ಸಂಸ್ಕೃತ ಪುಸ್ತಕ ಸಮ್ಮೇಳನ
ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಸಂಸ್ಕೃತ ಪುಸ್ತಕ ಸಮ್ಮೇಳನಕ್ಕೆ ಮಕ್ಕಳೊಡನೆ ಭೇಟಿ ಕೊಟ್ಟಿದ್ದೆ. ಮೊದಲನೆಯ ದೃಶ್ಯದಲ್ಲಿಯೇ ಅಪಾರ ಜನಸ್ತೋಮವಿದ್ದರೂ ಅಚ್ಚುಕಟ್ಟು ಕಾಣಿಸಿತು. ಇದರ ಜೊತೆಗೆ ಆಶ್ಚರ್ಯಗಳ ಸರಮಾಲೆಯೆ ಕಾದಿತ್ತು. ಪುಸ್ತಕ ಪ್ರದರ್ಶನ ವಿಭಾಗಕ್ಕೆ ಹೋಗಲು ಸರತಿಯ ಸಾಲು ಹನುಮಂತನ ಬಾಲದ ಹಾಗೆ ಬೆಳೆದಿತ್ತು. ಆದರೆ ಸಾಲು ಬೇಗ ಮುಂದೆ ಹೋಗುತ್ತಿದೆಯೆಂದು ಅರಿತು ಸಮಾಧಾನವಾಯ್ತು. ಸಂಸ್ಕೃತ ಪುಸ್ತಕಗಳಲ್ಲವೇ, ಎಲ್ಲೋ ಕೆಲವು ಪ್ರಕಾಶಕರ ಸ್ಟಾಲ್ಗಳಿರುತ್ತವೆ ಎಂದುಕೊಡಿದ್ದ ಭಾವನೆ ಹುಸಿಯಾಯಿತು. ಯಾರಿಂದಲೋ ತಿಳಿದ ಹಾಗೆ ಒಟ್ಟು 142 ಸ್ಟಾಲ್ಗಳಿದ್ದವು. ಪ್ರತಿಯೊಂದರ ಮುಂದೂ ಕಿಕ್ಕಿರಿದ ಜನ. ಮೊದಲನೆಯ ಸ್ಟಾಲ್ನಲ್ಲಿ ಕಂಡ ವಿಸ್ಮಯವೇ ಬಹುತೇಕ ಜಾಗಗಳಲ್ಲಿ ಕಾಣ ಸಿಕ್ಕಿತು: ಸ್ಟಾಲ್ಗಳ ಸಿಬ್ಬಂದಿ ನಿರರ್ಗಳವಾಗಿ ಸಂಸ್ಕೃತದಲ್ಲಿಯೇ ಸಂಭಾಷಣೆ ನಡೆಸಿತಿತ್ತು. ಪುಸ್ತಕಗಳು ಸಜ್ಜನರಾವ್ ಸರ್ಕಲ್ನಲ್ಲಿ ರಾತ್ರಿ 10ರ ನಂತರ ಖರ್ಚಾಗುವ ಬಿಸಿ ದೋಸೆಯಂತೆ (ಹೊರಗೆ ನಿಜವಾದ ದೋಸೆ ಸ್ಟಾಲ್ನ ರಶ್ ಕೇಳಬೇಡಿ, ಅಷ್ಟಿತ್ತು) ಮಾರಾಟವಾಗುತಿದ್ದವು. ಅಂತೂ ಸಂಸ್ಕೃತ ಮೃತ ಭಾಷೆಯಾಗಿಲ್ಲವೆನಿಸಿತು. ವೈದೀಕ ಮತ್ತು ಪುರಾಣ ಗ್ರಂಥಗಳು ಅಪಾರ ಸಂಖ್ಯೆಯಲ್ಲಿದ್ದವು. ಅಂತಹ ಹಲವಾರು ಪುಸ್ತಕಗಳೊಂದಿಗೆ ಮಗಳ ಆಸೆಯ ಮೇರೆಗೆ "ಸಂಸ್ಕೃತ-ವ್ಯವಹಾರ-ಸಾಹಸ್ರಿ" ಕೊಂಡಿದ್ದಾಯ್ತು. ಮಗಳಿಗೋ ಯಾವಾಗ ಮನೆ ತಲುಪಿ ಪುಸ್ತಕ ಓದಿ ಸಂಸ್ಕೃತ ಸಂಭಾಷಣೆಯ ಪ್ರಾವೀಣ್ಯತೆಯನ್ನು ಪಡೆಯುತ್ತೇನೋ ಎಂಬ ಕಾತುರ. ಸರಿ, ಮನೆಗೆ ಬಂದಾಗಲಿಂದ ಪುಸ್ತಕ ನೋಡಿಕೊಂಡು ಬಂದಿದ್ದು-ಬಾರದಿದ್ದುದು, ಕನ್ನಡ-ಇಂಗ್ಲೀಷ್-ಹಿಂದಿ ಭಾಷೆಗಳ substituteಗಳನ್ನು ಬಳಸಿ ಮಾತಾಡಿದ್ದೂ ಮಾತಾಡಿದ್ದೆ. ಆದರೆ ಈ ಆರಂಭ ಶೂರತ್ವ ಎಕ್ಸ್ಪೊನೆನ್ಷಿಯಲ್ ಆಗಿ ಹಲವೇ ದಿನಗಳಲ್ಲಿ ಇಳಿಯಿತು.
ಈ ಸಾಹಸ್ರಿಯ ಮೂಲಕದ ಭಾಷಾ ಕಲಿಕೆಯಲ್ಲಿ ನಾನು ಕಂಡುಕೊಂಡ ಎರಡು ಬಳಕೆಗಳ ಬಗ್ಗೆ ಬರೆಯಲೇಬೇಕೆನ್ನಿಸಿತು.
ಮೊದಲನೆಯದಾಗಿ ಹಲವಾರು ವಾಕ್ಯಗಳು ಬಹಳ ಗ್ರಾಂಥಿಕವೆನ್ನಿಸಿತು. ಉದಾಹರಣೆಗೆ How are you? ಎನ್ನುವುದಕ್ಕೆ कथम् अस्ति भवान्? ಎಂಬ ಪ್ರಯೋಗವಿದೆ. ಕನ್ನಡಕ್ಕೆ ಸರಳವಾಗಿ ಭಾಷಾಂತರಿಸಿದರೆ "ತಾವು ಹೇಗಿದ್ದೀರಿ?" ಎಂಬ ಅತ್ಯಂತ ಗೌರವ ಸೂಚಕ ವಾಕ್ಯವಾಗುತ್ತದೆ. ಸಾಮಾನ್ಯ ಸಂಭಾಷಣೆಯಲ್ಲಿ, ಅದರಲ್ಲೂ ಮಕ್ಕಳಿಗೆ ಸಂಸ್ಕೃತದಲ್ಲಿ ಆಸಕ್ತಿ ಮೂಡಿಸುವ ಸಂದರ್ಭದಲ್ಲಿ ಆಡು ಮಾತಿನ ಬಳಕೆಯಿದ್ದರೆ ಸುಲಭವೂ ಹೌದು, ಆಕರ್ಷಣೆಯೂ ಉಳಿಯುತ್ತದೆ. ಅದರಲ್ಲೂ ಈಗಿನ ಮಕ್ಕಳು ನೀನು ಹೇಗಿದ್ದೀಯಾ ಎನ್ನುವುದಕ್ಕಿಂತ ಏನ್ ಮಗಾ, ಹೆಂಗಿದ್ದೀಯ ಎನ್ನುವುದೇ ಹೆಚ್ಚು.
ಎರಡನೆಯ ಸಂದರ್ಭ ಇನ್ನೂ ಆಳವಾದುದು. Hello ಎನ್ನುವ ಪದಕ್ಕೆ हरिः ऒम् ಎನ್ನುವ ಬಳಕೆಯನ್ನು ಸೂಚಿಸಲಾಗಿದೆ. ಈ ಪ್ರಯೋಗವನ್ನು ನಾನು ಹಲವರ ಬಾಯಿಯಲ್ಲೂ ಕೇಳಿದ್ದೇನೆ. ಇದಕ್ಕೆ ನನ್ನ ಆಕ್ಷೇಪಣೆ ಇದೆ. ಹರಿಃ ಎನ್ನುವ ಪದದ ವ್ಯುತ್ಪತ್ತಿ ಹೇಗಿದೆಯೋ ನನಗೆ ತಿಳಿಯದು. ಆದರೆ ನನ್ನ ಅನಿಸಿಕೆಯ ಪ್ರಕಾರ ಇದು ನಾರಾಯಣ ಎಂಬ ದೇವರ ಹೆಸರಿನ ಜೊತೆಗೂಡಿದಂತಾಗುವುದಲ್ಲವೇ? ಹಿಂದೂಗಳಲ್ಲದವರ (ಅಷ್ಟೇ ಏಕೆ, ಅಚ್ಚ ಶೈವ ಭಕ್ತರ) ಬಾಯಿಯಲ್ಲಿ ಕೂಡ ವಿಷ್ಣುವಿನ ನಾಮ ಜಪ ಮಾಡಿದಂತಾಗಲಿಲ್ಲವೇ? ಯಾವ ಅರ್ಥಕ್ಕೂ ಒಳಪಡದ Hello ಪದಕ್ಕೂ हरिः ऒम् ಗೂ ಏನು ಸಂಬಂಧ?
Comments
ಉ: ಸಂಸ್ಕೃತ ಪುಸ್ತಕ ಸಮ್ಮೇಳನ
ಉ: ಸಂಸ್ಕೃತ ಪುಸ್ತಕ ಸಮ್ಮೇಳನ