ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)

ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)

(ಭಾಗ-೨)

ಕೊಪ್ಪಳದ ಆ ಹೆರಿಗೆ ಆಸ್ಪತ್ರೆಯೂ ಈ ಸಿದ್ಧಾಂತಕ್ಕೆ ಹೊರತಾಗಿರಲಿಲ್ಲ. ಗರ್ಭಿಣಿ ಹೆಂಗಸು ಏನು ತಿನ್ನಬೇಕು, ಯಾವ್ಯಾವ ದೈಹಿಕ ಚಟುವಟಿಕೆಗಳನ್ನು ಮಾಡಬೇಕು, ಮಗು ನಿರೀಕ್ಷಿಸುವ ಆಕೆಯ ಮನಸ್ಸು ಹೇಗಿರಬೇಕು, ಎಂಥ ವಾತಾವರಣ ನಿರ್ಮಿಸಿಕೊಳ್ಳಬೇಕು ಎಂಬ ಸೂಕ್ಷ್ಮ ಅಂಶಗಳತ್ತ ಅವರ ಗಮನವೇ ಇಲ್ಲ. ಬಹುಶಃ ಅವರಿಗೆ ಅದರಲ್ಲಿ ಆಸಕ್ತಿಯೂ ಇಲ್ಲ. ಮಿಕ ಬಂದಿದೆ. ಬಲೆಗೆ ಹಾಕಿಕೊಳ್ಳಬೇಕು. ಎಷ್ಟು ಸಾಧ್ಯವೋ ಅಷ್ಟು ಲಾಭ ಮಾಡಿಕೊಳ್ಳಬೇಕು ಎಂಬ ವ್ಯಾಪಾರಿ ಮನೋಭಾವ. ಅದನ್ನು ಸಾಧಿಸಲು ವೈಜ್ಞಾನಿಕ ಕಾರಣಗಳ ನೆವ. ನೀವೇನಾದರೂ ಈ ಔಷಧಿಗಳನ್ನು ತೆಗೆದುಕೊಳ್ಳದಿದ್ದರೆ, ಮುಂದೆ ಏನಾದರೂ ತೊಂದರೆಯಾದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂಬ ಎಚ್ಚರಿಕೆ ಬೇರೆ.

ಯಾರು ತಾನೆ ಅಂಥ ರಿಸ್ಕ್ ತೆಗೆದುಕೊಂಡಾರು?

ಹೀಗಾಗಿ, ಮನಸ್ಸಿಲ್ಲದಿದ್ದರೂ ಅವರು ಬರೆದುಕೊಟ್ಟ ಔಷಧಿಗಳನ್ನು ಕೊಳ್ಳಬೇಕು. ಪ್ರತಿ ತಿಂಗಳು ಚೆಕಪ್‌ಗೆ ಹೋಗಬೇಕು. ಗಂಟೆಗಟ್ಟಲೇ ಕಾಯಬೇಕು. ಅಲ್ಲಿ ಕಾಯುತ್ತ ಕೂತ ಪ್ರತಿಯೊಬ್ಬ ಗರ್ಭಿಣಿಯ ಮನಸ್ಸಿನಲ್ಲೂ ಮಗು ಪಡೆಯುವ ಸಂಭ್ರಮಕ್ಕಿಂತ ಹೆಚ್ಚಾಗಿ ಈ ಅವಧಿ ಹೇಗಾದರೂ ಕಳೆದರೆ ಸಾಕಪ್ಪಾ ಎಂಬ ಭಾವ. ಹೋದರೆ ಹಣ ಹೋದೀತು, ಹುಟ್ಟುವ ಮಗು ಆರೋಗ್ಯದಿಂದ ಇದ್ದರೆ ಸಾಕು ಎಂಬ ಹಾರೈಕೆ.
ಅಂಥ ಹತ್ತಾರು ಚೆಕಪ್‌ಗಳನ್ನು ಮುಗಿಸಿ, ಸಾವಿರಾರು ಮಾತ್ರೆಗಳನ್ನು ನುಂಗಿ, ಸಾವಿರಾರು ರೂಪಾಯಿಗಳ ಜೊತೆಗೆ ಅದುವರೆಗೆ ಇದ್ದ ನಮ್ಮ ಆರೋಗ್ಯಕರ ಮನಃಸ್ಥಿತಿಯನ್ನೂ ಕಳೆದುಕೊಂಡ ನಂತರ ಹೆರಿಗೆಯ ದಿನ ನಿರ್ಧಾರವಾಗುತ್ತದೆ. ’ನೋವು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗೆ ಬಂದು ಬಿಡಿ’ ಎಂದು ಸಲಹೆ ಕೊಡುತ್ತಾರೆ. ಆಸ್ಪತ್ರೆಯ ವೇಟಿಂಗ್ ರೂಮ್‌ನಲ್ಲಿಯೂ ಅಂಥವೇ ಪೋಸ್ಟರ್‌ಗಳು. ’ಆಸ್ಪತ್ರೆಯಲ್ಲಾಗುವ ಹೆರಿಗೆ, ಸುರಕ್ಷಿತ ಹೆರಿಗೆ’ ಎಂಬ ಘೋಷಣೆಗಳು. ಔಷಧ ಕಂಪನಿಗಳ ಜಾಹಿರಾತು ಪೋಸ್ಟರ್‌ಗಳಲ್ಲಿ ಕೂಡ ಅಂಥವೇ ಎಚ್ಚರಿಕೆಗಳು. ಹೆಸರೇ ಕೇಳಿರದ, ಯಾವತ್ತೋ ಪೇಪರ್‌ನಲ್ಲಿ ಮಾತ್ರ ಓದಿದ ರೋಗಗಳ ಬಗ್ಗೆ, ಅವುಗಳ ಭೀಕರ ಲಕ್ಷಣಗಳ ಬಗ್ಗೆ ಚಿತ್ರವತ್ತಾದ ಮಾಹಿತಿ ನೀಡುವ ಅವು, ’ಹುಟ್ಟುವ ಮಗು ಚೆನ್ನಾಗಿರಬೇಕೆಂದರೆ ಈ ಔಷಧಿಗಳ ಸೇವನೆ ಅಗತ್ಯ’ ಎಂದು ಘೋಷಿಸುತ್ತಿರುತ್ತವೆ. ಅತ್ತ ವೈದ್ಯರು, ಇತ್ತ ಪೋಸ್ಟರ್‌ಗಳು- ಗರ್ಭಿಣಿಯಾಗುವುದೆಂದರೆ ಹಲವಾರು ಮಾರಕ ರೋಗಗಳನ್ನು ಪಡೆಯಲು ದಾರಿ ಎಂಬಂತೆ ಬಿಂಬಿಸುವಾಗ ಗಾಬರಿ ಹುಟ್ಟದೇ ಇದ್ದೀತೆ? ಆಗ ವೈದ್ಯರ ಸಲಹೆ ತಿರಸ್ಕರಿಸುವ ಧೈರ್ಯ ಯಾರಿಗೆ ತಾನೇ ಸಾಧ್ಯ?

ಈಗ ನಾವು ಸುಲಿಗೆಯ ಅಂತಿಮ ಹಂತ ತಲುಪಿದ್ದೆವು. ಹೆರಿಗೆ ನೋವು ಕಾಣಿಸಿಕೊಂಡಿದೆ. ಚೊಚ್ಚಲ ಹೆರಿಗೆ ಬೇರೆ. ಅಲ್ಲೆಲ್ಲೋ ಹೆರಿಗೆ ಕೋಣೆಯೊಳಗಿಂದ ರೇಖಾಳ ನರಳುವ ಧ್ವನಿ ಕೇಳಿಸುತ್ತಿದೆ. ಹೊರಗೆ ತಳಮಳಿಸುತ್ತ ಅತ್ತೆ-ಮಾವ ನಿಂತಿದ್ದಾರೆ. ಭೂಕಂಪವಾಗುತ್ತಿದೆಯೇನೋ ಎಂಬಂತೆ ವೈದ್ಯರು, ಇಂಥ ಪರಿಸ್ಥಿತಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಅವರಿಂದ ಚೆನ್ನಾಗಿ ತರಬೇತಿ ಪಡೆದಿರುವ ದಾದಿಯರು ಅವಸರವಸರವಾಗಿ ಓಡಾಡುತ್ತಿದ್ದಾರೆ. ಇಡೀ ಆಸ್ಪತ್ರೆಯಲ್ಲಿ ’ಒಂದು ಬಾಲ್, ಒಂದು ರನ್, ಕೊನೆಯ ವಿಕೆಟ್’ ಎಂಬಂಥ ಕ್ರಿಕೆಟ್ ಟೆನ್ಷನ್ ವಾತಾವರಣ. ಅದನ್ನು ಇನ್ನಷ್ಟು ಹೆಚ್ಚಿಸುವಂತೆ, ’ಚೊಚ್ಚಲ ಹೆರಿಗೆಯಾ? ಕೂಸು ಅಡ್ಡ ಕೂತಿದೆಯಾ? ಹೊಕ್ಕಳ ಬಳ್ಳಿ ಸುತ್ತು ಹಾಕಿಕೊಂಡಿದೆಯಾ? ನೋವು ಶುರುವಾಗಿ ಎಷ್ಟೊತ್ತು ಆಯ್ತು? ಡಾಕ್ಟರ್ ಏನು ಹೇಳಿದ್ರು?’ ಎಂಬ ಪ್ರಶ್ನೆಗಳನ್ನು ಕೇಳುವ ಚೆಕಪ್‌ಗೆ ಬಂದ ದಿನ ತುಂಬಿರದ ಗರ್ಭಿಣಿಯರು.

ಮನುಷ್ಯ ಮಾನಸಿಕವಾಗಿ ಮೆತ್ತಗಾಗಲು ಇನ್ನೇನು ಬೇಕು?

ಅಷ್ಟರಲ್ಲಿ ವೈದ್ಯರು ಧಾವಿಸಿ ಬಂದು ಉದ್ದನೆಯ ಪಟ್ಟಿ ಕೈಗಿತ್ತು, ’ತಕ್ಷಣ ಇವನ್ನೆಲ್ಲ ತಗೊಂಬನ್ನಿ’ ಎಂದವರೇ ರಭಸದಿಂದ ಹೆರಿಗೆ ರೂಮ್‌ಗೆ ವಾಪಸ್ಸಾಗುತ್ತಾರೆ. ಆಗ ಅಲ್ಲಿರುವ ಗರ್ಭಿಣಿಯರ ಮುಖದಲ್ಲಿ ಎಂಥದೋ ಕಳವಳ. ದಿನ ತುಂಬಿರದಿದ್ದರೂ ಆಗಲೇ ಹೆರಿಗೆ ನೋವು ಶುರುವಾದಂತೆ ಚಡಪಡಿಕೆ. ಎಂಟು ಜನ ಸದಸ್ಯರಿರುವ ಕುಟುಂಬದ ಆರು ತಿಂಗಳ ರೇಶನ್ ಪಟ್ಟಿಯೂ ಅಷ್ಟು ಉದ್ದ ಇರಲಿಕ್ಕಿಲ್ಲ. ಹಾಗಂತ ಅದನ್ನು ಪರೀಕ್ಷಿಸುತ್ತ ಅಲ್ಲಿಯೇ ನಿಲ್ಲಲಾದೀತೆ? ಅಷ್ಟಕ್ಕೂ ಡಾಕ್ಟರ್‌ಗಳ ಕೈಬರಹ ಯಾರಿಗೆ ತಾನೆ ಅರ್ಥವಾದೀತು, ಹತ್ತಿರದಲ್ಲಿಯೇ ಇರುವ ಔಷಧ ಅಂಗಡಿಯ ವ್ಯಕ್ತಿಯನ್ನು ಬಿಟ್ಟು?

ಕಾಲುಗಳು ಈಗ ನಮ್ಮ ಮಾತು ಕೇಳುವುದಿಲ್ಲ. ಡಾಕ್ಟರ್‌ಗಿಂತ ಸ್ಪೀಡಾಗಿ ಅತ್ತ ಓಡುತ್ತವೆ. ಪಟ್ಟಿಯನ್ನು ನೋಡಿಯೇ ಆತ ಚುರುಕಾಗುತ್ತಾನೆ. ’ಡೆಲಿವರಿಯಾ?’ ಎನ್ನುತ್ತಾನೆ, ನಾವೇ ಹಡೆಯಲು ಸಿದ್ಧರಾಗಿದ್ದೇವೇನೋ ಎಂಬಂತೆ. ಔಷಧಿಗಳು, ಕೊಳವೆಗಳು, ಪ್ಲಾಸ್ಟಿಕ್ ಸಾಧನಗಳು, ನ್ಯಾಪ್‌ಕಿನ್‌ಗಳು, ಸಿರಿಂಜ್‌ಗಳು, ಔಷಧಿಗಳು- ದೇವರೇ ಒಂದೇ ಎರಡೇ, ಇಡೀ ಆಸ್ಪತ್ರೆಯ ಅಷ್ಟೂ ಗರ್ಭಿಣಿಯರಿಗೆ ಒಂದೇ ಸಾರಿ ಹೆರಿಗೆ ಮಾಡಿಸುವಷ್ಟು ಪ್ರಮಾಣದ ಔಷಧಿಗಳು ದಡ ದಡ ಕೌಂಟರ್ ಮೇಲೆ ಬೀಳುತ್ತವೆ. ಟೆನ್ಷನ್, ಗಾಬರಿಯಿಂದ ನಾವು ಜೇಬನ್ನು ಮುಟ್ಟಿಮುಟ್ಟಿ ನೋಡಿಕೊಳ್ಳಬೇಕು ಹಾಗೆ.

ಅವನ್ನೆಲ್ಲ ಹೊತ್ತುಕೊಂಡು ಹಿಂತಿರುಗಿದ ನಮ್ಮನ್ನು ಎದುರುಗೊಳ್ಳುವುದು ಅತ್ಯವಸರದ ನರ್ಸ್ ಒಬ್ಬಳು. ಲಬಕ್ಕನೇ ಅವನ್ನೆಲ್ಲ ಕಿತ್ತುಕೊಂಡು ಹೆರಿಗೆ ಕೋಣೆಗೆ ಓಡಿ ಬಾಗಿಲು ಹಾಕಿಕೊಳ್ಳುತ್ತಾಳೆ. ಮತ್ತೆ ಅದೇ ವೇಟಿಂಗ್ ಪಿರಿಯಡ್. ಗರ್ಭಿಣಿ ಹೆಂಗಸರ ಕಳವಳ, ಕಾಳಜಿ ಬೆರೆತ ನೋಟಗಳು. ಗೋಡೆಯ ಮೇಲಿನ ಪೋಸ್ಟರ್‌ಗಳಲ್ಲಿ ನಗುವ ಆರೋಗ್ಯವಂತ ಮಕ್ಕಳು, ಅವರ ಕೆಳಗೆ ಮರಣ ಶಾಸನದಂತೆ ಅಚ್ಚಾಗಿರುವ ಭಾರಿ ಭಾರಿ ಮಾರಕ ರೋಗಗಳ ಲಕ್ಷಣಗಳು. ಒಂದು ವೇಳೆ ನಾವೇ ಗರ್ಭಿಣಿಯರಾಗಿದ್ದರೆ, ಆ ಒತ್ತಡಕ್ಕೆ, ಆ ವಾತಾವರಣದಲ್ಲಿ, ಡಾಕ್ಟರ್‌ಗಳ ಅಥವಾ ಒಂದೇ ಒಂದು ಔಷಧಿಯ ಅಗತ್ಯವೇ ಇಲ್ಲದೆ ತಕ್ಷಣ ಹೆರಿಗೆ ಆಗುವುದೇನೋ!

’ಒಂದೇ ಬಾಲ್, ಒಂದೇ ರನ್, ಒಂದೇ ವಿಕೆಟ್’ ಎಂಬಂತೆ ನಿಂತ ನಮ್ಮತ್ತ ಅಂಪೈರ್ ಬಂದಂತೆ ವೈದ್ಯರು ಬರುತ್ತಾರೆ. ಈಗ ಅವರ ಮುಖದಲ್ಲಿ ಮೊದಲಿನ ಧಾವಂತವಿಲ್ಲ. ನಡಿಗೆಯಲ್ಲಿ ಮೊದಲಿನ ರಭಸವಿಲ್ಲ. ಕೈಯಲ್ಲಿ ಕ್ಲಿಪ್ ಪ್ಯಾಡ್, ಒಂದಿಷ್ಟು ಫಾರ್ಮ್‌ಗಳು.
’ಪೇಷಂಟ್ (ಗರ್ಭಿಣಿ ಅಲ್ಲ!) ಕಡೆಯವರು ಯಾರು?’ ಎಂದು ಆ ಕಡೆ ಈ ಕಡೆ ನೋಡುತ್ತ ಕೇಳುತ್ತರಾದರೂ ಅವರು ಸೀದಾ ಬರುವುದು ನಮ್ಮ ಕಡೆಯೇ. ನಮ್ಮ ಮುಖಭಾವ, ನಿಂತರೂ ನಿಂತಂತಿರದ ಚಡಪಡಿಸುವ ಭಂಗಿ, ಪೇಷಂಟ್‌ನ ಸಂಬಂಧಿಕರಾಗಿದ್ದರಿಂದ ಮಹಾ ಪೇಷಂಟ್‌ಗಳಂತಾಗಿರುವ ನಮ್ಮತ್ತ ಬಂದವರೇ, ’ನೋಡಿ ಮಿಸ್ಟರ್. (ನಾನೇ ತಾನೇ ಆ ಮಿಸ್ಟರ್!). ಚೊಚ್ಚಲ ಹೆರಿಗೆ. (ಗೊತ್ತು ಹೇಳ್ರೀ). ಲೇಬರ್ ಶುರುವಾಗಿ ಆಗಲೇ ತುಂಬ ಹೊತ್ತಾಯ್ತು. (ನಮ್ಮದು ಕೂಡಾ!). ಕೂಸು ಅಡ್ಡ ಕೂತುಬಿಟ್ಟಿದೆ. (ನಿಮ್ಮನ್ನೆಲ್ಲ ನೋಡಿ ಗಾಬರಿಯಾಗಿರಬೇಕು!). ತಡ ಆದ್ರೆ ಪ್ರಾಬ್ಲಮ್ ಆಗುತ್ತೆ. (ನಿಮ್ಮ ಪ್ರಾಬ್ಲಮ್ ಅರ್ಥವಾಗ್ತಿದೆ ಹೇಳ್ರೀ). ಕೂಸು ಕಕ್ಕಸ್ಸು ಮಾಡಿಕೊಂಡ್ರೆ ಕಷ್ಟ. ಆಗ ಆಕ್ಸಿಜನ್ ಕೊರತೆ ಆಗುತ್ತೆ. (ಸಹಜವಾಗಿ. ಜನ ಮೂಗು ಮುಚ್ಕೊಂಡ್ರೆ ಇನ್ನೇನಾಗುತ್ತೆ?). ಅದರಿಂದ ಮೆದುಳಿಗೆ ಹಾನಿ. (ನಮ್ಮ ಮೆದುಳು ಆಗಲೇ ಹಾನಿಯಾಗಿದೆ). ತಕ್ಷಣ ಸೀಸೇರಿಯನ್ ಮಾಡ್ಬೇಕು. (ಓಹೋ, ಇದಾ ವಿಷಯ!). ಇಲ್ಲಿ ಸೈನ್ ಮಾಡಿ’ ಎಂದು ರೆಡಿಮೇಡ್ ಕಾಲಮ್ ತೋರಿಸುತ್ತಾರೆ.

ಚೆಕ್‌ಗೆ ಸಹಿ ಮಾಡುವಾಗ ಯೋಚಿಸಬಹುದು, ರಾಜೀನಾಮೆ ಪತ್ರಕ್ಕೆ ಸಹಿ ಮಾಡುವಾಗ ಇನ್ನಷ್ಟು ಯೋಚಿಸಬಹುದು. ಆದರೆ, ಹೆರಿಗೆ ಆಸ್ಪತ್ರೆಯ ಲೇಬರ್ ವಾರ್ಡ್‌ನಲ್ಲಿ ಡಾಕ್ಟರ್ ಕೈಗಿಡುವ ಫಾರ್ಮ್‌ಗೆ ಸಹಿ ಮಾಡುವಾಗ ಯೋಚಿಸುವುದು ಕಷ್ಟ. ಅಷ್ಟೊತ್ತಿಗೆ ಮೆದುಳು ವಿಚಾರ ಮಾಡುವುದನ್ನು ನಿಲ್ಲಿಸಿ, ಕೇವಲ ಆಜ್ಞೆ ಪಾಲಿಸುವುದನ್ನು ಮಾತ್ರ ಮಾಡುತ್ತಿರುತ್ತದೆ. ಸರಸರ ಸಹಿ ಮಾಡುತ್ತೇವೆ. ನಮ್ಮ ಇಡೀ ಆಸ್ತಿ ಬರೆಸಿಂಡರೇನೋ ಎಂಬಂತೆ ವೈದ್ಯರು ನಿರಾಳವಾಗಿ ಹೆರಿಗೆ ಕೋಣೆಯೊಳಕ್ಕೆ ಹೋಗುತ್ತಾರೆ.

ಐದೇ ನಿಮಿಷ. ಕೂಸೊಂದು ಅಳುವುದು ಕೇಳುತ್ತದೆ. ಕೊನೆಯ ಬಾಲ್ ಎದುರಿಸಿ, ಬೇಕಿದ್ದ ಒಂದು ರನ್ ಗಳಿಸಿದ ಕೂಡಲೇ ಕ್ರಿಕೆಟ್ ಮೈದಾನದಲ್ಲಿ ಸ್ಫೋಟಿಸುವಂಥ ಸಂಭ್ರಮ ಹೊರಗೆ ನಿಂತವರಲ್ಲಿ. ಮಗು ಇನ್ನೂ ಜೋರಾಗಿ ಅಳುತ್ತದೆ. ವೈದ್ಯರು, ದಾದಿಯರು, ಆಪರೇಶನ್ ಥೇಟರ್‌ನ ಆ ಭೀಕರ ವಾತಾವರಣ ನೋಡಿದ ಗಾಬರಿಗೆ ಇರಬೇಕು. ವೇಟಿಂಗ್ ರೂಮ್‌ನಲ್ಲಿ ಕೂತ ಗರ್ಭಿಣಿಯರ ಮುಖದಲ್ಲಿ ತಮಗೇ ಹೆರಿಯಾಯಿತೇನೋ ಎಂಬ ಹರ್ಷ. ಮ್ಯಾಚ್ ಗೆಲ್ಲಿಸಿಕೊಟ್ಟ ಎಂಬಂತೆ ಅತ್ತೆ-ಮಾವ ಥರ್ಡ್ ಅಂಪೈರ್‌ಗೆ (ದೇವರಿಗೆ) ಕೈ ಮುಗಿಯುತ್ತಾರೆ. ಈ ಎಲ್ಲದಕ್ಕೂ ಕಾರಣಕರ್ತನಾದ ನಾನು ಮಾತ್ರ ಸುಮ್ಮನೇ ನಿಲ್ಲುತ್ತೇನೆ. ವ್ಯಕ್ತಿಯ ಅಸಹಾಯಕತೆ, ಬಾಣಂತಿಯ ನೋವನ್ನು ಹಣವನ್ನಾಗಿ ಪರಿವರ್ತಿಸಿಕೊಂಡ ವ್ಯವಸ್ಥೆಯಲ್ಲಿ ನನ್ನ ಮಗು ಹುಟ್ಟಿದ್ದಕ್ಕೆ ಹರ್ಷ ಪಡಬೇಕೋ, ಬೇಸರಿಸಿಕೊಳ್ಳಬೇಕೋ ಗೊತ್ತಾಗದೇ ಸುಮ್ಮನಾಗುತ್ತೇನೆ.
ಈಗ ಹೆರಿಗೆ ಕೋಣೆಯ ಬಾಗಿಲು ಇಷ್ಟೇ ಇಷ್ಟು ತೆರೆದುಕೊಂಡು ದಾದಿಯೊಬ್ಬಳು ಇಣುಕಿ ಕೂಗುತ್ತಾಳೆ: ಹೆಣ್ಣು ಮಗು! ’ಓ’ ಎಂಬ ಸಾಮೂಹಿಕ ಉದ್ಗಾರ ವೇಟಿಂಗ್ ರೂಮ್‌ನಿಂದ.

ಗೌರಿ ಜನಿಸಿದ್ದು ಹೀಗೆ!

- ಚಾಮರಾಜ ಸವಡಿ

Rating
No votes yet

Comments