SEZ
ಹಕ್ಕಿ ಉಲಿದಿದೆ ಇಂದು ತನ್ನ ಗೂಡಲೆ ನಿಂದು
ತನ್ನ ಪರಿಧಿಗಳೊಳಗಿನ ಪುಟ್ಟ ಕೂಗು
ಮಾಮರದ ಕೊಂಬೆಯಲಿ ಹಂಗಿನರಮನೆ ಗೂಡು
ಕೊನೆಯಿರದ ಅವಲಂಬನೆಯ ಕೊರಗು.. |
ತನ್ನ ಗೂಡಿನ ಕಡೆಗೆ ಕಣ್ಣು ನೆಟ್ಟವರಿಲ್ಲ
ಕಣ್ಗಳಿರುವುದು ಎಲ್ಲ ಮರದ ಹಣ್ಗಳೆಡೆಗೆ
ಗುರಿಯಿರದ ಕಲ್ಲುಗಳು ಒಂದಾದ ಮೇಲೊಂದು
ತಗುಲಿದ್ದು ಹಣ್ಣಿಗಲ್ಲ..ತನ್ನ ಎದೆಗೆ ! |
ಕೆಲವರೆಂದರು ಹೀಗೆ- ಹಣ್ಣೇಕೆ ನಿಮಗೆ?
ತಿನ್ನುವುದು ಹುಳಹುಪ್ಪಟೆಗಳ ನೀವು
ಮಾಮರವೆ ಬೇಕೇನು? ಮರ ನಮಗೆ ಬಿಟ್ಟುಕೊಡಿ
ಪುಟ್ಟ ಪಂಜರವೊಂದ ಕೊಡಿಸುತ್ತೇವೆ ನಾವು.. |
ಕೆಲವರಷ್ಟೂ ಇಲ್ಲ, ಕೊಕ್ಕೆ ದೊಣ್ಣೆಯ ಬೀಸು
ನೆಲವದುರುವಂತೆ ಮರದ ಗೆಲ್ಗಳ ಕುಲುಕು..
ಬಿದ್ದದ್ದು ಹಣ್ಣಲ್ಲ ,ನನ್ನ ವಂಶ ಕುಡಿಗಳೆ ಎಲ್ಲ
ಉದುರಿದುದು ನನ್ನೊಡಲ ಮರಿಗಳಾ ಬದುಕು.. |
ತೆರೆದ ಬಾನೊಂದೆದೆ ಹಾರಿಬಿಡಲೇನು?
ನನ್ನದೆಲ್ಲವ ತೊರೆದು 'ಅವ' ಹೇಳ್ದ ದಾರಿಯಲಿ ಸಾಗಿ
ಬದುಕಿ ಸತ್ತಂತಿರಲೇನು?
ಅಥವಾ ನನ್ನ ಕಂದಮ್ಮಗಳ ಬಿಗಿದಪ್ಪಿ ಎದುರಿಸಲೇನು?
ಕಲ್ಲು,ದೊಣ್ಣೆ,ಏಟು,ಬೀಸುಗಳಿಗೆ ಎದೆಯೊಡ್ಡಿ ಹೋರಾಡಿ
ಸತ್ತು ಬದುಕಿರಲೇನು?
-ವಿನಾಯಕ ಕುರುವೇರಿ
Comments
ಉ: SEZ