೧೬೬. ಲಲಿತಾ ಸಹಸ್ರನಾಮ ೭೪೦ರಿಂದ ೭೪೪ನೇ ನಾಮಗಳ ವಿವರಣೆ

೧೬೬. ಲಲಿತಾ ಸಹಸ್ರನಾಮ ೭೪೦ರಿಂದ ೭೪೪ನೇ ನಾಮಗಳ ವಿವರಣೆ

                                                                                         ಲಲಿತಾ ಸಹಸ್ರನಾಮ ೭೪೦-೭೪೪

Lajjā लज्जा (740)

೭೪೦. ಲಜ್ಜಾ

         ಲಜ್ಜಾ ಎಂದರೆ ನಾಚಿಕೆ; ಇದನ್ನು ಸ್ತ್ರೀಯರ ಒಂದು ಮೂಲ ಗುಣವಾಗಿ ಪರಿಗಣಿಸಲಾಗುತ್ತದೆ. ಹ್ರೀಂ ಜೀಜಾಕ್ಷರವನ್ನು ಲಜ್ಜಾ ಬೀಜವೆಂದು ಕರೆಯುತ್ತಾರೆ (ಹ್ರೀಂ ಬೀಜವನ್ನು ಮಾಯಾ ಬೀಜವೆಂದೂ ಸಹ ಕರೆಯುತ್ತಾರೆ). ದೇವಿಯು ತಮ್ಮ ದೊಡ್ಡಸ್ಥಿಕೆಯನ್ನು ಪ್ರದರ್ಶಿಸಲು ಏರ್ಪಡಿಸುವ ಪೂಜೆಗಳ ಭಯದಿಂದ ನಾಚಿಕೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ಲಜ್ಜಾ ಎನ್ನುವುದನ್ನು ಲಲಿತಾ ತ್ರಿಶತಿಯ ೭೯ ಮತ್ತು ೧೯೫ನೇ ನಾಮಗಳಲ್ಲಿಯೂ ಸಹ ಬಳಸಲಾಗಿದೆ. ದೇವಿಯ ನಿಜವಾದ ಭಕ್ತನನ್ನು ಆಮೆಗೆ ಹೋಲಿಸುತ್ತಾರೆ; ಆಮೆಯು ತನ್ನೆಲ್ಲಾ ಅವಯವಗಳನ್ನು ತನ್ನ ಕವಚದೊಳಗೆ ಅಡಿಗಿಸಿಕೊಳ್ಳುತ್ತದೆ. ದೇವಿಯನ್ನು ಯಾವಾಗಲೂ ಏಕಾಂತದಲ್ಲಿ ಪೂಜಿಸಬೇಕು. ಒಟ್ಟಾಗಿ ಮಾಡುವ ಪ್ರಾರ್ಥನೆಗಳಿಗೂ ಮತ್ತು ಆಡಂಬರದ ಪೂಜೆಗೂ ಸಾಕಷ್ಟು ವ್ಯತ್ಯಾಸವಿದೆ. ಉದಾಹರಣೆಗೆ ಗುರುಗಳ ಹುಟ್ಟುಹಬ್ಬವನ್ನು ಅವರ ಶಿಷ್ಯರೆಲ್ಲಾ ಸೇರಿ ಒಟ್ಟಾಗಿ ಆಚರಿಸುತ್ತಾರೆ. ಸಾಮೂಹಿಕ ಪೂಜೆಗಳು ಒಟ್ಟಾಗಿ ಮಾಡುವ ಪ್ರಾರ್ಥನೆಗಳಿಗೆ ಒಂದು ಉದಾಹರಣೆ. ಆಡಂಬರದ ಪೂಜೆ ಎಂದರೆ ಸಾಕಷ್ಟು ವೈಭವದಿಂದ ಕೂಡಿದ್ದು ದೊಡ್ಡಸ್ಥಿಕೆಯ ಪ್ರದರ್ಶನವನ್ನು ಒಳಗೊಂಡಿರುತ್ತದೆ. ದೇವಿಯ ತನಗೆ ಯಾವ ವಸ್ತುವನ್ನು ಅರ್ಪಿಸಿದ್ಧಾರೆನ್ನುವುದನ್ನು ಗಮನಿಸುವುದಿಲ್ಲ ಆದರೆ ಆಕೆಯು ಅಂತರಂಗದಿಂದ ಏನು ಅರ್ಪಿಸಲ್ಪಟ್ಟಿದೆ ಎನ್ನುವುದರ ಬಗ್ಗೆ ಕಾಳಜಿಯಿಂದಿರುತ್ತಾಳೆ.

Rambhādi-vanditā रम्भादि-वन्दिता (741)

೭೪೧. ರಂಭಾದಿ-ವಂದಿತಾ

          ದೇವಿಯು ರಂಭೆ, ಊರ್ವಶಿ ಮೊದಲಾದ ದೇವಲೋಕದ ಅಪ್ಸರೆಯರಿಂದ ಪೂಜಿಸಲ್ಪಡುತ್ತಾಳೆ. ರಂಭೆಯು ಕುಬೇರನ ಮಗನಾದ ನಳ-ಕುಬೇರನ ಹೆಂಡತಿ ಇವಳನ್ನು ರಾವಣನು ಹೊತ್ತೊಯ್ದಿದ್ದನು. ಕೆಲವೊಂದು ಕೃತಿಗಳು ರಂಭಾ ಎಂದರೆ ಶಿವನ ಹೆಂಡತಿಯಾದ ಗೌರೀ ಎಂದು ಹೇಳುತ್ತವೆ. ಆದ್ದರಿಂದ, ಈ ನಾಮವು ಬಹುಶಃ ರಂಭೆಯನ್ನೂ ಮೀರಿಸುವ ದೇವಿಯ ಎಣೆಯಿಲ್ಲದ ಸೌಂದರ್ಯದ ಕುರಿತಾಗಿ ಪರೋಕ್ಷವಾಗಿ ಹೇಳುತ್ತದೆ.

          ಮುಂದಿನ ಎಂಟು ನಾಮಗಳು, ದುಷ್ಟಕಾರ್ಯಗಳನ್ನು ನಾಶಗೊಳಿಸಿ ತನ್ಮೂಲಕ ಒಬ್ಬನು ಶಿವನನ್ನು ಅಂದರೆ ಬ್ರಹ್ಮವನ್ನು ಅರಿಯುವಂತೆ ಮಾಡುವ ದೇವಿಯ ಉದ್ದೇಶಗಳನ್ನು ಕುರಿತು ಚರ್ಚಿಸುತ್ತವೆ. ನಾಮ ೭೨೭ ’ಶಿವಜ್ಞಾನಪ್ರದಾಯಿನೀ’ಯನ್ನು ಜ್ಞಾಪಿಸಿಕೊಳ್ಳಿ.

Bhava-dāva-sudhā-vṛṣṭiḥ भव-दाव-सुधा-वृष्टिः (742)

೭೪೨. ಭವ-ದಾವ-ಸುಧಾ-ವೃಷ್ಟಿಃ

           ದೇವಿಯು ಸಂಸಾರಿಕ ಜೀವನದ ಬವಣೆಯಿಂದುಂಟಾದ ಬೆಂಕಿಯನ್ನು ಅಮೃತದ ಮಳೆಗರೆಯುವುದರ ಮೂಲಕ ಶಮನಮಾಡುತ್ತಾಳೆ. ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿ ಪ್ರಾಪಂಚಿಕ ಜೀವನದೊಂದಿಗೆ ಅಂಟಿಕೊಂಡಿರುವ ಭೋಗಗಳಿಗೆ ಆಸ್ಪದವಿಲ್ಲ. ಭವ ಎಂದರೆ ಸಂಸಾರ, ದಾವ ಎಂದರೆ ಅಡವಿಯ ಬೆಂಕಿ ಅಥವಾ ಕಾಳ್ಗಿಚ್ಚು. ಪ್ರಾಪಂಚಿಕ ಜೀವನವನ್ನು ಕಾಳ್ಗಿಚ್ಚಿಗೆ ಹೋಲಿಸಲಾಗಿದೆ ಮತ್ತು ದೇವಿಯು ಅಮೃತದ ಮಳೆಗರೆಯುವುದರ ಮೂಲಕ ಆ ಬೆಂಕಿಯನ್ನು ನಂದಿಸುತ್ತಾಳೆ. ಅಡವಿಯ ಬೆಂಕಿಯೆಂದರೆ ಅಜ್ಞಾನ ಮತ್ತು ಅಮೃತವೆಂದರೆ ಜ್ಞಾನವಾಗಿದೆ. ಅಜ್ಞಾನವು ಪ್ರಾಪಂಚಿಕ ಸುಖಗಳಲ್ಲಿ ತಲ್ಲೀನವಾಗಿರುವುದಕ್ಕೆ ಕಾರಣವಾಗಿದೆ. ಈ ಅಜ್ಞಾನವನ್ನು ಜ್ಞಾನಸಂಪಾದನೆಯ ಮೂಲಕ ತೊಲಗಿಸಬಹುದಾಗಿದೆ.

         ಈ ನಾಮದ ಅರ್ಥವು ದೇವಿಯು ಅಡವಿಯ ಮೇಲೆ ಮಳೆಗರೆಯುವುದರಿಂದ ಅವಳು ಅಡವಿಯನ್ನು ಬೆಳೆಯುವಂತೆ ಮಾಡುತ್ತಾಳೆ ಎಂದಾಗುತ್ತದೆ. ಇದರರ್ಥ ಅಜ್ಞಾನಿಗಳು ಮಾಯೆಯ ಪ್ರಭಾವದಿಂದ ಉಂಟಾದ ಯಾತನೆಗಳನ್ನು ಅನುಭವಿಸುವುದನ್ನು ಮುಂದುವರೆಸಲಿ ಎಂದಾಗುತ್ತದೆ. ಆದರೆ, ಕೇವಲ ಜ್ಞಾನವಂತರು ಮಾತ್ರವೇ ಈ ಮಾಯೆಯ ಭ್ರಮೆಯನ್ನು ಅಧಿಗಮಿಸಬಲ್ಲರು.

        ಈ ನಾಮವನ್ನು ಮೂರು ಶಬ್ದಗಳಾಗಿ ವಿಭಜಿಸಬಹುದು; ಭವದಾ+ವಸುಧಾ+ವೃಷ್ಟಿಃ. - ಭವ ಎಂದರೆ ಶಿವ ಎನ್ನುವ ಅರ್ಥವೂ ಇರುವುದರಿಂದ ಆಕೆಯು ಭವದಾ ಎಂದರೆ ಆಕೆಯನ್ನು ಶಿವನನ್ನು ಕೊಡುವವಳಾಗಿದ್ದಾಳೆ. ಶಿವನನ್ನು ಪಡೆಯುವುದೆಂದರೆ ಮುಕ್ತಿಯನ್ನು ಹೊಂದುವುದಾಗಿದೆ. ವಸುಧಾ ಎಂದರೆ ಸಂಪತ್ತು ಮತ್ತು ವೃಷ್ಟಿಃ ಎಂದರೆ ಕೊಡುವವಳು ಆದ್ದರಿಂದ ಅವಳು ಸಂಪದಗಳನ್ನು ಕರುಣಿಸುವವಳು. ಈ ಸಂದರ್ಭದಲ್ಲಿ ದೇವಿಯು ಮುಕ್ತಿ ಮತ್ತು ಭುಕ್ತಿ(ಪ್ರಾಪಂಚಿಕ ಸುಖ)ಗಳೆರಡನ್ನೂ ಕರುಣಿಸುವವಳಾಗಿದ್ದಾಳೆ ಎನ್ನಬಹುದು. ಯಾರು ದೇವಿಯ ನಿಜವಾದ ಭಕ್ತರೋ ಅವರು ಪ್ರಾಪಂಚಿಕ ಸುಖ ಮತ್ತು ಮುಕ್ತಿ ಎರಡನ್ನೂ ಪಡೆಯುವರೆಂದು ಹೇಳಲಾಗುತ್ತದೆ.

Pāparaṇya-davānalā पापरण्य-दवानला (743)

೭೪೩. ಪಾಪಾರಣ್ಯ- ದವಾನಲಾ

          ದೇವಿಯು, ಯಾತನೆಗಳಿಗೆ ಕಾರಣವಾಗಿರುವ ಪಾಪಗಳ ಅರಣ್ಯವನ್ನು ಕಾಳ್ಗಿಚ್ಚಿನಂತೆ ಸುಟ್ಟು ಹಾಕುತ್ತಾಳೆ, (೧೬೭ನೇ ನಾಮವಾದ ‘ಪಾಪ-ನಾಶಿನೀ’ಯನ್ನೂ ನೋಡಿ).

         ರುದ್ರಯಾಮಲವು, "ಇಂದ್ರಾ! ಪಾಪಗಳನ್ನು ಈಗಲೇ ನಾಶಪಡಿಸುವ ಪರಮೋನ್ನತ ರಹಸ್ಯವೇನೆಂದರೆ, ಈ ಪಂಚದಶೀ ಮಂತ್ರವನ್ನು ಸ್ನಾನ ಮಾಡಿದ ನಂತರ ನೀರಿನಲ್ಲಿ ನಿಂತು ಶ್ರದ್ಧಾ ಭಕ್ತಿಗಳಿಂದ ೧೦೦೮ ಬಾರಿ ಪಠಿಸುವುದಾಗಿದೆ" ಎಂದು ಹೇಳುತ್ತದೆ.

         ಲಲಿತಾ ತ್ರಿಶತಿಯ ೩೧ನೇ ಹಾಗೂ ೧೧೨ನೇ ನಾಮಗಳೂ ಸಹ ಇದೇ ಅರ್ಥವನ್ನು ಹೊಂದಿವೆ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ (೧೮.೬೬), "ನಿನ್ನೆಲ್ಲಾ ಕರ್ತವ್ಯಗಳನ್ನೂ ಸರ್ವಶಕ್ತನಾದ ಮತ್ತು ಸಲುಹುವ ಭಗವಂತನಾದ ನನಗೇ ಸಮರ್ಪಿಸಿ, ಕೇವಲ ನನ್ನಲ್ಲಿಯೇ ಶರಣಾಗತನಾದರೆ, ನಾನು ನಿನ್ನೆಲ್ಲಾ ಪಾಪಗಳನ್ನು ತೊಡೆಯುತ್ತೇನೆ, ಚಿಂತಿಸ ಬೇಡ" ಎಂದು ಹೇಳುತ್ತಾನೆ.

Daurbhāgya-tūla-vātūlā दौर्भाग्य-तूल-वातूला (744)

೭೪೪. ದೌರ್ಭಾಗ್ಯ-ತೂಲ- ವಾತೂಲಾ

          ವಿವಧ ಜನ್ಮಗಳಿಂದ ಸಂಚಿತವಾದ ಕರ್ಮಗಳು ಹತ್ತಿಯ ದೊಡ್ಡ ಸುರಳಿ ಅಥವಾ ಅಂಡಿಗೆಯಂತೆ ಕಾಣುತ್ತದೆ. ದೇವಿಯು ಈ ಸುರಳಿಯಲ್ಲಿರುವ ವಸ್ತುಗಳನ್ನು ಬಿರುಗಾಳಿಯಂತೆ ಚದುರಿಸುತ್ತಾಳೆ. ಯಾತನೆಗಳಿಗೆ ಕರ್ಮಗಳೇ ಕಾರಣ ಮತ್ತು ಈ ನಾಮವು, ಅರಳೆಯನ್ನು ಹೊಂದಿದ ಬೀಜಗಳನ್ನು ಬಿರುಗಾಳಿಯು ಹೊತ್ತೊಯ್ಯುವಂತೆ ದೇವಿಯು ಯಾತನೆಗಳನ್ನು ದೂರ ಸರಿಸುತ್ತಾಳೆ ಎಂದು ಹೇಳುತ್ತದೆ.  (ತೂಲ ಎಂದರೆ ಹತ್ತಿ ಅಥವಾ ಅರಳೆಯನ್ನು ಹೊಂದಿದ ಬೀಜ ಮತ್ತು ವಾತೂಲ ಎಂದರೆ ಬಿರುಗಾಳಿ).

         ದೇವಿಯು ಪಾಪಗಳನ್ನು ಅಷ್ಟು ಸುಲಭವಾಗಿ ಇಲ್ಲವಾಗಿಸುತ್ತಾಳೆ ಎನ್ನುವುದು ಈ ನಾಮದ ಅರ್ಥವಲ್ಲ. ಇದರರ್ಥ ಆಕೆಯು ಪಾಪಿಗಳು ಸತ್ಕರ್ಮಗಳನ್ನು ಮಾಡುವಂತೆ ಪ್ರೇರೇಪಿಸಿ ತನ್ಮೂಲಕ ಅವರ ಕರ್ಮದ ಸಾಂದ್ರತೆಯು ಕಡಿಮೆಯಾಗುವಂತೆ ಮಾಡುತ್ತಾಳೆ. ದೇವಿಯು ಒಬ್ಬ ವ್ಯಕ್ತಿಯು ಒಳ್ಳೆಯ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸುವುದರ ಮೂಲಕ ಅವನ ಕುಕೃತ್ಯಗಳನ್ನು ಪಲ್ಲಟಗೊಳಿಸುತ್ತಾಳೆ. ದೇವಿಯು ಕರ್ಮ ನಿಯಮವನ್ನು ಅಧಿಗಮಿಸದೇ ಇದ್ದರೂ ಸಹ ಆಕೆಯು ಪಾಪಗಳನ್ನು ಮಾಡುವುದರಿಂದ ಹೇಗೆ ಹೊರಬರಬಹುದು ಎನ್ನುವ ಮಾರ್ಗಗಳನ್ನು ತೋರಿಸಿ ಅವುಗಳ ಮೂಲಕ ಕರ್ಮ ಶೇಷವನ್ನು ಪಲ್ಲಟಗೊಳಿಸುತ್ತಾಳೆ.  

                                                                                                      ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 740 - 744 http://www.manblunder.com/2010/05/lalitha-sahasranamam-meaning-740-744.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

Rating
Average: 5 (1 vote)

Comments

Submitted by nageshamysore Sat, 11/23/2013 - 18:57

ಶ್ರೀಧರರೆ, "೧೬೬. ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ;-)
.
ಲಲಿತಾ ಸಹಸ್ರನಾಮ ೭೪೦-೭೪೪
______________________________
.
೭೪೦. ಲಜ್ಜಾ
ಸ್ತ್ರೀ ಮೂಲಗುಣ ಲಜ್ಜಾ, ಹ್ರೀಂ ಬೀಜಾಕ್ಷರ ಲಜ್ಜಾ-ಮಾಯಾ ಬೀಜ
ಆಡಂಬರ ತೋರಿಕೆಯಾರಾಧನೆ ಭಯದೆ ಲಲಿತೆ ನಾಚುತಲೆ ನಿಜ
ಕವಚದೊಳಿಟ್ಟ ಅಂಗದ ಕೂರ್ಮದಂತೆ ನಿಜಭಕ್ತನ ಏಕಾಂತ ಪೂಜ
ಅಂತರಂಗಭಾವ ಕಾಳಜಿ, ವೈಭವಾಡಂಬರ ಗಣಿಸದ ದೇವಿ ಲಜ್ಜಾ ||
.
೭೪೧. ರಂಭಾದಿ-ವಂದಿತಾ
ಕುಬೇರ ಸಂತತಿ ನಳ ಕುಬೇರನ ಸತಿ ರಂಭೆ ಹೊತ್ತೊಯ್ದ ರಾವಣ
ಶಿವನ ಸತಿ ಗೌರಿ ರಂಭೆಯ ರೂಪ ಮೀರಿಸುವ ಅತಿಶಯ ಧಾರಣ
ಮೂಕ ವಿಸ್ಮಿತ ರಂಭೆ ಊರ್ವಶಿಯಾದಿ ಅಪ್ಸರೆಯರಿಂದ ಪೂಜಿತಾ
ದೇವಲೋಕ ರೂಪ ಖನಿಗಳ ನಿವಾಳಿಸಿ ಲಲಿತೆ ರಂಭಾದಿ ವಂದಿತ ||
.
೭೪೨. ಭವ-ದಾವ-ಸುಧಾ-ವೃಷ್ಟಿಃ
ಭವ-ಸಂಸಾರ, ದಾವ-ಕಾಳ್ಗಿಚ್ಚು ಲೌಕಿಕಕೆ, ಬೆಂಕಿಯಾರಿಸೆ ಸುಧಾಮೃತ
ಅಜ್ಞಾನ ಕಾಳ್ಗಿಚ್ಚು ಮೈಮರೆಸಿ ಇಹಸುಖ ತಲ್ಲೀನ, ತೆಗೆ ಜ್ಞಾನದಾಮೃತ
ಮಾಯಾ ಅಡವಿಯ ಮೇಲಾಗಿ ವರ್ಷಧಾರೆ, ಅಜ್ಞಾನದ ಮುಸುಕ ಸೃಷ್ಟಿ
ಜ್ಞಾನದ ಬೆಳಕಲಿ ಮುಸುಕ ತೆರೆಸೊ, ಲಲಿತೆ ಭವ-ದಾವ-ಸುಧಾ-ವೃಷ್ಟಿಃ ||
.
ಭವದಾ-ವಸುಧಾ-ವೃಷ್ಟಿಃ, ಭವನೆನೆ ಶಿವ,ದಾ-ದಾಯಿನಿ ಮುಕ್ತಿ ಪಥಕೆ
ವಸುಧಾ ಸಂಪದ ಮುಕ್ತಿ ಜತೆ ಪ್ರಾಪಂಚಿಕ ಸುಖ ಭುಕ್ತಿಯ ಕೊಡುವಾಕೆ
ಮಾಯೆಯ ಮುಸುಕಲಿ ಯಾತನೆ ಮಳೆಯಲಿ ನೆನೆಸುವ ಅಜ್ಞಾನ ಘನ
ಜ್ಞಾನರ್ಜನೆಯಲಿ ಮುಸುಕಾ ತೊಲಗಿಸಿ ಬೆಳಕಿನೆಡೆಗೆ ನಡೆವ ಜ್ಞಾನಧನ ||
.
೭೪೩. ಪಾಪಾರಣ್ಯ-ದವಾನಲಾ
ಯಾತನಾ ಕಾರಣ ಪಾಪಗಳ ಅರಣ್ಯ, ಕಾಳ್ಗಿಚ್ಚಂತೆ ಭಸ್ಮ ಲಲಿತಾ ಕಾರಣ
ಶ್ರದ್ಧಾ ಭಕ್ತಿ ಏಕಸಹಸ್ರಾಷ್ಟ ಸಲ ಪಂಚದಶೀ ಮಂತ್ರ, ಪಾಪ ನಾಶ ತಕ್ಷಣ
ಕರ್ಮ ನಿಮಿತ್ತ ಕರ್ತವ್ಯ, ಸರ್ವಶಕ್ತ ಪೋಷಕನಿಗೆಲ್ಲಾ ಸಮರ್ಪಿಸುತ ಬಲ
ಶರಣಾಗತರಿಗೆ ಪಾಪಗಳೆಲ್ಲವ ತೊಡೆವಾ ಲಲಿತೆ ಪಾಪಾರಣ್ಯ ದವಾನಲಾ ||
.
೭೪೪. ದೌರ್ಭಾಗ್ಯ-ತೂಲ-ವಾತೂಲ
ದೌರ್ಭಾಗ್ಯ ಜನ್ಮ ಸಂಚಿತ ಕರ್ಮ, ಹತ್ತಿಯಂಡಿಗೆ-ತೂಲ ರೂಪದಿ ಯಾತನೆ
ದೇವಿ ಕರುಣೆ ವಾತೂಲ-ಬಿರುಗಾಳಿಯಂತೆ, ತೂಗೆಸೆದು ಬೀಜ ಅರಳೆಯನೆ
ಹಾರುತ ದೂರ ಯಾತನೆ, ಕರ್ಮಸಾಂದ್ರತೆ ಕಡಿತ, ಪ್ರೇರೇಪಿಸಿ ಒಳಿತ ಬಲ
ಪಲ್ಲಟಿಸಿ ಕುಕೃತ್ಯ, ಮುಕ್ತಿ ಪಥ ತೋರಿ ಲಲಿತೆ ದೌರ್ಭಾಗ್ಯ-ತೂಲ-ವಾತೂಲ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

ನಾಗೇಶರೆ,
ಲಲಿತಾ ಸಹಸ್ರನಾಮಕ್ಕೆ ಕವಿತೆ ಹೊಸೆಯುವುದನ್ನು ಒಂದು ಕೈಂಕರ್ಯದಂತೆ ಕೈಗೊಂಡು ಅದನ್ನು ನಿತ್ಯವೂ ಅನುಷ್ಠಾನ ಮಾಡುತ್ತಿರುವ ನಿಮಗೆ ಲಲಿತಾಂಬಿಕೆಯ ಕೃಪೆ ಖಂಡಿತಾ ಉಂಟಾಗಿದೆ. ಬೆಳಿಗ್ಗೆ ತಾನೇ ನಿಮ್ಮ ಕವನಗಳನ್ನು ಮೇಲ್ಮೇಲೆ ಅಂದರೆ ಕಾಟಾಚಾರಕ್ಕೆ ಎಂಬಂತೆ ನೋಡಿ ಮುಂದೆ ಸಾಗುತ್ತಿದ್ದೆ. ಈ ದಿನ ಭಾನುವಾರವಾದ್ದರಿಂದ ಸ್ವಲ್ಪ ಸಮಯ ತೆಗೆದುಕೊಂಡು ನಿಮ್ಮ ಕವನಗಳನ್ನು ಒಂದೊಂದಾಗಿ ನೋಡೋಣವೆಂದುಕೊಂಡು ಮೊದಲಿಗೆ ಈ ಕಂತನ್ನು ನೋಡಿದೆ. ಇದಂತೂ ಯಾವುದೇ ಲೋಪದೋಷಗಳಿಲ್ಲಂತೆ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಸ್ವಲ್ಪ ಗೊಂದಲವುಂಟಾಗಿದ್ದು ಕೆಳಗಿನ ಕವನದಲ್ಲಿ.
೭೪೪. ದೌರ್ಭಾಗ್ಯ-ತೂಲ-ವಾತೂಲ
ದೌರ್ಭಾಗ್ಯ ಜನ್ಮ ಸಂಚಿತ ಕರ್ಮ, ಹತ್ತಿಯಂಡಿಗೆ-ತೂಲ ರೂಪದಿ ಯಾತನೆ
ದೇವಿ ಕರುಣೆ ವಾತೂಲ-ಬಿರುಗಾಳಿಯಂತೆ, ತೂಗೆಸೆದು ಬೀಜ ಅರಳೆಯನೆ
ಬೀಜ ಅರಳೆಯನೆ - ಈ ಶಬ್ದ ಸ್ವಲ್ಪ ಗೊಂದಲವುಂಟು ಮಾಡಿದರೂ ಸಹ ಆಲೋಚಿಸಿದಾಗ ಬೀಜ ಅರಳೆಯೆಂದರೆ ಹತ್ತಿ ಎನ್ನುವ ಅರ್ಥವೇ ಬರುವುದರಿಂದ ಇದು ಸೂಕ್ತವಾಗಿಯೇ ಇದೆ. ಹಾಗಾಗಿ ಈ ಕಂತಿನಲ್ಲಿ ನಿಮಗೆ ಫುಲ್ ಮಾರ್ಕ್ಸ್ :)
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ

ಶ್ರೀಧರರೆ, ನಿಮ್ಮ ಸುಂದರ ಅನುವಾದದ ಕೃಪೆ ಮತ್ತು ಲಲಿತಾಂಬಿಕೆಯ ಕೃಪೆ ಒಟ್ಟುಗೂಡಿ ಸಹಸ್ರ ನಾಮಕ್ಕೆ ಪೂರ್ಣವಾಗಿ ಕವಿತೆ ಹೊಸೆದರೆ, ಹಿಡಿದ ಕಾರ್ಯ ಮುಗಿಸಿದ ಸಮಾಧಾನ. ಓದಿ ತಿದ್ದುಪಡಿ ಮಾಡಲು ಸಮಯ ಹಿಡಿಯುವ ಕಾರಣ, ಬಿಡುವಾದಾಗ ಆದಷ್ಟು ನೋಡುತ್ತಾ ಇರಿ. ಸದ್ಯಕ್ಕೆ ನಿಮ್ಮ ಮೊದಲ ಆದ್ಯತೆ ಗದ್ಯದ ಅನುವಾದದತ್ತ ಇರಬೇಕಾಗಿರುವುದರಿಂದ, ಎಲ್ಲಾ ಮುಗಿದ ಮೇಲೆ ಒಟ್ಟಾಗಿ ಉಳಿದಿದ್ದನ್ನೆಲ್ಲ ಪರಿಷ್ಕರಿಸಬಹುದು. ಸದ್ಯಕ್ಕೆ ಹಳೆಯದೆಲ್ಲವೂ ಸೇರಿ ಸಾಕಷ್ಟು ಪರಿಷ್ಕರಿಸಬೇಕಾಗಿ ಬರಬಹುದು. ಆದರೆ ಆ ನಂತರ ಎಲ್ಲ ಸಾವಿರ ನಾಮಕ್ಕೂ ನಿಮ್ಮ ಗದ್ಯದ ಜತೆಗೆ ಈ ಕವಿತೆಗಳು ಒಟ್ಟಾಗಿ ಸೇರಿದರೆ ಓದುವವರಿಗೂ ಒಂದು ಸುಂದರ ಅನುಭೂತಿಯ ಅನುಭವವಾಗಬಹುದೆಂದು ಅನಿಸಿಕೆ. ಸದ್ಯಕ್ಕೆ ಈ 'ಜಾಯಿಂಟ್ ವೆಂಚರ' ಲಲಿತಾ ಕೃಪೆಯಿಂದ ಸುಲಲಿತವಾಗಿ ಮುನ್ನಡೆಯಲೆಂದು ಹಾರೈಸೋಣ :-)
.
ನಿಮ್ಮ ಸಲಹೆಯಂತೆ ಈ ಕಂತನ್ನು ಅಂತಿಮಗೊಳಿಸುತ್ತೇನೆ :-)
.
ಧನ್ಯವಾದಗಳೊಂದಿಗೆ 
-ನಾಗೇಶ ಮೈಸೂರು

ನಿಮ್ಮ ಮಾತು ನಿಜ ನಾಗೇಶರೆ,
ನಿಮ್ಮ ಕವನಗಳ ಒಂದು ಕಂತನ್ನು ನಾನು ಓದಿ ತಿದ್ದುತ್ತಿರಬೇಕಾದರೆ ಅದನ್ನು ಗಮನಿಸಿದ ನನ್ನ ಹಿರಿಯ ಮಗಳು, ಅದರ ಬಗ್ಗೆ ಕೇಳಿ ತಿಳಿದುಕೊಂಡು ಇದನ್ನು ಪ್ರತಿಯೊಂದು ನಾಮದ ವಿವರಣೆಯ ನಂತರ ಇರಿಸಿದರೆ ಚೆನ್ನಾಗಿರುತ್ತದೆಯಲ್ಲವೇ ಎಂದು ಕೇಳಿದಳು. ಇದನ್ನು ಪ್ರಕಟಿಸಬೇಕಾದರೆ ನಿಮ್ಮ ಕವನಗಳನ್ನು ಕಡೆಯಲ್ಲಿ ಇರಿಸಬೇಕಾ ಅಥವಾ ಅದನ್ನೇ ಒಂದು ಪ್ರತ್ಯೇಕ ಅಧ್ಯಾಯವಾಗಿ ಪ್ರಾರಂಭದಲ್ಲಿಡಬೇಕಾ ಎನ್ನುವ ಗೊಂದಲದಲ್ಲಿದ್ದೆ. ಆದರೆ ನನ್ನ ಮಗಳ ಸಲಹೆಯನ್ನು ಕೇಳಿದ ಮೇಲೆ ಪ್ರತಿ ನಾಮದ ವಿವರಣೆಯ ನಂತರ ಇದನ್ನು ಇಟ್ಟರೆ ಚೆನ್ನಾಗಿರುತ್ತದೆಂದು ಅನಿಸಿತು, ಅದನ್ನೇ ಮುಂದೆ ಅನುಸರಿಸೋಣ ಎನಿಸುತ್ತಿದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ.

ಶ್ರೀಧರರೆ, ಅಂತಿಮ ಕೊಂಡಿಯನ್ನು ಸೇರಿಸುತ್ತಿದ್ದೇನೆ :-)
.https://ardharaatriaalaapagalu.wordpress.com/%e0%b3%a6%e0%b3%a7%e0%b3%ac...
.
ಅಂದ ಹಾಗೆ ನಿಮ್ಮ ಅಭಿಪ್ರಾಯವೆ ನನ್ನದೂ ಸಹ. ಬೇಕಿದ್ದರೆ ಜತೆಗೆ (ಮೊದಲೊ, ಕೊನೆಯಲ್ಲೊ), ಎಲ್ಲಾ ಪದ್ಯಗಳನ್ನು ಒಂದೆ ಕಡೆ ಸೇರಿಸಿಯೂ ಕೊಡಬಹುದು. 
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು