ಮೊದಲ ಶತ್ರುವನ್ನು ಬುಡಸಮೇತ ಕಿತ್ತುಹಾಕಲು ಮೂರುವರ್ಷ ಬೇಕೇನ್ರೀ ಚಿದಂಬರಂ?

ಮೊದಲ ಶತ್ರುವನ್ನು ಬುಡಸಮೇತ ಕಿತ್ತುಹಾಕಲು ಮೂರುವರ್ಷ ಬೇಕೇನ್ರೀ ಚಿದಂಬರಂ?

ಸುದ್ದಿ: "ಮೇರೆಮೀರುತ್ತಿರುವ ನಕ್ಸಲ್ ಚಟುವಟಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ, ಮಾವೋವಾದಿಗಳು ದೇಶದ ಮೊದಲ ಶತ್ರು ಎಂದು ಗುಡುಗಿದ್ದಾರೆ. ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ನಕ್ಸಲ್ ಚಟುವಟಿಕೆಯನ್ನು ಬುಡಸಮೇತ ಕಿತ್ತುಹಾಕುವುದಾಗಿ ಘೋಷಿಸಿದ್ದಾರೆ."


http://thatskannada.oneindia.in/news/2010/04/06/naxalism-is-the-first-enemy-of-the-country-chidu.html


ನಮ್ಮ ದೇಶದ ಮೊದಲ ಶತ್ರುವನ್ನೇ ಬುಡಸಮೇತ ಕಿತ್ತು ಹಾಕಲು ಮೂರು ವರುಷದ ಅವಧಿ ಬೇಕೆನ್ನುತ್ತೀರಾದರೆ, ಗೃಹಮಂತ್ರಿಗಳೇ,  ಇನ್ನು ನಮ್ಮ ಶತ್ರುಗಳ ಪಟ್ಟಿಯಲ್ಲಿ ಎರಡನೇ, ಮೂರನೇ, .... ಸ್ಥಾನದಲ್ಲಿರುವ ಶತ್ರುಗಳನ್ನು ನೆಲಸಮ ಮಾಡಲು ಪಂಚವಾರ್ಷಿಕ ಅಥವಾ ದಶವಾರ್ಷಿಕ ಯೋಜನೆಗಳೇ ಬೇಕಾಗಬಹುದೇನೋ ಅಲ್ಲವೇ?


ಅಷ್ಟರೊಳಗೆ ಮತ್ತೊಂದು ಮಹಾ ಚುನಾವಣೆ, ಮತ್ತೊಂದು ಹೊಸ ಸರಕಾರ, ಮತ್ತೋರ್ವ ಹೊಸ ಗೃಹಮಂತ್ರಿ, ಮತ್ತೊಂದು ಹೊಸ ಘೋಷಣೆ.... ಅಲ್ಲವೇ... ಚಿದಂಬರಂ?


ಈ ಭಯೋತ್ಪಾದನೆ, ನಕ್ಸಲವಾದ ಇವುಗಳನ್ನು ಮಟ್ಟಹಾಕುವ ಕೆಲಸ ಕೊನೆಗೂ ಒಂದು ಚಿದಂಬರ ರಹಸ್ಯವಾಗಿಯೇ ಮುಂದುವರಿಯಲಿದೆಯೇ...?


ನಿನ್ನೆ ಛತ್ತೀಸಘಡದಲ್ಲಿ ೭೦ ಕ್ಕೂ ಹೆಚ್ಚು ಕೇಂದ್ರ ಮೀಸಲು ಆರಕ್ಷಕ ಪಡೆಯ ಯೋಧರು ಸಾವಿಗೀಡಾದರೂ, ಆ ನಕ್ಸಲರನ್ನು ಮಟ್ಟಹಾಕುವ ಕೆಲಸವನ್ನು, ಕೂಡಲೇ ವಾಯು ಮತ್ತು ಭೂಸೇನೆಗಳಿಗೆ ವಹಿಸಿಕೊಡಲು ನೀವು ಇನ್ನೂ ಮೀನ-ಮೇಷ ಎಣಿಸುತ್ತಿರುವುದೇಕೆ? ಇನ್ನು ಎಷ್ಟು ಯೋಧರ ಸಾವಿನ ನಿರೀಕ್ಷೆ ಇದೆ ನಿಮಗೆ?


ಸಾವು ನೋವುಗಳ ಲೆಕ್ಕಾಚಾರ ಹಾಕಿ, ವರ್ಷಗಳ ನಡುವಣ ತುಲನಾತ್ಮಕ ಹೇಳಿಕೆ ನೀಡಿದರೆ ಸಾಲದು, ಮಾಜೀ ಹಣಕಾಸು ಮಂತ್ರಿಗಳೇ. ಇದು ಆ ಲೆಕ್ಕಾಚಾರಗಳಿಗಿಂತ ಭಿನ್ನ. ಇಲ್ಲಿ ಬರಿಯ ತುಲನಾತ್ಮಕ ವಿಶ್ಲೇಷಣೆಗಳು ಕೆಲಸಕ್ಕೆ ಬಾರವು. ದಯವಿಟ್ಟು ತಮ್ಮ ಪಂಚೆ ಎತ್ತಿಕಟ್ಟಿ ಅಲ್ಲದೇ ರಕ್ಷಣಾ ಸಚಿವರಿಗೂ ತಮ್ಮ ಪಂಚೆಯನ್ನು ಎತ್ತಿಕಟ್ಟಿ ಯುದ್ಧಕ್ಕೆ ಸನ್ನದ್ಧರಾಗಲು ಕರೆನೀಡಿ.


 


- ಆತ್ರಾಡಿ ಸುರೇಶ ಹೆಗ್ಡೆ.


 


 


 

Rating
No votes yet

Comments