ಮುಂದುವರಿವ ಗುಣ(ಪ್ರೇರಕ ಪ್ರಸಂಗಗಳು)

ಮುಂದುವರಿವ ಗುಣ(ಪ್ರೇರಕ ಪ್ರಸಂಗಗಳು)

ದಿನದಂತೆ ಅಂದೂ ಆ ಬಾಲಕನು ಶಾಲೆಗೆ ಹೊರಡಲು ಸಿದ್ಧನಾದ.ಪಾಟಿ ಚೀಲ ಹೆಗಲಿಗೇರಿಸಿ ಹೊರಟ.
ನಾಲ್ಕು ಹೆಜ್ಜೆ ನಡೆದು ಒಮ್ಮೆಲೇ ನಿಂತ.ಹೊರಳಿ ಬಂದು 'ಅಪ್ಪಾ,ನಾನು ಶಾಲೆಗೆ ಹೋಗುವದಿಲ್ಲ' ಎಂದ.

'ಯಾಕೆ ಮಗು! ನೀನು ಜಾಣ ಬಾಲಕ.ಶಾಲೆಗೇಕೆ ಒಲ್ಲೆ?' ತಂದೆಯು ಗಾಬರಿಯಾಗಿ ಕೇಳಿದ.
ಶಾಲೆಯಲ್ಲಿ ಬಾಲಕರೆಲ್ಲ ನನಗೆ 'ಹಳ್ಳಿ ಗುಗ್ಗು' ಎಂದು ಗೇಲಿ ಮಾಡುತ್ತಾರೆ.
'ಅಂದರೇನಾಯಿತು! ನೀನಿನ್ನೂ ಹೊಸಬ.ಹಳ್ಳಿಯಿಂದ ಬಂದವ,ನಾಲ್ಕಾರು ದಿನ ಹೋದ ಮೇಲೆ ಎಲ್ಲರೂ
ಹೊಂದಿಕೊಳ್ಳುವರು.ಆಗ ಏನೂ ಅನ್ನುವದಿಲ್ಲ.'ತಂದೆ ಸಮಾಧಾನ ಹೇಳಿದ.

'ಏನೇ ಇರಲಿ,ನಾನು ಒಲ್ಲೆ.ಹೋಗುವುದಿಲ್ಲವೆಂದರೆ ಹೋಗುವುದಿಲ್ಲ.'ಎಂದು ಹೇಳುತ್ತ ಪಾಟಿ ಚೀಲವನ್ನು
ಒಗೆದು ಕುಳಿತುಬಿಟ್ಟ ಆ ಬಾಲಕ.ತಾಯಿ-ತಂದೆ ಇಬ್ಬರೂ ಅವನನ್ನು ಸಮಾಧಾನಪಡಿಸಿದರು.ಆದರೂ
ಅವನು ಜಗ್ಗಲಿಲ್ಲ.ನಾಲ್ಕಾರು ದಿನ ಹೀಗೆಯೇ ಕಳೆದವು.

ಬಾಲಕನ ತಂದೆ ತನ್ನ ಗೆಳೆಯನ ಮನೆಗೆ ಹೋದಾಗ ಮಗನ ವಿಚಾರ ಹೇಳಿದನು.ಆಗ ಆ ಮಹಾಶಯರು
ಬಾಲಕನನ್ನು ತನ್ನ ಕಡೆಗೆ ಕಳುಹಿಸಲು ಸೂಚಿಸಿದರು.

ಒಂದು ದಿನ ಅವರು ಆ ಬಾಲಕನನ್ನು ಸಮೀಪದಲ್ಲಿ ಹರಿಯುವ ಹಳ್ಳದ ಕಡೆಗೆ ಕರೆದೊಯ್ದರು.ದಂಡೆಯ ಮೇಲೆ
ಕುಳಿತು ಮಾತನಾಡುತ್ತಾ ಅಲ್ಲಿಯೇ ಬಿದ್ದಿದ್ದ ದೊಡ್ಡ ಕಲ್ಲನ್ನೆತ್ತಿ ಹಳ್ಳದ ಕೊರಕಲಲ್ಲಿ ಒಗೆದರು.

ಕಲ್ಲು ಪ್ರವಾಹದಲ್ಲಿ ಬಿದ್ದು ಹರಿಯುತ್ತಿದ್ದ ನೀರಿಗೆ ತಡೆಯೊಡ್ಡಿತು.

'ನೋಡು ಮಗು,ಈ ಕಲ್ಲು ಹಳ್ಳದ ಹರಿಯುವಿಕೆಯನ್ನು ತಡೆಯಿತು ಅಲ್ಲವೇ? ನೀರು ನಿಂತಿತು.ಕೆಲ ಹೊತ್ತು
ಬಿಟ್ಟು ನೋಡು ಏನಾಗುತ್ತದೆ?' ಎಂದರು.ಕಲ್ಲು ಅಡ್ಡಗಟ್ಟಿದ್ದರಿಂದ ಹರಿಯುವಿಕೆಗೆ ತಡೆಯಾಗಿ ನೀರು ನಿಂತಿತು.
ಕ್ರಮೇಣ ನೀರು ತುಂಬಿ ಕಲ್ಲು ನೀರಲ್ಲಿ ಮುಳುಗಿತು.ನೀರು ಕಲ್ಲಿನ ಮೇಲಿಂದ ಹಾಯ್ದು ಮುಂದೆ ಹರಿಯತೊಡಗಿತು.

'ಓ! ನೀರು ಜಿಗಿಯಿತು!' ಚೀರಿದ ಬಾಲಕ.

'ನೋಡು ಮಗು,ಯಾವದೇ ತಡೆ ಒಡ್ಡಿದರೂ ಹರಿಯುವ ನೀರು ತನ್ನ ಗುಣವನ್ನು ಬಿಡಲಿಲ್ಲ.ತಡೆಯನ್ನು
ಗಮನಿಸದೆ ದಾರಿ ಮಾಡಿಕೊಂಡು ಮುಂದುವರಿಯಿತು.ಮುಂದೆ ಇದೇ ಹಳ್ಳ ಹರಿದು ಹೊಳೆಯಾಗಿ ಸಾಗರ
ಸೇರಿ ದೊಡ್ಡ ಸಂಗ್ರಹವಾಗುತ್ತದೆ.ಅದನ್ನು ತಡೆಯುವವರು ಯಾರು ಇಲ್ಲ.ಇದೇ ರೀತಿ ಯಾವದೇ ಅಡ್ಡಿ
ಬಂದರೂ ಅದನ್ನು ಮೆಟ್ಟಿ ಮುಂದುವರಿಯಬೇಕು.ಆವಾಗಲೇ ನೀನು ದೊಡ್ಡಾ ವ್ಯಕ್ತಿಯಾಗಬಲ್ಲೆ,ಹೆಸರು
ಗಳಿಸಬಲ್ಲೆ' ಎಂದು ಮನವರಿಕೆ ಮಾಡಿಕೊಟ್ಟರು.

ಈ ನೋಟ-ಉಪದೇಶ ಆ ಬಾಲಕನ ಮೇಲೆ ಗಂಭೀರ ಪರಿಣಾಮ ಬೀರಿತು.

ಮರುದಿನದಿಂದ ಎಗ್ಗಿಲ್ಲದೆ ಶಾಲೆಗೆ ಹೋದ.

ಮುಂದೆ ಆ ಬಾಲಕನೇ ಇಂಡೋನೇಷಿಯಾ ರಾಷ್ಟ್ರದ ಅಧ್ಯಕ್ಷನಾದ ಸುಕರ್ಣೊ.

Rating
No votes yet