ಸರ್ವಭಾಷಾ ಸರಸ್ವತಿ

ಸರ್ವಭಾಷಾ ಸರಸ್ವತಿ

ದಿವ್ಯವಾದ ವಾಕ್ ಅನ್ನು ದೇವತೆಗಳು ಸೃಜಿಸಿದರು. ಅದನ್ನು ನಾನಾರೂಪದ ಜೀವಿಗಳು ನುಡಿಯುತ್ತವೆ. ಇದು ಋಗ್ವೇದದ ಒಂದು ಸೂಕ್ತಿ. ನಾಗವರ್ಮನ 'ಕರ್ಣಾಟಕಭಾಷಾಭೂಷಣ'ದಲ್ಲಿ ಮಂಗಳಶ್ಲೋಕದ ಅರ್ಥ ಹೀಗಿದೆ. ಯಾವ ಪರಂಜ್ಯೋತಿಯಿಂದ ಸರ್ವಭಾಷಾರೂಪವಾದ ವಾಣಿ ಹೊರಹೊಮ್ಮಿತೋ ಅದಕ್ಕೆ ವಂದನೆ. 'ಕರ್ಣಾಟಕ ಶಬ್ದಾನುಶಾಸನ' ಕರ್ತನಾದ ಭಟ್ಟಾಕಳಂಕನು ಗ್ರಂಥಾರಂಭದಲ್ಲಿ ಮಾಡಿದ ಜಿನೇಶ್ವರಸ್ತುತಿಯೂ ಇದೇ ಅರ್ಥದ್ದಾಗಿದೆ. ಅಲ್ಲಿ ಭಾಷೆಯು ಸರ್ವಭಾಷಾಮಯಿ ಎಂದು ಹೇಳಲಾಗಿದೆ.
ಇದೆಲ್ಲವನ್ನು ಗಮನಿಸಿದರೆ ಈ ಭಾಷೆ ಮೇಲು ಆ ಭಾಷೆ ಕೀಳು ಎಂಬ ಭಾವವಾಗಲೀ , ಇದು ಸ್ವಭಾಷೆ , ಅದು ಪರಕೀಯ ಭಾಷೆ ಎಂಬ ಪಕ್ಷಪಾತವಾಗಲೀ ನಮ್ಮ ಪುರಾತನರಿಗೆ ಇದ್ದಿಲ್ಲವೆಂಬುದನ್ನೂ ಎಲ್ಲ ಭಾಷೆಗಳ ಮೂಲ ಒಂದೇ , ಎಲ್ಲ ಭಾಷೆಗಳೂ ದೈವಸೃಷ್ಟಿ ಎಂದು ಅವರು ತಿಳಿದಿದ್ದರೆಂದು ಗೊತ್ತಾಗುತ್ತದೆ.
ಭಾಷೆ ಎಂದರೇನು ? ಸ್ವಾಭಿಪ್ರಾಯಪ್ರಕಾಶನವೇ ಭಾಷೆ. ಈ ಪ್ರಕಾಶನಕ್ರಿಯೆಯ ಮೂಲ , ಶಕ್ತಿ ನಮ್ಮ ಸ್ವಯಾರ್ಜಿತವಲ್ಲ . ಅದು ಪ್ರಕೃತಿ ದೇವತೆ ನಮಗೆ ಕರುಣಿಸಿದ ಒಂದು ಶಕ್ತಿ. ಅದನ್ನೇ ಆ ಸೂಕ್ತಿಕರ್ತರು ಭಾಷಾ ಎಂದು ಕರೆದರು. ಬ್ರಾಹ್ಮೀ , ಭಾರತೀ , ವಾಕ್ , ವಾಣೀ , ಸರಸ್ವತೀ ಇವೆಲ್ಲ ಪರ್ಯಾಯ ನಾಮಗಳೆಂದು ಹೇಳುವ ಅಮರಕೋಶವೂ ಅದೇ ಅಭಿಪ್ರಾಯವನ್ನೇ ಸಮರ್ಥಿಸುತ್ತದೆ. ಆ ಒಂದೇ ಭಾಷೆಯ ನಾನಾ ಸ್ವರೂಪಗಳೇ ನಾವಾಡುವ ಭಾಷೆಗಳು . ಈ ತಥ್ಯವನ್ನು ಮನಗಂಡರೆ ಸ್ವಭಾಷಾಭಿಮಾನ ಎಂಬ ಗೌರವಾಸ್ಪದವಾದ ಭಾವವು ನಮ್ಮಲ್ಲಿ ತೀವ್ರವಾದಾಗ ನಮಗರಿಯದಂತೆ ನಮ್ಮ ಅಂತರಂಗಕ್ಕೆ ಅಂಟಿಕೊಳ್ಳುವ ಪರಭಾಷಾತಿರಸ್ಕಾರಬುದ್ಧಿ ಮಾಯವಾಗಿ ನಿಜವಾದ ಭಾಷಾಭಿಮಾನ , ಪರಿಶುದ್ಧ ಸ್ವಭಾಷಾಭಿಮಾನ ನಮ್ಮಲ್ಲಿ ಉದಯಿಸುತ್ತದೆ. ತನ್ನ ತಾಯಿಯನ್ನು ಗೌರವಿಸುವವನು ಇತರ ತಾಯಂದಿರನ್ನೂ ಗೌರವಿಸುತ್ತಾನೆ.
ಇದು ಶ್ರೀ ಸೇಡಿಯಾಪು ಕೃಷ್ಣಭಟ್ಟರ ಒಂದು ಲೇಖನದ ಸಂಗ್ರಹ .
ನಾನಾ ಭಾಷೆಗಳ ತವರೂರಾದ ನಮ್ಮ ದೇಶದ ಸಮನ್ವಯ ಸಂಸ್ಕೃತಿಗೆ ಸರ್ವಥಾ ಒಪ್ಪಲಾರದ ಸಂಕುಚಿತ ಸ್ವಭಾಷಾಭಿಮಾನವೂ ಅದರ ಫಲವಾಗಿ ಪರಭಾಷಾದ್ವೇಷವೂ ನಮ್ಮ ದೇಶದ ಕೆಲಪ್ರದೇಶಗಳಲ್ಲಿ ಬೆಳೆಯುತ್ತಿದ್ದದ್ದನ್ನು ಕಂಡು ಮನನೊಂದ ಅವರು ಒಂದು ಪದ್ಯವನ್ನು ಬರೆದರು.
ಮಳೆಯ ಬಿಲ್ಲಿನಲಿ ಹಲವು ಬಣ್ಣಗಳು ನೆರೆದಿಹಂತೆ , ಶ್ರೀ ಭಾರತಿ
ಭಾರತೀಯ ಭಾಷೆಗಳ ಕಾಂತಿಯಲಿ ತೋರುತಿಹಳು ನಿಜಮೂರುತಿ
ಕಾಮಧೇನುವಿನ ಕೆಚ್ಚಲೇ ನಿನಗಿರಲ್ಕೆ , ಮೊಲೆಯೊಂದನೇ
ಬಾಯೊಳಿಟ್ಟು ತಣಿಯುವದೆ? ನಾಲ್ಮೊಲೆಯ ಹಾಲನುಂಡು ಕುಣಿ ಕಂದನೆ
ಓ ಸಕಲಭಾಷಾ ಸುಪವಿತ್ರ
ಓ ಭರತಭೂಮಿ ವರಪುತ್ರ
ನೀ ಮಹಾಭಾಗ್ಯಸತ್ಪಾತ್ರ!
ಈ ಭಾವನೆ ಭಾರತೀಯರಾದ ನಮ್ಮೆಲ್ಲರಿಗೂ ಮಾನ್ಯವಾಗಬೇಕೆಂದು ಶ್ರೀ ಸೇಡಿಯಾಪು ಕೃಷ್ಣಭಟ್ಟರ ಬಯಕೆ.

Rating
No votes yet