"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೮)

"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೮)

    ರಾಷ್ಟ್ರಪತಿ ಡಾll A.P.J. ಅಬ್ದುಲ್ ಕಲಾಮ್ ಅವರೊಂದಿಗೆ ಸ್ವಾಮಿ ಹರ್ಷಾನಂದರು. ಸಂದರ್ಭ: Concise Encyclopedia of Hinduism ಲೋಕಾರ್ಪಣೆಯ ಸಮಾರಂಭ
ಚಿತ್ರ ಕೃಪೆ: ಗೂಗಲ್; ಕೊಂಡಿ: http://www.google.co.in/imgres?imgurl=http://srijanfoundation.files.wordpress.com/2008/06/new-picture-17.png&imgrefurl=http://www.srijanfoundation.org/misc/encyclopaedia-on-hinduism-released-by-dr-abdul-kalam/&h=284&w=305&sz=184&tbnid=BGbYSscuQGBaYM:&tbnh=85&tbnw=91&prev=/search%3Fq%3Dswami%2BHarshananda%26tbm%3Disch%26tbo%3Du&zoom=1&q=swami+Harshananda&usg=__Kza2zOgmVc9DNzwFjDroI8xCS6s=&docid=-G0_ykUqmtYZWM&sa=X&ei=jLjpT8vyKY-urAfZ8PD-DQ&ved=0CGAQ9QEwAw&dur=399
======================================================================================

          ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೭)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%E0%B2%A4-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AE-%E0%B3%AD/21/06/2012/37136

ಬ್ರಹ್ಮಸೂತ್ರಗಳ ಸಾಹಿತ್ಯ

    ವೇದಾಂತ ತತ್ವಕ್ಕೆ ಮೂಲ ಗ್ರಂಥವಾಗಿರುವ ಬ್ರಹ್ಮಸೂತ್ರವು ತನ್ನ ಅಭೌತಿಕತೆ (ಆಧ್ಯಾತ್ಮಿಕತೆ) ಮತ್ತು ತಾರ್ಕಿಕತೆಯಿಂದಾಗಿ, ಶತಮಾನಗಳಿಂದ ಲೆಕ್ಕವಿಲ್ಲದಷ್ಟು ವಿದ್ವಾಂಸರ ಗಮನವನ್ನು ಸೆಳೆದಿದೆ. ಆಚಾರ್ಯರುಗಳು ಅವುಗಳ ಮೇಲೆ ಬರೆದ ನೇರವಾದ ಭಾಷ್ಯಗಳಲ್ಲದೆ ಅದಕ್ಕೆ ಬರೆದ ಹಲವಾರು ಉಪಭಾಷ್ಯಗಳು ಮತ್ತು ವಾರ್ತಿಕಗಳು (ಉಪವ್ಯಾಖ್ಯಾನ, ಟಿಪ್ಪಣಿ ಇತ್ಯಾದಿ) ಬ್ರಹ್ಮಸೂತ್ರದ ಬಗೆಗಿನ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಬ್ರಹ್ಮಸೂತ್ರಗಳಿಗೆ ಹೀಗೆ ಬರೆಯಲ್ಪಟ್ಟ ವ್ಯಾಖ್ಯಾನ ಗ್ರಂಥಗಳಲ್ಲಿ ಇಂದು ನಮಗೆ ಲಭ್ಯವಿರುವ ಹೆಚ್ಚಿನ ಗ್ರಂಥಗಳು ಅದ್ವೈತ ಸಿದ್ಧಾಂತಕ್ಕೆ ಸಂಭಂದಿಸಿದ್ದಾಗಿವೆ.

    ಶಂಕರಭಾಷ್ಯಕ್ಕೆ ಬರೆದ ಮೂರು ಟೀಕೆಗಳು ಅಥವಾ ಉಪವ್ಯಾಖ್ಯಾನಗಳು ನಮಗೆ ಇಂದು ಸಂಪೂರ್ಣವಾಗಿ ಲಭ್ಯವಾಗಿವೆ. ಅವೆಂದರೆ; ವಾಚಸ್ಪತಿ ಮಿಶ್ರನ (ಕ್ರಿ.ಶ. ೮೪೦) ಭಾಮತೀ, ಆನಂದಗಿರಿಯ (ಕ್ರಿ.ಶ. ೧೨೬೦) ನ್ಯಾಯನಿರ್ಣಯ, ಮತ್ತು ರಾಮಾನಂದನ (ಕ್ರಿ.ಶ. ೧೭ನೇ ಶತಮಾನ) ರತ್ನಪ್ರಭಾ.

    ಶಂಕರರ ಪ್ರತ್ಯಕ್ಷ ಶಿಷ್ಯನಾದ ಪದ್ಮಪಾದ (ಕ್ರಿ.ಶ. ೮೨೦) ಬರೆದ 'ಪಂಚಪಾದಿಕ'ವು ಕೇವಲ ಮೊದಲ ನಾಲ್ಕು ಸೂತ್ರಗಳ (ಶಂಕರಭಾಷ್ಯ ೧.೧.೪) ಬಗ್ಗೆ ಚರ್ಚಿಸುತ್ತದೆ.  ಪ್ರಕಾಶಾತ್ಮನ್ (ಕ್ರಿ.ಶ. ೧೨೦೦) ತನ್ನ 'ಪಂಚ-ಪಾದಿಕಾ-ವಿವರಣಮ್' ಗ್ರಂಥದಲ್ಲಿ ಇದರ ಬಗ್ಗೆ ಟೀಕೆಯನ್ನು ಮಾಡಿದ್ದಾನೆ. ಇದರ ಬಗ್ಗೆ ಅಖಂಡಾನಂದ ಮುನಿಯು (ಕ್ರಿ.ಶ. ೧೩೫೦) ಬರೆದ 'ತತ್ವದೀಪನಮ್' ಎನ್ನುವ ಟಿಪ್ಪಣಿಯೂ ಲಭ್ಯವಿದೆ. ಈ ಎಲ್ಲಾ ಗ್ರಂಥಗಳು ಶಂಕರೋತ್ತರ ಕಾಲದಲ್ಲಿ 'ವಿವರಣ ಪ್ರಸ್ಥಾನ' ಎನ್ನುವ ಅದ್ವೈತ ಸಿದ್ಧಾಂತದ ಹೊಸ ಶಾಖೆಯು ಹೊರಹೊಮ್ಮಲು ಕಾರಣವಾಯಿತು.

    'ವಿವರಣ ಪ್ರಸ್ಥಾನ'ಕ್ಕೆ ವ್ಯತಿರಿಕ್ತವಾಗಿ, ಅಮಲಾನಂದನು (ಕ್ರಿ.ಶ. ೧೩ನೇ ಶತಮಾನ) 'ಭಾಮತಿ'ಯ ಬಗ್ಗೆ ಟೀಕೆಯನ್ನ ತನ್ನ 'ಕಲ್ಪತರು'ವಿನಲ್ಲಿ ಬರೆದು 'ಭಾಮತಿ ಪ್ರಸ್ಥಾನ'ವನ್ನು ಅಭಿವೃದ್ಧಿ ಪಡಿಸಿದನು. ಮತ್ತು ಅಪ್ಪಯ್ಯ ದೀಕ್ಷಿತರು (ಕ್ರಿ.ಶ. ೧೬ನೇ ಶತಮಾನ) 'ಕಲ್ಪತರು'ವಿಗೆ ಪೂರಕವಾಗಿ 'ಪರಿಮಳ' ಗ್ರಂಥವನ್ನು ರಚಿಸಿದರು.

    ಬ್ರಹ್ಮಸೂತ್ರಗಳ ಬಗ್ಗೆ ಬರೆದ ಹಲವಾರು ಗ್ರಂಥಗಳಲ್ಲಿ ಇತರೇ ಕೃತಿಗಳಿಗಿಂತ ಹೆಚ್ಚು ಪ್ರಮುಖವೆನಿಸುವ ಕೆಲವು ಕೃತಿಗಳ ಬಗ್ಗೆ ಇಲ್ಲಿ ಪ್ರಸ್ತಾಪಿಸಬಹುದೆನಿಸುತ್ತದೆ.  ಅವುಗಳೆಂದರೆ; ಸರ್ವಜ್ಞಾತ್ಮ ಮುನಿ (ಕ್ರಿ.ಶ. ೯೦೦) ಬರೆದ 'ಸಂಕ್ಷೇಪ-ಶಾರೀರಕಮ್', ವಿದ್ಯಾರಣ್ಯರು (ಕ್ರಿ.ಶ.೧೩೫೦) ರಚಿಸಿದ 'ವಿವರಣ-ಪ್ರಮೇಯ', ಶಂಕರಾನಂದರಿಂದ (ಕ್ರಿ.ಶ. ೧೪ನೇ ಶತಮಾನ) ರಚಿತವಾದ 'ಬ್ರಹ್ಮಸೂತ್ರದೀಪಿಕ' ಮತ್ತು ಸದಾಶಿವ ಬ್ರಹ್ಮೇಂದ್ರರಿಂದ (ಕ್ರಿ.ಶ. ೧೮ನೇ ಶತಮಾನ) ರಚಿಸಲ್ಪಟ್ಟ 'ಬ್ರಹ್ಮತತ್ವಪ್ರಕಾಶಿಕ'.

    ಹೋಲಿಕೆಯಲ್ಲಿ ಬೇರೆ ವೇದಾಂತ ಶಾಖೆಗಳು ಬ್ರಹ್ಮಸೂತ್ರದ ಬಗ್ಗೆ ಬರೆದ ಸಾಹಿತ್ಯವು ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ ಕೂಡ ಅವು ಗುಣಮಟ್ಟದಲ್ಲಿಯಾಗಲಿ ಅಥವಾ ವಿದ್ವತ್ತಿನಲ್ಲಾಗಲಿ ಅದ್ವೈತ ಸಿದ್ಧಾಂತಕ್ಕೆ ಕಡಿಮೆಯಿಲ್ಲದವು.

    ತಮ್ಮ ಮೇರು ಕೃತಿಯಾದ 'ಶ್ರೀಭಾಷ್ಯ'ವನ್ನು ರಚಿಸಿದ ನಂತರ ರಾಮಾನುಜರು ಮತ್ತೆರಡು ಶಾಸ್ತ್ರಗ್ರಂಥಗಳನ್ನು ಬ್ರಹ್ಮಸೂತ್ರದ ಬಗ್ಗೆ ಬರೆದರು; ಅವೆಂದರೆ 'ವೇದಾಂತದೀಪ' ಮತ್ತು 'ವೇದಾಂತಸಾರ'. 'ಶ್ರೀಭಾಷ್ಯ'ಕ್ಕೆ ಸುದರ್ಶನ ಸೂರಿ (೧೩ನೇ ಶತಮಾನ) ವಿರಚಿತ 'ಶ್ರುತಪ್ರಕಾಶಿಕ' ಎನ್ನುವ ಒಂದೇ ಒಂದು ವ್ಯಾಖ್ಯಾನ ಗ್ರಂಥವಿದೆ. ಮತ್ತು ಇದಕ್ಕೆ 'ತತ್ವಟೀಕಾ' ಎನ್ನುವ ಟೀಕಾ ಗ್ರಂಥವನ್ನು ವೇದಾಂತ ದೇಶಿಕರು (ಕ್ರಿ.ಶ. ೧೨೬೮-೧೩೬೯) ಬರೆದಿರುತ್ತಾರೆ.

    'ಬ್ರಹ್ಮಸೂತ್ರ'ಕ್ಕೆ ಬರೆದ ತಮ್ಮ 'ಭಾಷ್ಯ'ವಲ್ಲದೆ (ಸಾಮಾನ್ಯವಾಗಿ ಇದನ್ನು 'ಮಧ್ವ ಭಾಷ್ಯ'ವೆನ್ನುತ್ತಾರೆ) ಮಧ್ವರು 'ಅನುಭಾಷ್ಯ'ವನ್ನು ಪದ್ಯರೂಪದಲ್ಲಿ ಬರೆದಿದ್ದಾರೆ; ಇದರಲ್ಲಿ ತಮ್ಮ 'ಭಾಷ್ಯ'ದಲ್ಲಿ ಬರುವ ವಿವಿಧ ಅಧಿಕರಣಗಳ ತಾತ್ಪರ್ಯವನ್ನು ಕೊಟ್ಟಿರುತ್ತಾರೆ. ರಾಘವೇಂದ್ರತೀರ್ಥರು (ಕ್ರಿ.ಶ. ೧೫೯೮-೧೬೭೧) 'ಅನುಭಾಷ್ಯ'ಕ್ಕೆ ವಿಸ್ತಾರವಾದ ವ್ಯಾಖ್ಯಾನವನ್ನು ಬರೆದು ಅದಕ್ಕೆ 'ತತ್ವಮಂಜರಿ' ಎಂದು ನಾಮಕರಣ ಮಾಡಿದ್ದಾರೆ.

    ಮಧ್ವರ ದ್ವೈತ ಸಿದ್ಧಾಂತದ ಕೃತಿಗಳಲ್ಲಿ ಅತಿ ಹೆಚ್ಚು ಸಂಭ್ರಮಾಚರಣೆಯ ಗ್ರಂಥವೆಂದರೆ ಜಯತೀರ್ಥ ವಿರಚಿತ 'ನ್ಯಾಯಸುಧಾ'. ಈ ಗ್ರಂಥವು ಮಧ್ವರ 'ಅನುಭಾಷ್ಯ'ಕ್ಕೆ ಬರೆದ ಅತ್ಯಂತ ಕಾವ್ಯಾತ್ಮಕ ಹಾಗೂ ವಿದ್ವತ್ಪೂರ್ಣ ವ್ಯಾಖ್ಯಾನವಾಗಿದೆ. ಇದರೊಂದಿಗೆ ಜಯತೀರ್ಥರು ಬ್ರಹ್ಮಸೂತ್ರಗಳಿಗೆ ತಮ್ಮದೇ ಆದ ವ್ಯಾಖ್ಯಾನವನ್ನು ಈ 'ನ್ಯಾಯಸುಧಾ' ಗ್ರಂಥದಲ್ಲಿ ಪ್ರಚುರಪಡಿಸಿದ್ದಾರೆ.
   
    ನಿಂಬಾರ್ಕನು, ಬ್ರಹ್ಮಸೂತ್ರಗಳಿಗೆ ಬರೆದ ವ್ಯಾಖ್ಯಾನ ಗ್ರಂಥವಾದ 'ವೇದಾಂತ ಪಾರಿಜಾತ ಸೌರಭ' ಗ್ರಂಥವನ್ನು ಶ್ರೀನಿವಾಸನು (ಕ್ರಿ.ಶ. ೧೩ನೇ ಶತಮಾನ) ತನ್ನ 'ವೇದಾಂತ ಕೌಸ್ಥುಭ'ದ ಮೂಲಕ ವಿಸ್ತೃತಗೊಳಿಸಿದರೆ; ಇದನ್ನು ಕೇಶವ ಕಾಶ್ಮೀರಿನ್ (ಕ್ರಿ.ಶ. ೧೫ನೇ ಶತಮಾನ) ತನ್ನ 'ವೇದಾಂತ-ಕೌಸ್ಥುಭ-ಪ್ರಭಾ'ದ ಮೂಲಕ ಇನ್ನಷ್ಟು ವಿಸ್ತೃತಗೊಳಿಸಿದ್ದಾನೆ.

    ವೇದಾಂತ ತತ್ವದ ಪಂಡಿತರ ಗಮನವನ್ನು ಸೆಳೆದಿರುವ ಇತರ ಭಾಷ್ಯ ಗ್ರಂಥಗಳೆಂದರೆ, ವಿಜ್ಞಾನಭಿಕ್ಷು (ಕ್ರಿ.ಶ. ೧೫೫೦) ವಿರಚಿತ 'ವಿಜ್ಞಾನಾಮೃತ-ಭಾಷ್ಯ' ಮತ್ತು ಬಲದೇವನ 'ಗೋವಿಂದಭಾಷ್ಯ'ಕ್ಕೆ ಬರೆದ 'ಸೂಕ್ಷ್ಮ' ಎನ್ನುವ ವ್ಯಾಖ್ಯಾನ ಗ್ರಂಥ.

    ಮೇಲೆ ಚರ್ಚಿಸಿರುವ ಕೃತಿಗಳಲ್ಲದೆ, ಇನ್ನೂ ಹಲವಾರು ಮತ ಸ್ಥಾಪಕರು ವೇದಾಂತ ತತ್ವದ ಹಲವಾರು ವಿಚಾರಗಳನ್ನು ತಮ್ಮದೇ ಆದ ತತ್ವಗಳಿಗನುಗುಣವಾಗಿ ವಿಶ್ಲೇಷಿಸಿ ಅದಕ್ಕೆ ಸಂಭಂದ ಪಟ್ಟಂತೆ ಲೆಕ್ಕವಿಲ್ಲದಷ್ಟು ಶ್ರಾಸ್ತ್ರಗ್ರಂಥಗಳು ಮತ್ತು ವ್ಯಾಖ್ಯಾನ ಗ್ರಂಥಗಳನ್ನು ರಚಿಸಿದ್ದಾರೆ.

ಸಮಾರೋಪ

    ಉಪನಿಷತ್ತುಗಳಲ್ಲಿ ಪ್ರತಿಪಾದಿಸಿರುವ ತತ್ವಗಳ ಕ್ರಮಬದ್ಧ ಅನಾವರಣವಾದ ಬ್ರಹ್ಮಸೂತ್ರಗಳನ್ನು ಪ್ರಮುಖವಾಗಿ ಆಧರಿಸಿ ರೂಪುಗೊಂಡ ವೇದಾಂತ ಸಿದ್ಧಾಂತವು ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಪ್ರಮುಖವಾದ ಎಲ್ಲಾ ವಿಷಯಗಳನ್ನೂ; ಆಧುನಿಕ ಹಿಂದೂ ಚಳುವಳಿಗಳನ್ನೂ ಕೂಡ ಪ್ರಭಾವಗೊಳಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು.
                                                      ಸರ್ವೇ ಜನಾಃ ಸುಖಿನೋ ಭವಂತುl
                                                         ಓಂ ಶಾಂತಿ ಶಾಂತಿ ಶಾಂತಿಃ ll
                                                                                                                                                                   (ಸಮಾಪ್ತಿ)
=================================================================================================
ವಿ.ಸೂ.:ಇದು ಸ್ವಾಮಿ ಹರ್ಷಾನಂದ ವಿರಚಿತ "The six systems of Hindu Philosophy - A Primer"ಯಲ್ಲಿಯ Vedanta Darshanaನದ ೧೧೧ ರಿಂದ ೧೧೪ನೆಯ ಪುಟದ ಅನುವಾದದ ಭಾಗ.
=================================================================================================
 

Rating
No votes yet

Comments