ಸಹಮನಸ್ಕರ ಮದುವೆಗೆ ತಡೆಯ ತರಲಾರೆ
ಸಹಮನಸ್ಕರ ಮದುವೆಗೆ ಅಡಚಣೆಯ ತರಲಾರೆ
------ ವಿಲಿಯಂ ಶೇಕ್ಸ್ ಪಿಯರ್ (ಸುನೀತ ೧೧೬)
ಮನ್ನಿಸಿ, ನಿನ್ನೆ ಪ್ರಾಸವಿಲ್ಲದೇ ಅನುವಾದಿಸಿದ್ದೆ. ಅದನ್ನು ಬದಲಿಸಿ ಪ್ರಾಸ ಸೇರಿಸುವ ಪ್ರಯಾಸ ಇಲ್ಲಿ ಮಾಡಿದ್ದೇನೆ.
ಸಹಮನಸ್ಕರ ಮದುವೆಗೆ ತಡೆಯ ತರಲಾರೆ
ನಾನು. ಪ್ರೀತಿಯದು ಪ್ರೀತಿಯಲ್ಲ ಕಂಡಂತೆ
ಬದಲಾದ ಪರಿಸರವ ತಾನೂ ಬದಲುತ್ತಲಿರೆ,
ಅಥವಾ ಪ್ರೇಮಿ ನಿಲುವಲ್ಲಿ ಪಲ್ಟಿಯಾದಂತೆ:
ಇಲ್ಲವೇ ಇಲ್ಲ! ಅದೊಂದು ಸದಾಸ್ಥಿರ ಚಿನ್ಹೆ
ಬಿರುಗಾಳಿಯೆದುರಿಗೂ ಕಂಪಿಸದಿರುವುದು.
ಅಲೆವ ನಾವೆಗಳಿಗೆಲ್ಲ ಅದುವೆ ಸ್ಥಾಯಿ ಚುಕ್ಕೆ
ದೂರವರಿತರೂ ಅದರ ಬೆಲೆಯರಿಯದಂತದ್ದು
ಪ್ರೀತಿಯಲ್ಲ ಕಾಲದ ಗುಲಾಮ, ಸುಂದರಾಂಗಗಳು
ಇದ್ದಾವೆ ಅವನ ಡೊಂಕು ಕುಡುಗೋಲಿನ ಅಂಕೆಯಲಿ
ಪ್ರೀತಿಯ ಬದಲಿಸದು ಅವನ ಕ್ಷಣಿಕ ತಾಸು ವಾರಗಳು
ನಾಶದಂಚಿನವರೆಗೂ ತಾಳುವುದು ಕೆಚ್ಚಿನಲಿ.
ರುಜುಮಾಡಿ ತೋರಿದರೆ ನನ್ನೀ ಮಾತು ತರವಲ್ಲ
ನಾನು ಕವಿಯೇ ಅಲ್ಲ, ಪ್ರೇಮಿಯೂ ಎಲ್ಲಿಲ್ಲ.
****
ಶೇಕ್ಸಪಿಯರನ ಬಹುಚರ್ಚಿತ ಸುನೀತಗಳಲ್ಲಿ ಇದು ಒಂದು. ಇಲ್ಲಿ ಆತ ನಿಜವಾದ ಪ್ರೀತಿ ಹೇಗೆ ಎಂದಿಗೂ ಬದಲದೇ, ದೃವತಾರೆಯಂತೇ ಸ್ಥಿರವಾಗಿಯೂ, ಹಾಗೂ ಅದರಂತೆ ದಿಕ್ಕ್ಸೂಚಿಯಾಗಿಯೂ ಇರುತ್ತದೆ ಎಂದು ವಾದಿಸುತ್ತಾನೆ. ಯುರೋಪಿನ ನವೋದಯ (renaissance) ಕಾಲದ ಆದರ್ಶವಾದೀ ಕಲ್ಪನೆಗಳ ಮಾದರಿಯಲ್ಲಿ ಇದೊಂದು ಉದಾಹರಣೆ. ಇಲ್ಲಿ ನಾವು ಆದರ್ಶವಾದದೊಂದಿಗೆ ಕಾಣುವ ಇನ್ನೊಂದು ಅಂಶವೆಂದರೆ ವಿಚಾರವೊಂದನ್ನು ಎತ್ತಿಕೊಂಡು ವಾದಿಸುತ್ತ ಹೋಗುವ ತಾರ್ಕಿಕ ಧಾಟಿ. ಹಾಗೆಯೇ ಅಂತ್ಯದಲ್ಲಿ ಬರುವ ನಾನು ಕವಿಯೇ ಅಲ್ಲ ಅನ್ನುವ ಮಾತು (i never writ) ಸೂಚಿಸುವಂತೆ ವ್ಯಕ್ತಿಯೊಬ್ಬನ ವಿಚಾರವೂ ಮುಖ್ಯ ಎಂಬ ವಿಶ್ವಾಸ. ಇವೆರಡನ್ನೂ ಯುರೋಪಿನ ನವೋದಯದ ಗುರುತಾಗಿ ಕಾಣುವುದು ವಾಡಿಕೆ. ಹೀಗೆ ಕಾವ್ಯದಲ್ಲಿ ತಾರ್ಕಿಕವಾಗಿ ವಾದಿಸುವ ಶೈಲಿ ಮುಂದೆ metaphysical ಕಾವ್ಯಕ್ಕೆ ದಾರಿ ಮಾಡುತ್ತದೆ; ಅಲ್ಲಿ ಇದು ಅತಿಯೆನ್ನುವ ಮಟ್ಟಿಗೆ ತಲುಪಿ ಶಬ್ದದೊಂದಿಗಿನ ಜಾಣ್ಮೆಯನ್ನು ತೋರುವ ಕವನಗಳೇ ಹೆಚ್ಚಾಗಿ ಬರೆಯಲಾಯಿತು.
ಇಲ್ಲಿ, ಶೇಕ್ಸಪಿಯರ ಸಿನಿಕತನವನ್ನು ತೊರೆದ ಒಂದು ಆದರ್ಶ ಪ್ರೀತಿಯನ್ನು ಹೊಗಳುತ್ತಾನೆ. ಇಲ್ಲಿ ಮೊದಲ ಸಾಲಲ್ಲಿ ಬರುವ 'ತಡೆ ತರುವ ವಿಚಾರ' ಕ್ರಿಶ್ಚಿಯನ ಮದುವೆಗಳಲ್ಲಿ ಗಂಡು - ಹೆಣ್ಣು ದಂಪತಿಗಳೆಂದು ಸಾರುವ ಮೊದಲು ಯಾರಾದರೂ ಅವರು ದಂಪತಿಗಳಾಗಬಾರದು ಎಂದು ತಡೆ ತರಬಹುದಾದ ಆಚರಣೆ ಕುರಿತಾಗಿದೆ. ಆದರೆ ಇಲ್ಲಿ 'ಮದುವೆ' ಶಬ್ದ ಸೀಮಿತವಾದದ್ದಲ್ಲ. ಅದನ್ನು ಮಿಲನವೆಂದು ಕೂಡ ಅರ್ಥಿಸಿಕೊಳ್ಳಬಹುದಾಗಿದೆ. ಸಹಮನಸ್ಕರು ('True minds') ಕೂಡ ಪ್ರೇಮಿಗಳಿಗೆ ಉಪಯೋಗಿಸುವ ಸಾಮಾನ್ಯ ಶಬ್ದವಾಗದೇ, ಯಾರು ನಿಜವಾಗಿಯೂ ಪ್ರೇಮಿಸುವ ಯೋಗ್ಯತೆಯುಳ್ಳವರೋ ಅವರ ಕುರಿತಾಗಿದೆ. ಅಂದರೆ, ನಿಜ ಪ್ರೀತಿ ಎನ್ನುವುದನ್ನು ಮಾನಸಿಕ ಅವಸ್ಥೆಯ ಜತೆ ಜೋಡಿಸಿ, ಕವಿ ಪ್ರೀತಿಯಲ್ಲಿ ವೈಚಾರಿಕತೆಯ ಜರೂರಿಯನ್ನು ಸೂಚಿಸುತ್ತಾನೆ. ಹಾಗಾಗಿ, ನಾವು ಸಾಮಾನ್ಯವಾಗಿ ಶೇಕ್ಸಪಿಯರನನ್ನು ರಮ್ಯಕವಿಯಾಗಿ ಕಂಡರೂ, ಅವನಲ್ಲಿಯೂ ವೈಚಾರಿಕತೆಗಿದ್ದ ಒಲವು ಕಾಣಬಹುದಾಗಿದೆ.
ಇದನ್ನು ಅನುವಾದ ಮಾಡುತ್ತ ನನ್ನ ಮನಸ್ಸಿನಲ್ಲಿ ಇದ್ದ ವಿಚಾರವೆಂದರೆ ಅನುವಾದಿತ ಕವನವು ಕನ್ನಡದ ಕವನವೆಂದೇ ತೋರುವಂತಾಗಬಾರದು ಎಂದು. ಅನುವಾದದ ಕುರಿತಾಗಿ ಇರುವ ಅನೇಕ ಭಿನ್ನಾಭಿಪ್ರಾಯಗಳಲ್ಲಿ ಇದು ಒಂದು: ಅನುವಾದ ಗುರಿ ಭಾಷೆಯಲ್ಲಿ ಒಂದಾಗಬೇಕೆಂಬುದಾಗಿ, ಯಾ ಮೂಲ ಭಾಷೆ ಬೇರೆ ಎಂಬುದನ್ನು ಓದುಗರಿಗೆ ಸದಾ ನೆನಪಿಸುತ್ತಲಿರಬೇಕೆಂಬುದಾಗಿ. ಹಾಗಾಗಿ ಇಂಗ್ಲೀಷಿನ ಸಾನೆಟ್ ಗೆ ಕನ್ನಡದಲ್ಲಿ ಸುನೀತವೆನ್ನುವುದು ಕೂಡ ಸರಿಯಲ್ಲವೇನೋ ಎಂದು ಕೆಲ ಬಾರಿ ಅನಿಸುತ್ತದೆ.
ನನ್ನ ಈ ಅನುವಾದ ಒಂದು ಕಚ್ಚಾ ಪ್ರಯೋಗವಷ್ಟೇ. ಇದನ್ನು ಇತರರೂ ಕೂಡ ಅನುವಾದಿಸಿರಬಹುದು ಈ ಮೊದಲೇ. ನಾನು ಹುಡುಕಿ ನೋಡುವುದು ಬಾಕಿಯಿದೆ.
ಕಮಲಾಕರ