ಮುಳ್ಳಿನ ಕಿರೀಟ ಎಂಬ ನಾಟಕ

ಮುಳ್ಳಿನ ಕಿರೀಟ ಎಂಬ ನಾಟಕ

ಕಾದಂಬರಿಯ ಭಿತ್ತಿಯಲ್ಲಿ ವಿಶಾಲವಾದ ಪ್ರಪಂಚವನ್ನು ಓದುಗನಿಗೆ ನೀಡಲು ಸಾಧ್ಯವಾಗುತ್ತದೆ. ಆದರೆ ನಾಟಕವು ದೃಶ್ಯಕಾವ್ಯ. ಅಲ್ಲಿನ ಸೀಮಿತ ವೇದಿಕೆಯಲ್ಲಿ ಕಾದಂಬರಿಯ ವಸ್ತುವನ್ನು ಕಾಣಿಸಲು ಸಾಧ್ಯವಿಲ್ಲವಾದರೂ ಪಾತ್ರಗಳ ಮಾತುಗಳಲ್ಲಿ ಗಿಡಗಂಟಿಗಲನ್ನೂ ಗುಡ್ಡಬೆಟ್ಟಗಳನ್ನೂ ನದಿಯ ಹರಿವನ್ನೂ ಜಲಪಾತದ ಓಘವನ್ನೂ ಕಡಲ ಮೊರೆತವನ್ನೂ ದೋಣಿಯ ನಡೆಯನ್ನೂ ಸಮರಾಂಗಣದ ಗದ್ದಲವನ್ನೂ ಮಕ್ಕಳ ಕಲರವವನ್ನೂ ಕಾಣಿಸಬಹುದಾಗಿದೆ.
ಇಷ್ಟೆಲ್ಲವನ್ನೂ ನಾಟಕದಲ್ಲಿ ಕಾಣಿಸಬೇಕಾದರೆ ಅದರ ಕರ್ತೃ, ಪಾತ್ರಧಾರಿ, ನಿರ್ದೇಶಕ ಹಾಗೂ ರಂಗಪರಿಕರಗಳು ಎಲ್ಲವೂ ಏಕಪ್ರಕಾರವಾಗಿ ಮೇಳೈಸಬೇಕಾಗುತ್ತದೆ. ಇಂಥ ಒಂದು ಪ್ರಸಂಗ ನಾ.ಡಿಸೋಜರು ಬರೆದ “ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ” ಎಂಬ ಕಾದಂಬರಿಯನ್ನು “ಮುಳ್ಳಿನ ಕಿರೀಟ” ಎಂಬ ನಾಟಕವಾಗಿ ಪ್ರಯೋಗಿಸಿದಾಗ ಕಂಡುಬಂತು.
ಆ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕಕ್ಕೆ ಪೂರ್ವಭಾವಿಯಾಗಿ ನಡೆದ ಕಾರ್ಯಕ್ರಮದಲ್ಲಿ ‘ಮುಕುಂದರಾಜ್’ ಅವರು ಬರೆದ “ಮುಳ್ಳಿನ ಕಿರೀಟ” ಪುಸ್ತಕದ ಲೋಕಾರ್ಪಣೆಯಾಯಿತು. ಕವಯಿತ್ರಿ ಎಚ್ಎನ್ ಆರತಿ ಅವರು ಮಾತನಾಡುತ್ತಾ ಬರಗೂರರ ಮುನ್ನುಡಿಯನ್ನು ಉದ್ಧರಿಸಿದರು. ಶಾಸಕ ಪಿ ಜಿ ಆರ್ ಸಿಂಧ್ಯಾ ಅವರು ಮಾತನಾಡಿ ವರ್ತಮಾನ ಪತ್ರಿಕೆಗಳನ್ನು ಓದುವುದರಲ್ಲಿಯೇ ನಮ್ಮ ಅಧ್ಯಯನದ ಸಮಯ ಮುಗಿದುಹೋಗುತ್ತೆ. ತುರ್ತುಪರಿಸ್ಥಿತಿಯ ಕಾಲದಲ್ಲಿ George Argon ಬರೆದ Animal Fair ಎಂಬ ಪುಸ್ತಕ ನನ್ನ ಮೇಲೆ ಗಾಢ ಪರಿಣಾಮ ಬೀರಿತ್ತು. ಇಂದು ಈ ಪುಸ್ತಕ ಅದೇ ರೀತಿಯ ಚಲನೆಯನ್ನು ಉಂಟುಮಾಡಿದೆ. ನಾನೂ ಸಂಘಪರಿವಾರದಲ್ಲಿದ್ದವನು. ಆದರೆ ಈ ಪುಸ್ತಕದಲ್ಲಿನ ಪಾದ್ರಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ದುರುಳನಂತೆ ಚಿತ್ರಿಸಲಾಗಿದೆ ಎಂದು ನನ್ನ ಭಾವನೆ ಎಂದರು.
ಇನ್ನು ನಾಟಕದ ಬಗ್ಗೆ ಹೇಳುವುದಾದರೆ ನಾಟಕದ ಪಾತ್ರಧಾರಿಗಳ ವೇಷಭೂಷಣವೆಲ್ಲ ಬೆಂಗಳೂರಿನ ರೈತಮಕ್ಕಳ ಸಾಧಾರಣ ಉಡುಗೆಯಾಗಿತ್ತು. ಹೆಸರುಗಳು ಮಾತ್ರವೇ ಕರಾವಳಿ ಪರಿಸರದವು. ನಾಟಕ ಮಂದಿರದ ಎಂಬತ್ತುಭಾಗ ತುಂಬಿತ್ತು. ಬಂದಿದ್ದವರೆಲ್ಲ ಕಲೆಯ ಅಭ್ಯಾಸಿಗಳು ಹಾಗೂ ವಿದ್ವತ್ ಜನ. ನಾಟಕವನ್ನು ಮನರಂಜನೆಯಾಗಿ ಆಸ್ವಾದಿಸಬಲ್ಲ ಸಾಮಾನ್ಯಜನ ಇರಲಿಲ್ಲವೆನ್ನಬಹುದು. ಅಲ್ಲಿ ಚಪ್ಪಾಳೆ ಇರಲಿಲ್ಲ, ಸಿಳ್ಳೆ ಇರಲಿಲ್ಲ, ಸಂಭಾಷಣೆಗಳಿಗೆ ಹಾಗೂ ಸನ್ನಿವೇಶಕ್ಕೆ ತಕ್ಕ ತಲೆದೂಗುವಿಕೆ ಮಾತ್ರವಿತ್ತು. ನಾಟಕದ ಧ್ವನಿವ್ಯವಸ್ಥೆ ರಂಗಸಜ್ಜಿಕೆ ಚೆನ್ನಾಗಿತ್ತು. ಎರಡಾಳೆತ್ತರದ ಮರದ ಶಿಲುಬೆ, ಅದರ ಮೇಲೆ ಮುಳ್ಳಿನ ಬಳ್ಳಿಯ ಚಿತ್ರಣ, ಮುಂದೆ ಮೇಣದ ಬತ್ತಿಯ ಸ್ಟ್ಯಾಂಡು, ಪಾದ್ರಿಗಳು ಕೂರುವ ತೇಗದ ಕುರ್ಚಿ, ಬೈಬಲ್ ಪೀಠ ಎಲ್ಲವೂ ಚೆನ್ನಾಗಿತ್ತು. ಆದರೆ ನಾಟಕದ ಎಲ್ಲ ಅಂಕಗಳಲ್ಲೂ ಈ ಹಿನ್ನೆಲೆ ಅನಿವಾರ್ಯವಾಗಿದ್ದುದೇ ಒಂದು ನ್ಯೂನತೆ. ದೇವಾಲಯದ ದೃಶ್ಯ, ಕಾಮತರ ಮನೆ, ಹೆಂಡದಂಗಡಿ, ಪೊಲೀಸರ ನಡಿಗೆ ಎಲ್ಲವೂ ಸಹಜವಾಗಿದ್ದವು. ಇದು ಹೇಳಿಕೇಳಿ ಸ್ವಾತಂತ್ರ್ಯಪೂರ್ವದ ವಸ್ತು. ಆದರೆ ಪಾದ್ರಿಗಳ ನಡವಳಿಕೆ ಇಂದಿಗೂ ಪ್ರಸ್ತುತವಾಗಿದೆಯಲ್ಲಾ ಎನಿಸದಿರದು.

Rating
No votes yet