ ಏನು ಹೇಳಬೇಕೆಂದು ತೋಚಲಿಲ್ಲ. ನಂತರ ಸುಧಾರಿಸಿಕೊಂಡು , “ನೀವು ಒಂದು ನಿಮಿಷ ಹೊರಗಿರಿ, ನಾನು ಕರೆಯುತ್ತೇನೆ.” ಎಂದು ಡಾಕ್ಟರ್ ಹೇಳಿದಾಗ ಉಷಾ ಆತಂಕದಿಂದಲೇ ಎದ್ದು ಹೋದಳು.
ಅವರ ಬಳಿಯೇ ನಿಂತಿದ್ದ ನರ್ಸ್ ಕಾವೇರಿ ಕೇಳಿದಳು, “ಏನಾದರೂ ಪ್ರಾಬ್ಲಮ್ ಇದೆಯಾ ಡಾಕ್ಟರ್?”
ಡಾಕ್ಟರ್, “ಹೌದು. ಅವರು ಪ್ರಗ್ನೆಂಟ್ ಅಲ್ಲ. ಒಂದು ಸಲ ಸ್ಕ್ಯಾನ್ ಮಾಡಿ ನೋಡಬೇಕು ಹಾಗೆಯೇ ಪಿರೀಡ್ಸ್ ಮುಂದೆ ಹೋಗೋದಕ್ಕೆ ಯೂಟ್ರಸ್ನಲ್ಲಿ ಏನಾದರೂ ತೊಂದರೆ ಇದೆಯಾ ನೋಡಬೇಕು. ಎಲ್ಲಾ ಟೆಸ್ಟ್ಸ್ ಮಾಡಿ ರಿಪೊರ್ಟ್ಸ್ ತೊಗೊಂಡು ಬನ್ನಿ. ಈಗ ಇಲ್ಲಿ ಅವರನ್ನು ಕರೆಯಿರಿ. ಅವರಿಗೆ ಒಂದು ಇಂಜೆಕ್ಷನ್ ಕೊಡ್ತೀನಿ. ಪ್ರಗ್ನೆಂಟ್ ಆಗಿಲ್ಲದಿದ್ದರೆ ಇನ್ನೆರಡು ದಿನದಲ್ಲಿ ಪಿರೀಡ್ಸ್ ಬರತ್ತೆ. ನೋಡೋಣ let us wait and see. ಅವರಿಗೆ ಒಳಕ್ಕೆ ಬರಲು ಹೇಳಿ.”
ಅವಳನ್ನು ಒಳಗೆ ಕರೆದುಕೊಂಡು ಹೋದಾಗ ಉಷಾ ನರ್ಸ್‍ನ ಬಳಿ ಹೇಳಿದಳು, “ ಸಿಸ್ಟರ್ ನನಗೆ ಮಗುವಾಗಿಲ್ಲ ಎಂದು ನಮ್ಮ ಮನೆಯವರೆಲ್ಲಾ ಚುಚ್ಚು ಮಾತುಗಳಿಂದ ಸಾಕಷ್ಟು ನೋಯಿಸಿದ್ದಾರೆ. ಒಂದು ಆರೊಗ್ಯವಾದ ಮಗುವನ್ನು ಹೆತ್ತು ಅವರ ಮುಂದೆ ಹಿಡಿಯಬೇಕೆಂಬ ಆಸೆ ನನಗೆ. ಈಗ ನಾನು ಬಸುರಿ ಎಂದು ತಿಳಿದಮೇಲೂ ಕೂಡ ಇದು ನಿಜವೋ ಅಥವಾ ಮೆನೊಪಾಸ್ ಪ್ರಾಬ್ಲಮ್ಮೇನೋ ಎಂದು ವ್ಯಂಗ್ಯವಾಡಿದವರೂ ಇದ್ದಾರೆ. ಈಗ ನನಗೆ ಒಂದು ಆರೋಗ್ಯವಾದ ಮಗು ಆಗದಿದ್ದರೆ ನಾನು ಬದುಕೋದೇ ಇಲ್ಲ. ನಾನು ಮತ್ತು ನನ್ನ ಗಂಡ ತುಂಬಾ ಆಸೆ ಇಟ್ಟುಕೊಂಡಿದೀವಿ.” ಎಂದು ಅಳುತ್ತಾ ಹೇಳಿದಳು.
ನರ್ಸ್ ಕಾವೇರಿ ಅವಳ ಬೆನ್ನು ಸವರಿ ಡಾಕ್ಟರ್ ಹೇಳಿದ ಎಲ್ಲಾ ಟೆಸ್ಟ್ಗಳಿಗೂ ರಕ್ತ ಮತ್ತು ಯೂರಿನ್ ಪಡೆದುಕೊಂಡು ಅವಳನ್ನು ಡಾಕ್ಟರ್ ಬಳಿ ಕರೆದುಕೊಂಡು ಹೋದಳು. ಡಾಕ್ಟರ್ ಅವಳಿಗೆ ಒಂದು ಇಂಜೆಕ್ಷನ್ ಕೊಟ್ಟು ಇನ್ನೆರಡು ದಿನ ಬಿಟ್ಟು ಬರುವಂತೆ ಹೇಳಿದರು.
ಎರಡು ದಿನ ಬಿಟ್ಟು ಬಂದ ಉಷಾಳನ್ನು ನೋಡಿ ಅವರಿಗೆ ಕನಿಕರವೆನಿಸಿತು. ಆದರೂ ಇರುವ ವಿಚಾರ ಹೇಳಲೇಬೇಕಲ್ಲ. ನರ್ಸ್ ಕಾವೇರಿಯೂ ಅಲ್ಲೇ ಇದ್ದಳು.
ಡಾಕ್ಟರ್, “ನೋಡಮ್ಮ ಉಷಾ, ನೀನು ಧೈರ್ಯ ತಂದುಕೊಳ್ಳಬೇಕು. ನಿನ್ನ ರಿಪೋರ್ಟ್ಸ್ ಎಲ್ಲಾ ನೋಡಿದೆ. ನಿನಗೆ ಯಾವುದೇ ಪ್ರಾಬ್ಲಂ ಇಲ್ಲ. ಪೂರ್ಣ ಆರೋಗ್ಯವಂತಳು ನೀನು” ಎಂದರು.
ಉಷಾ, “ ಹಾಗಾದರೆ ನಾನು ಗರ್ಭವತಿಯಾಗಿದ್ದೇನೆಯೇ?”
ಅವಳ ಕಣ್ಣುಗಳು ಡಾಕ್ಟರನ್ನು ‘ಹೌದು ಎಂದು ಹೇಳಿ’ ಎಂದು ಬೇಡುತ್ತಿದ್ದವು.
ಡಾಕ್ಟರ್, “ಇಲ್ಲಮ್ಮ ನೀನು ಗರ್ಭಿಣಿಯೂ ಅಲ್ಲ. ಈ ರೀತಿಯಾಗುವುದಕ್ಕೆ ಮಿಥ್ಯ ಗರ್ಭ (pseudo pregnancy) ಎಂದು ಹೇಳುತ್ತಾರೆ. ಎಷ್ಟೋ ವರ್ಷಗಳಿಂದ ಮಗುವಾಗದೇ ನೀನು ಮಗುವಿಗಾಗಿ ಹಪಹಪಿಸುತ್ತಿರುವುದರಿಂದ ನಿನ್ನ ಸುಪ್ತ ಮನಸ್ಸಿನಲ್ಲಿ ಅತಿಯಾದ ಆಸೆ ಈ ಭ್ರಮೆಯನ್ನು ನಿನ್ನಲ್ಲಿ ಹುಟ್ಟಿಸಿದೆ. ನೀನು ನನ್ನ ಬಳಿ ಈಗ ಬರದೇ ಒಂಬತ್ತು ತಿಂಗಳು ಕಳೆದಿದ್ದರೆ ಮಾಮೂಲಿ ಗರ್ಭಿಣಿಯರಿಗೆ ಆಗುವಂತಹ ಸೂಚನೆಗಳೆಲ್ಲಾ ನಿನಗೂ ಆಗುತ್ತಿದ್ದವು. ಆದರೆ ನಿನ್ನ ಹೊಟ್ಟೆಯಲ್ಲಿ ಮಗುವಿನ ಬದಲು ವಾಯು ತುಂಬುತ್ತಿತ್ತು ಅಷ್ಟೆ.” ಡಾಕ್ಟರ್ ಎಲ್ಲಾ ವಿಚಾರವನ್ನೂ ಸುದೀರ್ಘವಾಗಿ ವಿವರಿಸಿದರು. ಹೊರಗೆ ಬಂದ ಉಷಾ ದುಃಖ ತಡೆಯಲಾಗದೇ ಜೋರಾಗಿ ಅತ್ತುಬಿಟ್ಟಳು. ರಾಜೇಶ್ ಮತ್ತು ಕಾವೇರಿ ಅವಳನ್ನು ಎಷ್ಟು ಸಮಾಧಾನ ಮಾಡಿದರೂ ಅವಳ ಕೈಲಿ ತಡೆದುಕೊಳ್ಳಲೂ ಆಗದೇ ಕೊನೆಗೆ ಅತ್ತು ಅತ್ತು ಸೊರಗಿ ಎಚ್ಚರ ತಪ್ಪಿ ಬಿದ್ದಳು. ಕಾವೇರಿಯೇ ಅವಳಿಗೆ ಬೇಕಾದ ಶಿಶ್ರೂಷೆಗಳನ್ನೆಲ್ಲಾ ಮಾಡಿದಳು. ಆಗ ರಾಜೇಶ್, “ಸಿಸ್ಟರ್, ಇವಳು ತನ್ನ ಜೀವಕ್ಕೆ ಎಲ್ಲಿ ಅಪಾಯ ಮಾಡಿಕೊಂಡು ಬಿಡುತ್ತಾಳೋ ಎಂದು ಭಯ ಆಗ್ತಾಇದೆ.” ಎಂದ
ಕಾವೇರಿ, “ನನ್ನ ಬಳಿ ಇದಕ್ಕೊಂದು ಪರಿಹಾರ ಇದೆ. ನೀವೇಕೆ ಮಗು ಒಂದನ್ನು ದತ್ತು ತೆಗೆದುಕೊಳ್ಳಬಾರದು?” ಎಂದು ಕೇಳಿದಳು.
“ಆ ಪ್ರೋಸೆಸ್ ಎಲ್ಲಾ ಬಹಳ ಕಷ್ಟ ಎಂದು ಎಲ್ಲಾ ಹೇಳ್ತಾರೆ.” ಎಂದ ರಾಜೇಶ್.
ಆಗ ಎಚ್ಚೆತ್ತಿದ್ದ ಉಷಾ, “ಯಾರಾದರೂ ಬಡವರು ಮಕ್ಕಳು ಹೆಚ್ಚಾಯಿತೆಂದು ಅಬಾರ್ಟ್ ಮಾಡಿಸಿಕೊಳ್ಳಲು ಬಂದರೆ ಅವರ ಮಗುವನ್ನು ಅಬಾರ್ಟ್ ಮಾಡಿಸುವುದು ಬೇಡಾ ಎಂದು ಹೇಳಿ ನೀವು ನಮಗೆ ಕೊಡಿಸಬಹುದಲ್ಲ” ಎಂದಳು
ಕಾವೇರಿ, “ಹಾಗೆ ಒಂದು ಮಗು ಈಗಲೇ ನನ್ನ ಬಳಿ ಇದೆ. ಬೇಕಾದರೆ ನಿಮಗೆ ತೋರಿಸುತ್ತೇನೆ . ನಿಮಗಿಷ್ಟವಿದ್ದರೆ ಅಡಾಪ್ಟ್ ಮಾಡಿಕೊಳ್ಳಿ” ಎಂದಳು.
ಉಷಾ ಆತುರದಿಂದ , “ಈಗ ತೋರಿಸಲು ಸಾಧ್ಯವೇ?” ಎಂದಳು.
ಕಾವೇರಿ “ಹೂಂ” ಎಂದು ಹೇಳಿ ಅಲ್ಲಿಂದ ತನ್ನ ಕೋಣೆಗೆ ಹೋಗಿ ಮಗುವನ್ನು ಎತ್ತಿಕೊಂಡು ಹೊರಬಂದಳು. ಮಗುವನ್ನು ತಬ್ಬಿ ಮುದ್ದಿಟ್ಟಳು “ಕಂದ, ನನಗಿರುವ ಕ್ಯಾನ್ಸರ್ ಖಾಯ್ಲೆಯಿಂದಾಗಿ ನಾನು ಅಲ್ಪಾಯುಶಿಯಾಗಿದ್ದೇನೆ. ಈಗಾಗಲೇ ತಂದೆಯನ್ನು ಕಳೆದುಕೊಂಡಿರುವ ನೀನು ನನ್ನನ್ನೂ ಕಳೆದುಕೊಂಡು ಅನಾಥನಾಗುತ್ತೀಯಲ್ಲ ಎಂದು ಚಡಪಡಿಸುತ್ತಿದ್ದೆ. ಈಗ ನಿನಗೆ ಒಳ್ಳೆ ಅಪ್ಪ ಅಮ್ಮ ಸಿಕ್ಕಿದ್ದಾರೆ. ನಿನಗೆ ಒಂದು ಉತ್ತಮ ಜೀವನ ಕೊಟ್ಟೆ ಎನ್ನುವ ಆತ್ಮ ತೃಪ್ತಿಯಿಂದ ನಾನು ನೆಮ್ಮದಿಯಾಗಿ ಸಾಯುತ್ತೇನೆ.”
ಮಗುವನ್ನು ಉಷಾಳಿಗೆ ಕೊಡಲು ನಿಧಾನವಾಗಿ ಹೆಜ್ಜೆ ಹಾಕಿದಳು.

Rating
No votes yet