ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ

ನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ. ದುರ್ಗಿ ಎಂದರೇನು? ಕಾಳಿ ಎಂದರೇನು? ಗೌರಿ ಎಂದರೇನು? ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ಎನ್ನುವ ಭಾವನೆ ನಮಗಿದ್ದರೂ ಕೂಡ ಅದೇನೋ ನವರಾತ್ರಿಯ ಏಳನೇ ದಿನ ಸರಸ್ವತಿಗೂ, ಎಂಟನೇ ದಿನ ದುರ್ಗಿಗೂ, ಒಂಬತ್ತು ಹತ್ತನೇ ದಿನಗಳು ಚಾಮುಂಡಿಗೂ ಇರುವುದು ಹಳೇ ಮೈಸೂರಿನ ಸಂಪ್ರದಾಯವಿರಬಹುದು. ದುರ್ಗಾಷ್ಟಮಿಯ ದಿನ ಮನೆ ಚಿಕ್ಕ ಹುಡುಗಿಯರನ್ನು ಕರೆದು ಅವರನ್ನಾದರಿಸುವ ಸಂಪ್ರದಾಯವೂ ಎಷ್ಟೋ ಕುಟುಂಬಗಳಲ್ಲಿದೆ.

ನೆನ್ನೆ ಶೃಂಗೇರಿ ಶಾರದೆಯ ಮೇಲೆ ಒಂದು ಕನ್ನಡದಲ್ಲಿರುವ ಹಾಡನ್ನು ಕೇಳಿಸಿದ್ದೆ. ಹೇಗಿದ್ದರೂ ಈಗ ನವರಾತ್ರಿಯಲ್ಲವೇ, ಅದಕ್ಕೆ ಇವತ್ತು ’ನವರಸ’ಕನ್ನಡದ ಒಂದು ಹಾಡನ್ನು ಕೇಳಿಸೋಣ ಎಂದುಕೊಂಡೆ :). ಹೌದು, ನವರಸ ಕನ್ನಡ ಅನ್ನುವುದೊಂದು ರಾಗದ ಹೆಸರು. 

ಈ ರಚನೆ ಮುತ್ತಯ್ಯ ಭಾಗವತರದ್ದು. ನವರಾತ್ರಿಯ ಮೊದಲ ದಿನವೇ ಇವರದೊಂದು ದರು ವರ್ಣವನ್ನು ಕೇಳಿಸಿದ್ದೆನಲ್ಲ? ನೆನಪಿರಬಹುದು.

ಈ ನವರಸಕನ್ನಡ ರಾಗದ ಕೃತಿಯ ಸಾಹಿತ್ಯ ಕನ್ನಡದಲ್ಲಿದೆ.

ದುರ್ಗಾದೇವಿ ದುರಿತನಿವಾರಿಣಿ ||ಪಲ್ಲವಿ||

ಸ್ವರ್ಗಾಪವರ್ಗ ಸೌಖ್ಯದಾಯಿನಿ ಸುರೇಶಪಾಲಿನಿ ಸಲಹು ಜನನಿ || ಅನುಪಲ್ಲವಿ||

ಪ್ರಾಣಾಗ್ನಿ ಸಂಯೋಗದಿ ಜನಿಸಿದ ಪ್ರಣವನಾದ ಸಪ್ತ ಸ್ವರ ರೂಪಿಣಿ

ವೀಣಾದಿ ವಾದ್ಯ ನೃತ್ಯ ಗಾನ ವಿನೋದಿನಿ ಹರಿಕೇಶ ಭಾಮಿನಿ || ಚರಣ||

ಅಂದಹಾಗೆ, ಮುತ್ತಯ್ಯ ಭಾಗವತರ ಕನ್ನಡ ರಚನೆಗಳಿಗೆ ಸಾಹಿತ್ಯವನ್ನು ಬರೆದವರು ಮೈಸೂರಿನ ದೇವೋತ್ತಮ ಜೋಯಿಸರು. ಈ ಹಾಡಿನಲ್ಲಿ ದುರ್ಗಿಯನ್ನು ಬಂದ ಕಷ್ಟಗಳನ್ನು ಕಳೆಯುವವಳೆಂದೂ, ಓಂಕಾರರೂಪಿಯೆಂದೂ, ಸಪ್ತಸ್ವರಗಳ ರೂಪದವಳೆಂದೂ, ವೀಣೆ ಮೊದಲಾದ ವಾದ್ಯಗಳ, ಮತ್ತು ಹಾಡು ನೃತ್ಯಳನ್ನು ಕೇಳಿ ನಲಿಯುವವಳೆಂದೂ ಹೊಗಳುತ್ತಾ, ಎಲ್ಲರನ್ನೂ ಸಲಹಬೇಕೆಂದು ಕೋರುತ್ತಾರೆ.

ಈ ರಚನೆಯನ್ನು ನಿಶಾ ರಾಜಗೋಪಾಲ್  ಅವರ ಕಂಠದಲ್ಲಿ ಕೇಳಲು ಕೆಳಗಿನ ಕೊಂಡಿಯನ್ನು ಚಿಟುಕಿಸಿ. ಕೃಪೆ: ಸಂಗೀತಪ್ರಿಯ.ಆರ್ಗ್

ದುರ್ಗಾದೇವಿ ದುರಿತ ನಿವಾರಿಣಿ - ರಾಗ ನವರಸ ಕನ್ನಡ

-ಹಂಸಾನಂದಿ

 

 

 

 

Rating
No votes yet

Comments