ಸಾಧ್ಯವಾದರೆ ಪ್ರೀತಿಸೋಣ!

ಸಾಧ್ಯವಾದರೆ ಪ್ರೀತಿಸೋಣ!

 

 

     ಒಂದು ಸಂದರ್ಭವನ್ನು ಊಹಿಸಿಕೊಳ್ಳೋಣ. ಒಂದು ದಂತವೈದ್ಯರ ಕ್ಲಿನಿಕ್‌ನಲ್ಲಿ ವೈದ್ಯರನ್ನು ಕಾಣಲು ರೋಗಿಗಳು ತಮ್ಮ ಸರತಿಗಾಗಿ ಕಾಯುತ್ತಿದ್ದಾರೆ. ನೋವಿನ ಬಾಧೆಯಿಂದ ಎಲ್ಲರೂ ಮುಖ ಕಿವುಚಿ ಕುಳಿತಿದ್ದಾರೆ. ನರಳಾಟ ಬಿಟ್ಟರೆ ಬೇರೆ ಭಾವವಿಲ್ಲ. ಆಗ ಒಬ್ಬ ತಾಯಿ ತನ್ನ ಹಲ್ಲು ನೋವಿನ ಚಿಕಿತ್ಸೆ ಸಲುವಾಗಿ ತನ್ನ ಪುಟ್ಟ ಮಗುವಿನೊಂದಿಗೆ ಅಲ್ಲಿಗೆ ಬಂದು ಸಾಲಿನಲ್ಲಿ ಕೂರುತ್ತಾಳೆ. ಆ ಮಗು ತನ್ನ ಪಕ್ಕ ಕುಳಿತ ವೃದ್ಧ ರೋಗಿಯನ್ನು ಕುತೂಹಲದಿಂದ ನೋಡುತ್ತಾ 'ತಾತಾ' ಎನ್ನುತ್ತದೆ. ಆತ ಮಗುವನ್ನೊಮ್ಮೆ ನೋಡಿ ಪಕ್ಕಕ್ಕೆ ಮುಖ ತಿರುಗಿಸಿ ನರಳುತ್ತಾನೆ. ಮಗು ತಾಯಿಯ ತೊಡೆಯಿಂದ ಬಲವಂತವಾಗಿ ಇಳಿದು ಆ ವ್ಯಕ್ತಿಯ ಹತ್ತಿರ ಹೋಗಿ ಆತನನ್ನು ಮುಟ್ಟಿ ಕತ್ತೆತ್ತಿ ನೋಡುತ್ತಾ ಮತ್ತೆ 'ತಾತಾ' ಎಂದು ನಗುತ್ತದೆ. ಆತನಿಗೆ ಮಗುವನ್ನು ಮಾತನಾಡಿಸದೆ ಇರಲು ಸಾಧ್ಯವೇ ಇಲ್ಲ. ಆತ ನಗುತ್ತಾ 'ಏನು ಮಗು?' ಅನ್ನುತ್ತಾನೆ. ಮಗು ಚಪ್ಪಾಳೆ ತಟ್ಟಿ ನಗುತ್ತದೆ. ಇದನ್ನು ಗಮನಿಸುತ್ತಿದ್ದ ಇತರರೂ ಮಗುವಿನ ನಗುಮುಖದಿಂದ ಆಕರ್ಷಿತರಾಗಿ ಅದನ್ನು ಮಾತನಾಡಿಸಲು ಪ್ರಾರಂಭಿಸುತ್ತಾರೆ. ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಹೋಗುತ್ತಾ ಆಟವಾಡಿಕೊಂಡಿದ್ದ ಮಗುವಿನಿಂದ ಹತ್ತೇ ನಿಮಿಷದಲ್ಲಿ ಅಲ್ಲಿನ ವಾತಾವರಣವೇ ಬದಲಾಗುತ್ತದೆ. ಮಗುವಿನೊಂದಿಗೆ ಮಾತನಾಡುತ್ತಿದ್ದಾಗ ಅವರುಗಳಿಗೆ ನೋವಿನ ಅನುಭವವೇ ಆಗುತ್ತಿರಲಿಲ್ಲ. ಒಂದು ಮಗುವಿನ ನಿಷ್ಕಲ್ಮಶ ನಗು ಮಾಡಿದ ಪರಿವರ್ತನೆ ಅದಾಗಿತ್ತು. ಆ ಮಗುವಿಗೆ ಸಾಧ್ಯವಾಗಿದ್ದು ದೊಡ್ಡವರಿಗೆ ಏಕೆ ಆಗುವುದಿಲ್ಲ? ಏಕೆಂದರೆ ಮಗುವಿಗೆ ಚಿಕ್ಕವರು, ದೊಡ್ಡವರು, ಬಡವ, ಶ್ರೀಮಂತ, ಆ ಜಾತಿ, ಈ ಜಾತಿ, ಕರಿಯ, ಬಿಳಿಯ, ಆರ್ಯ, ದ್ರಾವಿಡ, ಇತ್ಯಾದಿ ಬೇಧ ಭಾವವಿರುವುದಿಲ್ಲ. ಮಕ್ಕಳಂತೆ ನಿಷ್ಕಲ್ಮಶ ನಗು ದೊಡ್ಡವರಿಗೆ ಬರಲು ಕಷ್ಟ. ಆದರೆ ಸಾಧ್ಯವಾದಷ್ಟು ನಗುನಗುತ್ತಾ ಮಾತನಾಡುವ ವ್ಯಕ್ತಿಗಳು ಎಲ್ಲರಿಗೂ ಇಷ್ಟವಾಗುತ್ತಾರೆ. ಮಂಕುತಿಮ್ಮನ "ನಗುವು ಸಹಜದ ಧರ್ಮ . . . . " ನೆನಪಾಯಿತೇ? ನೆನಪಾಗದಿದ್ದರೆ ನೆನಪಿಸಿಕೊಳ್ಳೋಣ.

-ಕ.ವೆಂ.ನಾಗರಾಜ್.

 
Rating
No votes yet

Comments

Submitted by venkatb83 Thu, 03/07/2013 - 17:49

ಹಿರಿಯರೇ ಆಗಾಗ ಮಿಮಿಕ್ರಿ ದಯಾನಂದ್ ಅವರು ಒಂದು ಜೋಕು ಹೇಳಿ ಅಭಿನಯಿಸಿ ನಗಿಸುತ್ತಾರೆ ಬಹುಶ ಅದು ನೀವೂ ಕೇಳಿರಬಹ್ದು ನೋಡಿರಬಹ್ದು..

ಅದು ಮನೆಯಲ್ಲಿ ಹಿರಿಯರು (ಅಪ್ಪ-ಅಣ್ಣ ಅಕ್ಕ) ತಮ್ಮ ಮಕ್ಕಳನ್ನು ಕಟೋರವಾಗಿ ಕರ್ಕಶವಾಗಿ ಕರೆಯೋದು -ತಮ್ಮವರ ಬಗ್ಗೆ ಒಂಥರಾ ಉದಾಸೀನ ಉಪೇಕ್ಷೆ ಭಾವನೆಯಲ್ಲಿ ಮಾತಾಡೋದು ಆದರೆ ಅದೇ ಬೇರೆಯವರ ಮನೆ ಮಕ್ಕಳ ಬಗ್ಗೆ ಗುಣಗಾನ ಮಾಡುತ್ತಾ ಹೊಗಳೋದು...ತಮ್ಮಕಳನ್ನ ತೆಗಳೋದು...

ದಿನ ನಿತ್ಯ ಬಸ್ಸಲಿ ಓಡಾಡುವ ನಾ ನೋಡಿದ ಹಾಗೆ ಬಸ್ಸಲ್ಲಿ ಬಹುತೇಕ ಎಲ್ಲರದೂ ಒಂಥರಾ ಗಂಭೀರ ನೋಟ..ಹಾವ ಅಭಾವ..ಮಾತು ಕಥೆ ಅಸ್ತಕ್ಕಸ್ತೆ..!!
ಆದರೆ ಅದೇ ಅಲ್ಲಿ ಒಂದು ಚಿಕಕ್ ಮಗು ಬಂದರೆ ನಿಂದರೆ ಕೂತರೆ ಅಲಿ ಎಲ್ಲರೂ ಕುತೂಹಲಿಗರಾಗಿ ಅದರತ್ತ ನೋಡುತ್ತಾ ತಮ್ಮನೆಯಲ್ಲಿ ತಮ್ಮವರಿಗೆ ಇರುವ ಮಕ್ಕಳನ್ನು ನೆನೆದು -ಪುಟ್ಟೀ,ಚಿನ್ನು ಎಂದೆಲ ಖುಶಿಯಾಗೀ ಮಾತಾಡುವರು..ಆ ತರಹದ ಹಲವು ಅನುಭವಗಳು ದಿನ ನಿತ್ಯ ನನಗೆ ಆಗುತ್ತಿವೆ..
ನಾ ಮೊದಲಿಂದಲೂ ಮಿತ ಭಾಷಿ- ಒಂಥರಾ ರಿಸರ್ವಡ್ ಮನುಷ್ಯ-ಚಿಕ್ಕ ಮಕ್ಕಳಿಂದ ಮೊದಲೇ ಮಾರು ದೂರ...!!
ಆದರೆ ಈಗೀಗ ಬಸ್ಸಲ್ಲಿ ಪಾರ್ಕಲಿ ನನಗೆ ಎದುರಾಗೋ ಚಿಕ್ಕ ಮಕ್ಕಳನ್ನು ನೋಡಿದಾಗ ಒಂಥರಾ ಸಂತೋಷಕರ ಉಲ್ಲಾಸಕರ ಭಾವ ಹೊರ ಹೊಮ್ಮುತ್ತೆ..
ಇದಂತೂ ನಿಜ ಶತ್ರುವಿನ ಮಕ್ಕಳಾದರೂ ಮುದ್ದೇ ..!
ನೋವು ಮರೆತು ನಗೋಣ..
ನಗುತ್ತ ಬಾಳೋಣ ನಗಿಸೋಣ..

ಶುಭವಾಗಲಿ..

\।/

Submitted by swara kamath Fri, 03/08/2013 - 14:45

ಹೌದು ನಾಗರಾಜರೆ, ಮಗುವಿನ ಆ ಒಂದು ಮುದ್ದು ನಗೆ ತೊದಲುನುಡಿ ಕೇಳಿ ಸಂತೋಷ ಪಡುವುದಕ್ಕಾಗಿಯೆ ಮನೆಯಲ್ಲಿ ಚಿಕ್ಕಮಕ್ಕಳು ಇರಬೇಕೆನ್ನುವುದು. ಮಕ್ಕಳ ನಿಷ್ಕಲ್ಮಶ ನಗೆ ,ಮಾತುಗಳು ಮನಸ್ಸಿನ ಖಿನ್ನತೆ ಕಳೆಯುವದರ ಜೊತೆಗೆ ಮನೆಯ ಸದಸ್ಯರ ವಿಶೇಷವಾಗಿ ಹಿರಿಯರ ಆರೋಗ್ಯವು ಸಹ ವೃದ್ಧಿ ಗೊಳ್ಳುವದರಲ್ಲಿ ಸಂದೇಹವೆ ಇಲ್ಲಾ. ........ದನ್ಯವಾದಗಳು.