ರಾಜಕುಮಾರನ ಕಿವಿಗಳು

ರಾಜಕುಮಾರನ ಕಿವಿಗಳು

ತನ್ನ ಅಣ್ಣ ಹುಡುಗಿಯೊಬ್ಬಳ ಜತೆ ಪಕ್ಕದ ಕೋಣೆಯಲ್ಲಿ ರಾತ್ರಿಯೆಲ್ಲಾ ಆಡುತ್ತಿದ್ದ ಚೆಲ್ಲಾಟವನ್ನು ರಾಜಕುಮಾರ ನಿದ್ದೆ ಬಿಟ್ಟು ಕದ್ದು ನೋಡುತ್ತಿದ್ದನಂತೆ. ಈಚೀಚೆಗೆ ಅವರ ಅತಿಯಾದ ಚೆಲ್ಲಾಟ ನೋಡಿ ಬೆವರುತ್ತಿದ್ದನಂತೆ. ಚೆಲ್ಲಾಟ ವಿಕೃತವಾದಾಗ ತಡೆದುಕೊಳ್ಳಲಾಗದೆ ಅಣ್ಣನ ಗೆಳತಿ ಅರಮನೆ ವಾಸವೂ ಬೇಡ, ರಾಜಕುಮಾರನ ಸಹವಾಸವೂ ಬೇಡ ಅಂತ ಅಣ್ಣನ ಮುಖಕ್ಕೆ ಉಗಿದು ಅರೆಬಟ್ಟೆಯಲ್ಲೇ ನಡುರಾತ್ರಿ ಕಿಟಕಿ ಹಾರಿ ಹೋಗಿದ್ದನ್ನೂ ನೋಡಿದನಂತೆ. ಅಂದಿನಿಂದ ನಮ್ಮ ರಾಜಕುಮಾರನಿಗೆ ಮಾಡಲು ಏನೂ ಇಲ್ಲದೆ, ಜೀವನವೇ ಬೇಸರವಾಗಿ ಯುದ್ಧಕ್ಕೆ ಹೋಗಿ ತಾನೂ ಏನಾದರೂ ಸಾಧಿಸಬೇಕು ಅಂತ ಅನಿಸಿತಂತೆ. ಏಳು ಸಾಗರದಾಚೆ ಯಾವುದೋ ದೇಶದ ಮೇಲೆ ಯುದ್ಧವೊಂದು ನಡೆಯುತ್ತಿರುವುದನ್ನು ಯಾರಿಂದಲೋ ಅರಿತುಕೊಂಡು ತನ್ನನ್ನೂ ಕಳಿಸಿ ಎಂದು ಜಾರುತ್ತಿದ್ದ ಚಡ್ಡಿ ಎಳೆದುಕೊಂಡು ಅಳತೊಡಗಿದನಂತೆ. ಸೇನಾನಿಗೆ ತಲೆನೋವಾಗಿ ಮುದಿರಾಣಿಗೆ ದೂರು ಹೊತ್ತೋಯ್ದನಂತೆ.
ಸುದ್ದಿ ಕೇಳಿ ರಾಜಕುಮಾರನ ಅಜ್ಜಿ ಮುದಿರಾಣಿ, ಕಟ್ಟಿಸಿದ ತನ್ನ ಹಲ್ಲನ್ನು ಕಟಕಟ ಕಡಿದ ಸದ್ದು ಅರಮನೆಯಲ್ಲಾ ಮಾರ್ದನಿಗೊಂಡು ಎಲ್ಲರ ಎದೆ ನಡುಗಿಸಿತಂತೆ. ಸಾಯಲು ಬೇಕಾದಷ್ಟು ಜನರಿದ್ದಾರೆ ಬೇಡ ಎಂದು ಸೇನಾನಿ ಎಷ್ಟು ಬುದ್ಧಿ ಹೇಳಿದರೂ ಕೇಳದ ರಾಜಕುಮಾರ ಹಟ ಹಿಡಿದು ಬಾಯಿಗಿಟ್ಟ ಹೆಬ್ಬೆಟ್ಟನ್ನು ಚೀಪುವ ಬದಲು ಕಚ್ಚಿಕೊಳ್ಳುತ್ತಿದ್ದಾನೆ ಎಂದು ಎಚ್ಚರಿಸಿದನಂತೆ. ಮಕ್ಕಳನ್ನು ಮುಟ್ಟಬಾರದ ಖಾಯಿಲೆಯಿರುವ ಮುದಿರಾಣಿ ರಾಜಕುಮಾರನನ್ನು ದೂರದಿಂದಲೇ ಮುದ್ದಿಸಿದ ದಿನಗಳನ್ನು ನೆನೆಸಿಕೊಂಡು ತಡೆಯಲಾರದ ನೋವಿನಿಂದ ಕಿವಿಗಳಿರುವ ಅರಮನೆ ಕಂಬ, ಗೋಡೆ, ಬಾಗಿಲುಗಳನ್ನು ಉಗುರಿಂದ ಪರಪರ ಕೆರೆದಳಂತೆ. ಅದನ್ನು ನೋಡಲಾರದೆ ಸೇನಾನಿ ಗಡಗಡ ನಡುಗುತ್ತಾ ಏನಾದರೂ ಉಪಾಯ ಮಾಡುತ್ತೇನೆಂದು ಅಲ್ಲಿಂದ ಕಾಲ್ಕಿತ್ತನಂತೆ.
ಏಳು ಸಮುದ್ರದಾಚೆಯ ದೇಶದವರು ರಾಜಕುಮಾರ ಬಂದರೆ ಅವನ ಕಿವಿಯನ್ನು ನೀಟಾಗಿ ಕೊಯ್ದು, ಹಳೆ ಪೇಪರಿನಲ್ಲಿ ಪೊಟ್ಟಣ ಕಟ್ಟಿ ಅವನೊಂದಿಗೆ ಕಳಿಸುತ್ತೇವೆ ಎಂದು ನಗುತ್ತಿದ್ದಾರೆಂಬ ಸುದ್ದಿಯನ್ನು ಸೇನಾನಿಯೇ ಹಬ್ಬಿಸಿದನಂತೆ. ಇದನ್ನು ಕೇಳಿ ರಾಜಕುಮಾರನ ಜತೆ ಇರಬೇಕಾದ ಸೈನಿಕರು, ಒಂದ ಮಾಡಬೇಕು ಎಂದು ಹೇಳಿ ಹೋದವರು ಪಾಯಿಖಾನೆ ಹಿಂದಿನ ದಿಡ್ಡಿ ಗೋಡೆ ಹಾರಿ ಪರಾರಿಯಾಗುತ್ತಿದ್ದಾರಂತೆ. ಸುದ್ದಿಯನ್ನು ನಂಬಿ ರಾಜಕುಮಾರನ ಕಿವಿ ಕೆಂಪಾದುದನ್ನು ನೋಡಿ ಅವನ ಅಣ್ಣ ಲೊಚಗೊಟ್ಟಿದನಂತೆ. ಎಳೆ ಹೂವಿನಂತಿರುವ ರಾಜಕುಮಾರನ ಕಿವಿಯಲ್ಲಿ ಯಾರಾದರೂ ಹುಡುಗಿಯ ಹತ್ತಿರ ಕಿವಿ ಕಚ್ಚಿಸಿಕೊಂಡರೆ ಎಷ್ಟು ಹಿತವಾಗಿರುತ್ತದೆ ಗೊತ್ತ ಎಂದು ಪಿಸುಗುಟ್ಟಿದನಂತೆ.
ರಾಜಕುಮಾರನ ಕಿವಿಗೂ ನಮಗೂ ಸಂಬಂಧವಿಲ್ಲ ಅಂತ ನೀವೇನಾದರೂ ನಿಶ್ಚಿಂತೆಯಿಂದ ಇದ್ದು ಬಿಟ್ಟರೆ ನಿಮ್ಮ ಜೀವನವೇ ವ್ಯರ್ಥ ಎಂದು ಡಂಗುರದವರು ಎಚ್ಚರಿಕೆ ನೀಡಿದ್ದಾರೆ.

Rating
No votes yet