ವಿಮಾನಪುರ

ವಿಮಾನಪುರ

'ವಿಮಾನಪುರ' ಎಂಬ ಹೆಸರು ವಿಮಾನ ಕಾರ್ಖಾನೆಯ ಸುತ್ತಲಿನ ಬಡಾವಣೆಗಳಿಗೆ ೧೯೬೦ರಷ್ಟು ಹಿಂದಿನಿಂದಲೂ ಬಹು ಅನ್ವರ್ಥಕವಾಗಿ ಬಳಸಲಾಗುತ್ತಿದೆ. ಇಲ್ಲಿ ನಾವು ವಿಮಾನಪುರ ಅಂಚೆಕಚೇರಿ, ವಿಮಾನಪುರ ತಂತಿಕಚೇರಿ, ವಿಮಾನಪುರ ದೂರವಾಣಿ ವಿನಿಮಯಕೇಂದ್ರ, ವಿಮಾನಪುರ ರೈಲುನಿಲ್ದಾಣ, ವಿಮಾನಪುರ ಪಶ್ಚಿಮ ಪ್ರಾಥಮಿಕ ಶಾಲೆ, ವಿಮಾನಪುರ ಪೂರ್ವಪ್ರಾಥಮಿಕ ಶಾಲೆ, ವಿಮಾನಪುರ ಪ್ರೌಢಶಾಲೆ, ವಿಮಾನಪುರ ಸಹಕಾರ ಸಂಘ, ವಿಮಾನಪುರ ಪೊಲೀಸ್ ಠಾಣೆ ಇತ್ಯಾದಿಗಳನ್ನು ಕಾಣಬಹುದಾಗಿತ್ತು.

ದೂರವಾಣಿಕೇಂದ್ರ ಮತ್ತು ಅಂಚೆಕಚೇರಿಗಳನ್ನು ಹೊರತುಪಡಿಸಿದರೆ ವಿಮಾನಪುರ ರೈಲುನಿಲ್ದಾಣ ಈಗ ಮಾಯವಾಗಿ ಅದರ ಜಾಗದಲ್ಲಿ ಎಚ್‌ಎಎಲ್ ಮಾರ್ಕೆಟ್ ಬಂದಿದೆ. ವಿಮಾನಪುರ ಪೊಲೀಸ್‌ಠಾಣೆ ಯಾವುದೆಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಇನ್ನು ವಿಮಾನಪುರ ಶಾಲೆಗಳೂ ಹೋಗಿ ಐಸಿಎಸ್ಇ, ಸಿಬಿಎಸ್ಇ ಶಾಲೆಗಳಿಗೆ ಸ್ಥಳಾವಕಾಶ ಮಾಡಿಕೊಟ್ಟಿವೆ. ಈ ಪ್ರದೇಶದ ಎಲ್ಲ ಬ್ಯಾಂಕುಗಳೂ, ಕಚೇರಿಗಳೂ, ಅಂಗಡಿ ಮುಂಗಟ್ಟೆಗಳೂ, ಮಂದಿರ ಮಸೀದಿ ಚರ್ಚುಗಳೂ ಶಾಲೆಗಳೂ ವಿಮಾನಪುರದ ಹೆಸರನ್ನು ಕಡೆಗಣಿಸುತ್ತಿವೆ.

ನಮ್ಮ ವಸತಿ ಪ್ರದೇಶದ ಜನ ತಮ್ಮ ವಿಳಾಸಗಳಲ್ಲಿ 'ವಿಮಾನಪುರ' ಎಂಬ ಹೆಸರಿನ ಉಲ್ಲೇಖ ಮಾಡುವುದೇ ಇಲ್ಲ. ಜನಗಳ ಬಾಯಲ್ಲಾದರೂ "ವಿಮಾನಪುರ" ಎಂಬ ಸೊಲ್ಲು ಕೇಳುತ್ತದೆಯೇ? ಅದೂ ಇಲ್ಲ. ಬಸ್ಸಿನಲ್ಲಿ ಹಿಂದೊಮ್ಮೆ ವಿಮಾನಪುರ ಎಂಬ ಹೆಸರು ಹೇಳಿ ಟಿಕೆಟ್ ಪಡೆಯಬಹುದಿತ್ತು. ಇಂದು ವಿಮಾನಪುರ! ಅದೆಲ್ಲಿದೆ? ಎಂದು ಕೇಳುವ ಸನ್ನಿವೇಶ ಎದುರಾಗುತ್ತದೆ.

೬೦ರ ದಶಕದಲ್ಲಿ ಈ ಪ್ರದೇಶವೆಲ್ಲ ತಮಿಳರ ದೌರ್ಜನ್ಯದಲ್ಲಿ ನಲುಗಿದ್ದಾಗ ನಾರಾಯಣರಾವ್ ಪಿಸ್ಸೆ ಎಂಬ ಜನಾನುರಾಗಿ ವೈದ್ಯರು ಹಾಗೂ ತಿಮ್ಮರಾಜೇ ಅರಸು ಮುಂತಾದ ಕಟ್ಟಾ ಕನ್ನಡಿಗರು ಹುಟ್ಟುಹಾಕಿದ "ಕನ್ನಡ ಸೇವಾ ಸಮಾಜ"ವು ಡಾ. ರಾಜ್ ಕುಮಾರ್, ವಾಟಾಳ್ ನಾಗರಾಜ್ ಮುಂತಾದ ಮಹನೀಯರನ್ನು ಕರೆಸಿ ಕನ್ನಡಕ್ಕೊಂದು ಸ್ಥಾನ ಕಲ್ಪಿಸಿಕೊಟ್ಟಿತು. ವಾಟಾಳರ ಅಭಿಮಾನಿಯಾಗಿ ರೂಪುಗೊಂಡ ಅ ತಿ ರಂಗನಾಥ ಎಂಬ ಯುವಕ ಇಲ್ಲಿನ ಕನ್ನಡದ ಕೆಲಸಗಳಲ್ಲಿ ತನ್ನದೇ ಛಾಪು ಮೂಡಿಸಿದರು. ಅವರೆಲ್ಲ ಸೂಚಿಸಿದ ಹೆಸರು ವಿಮಾನಪುರ. ಇದು ನಮ್ಮ ಕನ್ನಡದ ಹೆಸರು. ಈ ಹೆಸರಲ್ಲಿ ಕನ್ನಡತನದ ಸೊಗಡಿದೆ. ಕನ್ನಡ ಸಂಸ್ಕೃತಿಯ ಪ್ರತೀಕವಿದೆ. ಕನ್ನಡಿಗರಾದ ನಾವೇ ಇದನ್ನು ಮರೆತುಬಿಡುವುದು ಸಾಧುವಲ್ಲ. ನಮ್ಮ ಹಿರಿಯರು ಮಾಡಿಟ್ಟುಹೋದ ಈ ಕನ್ನಡತನದ ಆಸ್ತಿಯನ್ನು ನಾವು ಬಹು ಜತನದಿಂದ ಉಳಿಸಿಕೊಳ್ಳಬೇಕಿದೆ.

ಅನ್ನಸಂದ್ರಪಾಳ್ಯ, ಲಾಲ್ ಬಹದ್ದೂರ್‌ಶಾಸ್ತ್ರೀ ನಗರ, ಇಸ್ಲಾಂಪುರ, ಕೋಣಯ್ಯನ ಅಗ್ರಹಾರ, ಶ್ರೀರಾಮನಗರಿ, ನಂಜಾರೆಡ್ಡಿ ಕಾಲನಿ, ಮೃಗೇಶಪಾಳ್ಯ (ಮುರುಗೇಶಪಾಳ್ಯ ಎನ್ನುವುದು ತಪ್ಪು), ಎಚ್‌ಎಎಲ್ನ ಹಳೇ ವಸತಿ ಪ್ರದೇಶ, ಇಸ್ರೋ, ಎನ್‌ಎಎಲ್, ಚಲ್ಲಘಟ್ಟ, ಬೇಚಿರಾಕ್ ಬೇಲೂರು, ವಿಮಾನನಿಲ್ದಾಣ, ವಿಮಾನನಿಲ್ದಾಣ ಪೊಲೀಸ್‌ಠಾಣೆ, ಎಂಎಸ್‌ಐಎಲ್, ಎಚ್‌ಎಎಲ್ ಮುಖ್ಯ ಕಾರ್ಖಾನೆ, ನಿಯಂತ್ರಣಗೋಪುರ, ಹೆಲಿಕಾಪ್ಟರ್ ವಿಭಾಗ, ಎರಕ ಕುಲುಮೆ ವಿಭಾಗ, ತರಬೇತಿಕೇಂದ್ರ, ಸಿಬ್ಬಂದಿ ಕಾಲೇಜು, ಎಚ್‌ಎಎಲ್ ಆಸ್ಪತ್ರೆ, ಎಚ್‌ಎಎಲ್ ಕಲ್ಯಾಣಮಂಟಪ, ಎಚ್‌ಎಎಲ್ ಮಾರುಕಟ್ಟೆ, ಎಚ್ಎಇಎ, ಎಚ್‌ಎಒಜಿ, ಅಂಬೇಡ್ಕರ್ ಸಂಘ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವೆಲ್ಲವುಗಳೂ ವಿಮಾನಪುರದ ವ್ಯಾಪ್ತಿಯಲ್ಲಿ ಬರುವುದರಿಂದ ಅತಿ ತುರ್ತಾಗಿ ಹಾಗೂ ಅವಶ್ಯವಾಗಿ "ವಿಮಾನಪುರ" ಹೆಸರನ್ನು ಬಳಸಬೇಕು.

Rating
No votes yet