ಹೊಂಬೆಳಕು (ಭಾಗ 1)
ಬ್ರಹ್ಮಾವರ....ಬ್ರಹ್ಮಾವರ....ಬೇಗ ... ಬೇಗ ಇಳೀರಿ..” ಕಂಡಕ್ಟರನ ಏರು ಧ್ವನಿಗೆ ಬಸ್ಸಿನಲ್ಲಿದ್ದರೂ ಬೆಳಗಿನ ಸಕ್ಕರೆ ನಿದ್ರೆಯಲ್ಲಿದ್ದವಳಿಗೆ ಎಚ್ಚರವಾಯಿತು. ನನ್ನ ಪಕ್ಕದಲ್ಲಿ ಕುಳಿತಿದ್ದ ಸಹ ಪ್ರಯಾಣಿಕಳು ಎದ್ದು ತನ್ನ ಲಗ್ಗೆಜನ್ನೆಲ್ಲ ತೆಗೆದುಕೊಂಡು ಇಳಿಯಲುದ್ಯುಕ್ತಳಾದಳು. ಆಕೆ ಹೋದುದೇ ತಡ, ನಾನು ಕಿಟಕಿ ಪಕ್ಕ ಸರಿದು ಕುಳಿತು ಗ್ಲಾಸ್ ಸರಿಸಿದೆ. ಬೆಳಗಿನ ತಣ್ಣನೆಯ ಕುಳಿರ್ಗಾಳಿ ನನ್ನ ಮುಖವನ್ನೊಮ್ಮೆ ಮೆಲ್ಲನೆ ಸವರಿದಾಗ ನನ್ನ ನಿದ್ರೆಯೆಲ್ಲ ಹಾರಿಹೋಯಿತು. ಆ ತಣ್ಣನೆಯ ಗಾಳಿಯಲ್ಲಿ ಅದೆಂತಹುದೋ ಸುವಾಸನೆ....’ಆಹಾ ಎಂತಹ ಪರಿಮಳ!’ ಎಂದು ಒಮ್ಮೆ ಜೋರಾಗಿ ಗಾಳಿಯನ್ನು ಒಳಗೆ ಎಳೆದುಕೊಂಡು ಪುಳಕಿತಳಾದೆ. ಈ ನೆಲದಲ್ಲಿ ಬದುಕಲಿಲ್ಲ... ಬೆಳೆಯಲಿಲ್ಲ...ಆದರೂ ಅದೇನು ನಂಟು, ಆತ್ಮೀಯತೆ ಈ ನೆಲದ್ದು. ಸುಮಾರು ಹದಿನೆಂಟು ವರ್ಷಗಳಾಗಿದ್ದವು ನಾನು ನನ್ನ ಹುಟ್ಟೂರಿಗೆ ಬಂದು. ಅಮ್ಮ ಸತ್ತ ನಂತರ ಅಮ್ಮನ ಹಿಂದೆಯೇ ಹುಟ್ಟೂರಿನ ನಂಟು ಕಡಿದಿತ್ತು ಅಥವಾ ಕಡಿಯಿತು ಎಂದುಕೊಂಡಿದ್ದೆ ಎಂದರೆ ಹೆಚ್ಚು ಸಮಂಜಸವಾಗುತ್ತದೆ.
ಬಸ್ಸು ಮರ - ಗಿಡ, ಗುಡ್ಡ – ಬೆಟ್ಟಗಳನ್ನೆಲ್ಲ ಹಿಂದೆ ಹಾಕಿ ಮುಂದೋಡುತ್ತಿದ್ದಂತೆ ಊರಿಗೆ ಬರುವ ಸಂದರ್ಭ ಎದುರಾದದ್ದು ನೆನಪಿಗೆ ಬಂತು. ನನ್ನ ಅಮ್ಮನ ಅಕ್ಕ, ರಾಜೀವಿ ದೊಡ್ಡಮ್ಮ, ಅಪರೂಪಕ್ಕೆ ಮಗಳ ಮನೆಗೆ ಬಂದಿದ್ದರು. ಹಾಗೆ ಬಂದವರು ಬೆಂಗಳೂರಿನ ತುಂಬೆಲ್ಲ ಹರಡಿ ಹೋಗಿದ್ದ ತಮ್ಮ, ತಂಗಿಯರ ಮಕ್ಕಳ ಮನೆಗೆಲ್ಲ ಭೇಟಿ ನೀಡುವಂತೆ ನಮ್ಮ ಮನೆಗೂ ಬಂದಿದ್ದರು. ಗಂಡನನ್ನು ಕಳೆದುಕೊಂಡು ಅಣ್ಣನ ಆಶ್ರಯದಲ್ಲಿ ದಿನ ದೂಡುತ್ತಿದ್ದ ನನ್ನನ್ನು ಊರಿಗೆ ಬರುವಂತೆ ಬಹಳ ಒತ್ತಾಯ ಮಾಡಿ ಕಡೆಗೆ ನನ್ನನ್ನು ಒಪ್ಪಿಸುವಲ್ಲಿ ಯಶಸ್ವಿಯೂ ಆಗಿದ್ದರು. ಅವರ ಮಗಳು ನೇತ್ರಳೂ ನಮ್ಮೊಡನೆ ಬರುವವಳಿದ್ದಳು. ಅರೆ ಮನಸ್ಸಿನಿಂದ ಹೊರಟ ನನಗೆ ಬಸ್ಸಿನಲ್ಲಿ ನನ್ನ ಪಕ್ಕದ ಸೀಟು ಒಬ್ಬ ಪುರುಷ ಪ್ರಯಾಣಿಕನದೆಂದು ತಿಳಿದಾಗ ‘ಹೇಗಪ್ಪಾ ಒಂಭತ್ತು – ಹತ್ತು ಘಂಟೆ ಕಳೆಯುವುದು’ ಎಂದು ಚಿಂತೆಯಾಗಿತ್ತು. ಆದರೆ ಕಂಡಕ್ಟರನ ಪ್ರಯತ್ನದಿಂದ ಬೇರೊಬ್ಬ ಪುರುಷ ಪ್ರಯಾಣಿಕ ಸ್ಥಳ ಬದಲಾವಣೆಗೆ ಒಪ್ಪಿಕೊಂಡಿದ್ದರಿಂದ, ಆ ಚಿಂತೆ ಬಗೆಹರಿದಿತ್ತು. ಕಂಡಕ್ಟರನಿಗೆ ಮನದಲ್ಲೇ ವಂದಿಸಿದ್ದೆ.
“ಕೋಟ...ಕೋಟ...” ಕಂಡಕ್ಟರನ ಕಿರಿಚುವಿಕೆಗೆ ಎಚ್ಚೆತ್ತು ಹೊರಗೆ ನೋಡಿದೆ. ಕೋಟ.... ಎಂದೊಡನೆ ಮನ ಪುಳಕಿತವಾಗುತ್ತದೆ, ಶಿವರಾಮ ಕಾರಂತರ ನೆನಪಾಗುತ್ತದೆ. ಅವರ ಮೂಕಜ್ಜಿ ನೆನಪಾಗುತ್ತಾಳೆ... ನಾನು ಕಾಲೇಜಿನ ಲೈಬ್ರರಿಯಿಂದ ತಂದು ಓದಿದ್ದು.. ಮೂಕಜ್ಜಿಯ ಕನಸುಗಳು. ನನಗೆ ತುಂಬಾ ಇಷ್ಟವಾದ ಕಾದಂಬರಿ ಆಗಿತ್ತದು. ಕೋಟ ... ಮತ್ತೊಮ್ಮೆ ಪುಳಕಿತಳಾದೆ. ‘ಶಿವರಾಮ ಕಾರಂತರ ಮನೆ ಎಲ್ಲಿರಬಹುದು’?... ಹುಡುಕುವವಳಂತೆ ಹೊರಗೆ ನೋಡುವಷ್ಟರಲ್ಲೇ ಬಸ್ಸು ಕೋಟವನ್ನು ಹಿಂದಿಕ್ಕಿ ತನ್ನ ಗುರಿಯತ್ತ ಮುಂದೊಡಿತ್ತು.
ಆರೂವರೆಯ ಸುಮಾರಿಗೆ ಬಸ್ಸು ಕುಂದಾಪುರ ತಲುಪಿದಾಗ ಎಂತಹುದೋ ಸಂಭ್ರಮ ಮನದಲ್ಲಿ. ಬಸ್ಸಿನಿಂದಿಳಿದು ಕೈ ಕಾಲುಗಳನ್ನೊಮ್ಮೆ ನೇರ ಮಾಡಿ ಸುತ್ತ ಮುತ್ತ ದೃಷ್ಟಿ ಹರಿಸಿದಾಗ ಇಲ್ಲೂ ಸಹ ಬೆಂಗಳೂರು ಸಿಟಿಯ ಛಾಯೆ ಕಂಡಂತಾಗಿ ಸಂಭ್ರಮಕ್ಕೆ ಕೊಂಚ ತಣ್ಣೀರೆರಚಿದಂತಾಯಿತು. ಲಗ್ಗೇಜು ಹಿಡಿದು ದೊಡ್ಡಮ್ಮ ಮತ್ತವರ ಮಗಳು ನೇತ್ರ ... ನೇತ್ರಾವತಿಯನ್ನು ಹಿಂಬಾಲಿಸಿದೆ. ಬೆಳಗಿನ ಕಾಫಿ ಕುಡಿಯದೆ ನಾಲಿಗೆ ತಹತಹಿಸುತ್ತಿತ್ತು. “ದೊಡ್ಡಮ್ಮಾ ಕಾಫಿ ಕುಡಿಯೋಣವಾ?” ಎಂದೆ. ತಕ್ಷಣ ನೇತ್ರಾ “ನಾ ಹೋಟ್ಲಲ್ಲಿ ಕಾಫಿ ಕುಡಿತ್ತಿಲ್ಲೆ ಸವಿತಕ್ಕ..” ಎಂದಾಗ ಇದೆಂತಹ ವಿಚಿತ್ರ ಹುಡುಗಿ ಇವಳು! ಕಾಫಿ ಕುಡಿಯದವರೂ ಇರುತ್ತಾರಾ?” ಎನಿಸಿದರೂ ಬಾಯಿ ಮುಚ್ಚಿ ಸುಮ್ಮನಾದೆ. ಬೈಂದೂರು ಬಸ್ ಹಿಡಿದು ಅಲ್ಲೆಲ್ಲೋ ಇಳಿದು, ಪುನಃ ಆಟೋ ಹತ್ತಿ ಮನೆ ತಲುಪಿದಾಗ ಘಂಟೆ ಎಂಟೂವರೆ.
ಅಣ್ಣಯ್ಯ, ಪ್ರಭಾ, ಚಿಕ್ಕಿ ಎಲ್ಲರೂ ಸಂಭ್ರಮದಿಂದ ಸ್ವಾಗತಿಸಿದರು. ಮುಖ ತೊಳೆದು ಚಿಕ್ಕಿ ಕೊಟ್ಟ ಬಿಸಿ ಬಿಸಿ ಕಾಫಿ ಕುಡಿದಾಗ ಜೀವಕ್ಕೆ ‘ಹಾಯ್’ ಎನಿಸಿತು. ನೇತ್ರಳಾಗಲೇ ಎಲ್ಲರೊಟ್ಟಿಗೆ ಪಟ್ಟಾಂಗ ಹೊಡೆಯಲು ಶುರುಮಾಡಿದ್ದಳು. “ಸವಿತಾ...ಮಿಂದ್ಕಂಡು ತಿಂಡಿ ತಿಂದು ಮನ್ಕೋ ಮಗಾ ಕಡಿಗ್ ಉಣ್ಲಕ್ ಅಕ್ಕಾ ?” ದೊಡ್ಡಮ್ಮ ಹೇಳಿದಾಗ “ಅಕ್ಕು ದೊಡ್ಡಮ್ಮ” ಎಂದೆ. ಆದರೆ ತಕ್ಷಣವೇ ‘ಅರೆ ನಾನೂ ಕುಂದ ಕನ್ನಡದಲ್ಲಿ ಹೇಳಿದ್ನಾ?’ ಎಂದುಕೊಂಡು ನಸು ನಕ್ಕು ಸ್ನಾನಕ್ಕೆ ಹೊರಟೆ. ಮನೆಯ ಹಿಂಭಾಗದಲ್ಲಿ ಮನೆಯಿಂದ ಬೇರೆಯಾಗಿ ಬಚ್ಚಲು ಮನೆಯಿತ್ತು. ಪಕ್ಕದಲ್ಲೇ ದೊಡ್ಡದೊಂದು ನೀರಿನ ಟ್ಯಾಂಕ್... ಸುಮಾರು ಇನ್ನೂರು ಅಡಿ ದೂರದಲ್ಲಿದ್ದ ಬಾವಿಯಿಂದ ಪಂಪು ಹಾಕಿ ನೀರನ್ನು ಟ್ಯಾಂಕ್ ಗೆ ಹರಿಸುವ ಸೌಲಭ್ಯ... ರೆಟ್ಟೆ ಗಾತ್ರದ ಪೈಪಿನಿಂದ ಹರಿಯುವ ನೀರನ್ನು ನೋಡಿ ನನ್ನ ಮನದಲ್ಲೊಮ್ಮೆ ಬೆಂಗಳೂರಿನ ನಲ್ಲಿ ನೀರು ನೆನೆಪಾಯಿತು. ಎರಡು ದಿನಕ್ಕೊಮ್ಮೆ ಬರುವ ಕಿರುಬೆರಳಿನ ಗಾತ್ರದ ಆ ನೀರೆಲ್ಲಿ? ಕ್ಷಣದಲ್ಲಿ ಅಷ್ಟು ದೊಡ್ಡ ಸಿಮೆಂಟ್ ತೊಟ್ಟಿ ತುಂಬುವ ಇದೆಲ್ಲಿ? ಎಂದು ಮನ ತುಲನೆ ಮಾಡಿತು. ಇದೊಂದು ಥರಾ ಅಮೇರಿಕಾದ ಡಾಲರನ್ನು ಭಾರತೀಯ ರುಪಾಯಿಗೆ ಬದಲಿಸಿ ಎದೆ ಬಡಿತ ಹೆಚ್ಚಿಸಿಕೊಳ್ಳುವಂತೆ - ಒಳಗೂ ಅಷ್ಟೇ... ದೊಡ್ಡ ಹಂಡೆಯಲ್ಲಿ ಕುದಿಯುವಷ್ಟು ಬಿಸಿಯಾಗಿತ್ತು ನೀರು.... ಚೆನ್ನಾಗಿ ನೀರು ಸುರಿದುಕೊಂಡು ತಲೆಗೆ ಸ್ನಾನ ಮಾಡಿದಾಗ ಮೈ ಮನಸ್ಸೆಲ್ಲ ಹಗುರಾದಂತಹ ಭಾವನೆ. ಸ್ನಾನ ಮಾಡಿದವಳೇ ಮನೆಯನ್ನೆಲ್ಲ ಒಂದು ಸುತ್ತು ಹಾಕಿದೆ. ಬೆಂಗಳೂರಿನಲ್ಲಿ ಇಂತಹ ಮನೆ ಇದ್ದಿದ್ದರೆ ಮೂವತ್ತೈದು ಸಾವಿರಕ್ಕಿಂತ ಜಾಸ್ತಿ ಬಾಡಿಗೆ ಇರುತ್ತಿತ್ತು.. ಎಂದಿತು ನನ್ನ ಬೆಂಗಳೂರಿನ ಲೆಕ್ಕಾಚಾರದ ಮನಸ್ಸು. ಈ ಯೋಚನೆ ನನ್ನನ್ನು ಬಿಡುವುದೇ ಇಲ್ಲವೇನೋ ಎಂದುಕೊಂಡು ಉಪ್ಪರಿಗೆಯಿಂದ ಕೆಳಗಿಳಿದು ಬಂದೆ. ಅಡುಗೆ ಮನೆಯಲ್ಲಿ ದೊಡ್ಡಮ್ಮ, ಚಿಕ್ಕಿ ಇಬ್ಬರೂ ನನಗಾಗಿ ಕಾಯುತ್ತಿದ್ದರು. ನಾನು ಹೋದೊಡನೆ ಬಾಳೆಲೆಗೆ ಬಿಸಿ ಬಿಸಿ ಕೊಟ್ಟೆ ಕಡುಬು, ಚಟ್ನಿ ಹಾಕಿ ಮೇಲೆ ನಾಲ್ಕು ಚಮಚ ಕೊಬ್ಬರಿ ಎಣ್ಣೆ ಹಾಕಿದಾಗ ಮನಸ್ಸು ಉಲ್ಲಸಿತವಾಯಿತು. ಇಡ್ಲಿ ನನಗೆ ಬಹಳ ಪ್ರಿಯವಾದ ತಿಂಡಿ. ತಿಂಡಿ ತಿನ್ನುತ್ತಲೇ ಅಡುಗೆ ಮನೆಯ ಸುತ್ತಲೂ ದೃಷ್ಟಿ ಹರಿಸಿದೆ. ಸೌದೆ ಒಲೆಯ ಪ್ರಭಾವ, ಅಡಿಗೆ ಮನೆಯ ಗೋಡೆಯೆಲ್ಲಾ ಹೊಗೆ ಹಿಡಿದು ಕಪ್ಪಾಗಿತ್ತು. ಬೆಳಕಿನ ಕಿಂಡಿಗೆ ಹೊಂದಿಸಿದ್ದ ಗಾಜೂ ಕಪ್ಪು ಹಿಡಿದು ಬೆಳಕು ಒಳಗೆ ಬರಲು ಬಹಳ ಕಷ್ಟಪಡುತತಿತ್ತು. ಆದರೆ ತೆರೆದ ಕಿಟಕಿಯಿಂದ ಬೆಳಕು ಧಾರಾಳವಾಗಿ ಒಳಬರುತ್ತಿದ್ದುದರಿಂದ, ಬೆಂಗಳೂರಿನ ಮನೆಗಳಂತೆ ಹಗಲು ಹೊತ್ತೂ ಲೈಟು ಉರಿಸುವ ಅವಷ್ಯಕತೆ ಇರಲಿಲ್ಲ. ತೆರೆದ ಕಿಟಕಿಯಿಂದ ಹೊರಗಿನ ದೃಶ್ಯ ಸ್ಫುಟವಾಗಿ ಕಾಣಿಸುತ್ತಿತ್ತು. ಸುತ್ತಲೂ ಫಸಲು ತುಂಬಿದ ಗದ್ದೆ, ತೆಂಗು, ಅಡಿಕೆ ಬಾಳೆ, ತೋಟದ ಮಧ್ಯ ಮನೆ.. ‘ಈ ನೆಲ, ಈ ನೀರು, ಗಾಳಿ, ಮನೆ, ಜನ, ಭಾಷೆ, ಪ್ರತಿಯೊಂದೂ ಸುಂದರ..’ ಎಂದು ಮನ ಪಿಸುಗುಟ್ಟಿದಾಗ ತುಟಿಯಂಚಿನಲ್ಲಿ ಸಣ್ಣಗೆ ನಗು ಮೂಡಿದ್ದು ದೊಡ್ಡಮ್ಮನ ದೃಷ್ಟಿಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ‘ಎಂತಕ್ ನೆಗಾಡ್ತೆ ಮಗಾ..? ನಮ್ಮನೆ ಇರಸ್ತ್ಕೆ ಕಂಡ್ ನೆಗಾಡ್ತ್ಲ ಕಾಂತ್ ..” ದೊಡ್ಡಮ್ಮ ತಮ್ಮ ಪ್ರಶ್ನೆಗೆ ತಾವೇ ಉತ್ತರವನ್ನೂ ಹೇಳಿಕೊಂಡಾಗ ನಕ್ಕು ತಲೆಯಾಡಿಸಿ ಉಪ್ಪರಿಗೆ ಏರಿದೆ.
“ನೇತ್ರಮ್ಮ ... ಏಗ್ಳ್ ಬಂದಿದ್ ... ಹುಶಾರಿದ್ರ್ಯಾ..?”
“ನಾ ಹುಶಾರಿದ್ದೆ ಪದ್ದು... ನೀ ಹುಶಾರಿದ್ಯಾ...? ಗಿರಿಜ ಬತ್ತಿದ್ಲಾ...?” ಕೆಳಗಿನಿಂದ ನೇತ್ರ ಒಕ್ಕಲು ಹೆಂಗಸಿನೊಂದಿಗೆ ನಡೆಸುತ್ತಿದ್ದ ಸಂಭಾಷಣೆ ಕಿವಿಗೆ ಬೀಳುತ್ತಿತ್ತು.
‘ನಿಮ್ ಸಂಗ್ತಿಗೆ ಯಾರೋ ಬಂದಿದ್ರಂಬ್ರಲೇ ನೇತ್ರಮ್ಮ .. ಯಾರದು?”
“ಅದಾ..? ಅದು ಅಮ್ಮನ ತಂಗಿ ಮಗಳು ಪದ್ದು, ಬೆಂಗಳೂರಾಗೇ ಇಪ್ಪ್ದು...” ನೇತ್ರಾಳ ಉತ್ತರ ಕಿವಿಗೆ ಬೀಳುತ್ತಿದಂತೆಯೇ ನಿದ್ರೆ ನನ್ನನ್ನಾವರಿಸಿತ್ತು.
ಮುಂದುವರೆಯುವುದು.....