ಶಿವನಿಗೆ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ಎರಡು

ಶಿವನಿಗೆ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ಎರಡು

 ಶಿವನಿಗೆ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ಎರಡು
ವೆಂಕಟಮಖಿ ಗೋವಿಂದದೀಕ್ಷಿತನ ಮತ್ತು ನಾಗಮ್ಮ ಇವರ ಮಗ. ಇವನಿಗೆ ವೆಂಕಟಾಧ್ವರಿ, ವೆಂಕಟೇಶ್ವರ ದೀಕ್ಷಿತ ಎಂಬ ಹೆಸರೂ ಇತ್ತು. ಇವರ ಕುಟುಂಬ ಶಿವಮೊಗ್ಗೆಯ ಹೊನ್ನಾಳಿ ಕಡೆಯಿಂದ ಬಂದ ಹೊಯ್ಸಳ ಕರ್ನಾಟಕರದ್ದೆಂದು ಹೇಳಲು ಆಧಾರಗಳು ದೊರೆತಿವೆ.ಗೋವಿಂದ ದೀಕ್ಷಿತ ವಿಜಯನಗರದ ಅಚ್ಯುತರಾಯನ ಆಸ್ಥಾನದಲ್ಲಿದ್ದ ಎಂದು ತಿಳಿದುಬಂದಿದೆ. ಅಚ್ಚುತ ರಾಯನ ಹೆಂಡತಿಯ ತಂಗಿಯನ್ನು, ಚೆವ್ವಪ್ಪ ನಾಯಕನಿಗೆ ಕೊಟ್ಟು ಮದುವೆ ಮಾಡಿ, ಅವನಿಗೆ ತಂಜಾವೂರನ್ನು ಬಳುವಳಿಯಾಗಿ ಕೊಡಲಾಯಿತು. ಆಗಲೇ ಗೋವಿಂದ ದೀಕ್ಷಿತ, ತಂಜಾವೂರಿಗೆ ಇವನು ಚೆವ್ವಪ್ಪನಾಯಕನೊಡನೆ ಹೋದ. ಗೋವಿಂದ ದೀಕ್ಷಿತನೇ ಚಾಣಕ್ಯನಂತೆ ನಿಂತು ಚೆವ್ವಪ್ಪನಿಂದ ರಾಜ್ಯವನ್ನು ಬೆಳೆಸಿದ ಎಂದು ಹೇಳಲಾಗಿದೆ. ವಿಜಯನಗ ಬಿದ್ದ ಮೇಲೆ, ತಂಜಾವೂರಿನ ಪಾಳಯಪಟ್ಟು ಮೇಲೆ ಬಂತು. ಗೋವಿಂದ ದೀಕ್ಷಿತ ಚೆವ್ವಪ್ಪನಿಗೂ. ಅವನ ಮಗ ಅಚ್ಯುತ ನಾಯಕನಿಗೂ, ಮೊಮ್ಮೊಗ ರಘುನಾಥ ನಾಯಕನಿಗೂ ಮಂತ್ರಿಯಾಗಿದ್ದವನು. ಗೋವಿಂದ ದೀಕ್ಷಿತ ಹೊಸದೊಂದು ರೀತಿಯ ವೀಣೆಯನ್ನು ನಿರ್ಮಿಸಿ, ಅದಕ್ಕೆ ರಘುನಾಥ ವೀಣೆ ಎಂದು ಹೆಸರಿಟ್ಟ. ಅವನಿಗೆ ಮುಂಚೆ ಇದ್ದ ವೀಣೆಗಳಲ್ಲಿದ್ದ ಕುಂದು ಕೊರತೆಗಳನ್ನು  ಹೋಗಲಾಡಿಸಿದ್ದರಿಂದ, ಇದು ಚೆನ್ನಾಗಿ ಪ್ರಚಾರಕ್ಕೆ ಬಂತು. ಈಗ ಇರುವ ವೀಣೆಗಳೆಲ್ಲ, ಇದರ ಮೇಲೆ ಆಧಾರಿತವಾದುವೇ. ಗೋವಿಂದ ದೀಕ್ಷಿತ ಸಂಗೀತಸುಧಾ ಎಂಬ ಪುಸ್ತಕವನ್ನೂ ಬರೆದಿದ್ದಾನೆ. ವೇದ ವೇದಾಂಗಗಳಲ್ಲೆಲ್ಲ ಇವನು ಭಾರೀ ಪರಿಣತಿ ಹೊಂದಿದ್ದನಂತೆ. ತಂಜಾವೂರಿನ ಬಳಿಯಲ್ಲಿ ಈಗಲೂ ಇವನಹೆಸರಿನಲ್ಲಿ ಗೋವಿಂದ ಗುಡಿ, ಗೋವಿಂದಪುರಂ ಎನ್ನುವ ಊರುಗಳಿವೆಯಂತೆ.
ವೆಂಕಟಮಖಿ, ತನ್ನ ತಂದೆ, ತನ್ನ ಅಣ್ಣ ಯಜ್ಞನಾರಾಯಣ ದೀಕ್ಷಿತ, ಮತ್ತು ರಾಜ ರಘುನಾಥ ನಾಯಕ, ಮತ್ತು  ತಾನಪ್ಪಾಚಾರ್ಯ ಎಂದೇ ಹೆಸರಾಗಿದ್ದ ವೆಂಕಟಮಂತ್ರಿಯ ಇವರೆಲ್ಲರ ಬಳಿ ಸಂಗೀತ, ವೇದ ಮತ್ತು ರಾಜ್ಯಾಡಳಿತಕ್ಕೆ ಬೇಕಾದ ಇತರ ವಿದ್ಯೆಗಳನ್ನು ಕಲಿತ ಎಂದು ತಿಳಿದುಬರುತ್ತದೆ. ಹಲವಾರು ಟೀಕೆಗಳನ್ನು, ಹೊತ್ತಗೆಗಳನ್ನು ಬರೆದಿದ್ದಾನೆ.ಇವನು ವಿಜಯರಾಘವನಾಯಕನಿಗೆ(ಕ್ರಿ.ಶ.೧೬೩೩-೧೬೭೪) ಮಂತ್ರಿಯೂ ಆಗಿಕೆ ಲಸ ಮಾಡುತ್ತಿದ್ದಿದ್ದರ ದಾಖಲೆಗಳಿವೆ.
ಆದರೆ ವೆಂಕಟಮಖಿಯ ಹೆಸರು ಇವತ್ತಿಗೂ ನಿಂತಿರುವುದು ಅವನೇ ಹೊಸದಾಗಿ  ಪ್ರಸ್ತಾಪಿಸಿದ ೭೨ ಮೇಳಕರ್ತಗಳ ಪದ್ಧತಿಯನ್ನು  ವಿವರಿಸುವ ಚತುರ್ದಂಡೀ ಪ್ರಕಾಶಿಕೆ ಎಂಬ ಪುಸ್ತಕದಿಂದ. ಸಂಗೀತದ ಹಂದರದ ನಾಲ್ಕು ಕಂಬಗಳು ಎನ್ನುವ ಕಲ್ಪನೆಯೇ ಚತುರ್ದಂಡಿ. ಗೀತ, ಠಾಯ, ಆಲಾಪ ಮತ್ತು ಪ್ರಬಂಧಗಳೇ ಈ ನಾಲ್ಕು ಸ್ತಂಭಗಳು. ಈ ಕಲ್ಪನೆಯೇನು ಹೊಸದಾಗಿ ವೆಂಕಟಮಖಿ ಮಾಡಿದ್ದಲ್ಲ. ಈ ನಾಲ್ಕು ಅಂಗಗಳನ್ನು ವಿವರಿಸುವ ಮೊದಲು ವೆಂಕಟಮಖಿ ರೂಢಿಯಂತೆ ಸ್ವರಗಳು, ವೀಣೆಯ ಪ್ರಕಾರಗಳು, ರಾಗಗಳು, ಮತ್ತು ಈ ರಾಗಗಳನ್ನು ವಿಂಗಡಿಸುವ ಮೇಳಗಳನ್ನು ವಿವರಿಸುತ್ಟಾನೆ. ಇಲ್ಲಿನ ಮೇಳ ಪ್ರಕರಣವೇ ವೆಂಕಟಮಖಿ ಸಂಗೀತಕ್ಕೆ ಕೊಟ್ಟ ಮುಖ್ಯ ಕೊಡುಗೆ.
ಸ್ವರಗಳು ಏಳು ಅನ್ನುವುದು ನಮ್ಮ ಸಂಗೀತದಲ್ಲಿ ಬಹಳ ಹಿಂದಿನಿಂದಲೇ ನಿಶ್ಚಯವಾಗಿದ್ದ ಸಂಗತಿ. ಇದರ ಹಿಂದೆ ಪ್ರಾಯೋಗಿಕ ಆಧಾರವಿದೆ. ಪಾಶ್ಚಾತ್ಯ ಸಂಗೀತದಲ್ಲೂ ಏಳೇ ಸ್ವರಗಳಿರುವುದಕ್ಕೆ ಇದೇ ಕಾರಣ. ಇದಕ್ಕಿಂತ ಹೆಚ್ಚು ವಿವರ ಇಲ್ಲಿ ಬೇಡ. ಅದರಲ್ಲಿ ಎರಡು ಸ್ವರಗಳನ್ನು ಪ್ರಕೃತಿಸ್ವರಗಳು ಎನ್ನತ್ತಾರೆ. ಎಂದರೆ, ಈ ಸ್ವರಗಳು ಬದಲಾಗವು ಎಂದು. ಸ ಮತ್ತು ಪ ಇವೇ ಆ ಸ್ವರಗಳು. ನಾವು ಹಾಡುವ base frequency ಯನ್ನೇ ನಾವು ಸ (ಆಧಾರ ಷಡ್ಜಾ)ಎನ್ನುವ ಸ್ವರದಿಂದ ಸೂಚಿಸುತ್ಟೇವೆ.ಹಾಗಿದ್ದಾಗ, ಇದರ ಒಂದೂವರೆಯಷ್ಟು frequency ಇರುವ ಸ್ವರ ಪ ಆಗುತ್ತದೆ. ಹಾಗೇ ಆಧಾರ ಷಡ್ಜದ ಎರಡರಷ್ಟು ಇರುವ frequencyಯು ಮೇಲಿನ , ಅಥವ ತಾರಸ್ಥಾಯಿ ಷಡ್ಜ (ಸ) ಆಗುತ್ತದೆ. ಈ ಎರಡೂ ಸ್ವರಗಳು ಯಾವುದೇ ರಾಗದಲ್ಲೂ ಬದಲಾಗವು. ಇನ್ನುಳಿದ ಸ್ವರಗಳು (ರಿ,ಗ, ಮ,ದ,ನಿ) ಬೇರೆಬೇರೆ ರಾಗದಲ್ಲಿ ಬೇರೆಬೇರೆ ಸ್ಥಾನದಲ್ಲಿ ಬರಬಹುದು. ಸುಮಾರು ೧೫-೧೬ನೇ ಶತಮಾನದಲ್ಲಿ ಇದ್ದ ಸಂಗೀತ ಪರಂಪರೆಯಿಂದ ಬಂದಹಾಗೆ, ಗೊತ್ತಿರುವ ಎಲ್ಲರಾಗಗಳಲ್ಲೂ, ಮ ಸ್ವರವು ಎರಡು ಪ್ರಭೇದವುಳ್ಳದ್ದಾಗಿತ್ತು. ಮತ್ತು, ರಿ,ಗ,ದ,ನಿ ಸ್ವರಗಳಲ್ಲಿ ಮೂರು ಸ್ಥಾನಭೇದಗಳಿದ್ದವು. ಆದರೆ ಅಲ್ಲೂ ಒಂದು ವಿಚಿತ್ರ - ಕೆಲವು ರಾಗದಲ್ಲಿ ರಿ ಎಂದು ಉಚ್ಚರಿಸುವ ಸ್ವರಸ್ಥಾನವನ್ನೇ  ಇನ್ನೊಂದು ರಾಗದಲ್ಲಿ ಗ ಎಂದು ಕರೆಯಲ್ಪಡುತ್ತಿತ್ತು. ಹಾಗೇ ಒಂದು ರಾಗದಲ್ಲಿ ದ ಎಂದು ಕರೆಯುವ ಸ್ವರಸ್ಥಾನ ಇನ್ನೊಂದು ರಾಗದಲ್ಲಿ ನಿ ಆಗಿರುತ್ತಿತ್ತು. ಹಾಗಾಗಿ ಪ್ರಾಯೋಗಿಕ ಅನುಭವವಿಲ್ಲದೇ, ಮೇಳಗಳ ಪ್ರಕರಗಳನ್ನು ಅರ್ಥಮಾಡಿಕೊಳ್ಲುವುದು ಅಷ್ಟು ಸುಲಭವಾಗಿರಲಿಲ್ಲ. (ವಿವರಗಳು ಹೆಚ್ಚಾದಲ್ಲಿ ತೊಡಕಾದೀತೆಂದು ಆ ಪೂರ್ಣವಿವರಗಳನ್ನೆಲ್ಲ ಇಲ್ಲಿ ನಾನು ಕೊಡುತ್ತಿಲ್ಲ.) ವೆಂಕಟಮಖಿಯ ಕ್ರಾಂತಿಕಾರಿ ಆಲೋಚನೆಯನ್ನು ಅರ್ಥಮಾಡಿಕೊಳ್ಲಲು ಇಷ್ಟು ಅರಿತಿದ್ದರೆ ಸಾಕು.
ವಿದ್ಯಾರಣ್ಯರೂ, ನಂತರ ಬಂದ ಲಾಕ್ಷಣಿಕರೂ, ಗೋವಿಂದ ದೀಕ್ಷಿತನೂ, ಇವರೆಲ್ಲ ತಮ್ಮ ಮೇಳಗಳನ್ನು ವಿವರಿಸುವಾಗ, ಅವುಗಳಿಗೆ ಯಾವ ಸ್ವರಗಳು ಬರುತ್ತವೆ ಎಂದು ಹೇಳಿದ್ದಾರೆ.  ಹಾಗೆ ಮಾಡುವ ವಿಭಾಗಗಳೆಲ್ಲ empirical. ಎಂದರೆ, ಮೇಳಗಳ ಸಂಖೆಯಾಗಲಿ, ಅವುಗಳ order ಆಗಲಿ, ಇವೆಲ್ಲಕ್ಕೂ ಯಾವುದೇ ನಿಯಮನಡಾವಳಿಗೆ ಅನುಗುಣವಾಗಿರಲಿಲ್ಲ. ಆದರೆ, ಎಲ್ಲ ಮೇಳಗಳಲ್ಲೂ ಏಳೂ ಸ್ವರಗಳೂ ಬರಬೇಕೆನ್ನುವುದು ಅಲಿಖಿತ ನಿಯಮ. ಇಲ್ಲವಾದರೆ, ಅದು ಮೇಳರಾಗವಾಗದು.
ವೆಂಕಟಮಖಿ ತರ್ಕವನ್ನು ಅಭ್ಯಾಸಮಾಡಿದ್ದವನು ಎಂದು ಮೊದಲೇ ಹೇಳಿದ್ದೆ. ಬಹುಶಃ ಇದು ಅವನಿಗೆ ತೀರಾ ಗೋಜಲು ವಿಧಾನ ಎನ್ನಿಸಿರಬಹುದು.ಹಾಗಾಗಿ ಅವನು ಮೇಳಗಳನ್ನು ವರ್ಣಿಸುವ ಮೊದಲು ಗಣಿತದ ಸಹಾಯ ತೆಗೆದುಕೊಳ್ಳುತ್ತಾನೆ. ಅವನ ವಿಧಾನವನ್ನು ಇಲ್ಲಿ ನೋಡೋಣ.
ಮೊದಲಿಗೆ ಅವನು ಸ್ವರಗಳ ಪ್ರಭೇದಗಳನ್ನು  ಅವನು ಸಂಕೇತಗಳ ಮೂಲಕ ಹೆಸರಿಸುತ್ತಾನೆ.
ರಿಷಭ ಸ್ವರದ ಮೂರು ವಿಧಗಳನ್ನು ಅವನು - ರ, ರಿ, ರು ಎಂದು ತೋರಿಸುತ್ತಾನೆ. ಹಾಗೇ, ಗಾಂಧಾರವು  ಗ, ಗಿ, ಗು ಗಳಾಗಿಯೂ, ಧೈವತವು ದ,ದಿ,ದು ಗಳಾಗಿಯೂ, ನಿಷಾದವು ನ,ನಿ,ನು ವಾಗಿಯೂ ಸಂಕೇತಿಸಲ್ಪಡುತ್ತದೆ. ಮಧ್ಯಮ ಸ್ವರಕ್ಕೆ ಎರಡೆ ವಿಧವಾದ್ದರಿಂದ, ಅದನ್ನು ಮ ಮತ್ತು ಮಿ ಎಂದು ಕರೆಯುತ್ತಾನೆ. ಇನ್ನು ಷಡ್ಜ ಪಂಚಮಗಳಲ್ಲಿ ಭೇದಗಳಿಲ್ಲ - ಹಾಗಾಗಿ ಅವನ್ನು ಸ ಮತ್ತು ಪ ಇಂದ ಗುರುತಿಸಬಹುದು.
ಹಾಗಾದರೆ, ಒಟ್ಟು ಸ್ವರಸ್ಥಾನಗಳು ೧೬ ಆದವು (ಸ,ರ,ರಿ,ರು,ಗ,ಗಿ,ಗು,ಮ,ಮಿ,ಪ,ದ,ದಿ,ದು,ನ,ನಿ,ನು);
೧. ಆದರೆ ಲಕ್ಷ್ಯದಲ್ಲಿ ರೂಢಿ ಇರುವಂತೆ (practical music), ಇವುಗಳಲ್ಲಿ ಕೆಲವು ಸ್ವರಸ್ಥಾನಗಳು ಒಟ್ಟಿಗೇ ಬರುವಂತಿಲ್ಲ. ಉದಾಹರಣೆಗೆ, ರು ಎಂದು ಯಾವ ರಿಷಭ ಸ್ವರವನ್ನು  ತೋರಿಸುತ್ಟೇವೋ (ಎಂದರೆ ರಿಷಭದ ಮೂರನೇ ವಿಧ), ಇನ್ನು ಕೆಲವು ರಾಗಗಳಲ್ಲಿ, ಅದೇ ಸ್ವ್ವರವು (ಬೇಕಾದರೆ frequency ಎಂದಿಟ್ಟುಕೊಳ್ಳಿ), ಗಿ ಎಂಬ ಸ್ವರವಾಗಿರುತ್ತೆ (ಎಂದರೆ, ಗಾಂಧಾರದ ಎರಡನೇ ವಿಧ). ಹಾಗಾದರೆ ಇದರಿಂದ ಏನಾಯಿತು? ರು, ಮತ್ತು ಗಿ ಸ್ವರಗಳು ಒಟ್ತಿಗೇ ಯಾವ ರಾಗದಲ್ಲುರುವಂತಿಲ್ಲ. ಅಲ್ಲವೇ? ಹಾಗೆ ಬಂದರೆ, ಯಾವುದು ರು, ಯಾವುದು ಗಿ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಹೀಗೇ ಒಟ್ಟು ನಾಲ್ಕು equality ಗಳು ಇವೆ. ಅದನ್ನುಈ  ಕೆಳಗೆ ಬರೆದಿದ್ದೇನೆ.
೨. ರಿ = ಗ ; ರು=ಗಿ; ದಿ=ನ ; ದು=ನಿ
೩. ನಮ್ಮ ಸಂಗೀತದಲ್ಲಿ ಏಳು ಸ್ವರಗಳಲ್ಲಿಪ್ರ್ತಿ ಸ್ವರವೂ ತನ್ನ ಹಿಂದಿನ ಸ್ವರಕ್ಕಿಂತ ಎತ್ತರದಲ್ಲಿ = higher frequecny ಬರಬೇಕೆಂಬುದು ಇನ್ನೊಂದು ನಿಯಮ. ಎಂದರೆ, ಅವರದ ಯಾವುದೇ ವಿಧವನ್ನು ಉಪಯೋಗಿಸಿದ್ದರೂ ಸ < ರಿ < ಗ < ಮ < ಪ < ದ<  ನಿ < ಮೇಲಿನ ಸ ( ಇಲ್ಲಿ ಮೂಲ ಸ್ವರಗಳನ್ನು ಹೇಳಿದ್ಡೇನೆ ಹೊರತು ಸ್ವರಗಳ ವಿಧಗಳನ್ನಲ್ಲ)
೪. ೨  ಮತ್ತು ೩ನ್ನು ಒಟ್ಟಿಗೇ ನೋಡಿದಾಗ, ಇವೆರಡಕ್ಕೂ  ಎಲ್ಲಾ ರಾಗಗಳು ಹೊಂದಬೇಕಾದರೆ, ಕೆಲವು ಸ್ವರ ಜೋಡಿಗಳನ್ನು ಉಪಯೋಗದೀಂದ ಹೊರಗಿಡಬೇಕಾಗುತ್ತೆ (ಉದಾಹರಣೆಗೆ ರು-ಗಿ, ರು-ಗ , ದಿ-ನ ದು-ನ ಇತ್ಯಾದಿ)
೫. ಈಗ ರಿಷಭ ಗಾಂಧಾರಗಳಲ್ಲಿ ಎಷ್ಟು ಸಂಯೋಜನೆ ತರ್ಕ ಬದ್ಧ ಎನ್ನುವುದನ್ನು ನೋಡೋಣ;(ಆಗುವುದನ್ನು ಹಸಿರಿನಲ್ಲೂ, ಆಗದ್ದನ್ನು ಕೆಂಪಿನಲ್ಲೂ ತೋರಿಸಿದ್ದೇನೆ)
ರ - ಗ
ರ - ಗಿ
ರ - ಗು
ರಿ - ಗ
ರಿ-  ಗಿ
ರಿ- ಗು
ರು-ಗ
ರು-ಗಿ
ರು-ಗು
ಅಂದರೆ, ರಿಷಭಗ ಗಾಂಧಾರಗಳಲ್ಲಿ ೬ ಸಂಯೋಜನೆಗಳು ಸಾಧ್ಯ. ಹೀಗೇ ಧೈವತ ನಿಷಾದಗಳಲ್ಲಿ ೬ ಸಂಯೋಜನೆಗಳು ಸಾಧ್ಯ.
ಇಷ್ಟು ಬುನಾದಿ ಹಾಕಿ ವೆಂಕಟಮಖಿ ಮುಖ್ಯ ಪ್ರಮೇಯಕ್ಕೆ ಬರುತ್ತಾನೆ.
ಈಗ ಒಂದು hypothetical ಸ್ವರ ಸಮೂಹ ಸಂಯೋಜನೆಯನ್ನು ನೋಡೋಣ - ಮೊದಲು ರಿಷಭ ಗಾಂಧಾರಗಳನ್ನು ಬದಲಾಯಿಸದೇ ಬರೀ ಧೈವತ ನಿಷಾದಗಳನ್ನು ಬದಲಿಸುತ್ತಾ ಹೋಗುವ:
ರ-ಗ-ದ-ನ (ಮೇಳ ೧)
ರ-ಗ-ದ-ನಿ (ಮೇಳ ೨)
ರ-ಗ-ದ-ನು (ಮೇಳ ೩)
ರ-ಗ-ದಿ-ನಿ (ಮೇಳ ೪)
ರ-ಗ-ದಿ-ನು (ಮೇಳ ೫)
ರ-ಗ-ದು-ನು (ಮೇಳ ೬)
ಒಟ್ಟು ಆರು ಸಂಯೋಜನೆಗಳು ಸಾಧ್ಯ. ಈಗ, ಇದೇ ರೀತಿಯಲ್ಲಿ, ರಿಷಭ ಗಾಂಧಾರಗಳನ್ನು ಬದಲಿಸುತ್ತಾ ಹೋದರೆ, ಪ್ರತಿಯೊಂದು ರಿಷಭಗಾಂಧಾರ ಕೂಟಕ್ಕೂ ಆರು ಮೇಳಗಳು ಸಾಧ್ಯ. ಅಂದರೆ, ಆರು ಆರಲಿ ಮೂವತ್ತಾರು ಮೇಳರಾಗಗಳದುವು.
ನಾವು ಮಧ್ಯಮವನ್ನು ಬಿಟ್ಟುಬಿಟ್ಟಿದ್ದೆವಲ್ಲ! ಆದರೆ, ಮೇಳರಾಗವಾಗಲು  ಏಳೂ ಸ್ವರಗಳು ಇರಲೇಬೇಕು.  ಈಗ ಮಧ್ಯಮದಲ್ಲಿ ಎರಡೇ ವಿಧವಾದ್ದರಿಂದ, ಈ ಮೂವತ್ತಾರು ಮೇಳರಾಗಗಳಿಗೆ ’ಮ’ ಪ್ರಬೇಧವನ್ನು ಸೇರಿಸಿ ಮೂವತ್ತಾರು ಮೇಳಗಳನ್ನು ಮಾಡೋಣ- ’ಮಿ’ ಸ್ವರವನ್ನು ಸೇರಿಸಿ ಮತ್ತೆ ಮೂವತ್ತಾರು ಮೇಳಗಳನ್ನು ಮಾಡೋಣ. ಹಾಗಾಗಿ ಮೇಳಗಳು ಒಟ್ಟು ಎಪ್ಪತ್ತೆರಡು.
 ಇಷ್ಟು ತರ್ಕಬದ್ಧವಾದ ಸಿದ್ಧಾಂತವನ್ನು  ಮುಂದಿಟ್ಟು, ಆಮೇಳೆ ಅವನು ಅವನ ಕಾಲದಲ್ಲಿ ಪ್ರಸಿದ್ಧವಾಗಿದ್ದ ೧೯ ಮೇಳಗಳನ್ನು ವರ್ಣಿಸಿ, ಅವನ scheme ನಲ್ಲಿ ಅವು ಎಷ್ಟಣೇ ಮೇಳಸಂಖ್ಯೆಯನ್ನು ಹೊಂದುತ್ತವೆ ಎಂದು ಹೇಳುತ್ತಾನೆ. ನಂತರ, ತಾನೇ ಹೊಸದಾಗಿ ಕಂಡುಹಿಡಿದ ರಾಗವೊಂದನ್ನೂ, ಅದರ ಮೇಳವನ್ನೂ ತೋರಿಸಿ,ಅವನ ಈ ಮೇಳಚಕ್ರದಿಂದ ಸಂಗೀತಗಾರರು ಹೇಗೆ ಹೊಸಹೊಸ ರಾಗಗಳನ್ನು ಮುಂದೆ ತರಬಹುದು ಎಂದು ತೋರಿಸುತ್ತಾನೆ. ಇದರಲ್ಲಿ ಅವನ ಪುರೋಗಾಮಿ (futuristic)  ವ್ಯಕ್ತಿತ್ವ ಚೆನ್ನಾಗಿ ತೋರುತ್ತದೆ.
ಕೊನೆಗೆ ಅವನು ಹೀಗೆ ಹೇಳುತ್ತಾನೆ: "ಈ ನನ್ನ ಕಲ್ಪನೆ ಬರೀ ಕಲ್ಪನೆಎಂದು ಆಕ್ಷೇಪಿಸದಿರಿ. ನಾನು ಇಂದು ತಿಳಿದ, ಮುಂದೆ ತಿಳಿಯಬರುವ, ಬೇರೆ ಬೇರೆ ದೇಶಗಳಲ್ಲಿ ಹಾಡುವ, ಎಲ್ಲಾ ತರಹದ ರಾಗಗಳನ್ನು ಒಳಗೊಳ್ಳಲು,   ಈ ಎಪ್ಪತ್ತೆರಡು ಮೇಳಗಳನ್ನು ನಿರ್ಮಿಸಿದ್ದೇನೆ. ಇದೇ ಹನ್ನೆರಡು ಸ್ವರಗಳಲ್ಲಿ ನಾನು ಕಲ್ಪಿಸಿದ ಎಪ್ಪತ್ತೆರಡು ಮೇಳಗಳಿಗಿಂತ ಹೆಚ್ಚೇ ಆಗಲಿ, ಕಡಿಮೆಯೇ ಆಗಲಿ, ಮೇಳಗಳನ್ನು ತೋರಿಸಲು ಸಾಕ್ಷಾತ್ ಹಣೆಗಣ್ಣನಾದ ಶಿವನಿಂದಲೂ ಅಸಾಧ್ಯ; ಅವನೂ ಇಂತಹ ಕಾರ್ಯಕ್ಕೆ ಕೈಹಾಕಲಾರ"
ತನ್ನ ಕೆಲಸದಲ್ಲಿದ್ದ ವೆಂಕಟಮಖಿಯ ನಂಬಿಕೆ ಸುಳ್ಳಾಗಲಿಲ್ಲ. ನಂತರದ ಲಾಕ್ಷಣಿಕರು, ಸಂಗೀತಗಾರರು, ವಾಗ್ಗೇಯಕಾರರೆಲ್ಲ ವೆಂಕಟಮಖಿಯ್ಯಿಂದ ಪ್ರಭಾವಿತರಾದರು. ಅವನು ಚತುರ್ದಂಡಿಯನ್ನು ಬರೆದದ್ದು ಸುಮಾರು ಕ್ರಿ.ಶ.೧೬೭೦ ರ ಸುಮಾರಿಗೆ. ಆಮೇಲೆ ನೂರು-ನೂರೈವತ್ತು ವರ್ಷಗಳ ನಂತರ ಬಂದ ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜ-ಮುತ್ತುದ್ವಾಮಿ ದೀಕ್ಷಿತ-ಶಾಮಾಶಾಸ್ತ್ರಿಗಳ (ಅವರಲ್ಲೂ, ಮೊದಲ ಇಬ್ಬರ) ರಚನೆಗಳಿಂದ ಈ ಪದ್ಧತಿ ಕರ್ನಾಟಕ ಸಂಗೀತದಲ್ಲಿ ಧೃಢವಾಗಿ ಬೇರೂರಿತು.
-ಹಂಸಾನಂದಿ
   
Rating
No votes yet