ಹೊಂಬೆಳಕು (ಭಾಗ – 3)

ಹೊಂಬೆಳಕು (ಭಾಗ – 3)

 ಪದ್ಮನಾಭ ಮತ್ತು ನೇತ್ರ ಇಬ್ಬರೇ ಮಕ್ಕಳು ದೊಡ್ಡಮ್ಮನಿಗೆ.  ನೇತ್ರಳಿಗಿಂತ  ಕಿರಿಯವ ಒಬ್ಬ ಇದ್ದ.  ಆದರೆ ಅವನು ನಾಲ್ಕು ವರ್ಷಗಳ ಹಿಂದೆ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಕ್ಕೆ ಬಲಿಯಾಗಿದ್ದ.  ದೊಡ್ಡಪ್ಪ ತಮ್ಮ ಜೀವಿತ ಕಾಲದಲ್ಲಿ ಕಷ್ಟ ಪಟ್ಟು ದುಡಿದು ಮಕ್ಕಳಿಗಾಗಿ ಬೇಕಾದಷ್ಟು ಆಸ್ತಿ ಮಾಡಿಟ್ಟಿದ್ದರು.   ಗಂಡು ಮಕ್ಕಳಿಬ್ಬರೂ ಶತ ಸೊಂಬೇರಿಗಳು.  ಈ ನೇತ್ರ ಗಂಡು ಮಗನಂತೆ ದುಡಿಯುತ್ತಿದ್ದಳು, ಆಳು – ಕಾಳು ಒಕ್ಕಲನ್ನು ಹದ್ದು ಬಸ್ತಿನಲ್ಲಿಟ್ಟಿದ್ದಳು.  ದೊಡ್ಡಪ್ಪನೂ ಗಂಡು ಮಕ್ಕಳಿಗಿಂತ ಹೆಚ್ಚು ಸ್ವಾತಂತ್ರ್ಯವನ್ನು ಮಗಳಿಗೆ ನೀಡಿದ್ದರು.  ಅವರಾದರೂ ಏನು ಮಾಡಲು ಸಾಧ್ಯವಿತ್ತು?  ಇಬ್ಬರು ಮಕ್ಕಳಿಗೂ ಇನ್ನಿಲ್ಲದಷ್ಟು ದುರಭ್ಯಾಸಗಳಿದ್ದವು.  ಇಬ್ಬರೂ ಎಷ್ಟು ದುಡ್ಡು ಕಳೆದಿದ್ದರೋ ಲೆಕ್ಕವಿಲ್ಲ.   ದೊಡ್ಡಪ್ಪ ಸಾಯುವ ಎರಡು – ಮೂರು ವರ್ಷಗಳು ತಮ್ಮ ಗಂಡು ಮಕ್ಕಳೊಂದಿಗೆ ಮಾತೇ ಆಡುತ್ತಿರಲಿಲ್ಲ.  ಆದರೆ ಆಶ್ಚರ್ಯವೆಂಬಂತೆ  ದೊಡ್ದಪ್ಪನ ಸಾವಿನ ನಂತರ ಪದ್ಮನಾಭನಿಗೆ ಸ್ವಲ್ಪ ಜವಾಬ್ದಾರಿ ಬಂದಂತಿತ್ತು.  ಆದರೂ ಹುಟ್ಟಾ ಸೋಂಬೇರಿಯಾಗಿದ್ದವ ಯಾವ ಕೆಲಸ ಮಾಡುವುದಿದ್ದರೂ ಅತೀ ನಿಧಾನ.  ಇದು ನೇತ್ರಳನ್ನು ಕೆರಳಿಸುತ್ತಿತ್ತು.  ಅಣ್ಣ – ತಂಗಿಯರಿಗೆ ಒಬ್ಬರನ್ನೊಬ್ಬರು ಕಂಡರೆ ಅಷ್ಟಕ್ಕಷ್ಟೆ.  ತಂಗಿಯನ್ನು ಕಂಡರಾಗದಿದ್ದರೂ ಪದ್ಮನಾಭ ಅವಳಿಷ್ಟಪಟ್ಟಂತೆ ಬೆಂಗಳೂರಿನಲ್ಲಿರುವ ಯುವಕನಿಗೆ ಅವಳನ್ನು ಕೊಟ್ಟು ಅದ್ಧೂರಿಯಿಂದ ಮದುವೆ ಮಾಡಿದ್ದ.  ಮದುವೆಯ ಕರೆಯೋಲೆ ಬಂದಿದ್ದರೂ ನನಗೆ ಆಗ  ಹೋಗಲಾಗಿರಲಿಲ್ಲ.  ಅವಳ ಗಂಡನ ವರ್ಣನೆ ಅವಳ ಬಾಯಿಂದಲೇ ಕೇಳಬೇಕು.  ‘ಇಲ್ಕಾಣಿ ಸವಿತಕ್ಕಾ.. ನಂಗೆ  ಬೆಂಗ್ಳೂರಾಗಿಪ್ಪವ್ರೇ  ಆಯ್ಕಂತಿತ್... ಹೊಟ್ಲಾರೂ ಅಡ್ಡಿಲ್ಲೆ.. ಆದ್ರೆ ಇಪ್ಪುದು ಮಾತ್ರ ಬೆಂಗ್ಳೂರಾಗೇ ಆಯ್ಕಿದ್ದಿತ್.  ಅಣ್ಣಯ್ಯ ಅದರಲ್ಲೆಲ್ಲ ಅಡ್ಡಿಲ್ಲಪ್ಪ.. ಅಂವ ಮದಾಲಿಗೆ ಹೇಳಿದ್ದ.  ‘ಇಕಾ ನೇತ್ರ.. ಅಪ್ಪಯ್ಯ ಇಲ್ಲೆ  ಅಂತ ನೀ ಬೇಜಾರ್ ಮಾಡ್ಕಂಬ್ಕಾಗ..ನಿಂಗ್ ಎಂತವ್ರ್ ಆಯ್ಕು ಅಂತ ನೀ ಹೇಳಿದ್ರೆ ಅಂತವ್ರನ್ನೇ ನೋಡ್ತೆ  ಮಾರಾಯ್ತಿ’ ಅಂತ್ಹೇಳಿದ್ದ .. ಹಂಗೇ ಮಾಡ್ದ.  ನಂಗೆ  ಈಗ್ ಎಣಿಸತ್ ಮಾರಾಯ್ರೇ ನಾ ಎಂತಕ್ ಬೆಂಗ್ಳೂರಂತ ಆಸೆ ಮಾಡ್ದೆ ಅಂತ.  ಅಲ್ಲೆಂತ ಮಾರಾಯ್ರೇ?  ನೀವ್ ಕಾಣ್ಲಿಲ್ಲೆ ನಮ್ಮನೆ.. ಹಗ್ಲ್ ಹೊತ್ತೂ ಲೈಟ್ ಹಾಕೊಂಡಿರುಕು.. ಇವ್ರು ಆಪೀಸಿಗ್ ಹೊತ್ರಲೇ.. ಕಡೀಗೆ ಮನೇಲ್ ನಾನೊಬ್ಳೇ.  ನಂಗೆ ಒಬ್ಬಳೇ ಹೊರಗ್ ಹೊಪೂಕೂ ಗೊತ್ತಾತ್ತಿಲ್ಲೆ.  ಎಲ್ಲಿಗ್ ಹೊಯ್ಕಿದ್ರೂ ಅವ್ರೆ ಕರ್ಕೊಂಡ್ ಹೋಯ್ಕು.  ನಾನು ಊರಾಗೇ ಇರ್ಕಿದ್ದಿತ್.  ಆದ್ರೆ ಸವಿತಕ್ಕಾ.. ಇವ್ರು ಇದ್ರಲೇ  ಸತ್ಯ ಹೇಳ್ತೆ.. ದೇವ್ರೂ ಸಮಾ ಇವ್ರೂ ಸಮಾ ಅಷ್ಟ್ ಒಳ್ಳ್ಯೆವ್ರು ಸವಿತಕ್ಕಾ.  ಅಲ್ದಿದ್ರೆ ನಿಮಗೊತ್ತಿತ್ತಾ ನಮಗೆ ಈ ಸಂಬಂಧ ಹೇಳಿದ್ದು ಒಬ್ರು ಬ್ರೋಕರಂಬ್ರು .. ಅಂವ ನಾನು ಎಸ್ ಎಲ್ ಸಿ ಓದಿದ್ದೆ ಅಂತ ಸುಳ್ಳೇ ಹೇಳಿದ್ದಾಂಬ್ರು ಮಾರಾಯ್ರೇ.  ಅಲ್ಲ ನಾ ಸತ್ಯ ಹೇಳ್ತೆ.. ಇವ್ರು ಒಳ್ಳೆವ್ರಾಗಿದ್ದಕ್ಕಾಯ್ತು.. ಅಲ್ದಿದ್ದ್ರೆ ನಾ ಎಂತಾ ಮಾಡ್ಕಿದ್ದಿತ್  ಅಲ್ದೇ?..  ಇವ್ರು ಕಾಂಬೂಕೂ ಎಂತ ಚೆಂದ ಇದ್ರು ಗೊತ್ತಿತ್ತಾ.. ಪಕ್ನೆ ಕಂಡ್ರೆ ರಾಜಕುಮಾರ ಇದ್ನಲೇ ಅವ್ನ ಥರಾ ಕಾಂತ್ರು...ರಾಜಕುಮಾರ..ಅದೇ ಪಿಚ್ಚರಾಗ್ ಮಾಡ್ತ್ನಲೇ..ನೀವ್ ಕಂಡಿದ್ರ್ಯಾ?  ಇಲ್ಕಾಣಿ ಸವಿತಕ್ಕಾ ನಾನು ಇವತ್ತಿನವರೆಗೂ ಒಂದ್ ಪಿಚ್ಚರೂ ಕಂಡಿಲ್ಲೇ..ರಾಜಕುಮಾರನ  ಪೋಟೋ ಕಂಡಿದ್ದೆ ಅಷ್ಟೇ ಕಾಣಿ.... ”  ಅವಳು ಹೇಳಿದ್ದರಲ್ಲೂ ಸತ್ಯವಿತ್ತು.  ಅವಳು ಶಾಲೆಯ ಮುಖ ಕಂಡವಳೇ ಅಲ್ಲ. ಎದೆ ಸೀಳಿದರೂ ಒಂದಕ್ಷರ ಓದಲಾಗಲೀ ಬರೆಯಲಾಗಲೀ ಅವಳಿಗೆ ಗೊತ್ತಿಲ್ಲ.  ಅವಳ ಗಂಡ ಎಂ. ಎ. ಓದಿದ್ದರು.  ಅವಳ ಅಪ್ಪನ ಆಸ್ತಿ ನೋಡಿ ಮದುವೆಯಾಗಿದ್ದರು ಅಂತನಿಸುತ್ತದೆ.   ನೇತ್ರ ನೋಡಲೂ ಸಹ ಅಂತಹ ಚೆಂದ, ಲಕ್ಷಣ  ಏನೂ ಅಲ್ಲ.. ಗಂಡಸಿನ ಪರ್ಸನಾಲಿಟಿ ಅವಳದ್ದು. 

“ಥೋ.. ಇಲ್ಕಾಣಿ ಸವಿತಕ್ಕಾ.... ಹಾಡಿ ಎಲ್ಲಾ ಕತ್ತರಿಸ್ಕೊಂಡ್ ಹೋಯಿದ್ದೋ ಕಾಣಿ.. ಆ ಸತ್ತೊದಂವ ಇಪ್ಪಾಗತ್ತಿಗೆ ಯಾವಾಗ ಕಂಡ್ರೂ ಹಾಡಿ ಬದೀಲೇ ತಿರಗ್ತಿದ್ದ .. ಆಗ್ಳೀಗ್ ಯಾರಿಗೂ ಹಾಡಿ ಕಡೀಕ್ ಮುಖ ಹಾಕೂಕು ಧೈರ್ಯ ಆತ್ತಿರ್ಲಿಲ್ಲ.  ಇಂವ ಇದ್ನಲೇ ಒಂದಿನಾದ್ರೂ ಹಾಡಿ ಬದೀಗ್ ಬತ್ನಾ ಕಾಂಬ್ಕೆ...?  ಇಡೀ ದಿನ ಹೆಂಡ್ತಿ ಹತ್ರ ಕೂತಿರ್ತ..  ಹಳ್ತಿನ್ ಕಾಲಕ್ಕೆ ಮದಿ ಆಪ್ಕಾಗ್ದೆ...” ಅವಳ ಏರು ದನಿಗೆ ಇಹಕ್ಕೆ ಬಂದಿದ್ದೆ.   ಗದ್ದೆ ಬಯಲು ಮುಗಿದು ಹಾಡಿ  ಶುರುವಾದರೂ ಅವಳ ಮಾತು ಮುಗಿದಿರಲಿಲ್ಲ  ಅವಳ ಮಾತಿನಲ್ಲಿನ ಅಸಹನೆ ಕಂಡು ನನಗೆ ನಗು ಬಂತು, ಎರಡನೆಯ ಬಾರಿ ಅದೇ ಮಾತು ಹೇಳಿದ್ದಳು.  ಗೇರು ಬೀಜದ ಪ್ಲಾಂಟೇಶನ್ ತುಂಬಾ ಚೆನ್ನಾಗಿತ್ತು.  ಎಲ್ಲ ಮರಗಳಲ್ಲೂ ಹೂವು, ಪುಟ್ಟ ಪುಟ್ಟ ಗೇರು ಬೀಜಗಳು ಮೊಳೆತಿದ್ದವು. ಹೂವಿನ ಮಧುರವಾದ ಪರಿಮಳ ಸುತ್ತೆಲ್ಲ ಹರಡಿತ್ತು.  ಮಧ್ಯ ಮಧ್ಯದಲ್ಲಿ ಮಾವಿನ ಮರಗಳೂ ಇದ್ದವು.  ಅದರಲ್ಲೂ ಚಿಗುರು, ಹೂವು, ಮಿಡಿ ಕಾಯಿಗಳು ಮೊಳೆತಿದ್ದವು.  ಸಂಜೆಯ ಸೂರ್ಯನ ಹೊಂಗಿರಣಗಳು ಅವುಗಳ ಮೇಲೆ ಬಿದ್ದು ಒಂದು ರೀತಿಯ ಸ್ವರ್ಗೀಯ ವಾತಾವರಣ ನಿರ್ಮಾಣಗೊಂಡಿತ್ತು.  ಇದು ನನ್ನ ಕವಿ ಮನದ ಕಲ್ಪನೆಯೇ ಇರಬೇಕು, ಹಸಿರು, ಕಾಡು, ಬೆಟ್ಟ, ನದಿ, ಹೊಳೆ ಎಂದರೆ ಸಾಕು ನಾನು ಇಹ ಮರೆಯುವ ನಿಸರ್ಗ ಪ್ರಿಯೆ ನಾನು. ಆದರೆ  ನೇತ್ರಳಿಗೆ ಅದಾವುದರ ಪರಿವೆಯೂ ಇದ್ದಂತಿರಲಿಲ್ಲ.  ಅವಳು ತನ್ನ ಯೋಚನೆಯಲ್ಲಿ  ತಾನಿದ್ದು  ಮತ್ತೂ ಮಾತು ಮುಂದುವರೆಸಿದಳು...

         “ಅಪ್ಪಯ್ಯ ರಕ್ತ ಬಸ್ದ್ ಸಂಪಾದಿಸಿದ್ ಆಸ್ತಿ ಮಾರಾಯ್ರೆ...ಇಂವ ಅವ್ನಿಗ್ ಬೇಕಾದ್ಹಾಗ್  ಮಾಡ್ತ... ಇಂವ ಎಂತ ಮಾಡಿದ್ದ ಗೊತ್ತಿತ್ತಾ ಸವಿತಕ್ಕಾ..?  ಹತ್ತು ಎಕ್ರೆ ಹಾಡಿ ಮಾರಿದ್ದ ಅಂಬ್ರು... ಅದ್ರಲ್ಲಿ ನಂಗೂ ಪಾಲು ಕೊಡ್ಕಲ್ದ..?  ಹಂಗಾರೆ ಮಾರೂಕ್ ನನ್ನ ಒಪ್ಪಿಗೆ ಬೇಕಲ್ದ..?  ನನ್ನನ್ ಕೇಂಡಿದ್ ಗತಿಗ್  ಇಲ್ಲೇ.. ನಾ ದೂರ್  ಕೊಟ್ರೆ  ಎಂತ ಆತ್ ಹೇಳಿ ಸವಿತಕ್ಕಾ..?”   ಇದೆಲ್ಲ ಸೂಕ್ಷ್ಮ ವಿಚಾರ... ಆಸ್ತಿ ಜಗಳದಿಂದ ಸಂಬಂಧ ಹಾಳಾದದ್ದಿದೆ.. ಇಂತಹ ವಿಚಾರದಲ್ಲಿ ಸಲಹೆ ಕೊಡಲು ನಾನು ತಿಳಿದವಳಲ್ಲ.  ಒಂದು ವೇಳೆ ತಿಳಿದಿದ್ದರೂ ಹೇಳಲು ನನಗೇನು ಅಧಿಕಾರವಿದೆ. ನನಗೂ ಇದಕ್ಕೂ ಸಂಬಂಧವಿಲ್ಲ.  ನನಗೆ ನನ್ನದೇ ಸಮಸ್ಯೆ  ಹಾಸಲು ಹೊದೆಯಲು ಸಾಕಾಗುವಷ್ಟಿದೆ.  ಇವರು ಆಕ್ಸಿಡೆಂಟ್ ನಲ್ಲಿ ಮರಣಿಸಿ ಆಗಲೇ  ಆರು ತಿಂಗಳಾಗುತ್ತ ಬಂದಿದೆ.  ಅವರು ಸರಕಾರೀ ಅಧಿಕಾರಿಯಾಗಿದ್ದರು,   ಅವರ ಕೆಲಸ ನನಗೆ ಸಿಗುವಂತಿತ್ತಾದರೂ ಯಾವಾಗ ಸಿಗುವುದೋ ಹೇಳುವುದಕ್ಕೆ ಬರುವುದಿಲ್ಲ.  ಇಲ್ಲಿಂದ ಬೆಂಗಳೂರಿಗೆ ಹೋದ ನಂತರ, ಸರಕಾರೀ ಕೆಲಸವಲ್ಲದಿದ್ದರೂ ಯಾವುದಾದರೂ ಖಾಸಗಿ ಕಂಪೆನಿಯಲ್ಲಿ ಕೆಲಸ ಹುಡುಕಿಕೊಂಡು ಅಣ್ಣಯ್ಯನ ಭಾರವನ್ನು ಕಡಿಮೆ ಮಾಡಬೇಕು. ಅಣ್ಣಯ್ಯ ನನ್ನನ್ನೇನೂ ಭಾರವೆಂದು  ಅಂದುಕೊಂಡಿಲ್ಲವಾದರೂ ನನಗೇ ಇರುಸು ಮುರುಸು. ಇಪ್ಪತ್ತೈದು ವರ್ಷಗಳು ಅಲ್ಲೇ ಇದ್ದರೂ ಅದೇಕೆ ಅದು ನನ್ನ ಮನೆ ಎನಿಸುವುದಿಲ್ಲವೋ ಎಂದು ನೆನೆಸಿಕೊಂಡರೆ ಆಶ್ಚರ್ಯ ವಾಗುತ್ತದೆ.

  ಈ ತಲೆನೋವೆಲ್ಲಾ ನನಗೇಕೆ?  ಅತಿಥಿಯಾಗಿ   ಬಂದವಳು ಅತಿಥಿಯಂತೆ ಇದ್ದು ಹೋಗುವುದಷ್ಟೇ ನನ್ನ ಕೆಲಸ.  ಮುಂದಿನವಾರ ಇಲ್ಲಿಂದ ಹೊರಟು  ಬೆಂಗಳೂರು ಸೇರಿಕೊಂಡರೆ ಪುನಃ ಊರಕಡೆ ಯಾವಾಗ ಬರುತ್ತೇನೋ....  ಕತ್ತಲಾಗುವುದೊರಳಗೆ ಮನೆ ಸೇರಿಕೊಳ್ಳಬೇಕು.  ನೇತ್ರಳೂ ವಾಪಾಸು ಹೊರಡುವ ಸೂಚನೆ ನೀಡಿದಳು.  ಮನೆಗೆ ಬಂದು ಕೈ ಕಾಲು ತೊಳೆದು ದೇವಸ್ಥಾನಕ್ಕೆ ಹೊರಟೆವು.  ಅಣ್ಣಯ್ಯ ದೇವಸ್ಥಾನದ ಪೂಜೆಗೆ  ಹೋಗಿದ್ದ.  ನಮ್ಮ ಈ ದಕ್ಷಿಣ ಕನ್ನಡ ಜಿಲ್ಲೆಯ ಒಂದು ವಿಶೇಷತೆ ಎಂದರೆ, ಒಂದೊಂದು ಮನೆಗೂ ಪುಟ್ಟದೊಂದು ದೇವಸ್ಥಾನವಿರುವುದು.  ಇರುವುದೇ ಒಂದೋ ಎರಡೋ ಮನೆಗಳು.  ದೇವಸ್ಥಾನದ ಪೂಜೆಯೂ ಸಹ ಅಲ್ಲಿರುವ ಬ್ರಾಹ್ಮಣರ ಮನೆಯದು.  ಪೂಜೆ ಮುಗಿಸಿ ಮನೆಗೆ ಬಂದಾಗ ಮೊದಲು ನನ್ನ ಕಣ್ಣಿಗೆ ಬಿದ್ದದ್ದು ಚಾವಡಿಯ ಒಂದು ಮೂಲೆಯಲ್ಲಿದ್ದ ದೊಡ್ಡ T. V.  ಬೆಳಿಗ್ಗೆ ನಾನು ಸರಿಯಾಗಿ ಗಮನಿಸಿರಲಿಲ್ಲ.  “ಬೆಂಗಳೂರಿನಿಂದ ನೀವು ಬರುತ್ತೀರಿ, ನಿಮಗೆ ಹಳ್ಳಿಯಲ್ಲಿ  ಬೇಜಾರು ಆಗಬಾರದೆಂದು ಕಳೆದವಾರವಷ್ಟೇ ಕೊಂಡು ತಂದದ್ದು” ಎಂದು ಪ್ರಭಾ ಹೇಳಿದಳು.  ನಾನು T. V.ಗೇನೂ ಅಡಿಕ್ಟ್ ಆಗಿರಲಿಲ್ಲವಾದರೂ ಸಮಯಕಳೆಯಲು ಮೂರ್ಖರ ಪೆಟ್ಟಿಗೆಗೆ ಮುಖ ಕೊಟ್ಟು ಕುಳಿತುಕೊಳ್ಳುವಷ್ಟರಲ್ಲಿ  ಊಟಕ್ಕೆ ಕರೆ ಬಂತು.  ಊಟ ಮುಗಿಸಿ, ಉಳಿದ ಕೆಲಸ ಮುಗಿಸಿ ಬಂದ ನೇತ್ರ ಉಪ್ಪರಿಗೆಯಲ್ಲಿ  ಹಾಸಿಗೆ ಹಾಸಿದಳು.  “ಉರ್ಡ್ಕೊಂಡ್ರೆ ಸಾಕಿತ್ ಮಾರಾಯ್ರೇ” ಎಂದ ನೇತ್ರ ಹಾಸಿಗೆಯಲ್ಲಿ ಉರುಳಿಕೊಂಡಳು.  ನನಗೂ ಮಲಗಿದರೆ ಸಾಕು ಎನ್ನುವಂತಾಗಿತ್ತಾದರೂ ಮಧ್ಯಾಹ್ನ ಚೆನ್ನಾಗಿ ನಿದ್ರೆ ಮಾಡಿದ್ದುದರಿಂದಲೋ  ಅಥವಾ ಸಾಯಂಕಾಲ ಚಾ ಕುಡಿದಿದ್ದರಿಂದಲೋ ಏನೋ ನಿದ್ರೆ ಹತ್ತಿರ ಸುಳಿಯಲಿಲ್ಲ.  ಮನವೇಕೋ ನೇತ್ರ, ಪದ್ಮನಾಭ, ಆಸ್ತಿ, ಇವುಗಳ ಸುತ್ತಲೇ ಗಿರಕಿ ಹೊಡೆಯುತ್ತಿದೆ.  ಆಸ್ತಿ ವಿಚಾರಕ್ಕೇ ಎಷ್ಟೋ ಮನೆಗಳು, ಮನಗಳು ಮುರಿದು ಬಿದ್ದಿವೆ.  ಈಗ ಈ ನೇತ್ರಳೂ ಇದೇ ವಿಚಾರಕ್ಕೆ ಮನಸ್ಸನು ಕೆಡಿಸಿಕೊಂಡಿದ್ದಾಳೆ.  ಪದ್ಮನಾಭನಾದರೂ  ವಿಚಾರ ಮಾಡಿ ಅವಳ ಭಾಗವನ್ನು ಅವಳಿಗೆ ಕೊಡಬಾರದೇ?  ಅವಳೇ ಹೇಳಿದಂತೆ  ಕೋರ್ಟು ಕಛೇರಿ ಎಂದರೆ ಮನೆಯ ಮರ್ಯಾದೆ ಹರಾಜಾಗುವುದಂತೂ ಖಂಡಿತ.  ಭಾವನಿಗೆ ಅಂತಹ ಒಳ್ಳೆಯ ಕೆಲಸವೂ ಇಲ್ಲ.  ಯಾವುದೋ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿದ್ದಾರೆ.  ಆಸ್ತಿಯಲ್ಲಿ ಪಾಲು ಸಿಕ್ಕರೆ ಊರಿನಲ್ಲೇ ಸೆಟಲ್ ಆಗುವ ಆಲೋಚನೆಯೂ ಇದೆ ಅಂತ ಕಾಣಿಸುತ್ತದೆ.  ಇಲ್ಲೇ ಯಾವುದಾದರೂ ಕಾಲೇಜಿನಲ್ಲಿ ಕೆಲಸ ಹುಡುಕಿಕೊಂಡು ಗದ್ದೆ, ತೋಟವನ್ನೂ ಸಹ ನೋಡಿಕೊಂಡು ಇರುವುದು ಅವರ ಯೋಚನೆ..... ಥೂ... ನಿದ್ದೆ ಹತ್ತಿರ ಸುಳಿಯುತ್ತಲೇ ಇಲ್ಲ...ಒಂದು..ಎರಡು....ಮೂರು... ಹತ್ತರವರೆಗೆ ಎಣಿಸಿ ಪುನಃ ಹತ್ತರಿಂದ... ಒಂದರವರೆಗೆ ಎಣಿಸಿದೆ... ಉಹೂಂ...ನಿದ್ದೆ ಬರುತ್ತಿಲ್ಲ.  ಉಪ್ಪರಿಗೆಯಿಂದ ಕೆಳಗಿಳಿದು ಸದ್ದಾಗದಂತೆ ಬಾಗಿಲು ತೆಗೆದು ಹೊರಬಂದೆ.  ತಣ್ಣನೆಯ ಗಾಳಿ ಮುಖಕ್ಕೆ ತಾಗಿದಾಗ ಹಿತವಾದ ಅನುಭವ... ಆ ಗಾಳಿಯಲ್ಲೊಂಥರಾ ಮಧುರವಾದ ಪರಿಮಳ.... ಹಾಲು ಚೆಲ್ಲಿದಂತಿದ್ದ ಚಂದ್ರನ ಬೆಳಕಿನಲ್ಲಿ  ಮಿಂದ ಮರಗಳು ಬೆಳ್ಳಿಯಿಂದ ಮಾಡಿದಂತಿದ್ದವು.  ಆಹಾ! ಎಂತಹ ಸುಂದರ ವಾತಾವರಣ... ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿದ್ದರೂ ಅಲ್ಲಿಂದ ಹೋಗಲು ನನಗೆ ಮನಸ್ಸಾಗದೆ,  ಸುದೀರ್ಘ ಒಂದು  ಘಂಟೆ ಹಾಗೇ ಹೊರ ಜಗುಲಿಯಲ್ಲಿ ಕುಳಿತಿದ್ದೆ.   ಕಡೆಗೆ ಕಣ್ಣು ಕೂರುವಂತಾದಾಗ ನಿಧಾನವಾಗಿ ಎದ್ದು ಬಾಗಿಲು ಹಾಕಿ ಮೇಲೆ ಹೋಗಿ ಮಲಗಿದೆ.      

*****

      “ದೊಡ್ಡಮ್ಮ ನಾವು ಬಂದ್ ಸುಮಾರ್ ದಿನ ಆಯ್ತ್... ಬೆಂಗ್ಳೂರಿಗ್ ವಾಪಾಸ್ ಹೋಯ್ಕಲೆ....”  ಸಾಯಂಕಾಲ ಚಾ ಮತ್ತು ಹಲಸಿನ ಹಪ್ಪಳ ಮೆಲ್ಲುತ್ತಾ ಹೊರ ಜಗುಲಿಯಲ್ಲಿ ಕುಳಿತಿದ್ದಾಗ  ಮೆಲ್ಲಗೆ ಮಾತು ತೆಗೆದೆ.  ಆವತ್ತಿಗೆ ನಾವು ಊರಿಗೆ ಬಂದು ಒಂದು ತಿಂಗಳಾಗಿತ್ತು.   ಒಂದು ತಿಂಗಳಿನಲ್ಲಿ ನಾನೂ ಸುಮಾರಾಗಿ ಕುಂದ ಕನ್ನಡದಲ್ಲಿ ಮಾತಾಡುವಷ್ಟಾಗಿದ್ದೆ.  ಮನೆಯ ಸದಸ್ಯರೆಲ್ಲರೂ ಅಲ್ಲೇ ಸೇರಿದ್ದರು.  ಪದ್ಮನಾಭ ಎದ್ದು ಕೋಣೆಗೆ ಹೋಗಿ ಒಂದು ಕಡತವನ್ನು ತಂದವನೇ ಅದರಿಂದ ಕೆಲವು ಪೇಪರುಗಳನ್ನು ತೆಗೆದು ಚಿಕ್ಕಿಗೆ ಮತ್ತು ನೇತ್ರಳಿಗೆ ಕೊಟ್ಟು...”ಇಕಾ ನೇತ್ರ, ಇದ್  ಆಸ್ತಿ ಭಾಗ ಮಾಡಿದ್ದ ಪತ್ರ... ನೀ ಬರೂಕ್ ಮೊದಾಲೇ ಪತ್ರ ತಯಾರ್ ಮಾಡಿತ್... ನಿಂಗೆ ‘ಸರ್ ಪ್ರೈಜ್’ ಮಾಡುವಾ ಅಂತ ಗುಟ್ ಮಾಡಿದ್ದೆ... ಅಮ್ಮ, ಚಿಕ್ಕಿನ್  ಕೇಂಡ್ ಕಂಡೇ ಮಾಡಿದ್ದೆ ಮಾರಾಯ್ತಿ.... ನೀನ್ ಮನೆ ಮಗ್ಳ್ ಅಲ್ದಾ?  ನೀ ಬ್ಯಾಜಾರ್ ಮಾಡ್ಕಂಬ್ಕಾಗ...  ನೀ ಕಣ್ಣೀರ್ ಹಾಕೂಕಾಗ... ಅಪ್ಪಯ್ಯನ್ ಆಸ್ತಿಲ್ ನಿಂಗೂ ಪಾಲಿತ್ತ್... ಇಷ್ಟ್ ವರ್ಷ ನೀನೂ ದುಡಿದಿದ್ದೆ ಅಲ್ದಾ... ಹಾಂಗ್ ನಿನ್ನನ್ ಬಿಟ್ ಹಾಕೂಕಾತ್ತಾ...” ಮುಂದಿನ ಮಾತುಗಳು ನನಗೆ ಕೇಳಿಸಲಿಲ್ಲ.   ನೇತ್ರ ಅವಾಕ್ಕಾಗಿ ಮಾತು ಹೊರಡದೆ ಕಣ್ಣಲ್ಲಿ ನೀರು ತುಂಬಿಕೊಂಡು ಅಮ್ಮ, ಚಿಕ್ಕಿ ಮತ್ತು ಅಣ್ಣಯ್ಯನ ಕಾಲಿಗೆ ನಮಸ್ಕರಿಸಿದಳು. ನನ್ನ  ಕಣ್ಣಲ್ಲೂ  ನೀರು ತುಂಬಿಕೊಂಡು  ಎದುರು ಇದ್ದವರಾರೂ ಕಾಣಿಸದಂತಾಗಿತ್ತು.   ಸಧ್ಯ ಆಸ್ತಿಗಾಗಿ ಅಣ್ಣ ತಂಗಿ ಕಿತ್ತಾಡದೆ, ಸಂಬಂಧ ಹಾಳಾಗದಿದ್ದುದು ಸಂತಸದ, ಸಮಾಧಾನದ  ವಿಷಯ.   ಏನೇ ಆಗಲಿ ನನಗಂತೂ  ಅವನ ಮಾತು ಕೇಳಿ ಮನಸ್ಸು ತುಂಬಿ ಬಂತು.  ಅಣ್ಣಯ್ಯ ಅವನ ಹಿರಿತನ ಮೆರೆದಿದ್ದ.... ಸಂಜೆಯ ಸೂರ್ಯನ ಹೊಂಗಿರಣ ಗಿಡ ಮರಗಳ ಮೇಲೆಲ್ಲಾ ಬಿದ್ದು ಅಪೂರ್ವ ಕಾಂತಿಯಿಂದ ವಾತಾವರಣವೆಲ್ಲಾ ಕಂಗೊಳಿಸುತ್ತಿತ್ತು. 

Rating
No votes yet