ಹೊಸಬೆಳಗು

ಹೊಸಬೆಳಗು

ಹರಿಪ್ರಸಾದರ ಸೊಗಸಾದ ಚಿತ್ರಕ್ಕೆ ಬಹಳಷ್ಟು ಸಂಪದಿಗರು ತಮ್ಮ ಪದ್ಯ-ಗದ್ಯಗಳಿಂದ ಮತ್ತಷ್ಟು ಮೆರುಗು ಕೊಟ್ಟಿದ್ದಾರೆ. ಅವೆಲ್ಲವನ್ನು ಬರೆದವರಿಗೂ ಹಾಗೂ ಅವೆಲ್ಲವುಗಳನ್ನು ಒಂದೆಡೆ ಕಲೆ ಹಾಕಿದ ಗುರು ಬಾಳಿಗರಿಗೆ ವಂದನೆಗಳು. ನನಗನಿಸಿದ್ದು ಇಲ್ಲಿದೆ.

ಹಾರು ಹಕ್ಕಿಗಳಾಡುಂಬೋಲದೊಳದೋ
ಅರುಣನ ತೇರು, ಮರುದಿನವೆ ಇನ್ನೇನು!
ಏರಲಾಗದೆತ್ತರಗಳ ಪ್ರತೀಕ ಅಕೋ ಅಲ್ಲಿ
ಹರಿವ ನದಿಯ ಅಲೆ ಅಲೆಗಳಲ್ಲೂ
ವ್ಯರ್ಥ ಕಳೆದ ಕಾಲದ ನೆರಳು, ನರಳು
ಮರಗಟ್ಟಿ ಚಳಿಗೆ ಉದುರಿದೆಲೆಗಳ
ಮರದಂತೆ ಬರಡೆನಿಸಲು ಮನವು...

ಕಡಲ ಕಡೆದಂತಾಯಿತು ಒಮ್ಮೆಲೆ
ಒಡಲ ಬೇಗುದಿಯೆಲ್ಲ ಕರಗಿತು
ಮೂಡಲದ ಒಡೆಯನೊಡ್ಡೋಲಗ,
ಹಾಡುವ ಹಕ್ಕಿಗಳುಲುವು, ಬ-
ರಡೆಂದಿದ್ದ ಮರದ ಹೊಸ ಚಿಗುರು
ತಡವರಿಸದೆ ಹರಿವ ನದಿ ಸಮಷ್ಟಿಗೆ
ಎದೆ ತೆರೆದ ಮರುಗಳಿಗೆ...

ಸೋಲು ಗೆಲುವುಗಳ ಪರಡಿ ಪಾ-
ತಾಳಗರಡಿಯಾಗಿ ಒಳಗಿಳಿದು ಜೀವ
ಸೆಲೆಗೆ ಅಮೃತವನೆ ಹರಿಸಿರಲು
ಒಳಗೆಲ್ಲ ಹೊಸಬೆಳಗು, ಹೊರಗೂ...

ಅದೋ ಕರೆದಿವೆ ಅವೇ ಎತ್ತರಗಳು ಮತ್ತೆ

ಬಹಳ ದಿನಗಳಾಗಿತ್ತು ಸಂಪದದಲ್ಲಿ ಏನನ್ನೂ ಬರೆಯದೆ. ಖುಶಿಯಾಗುತ್ತಿದೆ ಹರಿಪ್ರಸಾದರ ಆಮಂತ್ರಣದಲ್ಲಿ ಪಾಲ್ಗೊಂಡು. ಧನ್ಯವಾದಗಳು ಅದಕ್ಕಾಗಿ :).

Rating
No votes yet