ಶೃಂಗಾರ ರಸಮಂಜರಿ
ಕರ್ನಾಟಕ ಸಂಗೀತ ದೇವಾಲಯಗಳಲ್ಲಿ ಬೆಳೆಯಿತು, ಅದಕ್ಕಾಗಿ ಅದು ಭಕ್ತಿ ಪ್ರಧಾನ ಮತ್ತು ರಾಜರ ಆಸ್ಥಾನಗಳಲ್ಲಿ ಬೆಳೆದ ಹಿಂದೂಸ್ತಾನಿ ಸಂಗೀತ ಶೃಂಗಾರ ರಸ ಪ್ರಧಾನ ಎಂಬ ಮಾತಿದೆ. ತುಸುಮಟ್ಟಿಗೆ ಇದು ನಿಜವೇ ಹೌದು. ಆದರೆ, ನವರಸಗಳಲ್ಲಿ ಮುಖ್ಯವಾದ ಶೃಂಗಾರವನ್ನು ನಮ್ಮ ವಾಗ್ಗೇಯಕಾರರು ಹಾಗೇನೂ ಕಡೆಗಣಿಸಿಲ್ಲ. ಕೆಲದಿನಗಳ ಮೊದಲು ಅಂಗಳದೊಳಗೆ ಬೆಳದಿಂಗಳು ತುಂಬಿತು ಎನ್ನುವ ಬರಹದಲ್ಲಿ ಪದ, ಜಾವಳಿಗಳ ಬಗ್ಗೆ ಸ್ವಲ್ಪ ಹರಟಿದ್ದೆ. ಇಷ್ಟೇ ಅಲ್ಲದೆ, ವರ್ಣಗಳು ಎನ್ನುವ ರಚನೆಗಳಲ್ಲೂ ಶೃಂಗಾರರಸವೇ ಪ್ರಧಾನ. ಆದರೆ, ಅವುಗಳಲ್ಲಿ ಸಾಹಿತ್ಯ ಗೌಣ. ಸಂಗೀತ ಮುಖ್ಯ.
ಹಿಂದಿನಿಂದಲೂ ರಸಗಳ ಪಟ್ಟಿ ಮಾಡುವಾಗ ಶೃಂಗಾರವೇ ಮೊದಲಿನದು. ಅಮರಕೋಶ ರಸಗಳನ್ನು "ಶೃಂಗಾರ ವೀರ ಕರುಣಾ ಅಧ್ಬುತ ಹಾಸ್ಯ ಭಯಾನಕಾ: ಭೀಭತ್ಸ ರೌದ್ರೋ ಚ ರಸಾ:" ಎಂದು ಎಂಟು ರಸಗಳನ್ನು ಪಟ್ಟಿಮಾಡುತ್ತದೆ. ಭರತನ ನಾಟ್ಯಶಾಸ್ತ್ರದಲ್ಲಿ, ಈ ಎಂಟರ ಜೊತೆಗೆ ಒಂಬತ್ತನೆಯದಾದ ’ಶಾಂತ’ವೆಂಬ ರಸವೂ ದೊರೆಯುತ್ತೆ. ಒಟ್ಟಿನಲ್ಲಿ ಶೃಂಗಾರವೇ ಮೊದಲ ರಸವಾಗಿತ್ತು ಎಂದು ನಾವಂದುಕೊಳ್ಳುವುದರಲ್ಲಿ ತಪ್ಪಿಲ್ಲ.
ಮುತ್ತುಸ್ವಾಮಿ ದೀಕ್ಷಿತರು (ಕ್ರಿ.ಶ. ೧೭೭೫- ೧೮೩೫) ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರು. ಅಪರಿಮಿತ ಮೇಧಾವಿ. ವೆಂಕಟಮಖಿಯ ಶಿಷ್ಯ ಪರಂಪರೆಯಲ್ಲಿ ಬಂದ ಇವರು, ವೆಂಕಟಮಖಿ ಪ್ರತಿಪಾದಿಸಿದ ಎಪ್ಪತ್ತೆರಡು ಮೇಳಕರ್ತ ರಾಗಗಳಲ್ಲಿ, ಆ ಮೊದಲು ಯಾವ ರಚನೆಗಳೂ ಇರದ ರಾಗಗಳಲ್ಲೂ ಕೃತಿಗಳನ್ನು ರಚಿಸುತ್ತಾ, ಮುಂಬರುವ ಸಂಗೀತಗಾರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು. ಅವರು ರಚಿಸಿದ ಎರಡು ಕೃತಿಗಳ ಬಗ್ಗೆ ಈಗ ಹೇಳಬಯಸುವೆ.
ಎಪ್ಪತ್ತೆರಡನೆಯ (ಕಡೆಯ) ಅಸಂಪೂರ್ಣ ಮೇಳಕರ್ತ ರಾಗವಾದ ರಸಮಂಜರಿಯಲ್ಲಿ ಮುತ್ತುಸ್ವಾಮಿ ದೀಕ್ಷಿತರು ಈ ರಚನೆಯನ್ನು ಮಾಡಿದ್ದಾರೆ.
ಶೃಂಗಾರ ರಸಮಂಜರೀಂ ಶ್ರೀ ಕಾಮಾಕ್ಷೀಂ ಗೌರೀಂ
ಶೃತಜನ ಕಲ್ಪವಲ್ಲರೀಂ ಚಿಂತಯೇಹಂ ||ಪಲ್ಲವಿ||
ಅಂಗಾರಕಾದಿ ಗ್ರಹದೋಷ ನಿವಾರಣಕರೀಂ
ಅನಂಗಕುಸುಮಾದಿಶಕ್ತಿ ಪ್ರಿಯಕರೀಂ
ದ್ವಿಸಪ್ತತಿ ರಾಗಾಂಗರಾಗ ಮೋದಿನೀಂ ಮತಂಗ ಭರತ ವೇದಿನೀಂ
ಮಂಗಳ ದಾಯಿನೀಂ ರಸಿಕಪುಂಗವ ಗುರುಗುಹ ಜನನೀಂ ||ಚರಣ||
ಇಲ್ಲಿ ಅವರು ಗೌರಿಯನ್ನು " ಶೃಂಗಾರರಸದ ಗೊಂಚಲೇ, ಕೇಳಿದವರಿಗೆ ಕೇಳಿದ್ದನ್ನು ಕೊಡುವಂತಹವಳೇ, ಮನ್ಮಥನ ಹೂಬಾಣಗಳ ಶಕ್ತಿಯನ್ನು ಮೆಚ್ಚುವವಳೇ, ಎಪ್ಪತ್ತೆರಡು ರಾಗಾಂಗರಾಗಗಳಿಂದ ಆನಂದಿಸುವವಳೇ, ಮತಂಗ ಭರತ ಮೊದಲಾದ ಸಂಗೀತಗಾರ ಮನಸ್ಸಿಗೆ ತೋರಿದವಳೇ, ರಸಿಕರಲ್ಲಿ ಚತುರನಾದ ಗುರುಗುಹ (ಷಣ್ಮುಖ)ನ ತಾಯೇ" ಎಂದು ನೆನೆಯುತ್ತಾರೆ. ಕಾಮಾಕ್ಷಿಯನ್ನು ಶೃಂಗಾರ ರಸವೇ ಮೈದಾಳಿರುವಂತೆ, ಶೃಂಗಾರರಸಮಂಜರೀ ಎಂದು ಕರೆದಿರುವುದು ಗಮನಿಸಬೇಕಾದ ಅಂಶ. ದೀಕ್ಷಿತರ ಅವರ ಶೈಲಿಯ ಪ್ರಕಾರದಲ್ಲಿ, ರಾಗದ ಹೆಸರನ್ನೂ ಚಮತ್ಕಾರವಾಗಿ ಕೃತಿಯೊಳಗೇ ಹೆಣೆದಿರುವುದನ್ನು ನೀವು ನೋಡಬಹುದು.
ಆಸಕ್ತರು ಈ ರಚನೆಯನ್ನು ಡಾಬಾಲಮುರಳಿ ಕೃಷ್ಣ ಅವರ ಕಂಠದಲ್ಲಿ ಇಲ್ಲಿ ಕೇಳಬಹುದು. ವಾದ್ಯ ಪ್ರಿಯರು ಮೈಸೂರಿನ ಡಾಆರ್ ವಿಶ್ವೇಶ್ವರನ್ ಅವರು, ಇದೇ ಕೃತಿಯನ್ನು ಇಲ್ಲಿ ವೀಣೆಯಲ್ಲಿ ನುಡಿಸಿರುವುದನ್ನು ಕೇಳಬಹುದು. ಕ್ಲಿಕ್ಕಿಸಿದಾಗ ತೆರೆದುಕೊಳ್ಳುವ ಪುಟದಲ್ಲಿರುವ ಮೊದಲ ರಚನೆ ಅದು.
ಇನ್ನು ಧವಳಾಂಗ ಎನ್ನುವ ೪೯ನೆ ಮೇಳಕರ್ತರಾಗದಲ್ಲಿರುವ ರಚನೆಯಲ್ಲಿ ದೀಕ್ಷಿತರು ಹೀಗೆ ಹೇಳುತ್ತಾರೆ.
ಶೃಂಗಾರಾದಿ ನವರಸಾಂಗೀ ಬೃಹದಂಬಾಲಿಂಗಿತ ಪುಂಗವ ಧವಳಾಂಗ ಶ್ರಿಯಂ ದೇಹಿ ||ಪಲ್ಲವಿ||
ಅಂಗಾರಕಾದಿ ವಿನುತಾಂಗಜ ತ್ರಿಪುರಾರೇ
ಗಂಗಾಧರ ವೃಷಭ ತುರಂಗ ಸತ್ಸಂಗ ಭಯಭಂಗ ಗುರುಗುಹಾಂತರಂಗ ಶ್ರೀ ಮಹಾಲಿಂಗ ||ಚರಣ||
"ಶೃಂಗಾರವೇ ಮೊದಲಾಗಿರುವ ನವರಸಗಳೇ ಮೈದಾಳಿದ ಬೃಹದಂಬಿಕೆಯು ತಬ್ಬಿದಂತಹ ಬಿಳಿಮೈಯ ಶಿವನೇ! ನನಗೆ ಒಳಿತುಗಳನ್ನು ಕೊಡು" ಎಂದು ಕೇಳುವ ದೀಕ್ಷಿತರು ಇಲ್ಲೂ ಒಂಬತ್ತೂ ರಸಗಳಲ್ಲಿ ಮುಖ್ಯವಾದ ಶೃಂಗಾರವನ್ನೇ ಹೆಸರಿಸಿರುವುದನ್ನು ನೋಡಿ. ಹಾಗೆಯೇ, ರಾಗದ ಹೆಸರಾದ ಧವಳಾಂಗ ಎನ್ನುವುದನ್ನು ಬಿಳುಪಾದ ಮುಖದ ಶಿವ ಎಂದರ್ಥ ಬರುವಂತೆ ಕಲ್ಪಿಸಿರುವುದನ್ನೂ ಗಮನಿಸಿ.
ಈ ರಚನೆಯನ್ನು ನೀವು ಟೊರಾಂಟೋ ಸಹೋದರರು - ಅಶ್ವಿನ್ ಮತ್ತು ರೋಹಿನ್ ಅಯ್ಯರ್ - ಇವರ ದನಿಯಲ್ಲಿ ಇಲ್ಲಿ ಕೇಳಬಹುದು. (ಈ ಕಲಾವಿದರ ತಾಣ ಇಲ್ಲಿದೆ: http://www.torontobrothers.com/)
ಇಲ್ಲಿ ಕೇಳಿಬಂದ ಮೂರೂ ಮುದ್ರಿಕೆಗಳಿಗೆ ನಾನು ಸಂಗೀತಪ್ರಿಯಕ್ಕೆ ( www.sangeethapriya.org ) ಆಭಾರಿಯಾಗಿದ್ದೇನೆ.
ಒಟ್ಟಿನಲ್ಲಿ ಮುತ್ತುಸ್ವಾಮಿ ದೀಕ್ಷಿತರ ರಚನಾಕೌಶಲ್ಯದ ಸಾಗರದಲ್ಲಿ ಇವು ಎರಡು ಹನಿಗಳು ಎಂದರೆ ತಪ್ಪಿಲ್ಲ.
ಕೊನೆಯ ಕೊಸರು:
ನೆನ್ನೆ ಶ್ರೀಕಾಂತ ಮಿಶ್ರಿಕೋಟಿಯವರು ಉಪ್ಪಡಿಸು ಎಂಬ ಪದದ ಬಗ್ಗೆ ಹೇಳಿದರು. ಅದು ಪುರಂದರ ದಾಸರ ಪದವೊಂದರಲ್ಲಿ ಬಂದಿದೆಯೆಂದು ಹೇಳಿದರು. ಹುಡುಕಿ ನೋಡಿದರೆ, ಎಂತಹ ಶೃಂಗಾರ ಸ್ವಲ್ಪ ಹೆಚ್ಚೇ ಅನ್ನಿಸುವ ಪದ ಅದು! ದಾಸರ ಕವಿತಾ ಸಾಮರ್ಥ್ಯಕ್ಕೆ ಸಾಕ್ಷಿ ಎನ್ನಿಸುವ ಅದನ್ನು ಇಲ್ಲಿ ಬರೆಯಲೇ ಬೇಕೆನ್ನಿಸಿತು.
ಈಗಲುಪ್ಪವಡಿಸಿದಳು ಇಂದಿರಾದೇವಿ ||ಪಲ್ಲವಿ||
ಚರಣಗಳು:
ಕಡೆಕಣ್ಣ ಅಂಗೈಯಿಂದಲೊರಸುತ ಸಡಿಲಿದ ತುರುಬ ಬಿಗಿದು ಕಟ್ಟುತ
ನಡುವಿನೊಡ್ಯಾಣವ ನಟನೆಯಿಂ ತಿರುವುತ ಕಡಗ ಕಂಕಣ ಬಳೆ ಕರದಿ ಘಲ್ಲೆನುತ ||
ಕೂರುಗುರು* ಗಾಯವನು ಕೊನೆ ಬೆರಳಲೊತ್ತುತ ಹಾರದ ತೊಡಕನು ಬಿಚ್ಚಿಹಾಕುತ
ಜಾರಿದ ಜಾಜಿದಂಡೆ ಸರವನೀಡಾಡುತ ಮೋರೆಯ ಕಿರುಬೆವರ ಮುಂಜೆರಗಿಲೊರಸುತ ||
ಕಕ್ಕಸ* ಕುಚದೊಳಿರ್ದ ಕಸ್ತೂರಿಯನೊರಸುತ ಚಕ್ಕನೆ ಕನ್ನಡಿಯೊಳು ಮುಖ ನೋಡುತ
ಅಕ್ಕರದ ತಾಂಬೂಲ ಸರಸದಿಂದುಗುಳುತ ಚೊಕ್ಕ ಪುರಂದರ ವಿಠಲನ ನೋಡಿ ನಗುತ ||
ಇದನ್ನು ಓದುತ್ತಲೇ ಏಕೋ ಏನೋ ಭರ್ತೃಹರಿಯ ನೀತಿಶತಕದ ’ಸನಿಮ್ನಾ ಶೋಭಂತೇ ...’*** ಎಂಬ ಸುಭಾಷಿತ ನೆನಪಾಯಿತು!
-ಹಂಸಾನಂದಿ
-------------------------------------------------------------------------------------------
ಮತ್ತಷ್ಟು ಕೊ.ಕೊ.ಕೊ: (ಕೊಟ್ಟ ಕೊನೆಯ ಕೊಸರು!)
*: ಸುನಿಲ ಜಯಪ್ರಕಾಶರ ಬರಹಗಳನ್ನು ಇಲ್ಲಿ ಓದುತ್ತಿರುವವರಿಗೆ, ಕೂರು ಎಂಬ ಪದಕ್ಕಿರುವ ಅರ್ಥಗಳು ಚೆನ್ನಾಗಿಯೇ ತಿಳಿದಿವೆ.
**: ಕರ್ಕಶ ಪದದ ತದ್ಭವ - ಇದಕ್ಕೆ, ಕಠಿಣ ಎಂಬ ಅರ್ಥವನ್ನು ಪ್ರಿಸ್ಮ್ ನಿಘಂಟು ಕೊಡುತ್ತದೆ
*** : ಬಯಸಿದವರಿಗೆ ಆ ಸುಭಾಷಿತ ಇಲ್ಲಿದೆ:
मणिः शणोल्लीढः समरविजयी हेतिदलितो
मदक्षीबो नागः शरदि सरिताश्यानपुलिना ।
कलाशेषश्चन्द्रः सुरतमृदिता बालवनिता
सनिम्ना शोभन्ते गलितविभवाश्चार्थिषु नराः ॥
Comments
ಉ: ಶೃಂಗಾರ ರಸಮಂಜರಿ
In reply to ಉ: ಶೃಂಗಾರ ರಸಮಂಜರಿ by shreekant.mishrikoti
ಉ: ಶೃಂಗಾರ ರಸಮಂಜರಿ
In reply to ಉ: ಶೃಂಗಾರ ರಸಮಂಜರಿ by hamsanandi
ಉ: ಶೃಂಗಾರ ರಸಮಂಜರಿ