Busy-ness: (Profit)Private ಮತ್ತು (Staff)Limited ಕಂಪನಿ !
ಬೊಗಳೂರು, ಡಿ.22- ಅತ್ಯಾಧುನಿಕ ಯುಗದ ಅತ್ಯಾಧುನಿಕ ತಂತ್ರಜ್ಞಾನದ ಪರಿಣಾಮಗಳು ಮತ್ತು ಕೆಲಸದೊತ್ತಡಗಳು ಎಂಥೆಂತಹ ಕೆಲಸ ಮಾಡಿಸುತ್ತವೆ ಎಂಬುದಕ್ಕೆ ಹೊಸದೊಂದು ಉದಾಹರಣೆ ಇಲ್ಲಿ ಲಭ್ಯವಾಗಿದೆ. (bogaleragale.blogspot.com)
ಬೆಳಗ್ಗೆ ಎದ್ದು ಕಚೇರಿಗೆ ಓಡಿ ಕಂಪ್ಯೂಟರ್ ಕೀಲಿಗಳೊಂದಿಗೆ ಕಟಕಟ ಸದ್ದಿನ ಆಟವಾಡಿ ತಡರಾತ್ರಿ ಮನೆಗೆ ಮರಳಿ ಬಿದ್ದ ತಕ್ಷಣ ನಿದ್ದೆ ಹೋಗುವ ಜಗತ್ತು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಶೋಧನೆ ಕೈಗೊಳ್ಳಲಾಗಿದೆ.
ಯಾವುದೇ ಡಾಟ್ ಕಾಮ್ ಎಂಬ ಪ್ರೈವೇಟ್ ಲಿಮಿಟೆಡ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಇತ್ತೀಚೆಗೆ ಕಂಪನಿಯ ಹೆಸರಿನೊಂದಿಗೆ ಥಳುಕು ಹಾಕಿಕೊಂಡಿರುವ ಪ್ರೈವೇಟ್ ಮತ್ತು ಲಿಮಿಟೆಡ್ ಎಂಬ ಪದಗಳಿಗೆ ಅರ್ಥವನ್ನೂ ಕಂಡುಕೊಂಡಿದ್ದಾರೆ.
ಯಾವುದೇ ಲಾಭಗಳೆಲ್ಲಾ ಈ ಕಂಪನಿಯ ಪ್ರೈವೇಟ್ ಆಗಿದ್ದು, ಸಿಬ್ಬಂದಿಗಳ ಸಂಖ್ಯೆ ಮಾತ್ರ ಲಿಮಿಟೆಡ್ ಆಗಿರುತ್ತದೆ ಎಂಬ ವ್ಯಾಖ್ಯಾನ ದೊರೆತಿರುವ ಈ ಸಮಯದಲ್ಲಿ, ಕೆಲಸದಲ್ಲಿ ನಿರತರಾದವರಿಗೆ ಮದುವೆಯಾಗಲು, ಹನಿಮೂನ್‌ಗೆ ತೆರಳಲು ಪುರುಸೊತ್ತು ಎಂಬುದು ಪರರ ಸೊತ್ತಾಗಿಬಿಟ್ಟಿದೆ.
ಈ ಕಾರಣಕ್ಕಾಗಿಯೇ ಕಾಲ್ಪನಿಕ ಮದುವೆ, ಕಾಲ್ಪನಿಕ ಹನಿಮೂನ್ ಎಲ್ಲವನ್ನೂ ನಡೆಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಮಧ್ಯೆ, ಹಿಂದಿನ ಕಾಲದಲ್ಲಿ ಸಾಂಸಾರಿಕ ಜಗತ್ತಿನ ಕಷ್ಟ ಕೋಟಲೆಗಳಿಂದ ನೊಂದವರು ತಪಸ್ಸು ಮಾಡಲು, ಮನಶ್ಶಾಂತಿ ಅರಸಿ ಕಾಡಿಗೆ ಹೋಗುತ್ತಾರೆ, ಆದರೆ ಈಗಿನದು ಅತ್ಯಾಧುನಿಕ ತಂತ್ರಜ್ಞಾನದ ಯುಗವಾದ್ದರಿಂದ ಅಂಥವರೆಲ್ಲಾ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ, ಕಂಪ್ಯೂಟರ್ ಎದುರು ತಪಸ್ಸು ಮಾಡುತ್ತಿರುತ್ತಾರೆ ಎಂಬ ವಾದಕ್ಕೆ ಪುಷ್ಟಿ ದೊರೆಯುವ ಯತ್ನವಾಗಿ ಈ ಕಾಲ್ಪನಿಕ ವಿವಾಹ, ಕಾಲ್ಪನಿಕ ಹನಿಮೂನ್ ಇತ್ಯಾದಿ ಏರ್ಪಡಿಸಲಾಗಿದೆ ಎಂದು ಬೊಗಳೆ ರಗಳೆ ಬ್ಯುರೋ ಕ್ಯಾತೆ ತೆಗೆದಿದೆ.