ಸ್ತ್ರೀದೌರ್ಜನ್ಯ ಕಾಯಿದೆ: ಪುರುಷಮಣಿಗಳ ಸ್ವಾಗತ!
(ಬೊಗಳೂರು ಕಾಯಿದೆ ಉಲ್ಟಾ ಬ್ಯುರೋದಿಂದ)
ಬೊಗಳೂರು, ಅ.26- ಬೆಲೆ ಏರಿಕೆಯಿಂದಾಗಿ ಮನೆಯಲ್ಲಿ ಜೀವಿಸುವುದು ಕಷ್ಟಸಾಧ್ಯವಾಗಿರುವ ಪುರುಷ ಪ್ರಾಣಿಗಳಿಗೆ ಜೀವಿಸಲು ವಿನೂತನ ಅವಕಾಶ ಕಲ್ಪಿಸಿಕೊಟ್ಟಿರುವ ಕೇಂದ್ರ ಸರಕಾರದ ಹೊಸ ಕಾಯಿದೆಯು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.
ತಮ್ಮ ತಮ್ಮ ಸ್ವಂತ ಪತ್ನಿಯರನ್ನು ಹೊಡೆಯಬಲ್ಲ, ಬಡಿಯಬಲ್ಲ, ಇತರ ಸ್ತ್ರೀ ಜೀವಿಗಳನ್ನು ಹಿಂಸಿಸಬಲ್ಲವರಿಗೆ ಸ್ವಂತ ಗೃಹದಷ್ಟೇ ಸಕಲ ಸೌಲಭ್ಯಗಳುಳ್ಳ ಕಾರಾ-ಗೃಹ ವಾಸಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಪುರುಷ ಗಡಣ ಸಂತೃಪ್ತವಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.
ಜೈಲಿನಿಂದ ಹೊರಗಿದ್ದರೆ ಒಂದು ಕಿಲೋ ಟೊಮೆಟೋ ಪಡೆಯಬೇಕಿದ್ದರೆ ಒಂದು ಗ್ರಾಂ ಚಿನ್ನ ಅಡವಿಡಬೇಕಾದ ಪರಿಸ್ಥಿತಿ. ಆದರೆ ಜೈಲಿಗೆ ಹೋದರೆ ಉಚಿತ ಅಶನ, ವಸನ ಇತ್ಯಾದಿಗಳು ದೊರೆಯುತ್ತದೆ ಎಂಬ ಅಮೂಲ್ಯ ಸೂತ್ರವನ್ನು ಅಳವಡಿಸಲಾಗಿರುವುದು ಸರ್ವರ ಹರುಷಕ್ಕೆ ಕಾರಣವಾಗಿದೆ.
ಮಹಿಳಾ ಹಕ್ಕಿಗಳ ಸಂಘ ಹೋರಾಟದ ಕಣಕ್ಕೆ
ಸಾಮರ್ಥ್ಯ ಹೊಂದಿರುವ ಪುರುಷರಿಗೆ ಮಾತ್ರ ಈ ಅವಕಾಶ ಮಾಡಿಕೊಟ್ಟಿರುವ ಕ್ರಮಕ್ಕೆ ಮಹಿಳಾಮಣಿಗಳಿಂದ ಆಕ್ಷೇಪ ಬರುತ್ತಿದ್ದು, ತಮಗೂ ಈ ಅವಕಾಶ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳೆಲ್ಲಾ ಹೋರಾಟಕ್ಕೆ ಬೀದಿಗಿಳಿಯಲು ತೀರ್ಮಾನಿಸಿವೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ತಾವು ಕೂಡ ಪುರುಷರಷ್ಟೇ ಸಮಾನರು, ತಮಗೂ ಅವರನ್ನು ಹಿಂಸಿಸುವ ತಾಕತ್ತು ಇದೆ. ನಮಗೂ ಇಂಥ ಕಾಯಿದೆ ಅನ್ವಯಿಸಬೇಕು ಎಂದು ಅಖಿಲ ಭಾರತ ಮಹಿಳಾ ಹಕ್ಕಿಗಳ ರಕ್ಷಣಾ ಸಮಿತಿ ಆಗ್ರಹಿಸಿದೆ.
ಉಲ್ಟಾ ಹೊಡೆದ ಕಾಯಿದೆ
ಪ್ರೀತಿ, ಆತ್ಮೀಯತೆ, ಸಾಂತ್ವನ ಎಂಬಿತ್ಯಾದಿ ಗುಣಗಳು ಈಗಿನ ಕಾಲದಲ್ಲಿ ಮಾನವರಿಗೆ ಸಂಬಂಧಿಸಿದ್ದಲ್ಲ.... ಅಂದರೆ ಅ-ಮಾನವೀಯ ಎಂದಾಗಿಬಿಟ್ಟಿರುವುದರಿಂದ ಈ ಅಮಾನವೀಯತೆಯನ್ನೇ ಬಂಡವಾಳವಾಗಿಟ್ಟುಕೊಳ್ಳಲು ಪುರುಷರು ನಿರ್ಧರಿಸಿದ ಪರಿಣಾಮ ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಿದೆ ಎಂದು ತಿಳಿದುಬಂದಿದೆ.
ಗುರುವಾರದಿಂದ ಈ ಕಾಯಿದೆ ಜಾರಿಗೆ ಬಂದಿರುವುದರಿಂದ ಮಹಿಳೆಯರ ಮೇಲಿನ ಹಿಂಸಾಚಾರ ಪ್ರಕರಣಗಳು ದೇಶಾದ್ಯಂತ ಹೆಚ್ಚಳವಾಗತೊಡಗಿದೆ. ಹಾಗಾಗಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಈ ಕಾಯಿದೆ ರೂಪಿಸಿದ್ದು ಎಂದು ಸರಕಾರ ಹೇಳಿರುವುದು ಬರೀ ಬೊಗಳೆ ಎಂಬುದನ್ನು ನಮ್ಮ ಬ್ಯುರೋ ಯಾವುದೋ ಹೊತ್ತು ಗೊತ್ತಿಲ್ಲದ ನಾಡಿನಲ್ಲಿದ್ದುಕೊಂಡೇ ಅನ್ವೇಷಣೆ ಮಾಡಿದೆ.
bogaleragale.blogspot.com