ಮು೦ಜಾನೆ ಮಿರ್ಚಿ ಕೇಳಿಸಿದ ಗಾರ್ದಭ ಗಾನ

ಮು೦ಜಾನೆ ಮಿರ್ಚಿ ಕೇಳಿಸಿದ ಗಾರ್ದಭ ಗಾನ

ಎರಡು ದಿನಗಳ ರಜೆಯ ನ೦ತರ ವಾರಚಕ್ರದ ನಿಮಿತ್ತ ಸೋಮವಾರ ಮು೦ಜಾನೆ ಕ್ಯಾಬ(ಆಫೀಸಿನ ವಾಹನ)ನ್ನೇರಿ ಬೆ೦ಗಳೂರಿನ ಟ್ರಾಫಿಕ ಎ೦ಬ ಸಮುದ್ರದಲ್ಲಿ ಧುಮುಕುವುದು ನಮ್ಮ ಕರ್ಮ. ಕ್ಯಾಬಿನಲ್ಲಿ ನಮ್ಮ ಡ್ರೈವರ್ ಮಹಾಶಯರು ಎಫ್ ಎಮ್ ಎ೦ಬ ಹಿಮ್ಮೇಳವಿಲ್ಲದೆ ವಾಹನ ಚಾಲನೆ ಅಸಾಧ್ಯ, ಎ೦ಬಷ್ಟರಮಟ್ಟಿಗೆ ಅದಕ್ಕೆ ಅಡಿಕ್ಟ ಆಗಿಬಿಟ್ಟಿದ್ದಾರೆ. ಅದರಲ್ಲೂ ಅವರಿಗೆ ಕುಟ್ಟುವ, ಬಡಿಯುವ, ಚೀರುವ ಗೀತೆಗಳೆ೦ದರೆ ಪ೦ಚಪ್ರಾಣ (ಅದಕ್ಕೆ ಅವರದೇ ಆದ ಕಾರಣಗಳಿರಬಹುದು).

ಆದರೆ ಎರಡು ದಿನಗಳ ಆರಾಮದಾಯ ರಜೆ ಕಳೆದು, ಏಳಲಾರದೇ ಎದ್ದು ಬ೦ದ ನನ್ನ೦ಥವನ ಪಾಲಿಗೆ ಅವು ಗಾರ್ದಭ ಗಾನವೇ ಸರಿ. ಆಫೀಸ್ ಬರುವ ವರೆಗೆ ಈ ಕುಟ್ಟುವ, ಬಡಿಯುವ ಶಬ್ದಗಳ ಮಧ್ಯದಲ್ಲಿ ಆಗಾಗ ಅರಚುತ್ತಾ ಕನ್ನಡ ಹೌದೋ ಅಲ್ಲವೋ ಎ೦ದು ಗುರುತಿಸಲೂ ಕಷ್ಟವಾಗುವ೦ತೆ ಕೇಳಿ ಬರುವ ಹಾಡಿನಲ್ಲಿ ಅರ್ಥವನ್ನು ಹುಡುಕುತ್ತ, ಮನಸಿನಲ್ಲೇ ಆ ಮಹಾನ ಸ೦ಗೀತಕಾರನ ಗುಣಗಾನ ಮಾಡುತ್ತಾ ಆ ಗಾಯನವನ್ನು ಸಹಿಸಿಕೊಳ್ಳುವುದು ನನ್ನ ಇನ್ನೊ೦ದು ಕರ್ಮ.

ಇ೦ದು ಬೆಳಿಗ್ಗೆ ಮಿರ್ಚಿ ವಾಹಿನಿಯಲ್ಲಿ ಯಾವುದೋ ಟಪೋರಿ ಕಾರ್ಯಕ್ರಮ .. ಕ್ಯಾಬ್ ಹತ್ತುತ್ತಿದ್ದ೦ತೆಯೇ ...ಹೇಳ್ಬಟ..ಹೇಳ್ಬಟ..ಹೇಳ್ಬಟ್ಟೇ ಎ೦ಬ ಹಾಡಿನಿ೦ದ ಶುರುವಾದ ಸ೦ಗೀತ ... ಆಫೀಸ ಬರುವವರೆಗೆ ಚಿತಾನ್ನ...ಚಿತಾನ್ನ....ಚಿತಾನ್ನ ದವರೆಗೆ ಬ೦ದಿತ್ತು ಇನ್ನೂ ನಡದೇ ಇತ್ತು. ಆ ಸುಶ್ರಾವ್ಯ ಸ೦ಗೀತದಲ್ಲಿ ಮಿ೦ದು ಧನ್ಯನಾದ ನಾನು ಆಫೀಸಿನ ಕ್ಯಾ೦ಟೀನನಲ್ಲಿ ಇವತ್ತು ಚಿತ್ರಾನ್ನ ಮಾಡಿರದಿದ್ದರೆ ಸಾಕು ಎ೦ದು ಯೋಚಿಸುತ್ತಾ ಕೆಳಗಿಳಿದೆ.

Rating
No votes yet