ವರುಷ ಹಿಂದುರುಳಿದ ಬದುಕು

ವರುಷ ಹಿಂದುರುಳಿದ ಬದುಕು

ಮುಂಜಾನೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ, ಹತ್ತು ಘಂಟೆಗೆ ಬಂದು ನನ್ನ ಕಾರನ್ನು ಸರ್ವೀಸ್ ಸ್ಟೇಶನ್ ಗೆ ಕೊಂಡೊಯ್ಯಲಿದ್ದವರ ಬಗ್ಗೆ ಮಾಹಿತಿ, ಬೇಕಾದ ಕಾಗದ ಇತ್ಯಾದಿಗಳಿಗೆ ಸಹಿ ಎಲ್ಲಾ ಕೊಟ್ಟು, ನನ್ನ ಮಾಮೂಲಿ ಲ್ಯಾಪ್ಟಾಪ್ ಬ್ಯಾಗ್ ಹಿಡಿಯದೆ,  "ಛಂದ ಪುಸ್ತಕ"ದ ಸುಂದರ ಕೈಮಗ್ಗದ ಕೈಚೀಲಕ್ಕೇ ನನ್ನ ಲ್ಯಾಪ್ಟಾಪ್ ಇಳಿಬಿಟ್ಟು, ಅದರಲ್ಲಿ ಬಿ.ಜಿ.ಎಲ್ ಸ್ವಾಮಿಯವರ "ಮೈಸೂರು ಡೈರಿ" ಪುಸ್ತಕವನ್ನೂ ಹಾಕಿಕೊಂಡು ಬಾಗಿಲಿಂದಾಚೆ ಬಂದೊಡನೆ ವರುಷವೊಂದು ಹಿಂದಕ್ಕುರುಳಿತು.

 ನನ್ನ ಕಾರ್ ನ ವರ್ಷಾಚರಣೆ, ಅದರ ಮೇಕಪ್ಪು, ಬಾಡಿ ವರ್ಕು ಇತ್ಯಾದಿಗಳನ್ನು ಮಾಡಿ ಮುಗಿಸಲೇಬೇಕಾಗಿರುವುದರಿಂದ ಅದಕ್ಕೆ ನನ್ನಿಂದ ಒಂದೆರಡು ದಿನಗಳ ಮಟ್ಟಿಗೆ ದೂರವಿರಬೇಕಾಗಿ ಬರುತ್ತಿರುವುದು ಅನಿವಾರ್ಯವಾಗಿದೆ. 

ಹೊರನೆಡೆದು ಬಂದವನಿಗೆ ಚುಮು ಚುಮು ಚಳಿ, ಆಗ ತಾನೇ ಎದ್ದು ಕಸಗುಡಿಸುತ್ತಿರುವ ಪೊರಕೆಯ ಚರಚರ ಸದ್ದು, ಕೆಲಸಕ್ಕೆ ಸಾಗುತ್ತಿರುವವರ ದಂಡು, ಸೈಕಲ್, ಆಟೋ, ಅಗೋ! ದೂರದಲ್ಲಿ ಸಾಗಿ ಹೋದ ಬಿ.ಎಂ.ಟಿ.ಸಿ ಬಸ್ಸು ಅದರ ಸದ್ದು.. ಹೀಗೆ ಹತ್ತು ಹಲವಾರು ವಿಷಯಗಳು ಕಣ್ಮುಂದೆ ಮತ್ತೆ ಹಾದು ಹೋದಾಗ, ಅಯ್ಯೋ ಇವನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದೀನಲ್ಲಾ ಪ್ರತಿದಿನ... ಇನ್ನಷ್ಟು ಯಾಂತ್ರಿಕವಾಗಿ ಹೋಗಿದೆಯಲ್ಲಾ ಜೀವನ ಎಂದೆನಿಸದಿರಲಿಲ್ಲ. ಮುಂದೆ ಬಸ್ ಸ್ಟಾಪಿನ ಬಳಿ ಸಾರುತ್ತಿರುವಾಗ ತಡವಾಗಿ ಬಂದವನೊಬ್ಬ ಬಸ್ಸಿನ ಹಿಂಬದಿಯಲ್ಲಿ ಓಡುತ್ತಿದ್ದುದು ಕಂಡು ನನಗೆ ಎಲ್ಲೋ ಕಚಗುಳಿ ಇಟ್ಟಂತಾಯಿತು... ನಾನೂ ವರ್ಷಗಟ್ಟಲೆ ಹೀಗೆ ಬಸ್ಸಿನ ಹಿಂದೆ ಓಡಿದ್ದ ನೆನಪಿನ ಝಲಕ್ ಆ ಕ್ಷಣ ಕಣ್ಮುಂದೆ ಸಾಗಿ ಹೋಯ್ತು. ಯಾಕೋ ಇಂದು ಓಡಿ ಬಸ್ ಹಿಡಿಯಬೇಕೆಂದೆನಿಸಲಿಲ್ಲ. ಎರಡೇ ನಿಮಿಷಗಳಲ್ಲಿ ಮತ್ತೊಂದು ಬಸ್ ಸಹಾ ಬಂತು... ಟಿಕೇಟು ಪಡೆದು ಸಾಗಿದ ನನಗೆ ಮತ್ತದೇ ಚಟ... ಕೂತೊಡನೆ ಒಳಗಿದ್ದ ಮೈಸೂರು ಡೈರಿ ಪುಸ್ತಕ ತೆರೆದು ಓದಲಾರಂಭಿಸಿದೆ. ಆಗಾಗ ಕಿಟಕಿಯ ಹೊರಗೊಂದು ಕಿರುನೋಟ. ಅದು ಬಿಟ್ಟರೆ ಬೇರಾವುದೇ ಚಿಂತೆಯಿಲ್ಲದ ಸುಖಕರ ಪ್ರಯಾಣ (ಕೂತಿದ್ದೆ ನೋಡಿ ಅದಕ್ಕೆ ಹೀಗೆನಿಸಿದ್ದು) ಇದೆಲ್ಲದರ ನಡುವೆ,  ಮರೆಯಾಗಿ ನನ್ನ ಬ್ಯಾಗಿನಲ್ಲಿ ಅಡಗಿದ್ದ ಹೆಡ್ ಫೊನ್ ಮತ್ತೆ ಅದರ ಸ್ಥಳ ಆಕ್ರಮಿಸಿಕೊಂಡು ವಂದೇ ಮಾತರಂ, ದೇವರನಾಮ, ಭಕ್ತಿಗೀತೆ, ಚಿತ್ರಗೀತೆ, ನಂತರ ನನ್ನ ಮೊಬೈಲಿನಲ್ಲಿದ್ದ ಮತ್ತೊಂದಿಷ್ಟು ಗೀತೆಗಳನ್ನು ನನ್ನ ಕಿವಿಗೆ ರವಾನಿಸುತ್ತಿತ್ತು.

 ಮೆಜೆಸ್ಟಿಕ್ ಹತ್ತಿರ ಬರುತ್ತಿದ್ದಂತೆ ಯರ್ರಾಬಿರ್ರಿ ಚಾಲನೆ ಮಾಡುತ್ತಿದ್ದ ಆಟೋ ಡ್ರೈವರ್ರುಗಳಿಗೆ ಬಯ್ದ ಬಸ್ ಡ್ರೈವರ್, ನಂತರ ಅಲ್ಲಿನ ಗೋಡೆಗಳ ಮೇಲಿದ್ದ ಪೋಸ್ಟರ್ರುಗಳ ಬಣ್ಣಗಳು, ಸರಸರನೆ ನೆಡೆಯುತ್ತಿದ್ದ ಜನಜಂಗುಳಿ, ಇನ್ನೇನು ಬಸ್ ಸ್ಟಾಪ್ ಬಂದೇ ಬಿಡ್ತು, ಇಳಿದು ಸರಾಗವಾಗಿ ನನಗೇನೂ ಮರೆತೇ ಇಲ್ಲವೆನ್ನುವಂತಹ ಮುಂದಿನ ನನ್ನ ಬಸ್ ಸ್ಟಾಪಿನ ಕಡೆ ಹೆಜ್ಜೆ ಇಟ್ಟಾಗಿತ್ತು. ಅಲ್ಲೇ ಇದ್ದ ವಜ್ರ ಧರಿಸಿದ ಕೆಂಪು ಸುಂದರಿ "ವೋಲ್ವೋ" ಮಡಿಲೇರಿ ಕುಳಿತು ಮಡಿವಾಳದ ಕೃಪಾನಿಧಿ ಕಾಲೇಜಿನ ಬಳಿ ಬಂದಿಳಿಯುವುದರ ಒಳಗೆ ಮೈಸೂರು ಡೈರಿಯ ೩೦-೩೫ ಪುಟಗಳ ಓದು ಮುಗಿದಿತ್ತು.  ಹಾ.ಮಾ ನಾಯಕರ ಮುನ್ನುಡಿಯೇ ನಕ್ಕು ನಲಿಸಿತ್ತು ಒಂದು ವರ್ಷ ಹಿಂದುರುಳಿದ್ದ ನನ್ನ ಮನಸ್ಸನ್ನೂ ಕೂಡ. ಪುಸ್ತಕದಲ್ಲಿನ ಪ್ರಕೃತಿಯ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯದ ೩೬೫ ದಿನಗಳ ಬಗ್ಗೆ ವಿವರಿಸಿರುವುದು, ಅಲ್ಲಿನ ಜನರ ಪರಿಚಯ ಮಾಡಿಸುವುದರ ಬಗೆ, ದೈನಂದಿನ ಚಟುವಟಿಕೆ, ಕೃತಿಯಲ್ಲಿ ಕಂಡುಬರುವ ವ್ಯಂಗ್ಯ, ಸತ್ಯ ಇತ್ಯಾದಿಗಳ ವಿಚಾರಗಳನ್ನು ಸುರುಳಿ ಸುರುಳಿಯಾಗಿ ವಿವರಿಸಿರುವ ಹಾ.ಮಾ ನಾಯಕರ ಬರಹ ಕೂಡ ತುಂಬಾ ಮೆಚ್ಚುಗೆ ಆಯಿತು. ಇದೆಲ್ಲದರೊಡನೆ ನನ್ನ ಈ ದಿನದ ಬಗ್ಗೆ ನನಗೇ ಏನೆನ್ನಿಸುತ್ತಿದೆ ಎಂದು ಯೋಚಿಸುವ ಅವಕಾಶ ಕೂಡ ಲಭಿಸಿತ್ತು.  ಯಾವುದೇ ಟ್ರಾಫಿಕ್ ನ ಬವಣೆಗೆ ತಲೆಯೊಡ್ಡದೆ ಅಫೀಸಿನೆಡೆಗೆ ನಡೆದ ನನ್ನ ಪಯಣದಲ್ಲಿ ರಾಜಯೋಗ ಲಭಿಸಿದಂತೆ ಭಾಸವಾಯಿತು! 

 ಕೃಪಾನಿಧಿ ಕಾಲೇಜಿನ ಸ್ಟಾಪ್ ಹತ್ತಿರ ಬಂದಾಗ ಕೊಂಚ ಹೊತ್ತು ನಿಲ್ಲಿಸಿದ ಬಸ್ ನ ಡ್ರೈವರ್ ಬಳಿ ಸಾರಿ ಬಾಗಿಲು ತೆಗೆಯಿರೆಂದು ಕೇಳಿಕೊಂಡಾಗ (ಕಾರಣವಿದೆ) ಅವನಾಡಿದ ಕುಹಕದ ಮಾತಿಗೆ ಎದುರಾಡದೆ, ಕೆಳಗಿಳಿದೆ ಅವನಿಗೊಂದು ಸ್ಮೈಲ್ ಕೊಟ್ಟು ಹೊರಟ ನನ್ನನ್ನು ಅವ ಪಿಳಿಪಿಳಿ ಕಣ್ಬಿಟ್ಟು ಸಿಗ್ನಲ್ ಬದಲಾಗುವವರೆಗು ನೋಡಿದ್ದು ನನ್ನ ಗಮನಕ್ಕೆ ಬಂತು.. ನಂತರ ಅರ್ಧ ಕಿ.ಮಿ ನೆಡೆದು ಮುಂದಿನ ಬಸ್ ಸ್ಟಾಪ್ ನ ಬಳಿ ಸ್ವಲ್ಪ ಕಾದು ನಿಂತೆ.. ಮುಂದಿರುವ ಫೋಲಿಸ್ ಶಾಲೆಯ ಬೋರ್ಡ್ ಓದಿ ಮುಗಿಸುವಷ್ಟರಲ್ಲಿ ಬಂದ ಬಸ್, ಇಲ್ನೋಡಪ್ಪ ಇದೆ ಮಜಾ, ಇನ್ನು ಅಫೀಸಿನವರೆಗೆ ನಿಂತು ಸಾಗಬೇಕು ಎಂದು ಹತ್ತಿ ನಿಂತಾಯಿತು. ಒಂದೆರಡು ಸ್ಟಾಪುಗಳ ನಂತರ ಕೂರುವುದಕ್ಕೂ ಸ್ಥಳ ದೊರೆಯಿತು. ಗಡಿಯಾರ ನೋಡಿಕೊಂಡಾಗ ನನಗೇ ಆಶ್ಚರ್ಯ.. ಅರೆ ಕಾರಿನಲ್ಲೂ ಇಷ್ಟೇ ಸಮಯ ತೆಗೆದುಕೊಳ್ಳುತ್ತಿದ್ದೆನೇನೋ ಎಂದು...

 ಅಫೀಸಿನ ಬಳಿ ಬಂದಾಗ ಗೇಟಿನ ಬಳಿಯಿದ್ದ ವಾಚ್ಮನ್ಗೂ ಆಶ್ಚರ್ಯ ಇವರ್ಯಾಕೆ ನೆಡೆದು ಬರ್ತಿದ್ದಾರೆ ಅಂತ... ಶುಭೋದಯ ಹೇಳಿ ಮುನ್ನಡೆದು, ಬಿಸಿ ಬಿಸಿ ಕಾಫಿ ಹೀರಿ ಕೂತು ಈ ಬ್ಲಾಗ್ ಬರೆಯುತ್ತಲೇ ಇಂದು ಮಾಡಿ ಮುಗಿಸಬೇಕಿರುವ ಕೆಲಸಗಳ ಪಟ್ಟಿ, ಮೈಲ್, ಮೆಸೆಂಜರುಗಳ ಸುದ್ದಿದಾಸ್ತಾನನ್ನು ಓದಿ ಮುಗಿಸಿಯಾಗಿದೆ... ಇನ್ನು ಕೆಲಸ ಶುರುಆಯ್ತು ಅಂತಾನೆ...

 ಮುಂದುವರೆಯುತ್ತದೆ..

ಎಲ್ಲರಿಗೂ ಶುಭದಿನದ ಹಾರೈಕೆಗಳೊಂದಿಗೆ...

Rating
No votes yet

Comments