ಸಂವಾದ

ಸಂವಾದ

ಬೊಗಸೆ ಕಂಗಳವು ಉದಕ ಸುರಿಸಿ
ಕೇಳಿವೆ ಅದೇ ಪ್ರಶ್ನೆ
ನನ್ನಂತರಂಗದ ತಿದಿಯನೊತ್ತಿ ಕಾಡಿದ
ಪ್ರಶ್ನೆ......
"ವಂಶದ ಕುಡಿಯೋ ನಾನೆತ್ತಿ ತಂದ ಧೂಳೋ"
ಉತ್ತರ ತರವಲ್ಲ ಹೇಳಲು ಪದಗಳಿಲ್ಲ
ಭಾವನೆಗಳಿಗೆ ಭಾಷೆಯ ಬರಗಾಲವಿದೆ....
ಎರಡು ಜೀವ ತೇಯ್ದವು
ನಿನ್ನ ಬಾಳು ನಳನಳಿಸಲೆಂದು...
ಅವಳು ನಿನ್ನ ಬಿಟ್ಟು ಹೋದಳು..
ಅದಷ್ಟೇ ಅವಳಿಗೆ ಸಾಧ್ಯ ವಾಗಿದ್ದು...!
ಇವಳು ಬೇಡಿದ್ದಳು ಕೈ ಚಾಚಿ
ದೇವರು ಪತ್ರಿಸಿದ ನಿನ್ನ ನೇರವಾಗಿ..
ಇವಳ ವಿಳಾಸಕ್ಕೆ.....
ಅಂಗಳದಲ್ಲೇನೋ ಅವಳು ತಂದಳು..
ಇವಳು ನಿನ್ನ ಕೈ ಹಿಡಿದು ನಡೆಸಿದಳು.
ಕಪ್ಪು ರಾತ್ರಿಗಳಲಿ ಬೆಚ್ಚನೆ ಪ್ರೀತಿಗಾಗಿ
ನೀ ಹಪಾಪಿಸಿದಾಗ ಇವಳು ಪ್ರೀತಿ
ಉಡಿ ತುಂಬಿದಳು, ಉಣ್ಣಿಸಿದಳು...
ನಿನ್ನ ಮೊದಲ ನಗು ಅವಳು ಕಂಡಿದ್ದಳು
ನೀನೀಗ ಕಂಬನಿ ಮಿಡಿದಾಗ ಇವಳು ತೊಡೆದಳು.

ಹೇಳು ಕಂದ ಈಗ ಆ ಪ್ರಶ್ನೆ ತರವೇ
ಎರಡು ಜೀವ ಬಿತ್ತಿದ ಪ್ರೀತಿಯ ಸೆಲೆ ನೀನು..
ಬೇರು ಎಲ್ಲಿಯಾದರೇನು
ನನ್ನಂಗಳದ ನಗುವ ಹೂ ನೀನು....!

Rating
No votes yet