Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
ನಮ್ಮ ದೇಶದಲ್ಲಿ ಮೊದಲು ಆಕಾಶಾನ ಹನ್ನೆರಡು ರಾಶಿಗಳಾಗಿ ವಿಂಗಡಿಸೋ ಪದ್ಧತಿ ಇರಲಿಲ್ಲ. ಅದರ ಬದಲು, ಆಕಾಶವನ್ನು ಇಪ್ಪತ್ತೇಳು ಅಥವಾ ಇಪ್ಪತ್ತೆಂಟು ನಕ್ಷತ್ರಗಳಾಗಿ ವಿಂಗಡಿದಿದ್ರು. ಇದು ಚಂದ್ರ ಆಕಾಶದಲ್ಲಿ ಹೊರಟ ಸ್ಥಳಕ್ಕೇ ಮತ್ತೆ ಬರಲು ಸುಮಾರು ಇಪ್ಪತ್ತೇಳು ಚಿಲ್ಲರೆ ದಿವಸಗಳಾಗೋದ್ರಿಂದ. ಸೂರ್ಯ ಎಲ್ಲಿದೆ ಅಂತ ತೋರ್ಸಕ್ಕೂ ಇದೇ ನಕ್ಷತ್ರಗಳನ್ನೆ ಬಳಸ್ತಿದ್ರು. ಪ್ರತಿ ನಕ್ಷತ್ರವನ್ನು ನಾಕು ಭಾಗ ಮಾಡಿ, ಒಂದೊಂದಕ್ಕೂ ಒಂದು ಪಾದವೆಂದು ಕರ್ರೀತಿದ್ರು. ವಸಂತದ ಮೊದಲ ದಿನ - ಎಂದರೆ, ಚಳಿಗಾಲ ಮುಗಿಯುತ್ತಾ ಹಗಲು ಹೆಚ್ಚಲಾರಂಭಿಸಿದಾಗ ಹಗಲೂ ರಾತ್ರಿ ಸರಿಸಮಾನವಾಗಿ ಬರುವ ವಸಂತ ವಿಷುವ (vernal equinox) ದ ಸಮಯದಲ್ಲಿ ಸೂರ್ಯ ಮೃಗಶಿರಾ ನಕ್ಷತ್ರದಲ್ಲಿರುತ್ತಾನೆಂದು ಋಗ್ವೇದದಲ್ಲಿ ಬರುತ್ತೆ (ಇದು ಸುಮಾರು ಕ್ರಿ.ಪೂ. ೪೦೦೦ ರ ಸುಮಾರಿನ ಸಮಾಚಾರ. ನಂತರ ಬಂದ ಬ್ರಾಹ್ಮಣಗಳಲ್ಲ್ಲಿ ವಸಂತಾದಿ - ಇದೇ ವರ್ಷದಾದಿ - ಯುಗಾದಿಯ ದಿವ್ಸ ಸೂರ್ಯ ಕೃತ್ತಿಕಾ ನಕ್ಷತ್ರದಲ್ಲಿರ್ತಾನೆ ಅಂತ ಹೇಳದೆ. ಮತ್ತೆ ಸುಮಾರು ಕ್ರಿಸ್ತನ ಆಸುಪಾಸಿನ ಪುರಾಣಗಳು, ವಸಂತ ವಿಷುವದ ದಿನ ಸೂರ್ಯ ಅಶ್ವಿನಿ ನಕ್ಷತ್ರ ವನ್ನು ಪ್ರವೇಶಿಸ್ತಾನೆ ಅನ್ನತ್ವೆ. ಇದೇನಿದು? ಈ ರೀತಿ ನಂಬಲಾದಂತ ಬೇರೆಬೇರೆ ಮಾತನ್ನ ಹೇಳ್ತಾರಲ್ಲ ಅಂತ ಅನ್ಕೋಬೇಡಿ. ಇದ್ಯಾಕೆ ಹೀಗೆ ಅನ್ನೋದನ್ನ ಮುಂದೆ ನೋಡೋಣ.
ಚಿತ್ರ - ೬
ಚಿತ್ರ-೬ನ್ನ ಗಮನಿಸಿ. ನಾವು ಯಾವ್ದನ್ನ ಉತ್ತರ-ದಕ್ಷಿಣ ರೇಖೆ ಅಂದ್ಕೊಂಡಿದೀವೋ, ಅದೇ ಒಂದೇ ಕಡೆ ಇರಲ್ಲ. ನಿದಾನ ವಾಗಿ ಬದಲಾಗ್ತಿದೆ. ಆದ್ರೆ ಯಾವಾಗ್ಲೂ ಅದು, ಭೂಮಿ ಸೂರ್ಯನ್ನ ಸುತ್ತೋ ಪಾತಳಿಗೆ ಅರವತ್ತಾರೂವರೆ (೬೬.೫) ಡಿಗ್ರಿ ಕೋನದಲ್ಲಿರುತ್ತೆ ಅಷ್ಟೆ. ಈ ಚಲನೆಯನ್ನೆ ಅಯನಾಂಶ (precision) ಅಂತಾರೆ. ಇದು ಬಹಳ ನಿದಾನ. ಭೂಮಿಯ ಅಕ್ಷ (axis, ಉತ್ತರ-ದಕ್ಷಿಣ ರೇಖೆ) ಈ ತರಹ ಒಂದು ಸುತ್ತು ಬರಕ್ಕೆ ಸುಮಾರು ಇಪ್ಪತ್ತಾರು ಸಾವಿರ ವರ್ಷ ಆಗತ್ತೆ.
ಈಗ ಇನ್ನೊಂದು ಕುತೂಹಲದ ವಿಷಯ. ಧ್ರುವ ನಕ್ಷತ್ರದ ಬಗ್ಗೆ ನಾವೆಲ್ಲ ಕೇಳೇ ಇದೀವಿ. ಅದು ಯಾವ್ದು? ಈ ಭೂಮಿಯ ಅಕ್ಷ ಯಾವ ನಕ್ಷತ್ರದ ಕಡೆ ಬೊಟ್ಟು ಮಾಡ್ತಿರತ್ತೋ, ಅದೇ ಧ್ರುವ ನಕ್ಷತ್ರ. ಆದ್ರೆ, ಈ ಅಕ್ಷವೇ ನಿಂತಲ್ಲಿ ನಿಲ್ಲದು ಅಂತ ನಮಗೆ ಗೊತ್ತಾಯ್ತಲ್ಲ? ಹಾಗಾದ್ರೆ, ಧ್ರುವ ನಕ್ಷತ್ರ ನಿಜವಾಗಿ ಧ್ರುವ (= ಚಲನೆಯಿಲ್ಲದ್ದು, ಬದಲಾಯಿಸದ್ದು) ಅನ್ನೋದು ಸರಿಯೇ? ಇಲ್ಲ! ಕಾಲಕ್ಕೆ ತಕ್ಕ ಹಾಗೆ, ನಮ್ಮ ಅಕ್ಷ ಬೊಟ್ಟು ಮಾಡುವೆಡೆಯ ಹತ್ತಿರಕ್ಕೆ ಯಾವ ನಕ್ಷತ್ರ ಕಾಣ್ತಿದೆಯೋ ಅದಕ್ಕೆ ಧ್ರುವ ಅನ್ನೋ ನಾಮಕರಣ ಮಾಡಿಬಿಡ್ತಾರಷ್ಟೇ. ಒಬ್ಬ ಮನುಷ್ಯನ ಜೀವಮಾನದಲ್ಲಿ ಇದರಲ್ಲಿ ಯಾವ ಬದ್ಲಾವಣೆ ನೂ ಕಾಣ್ದೆ ಇರೋದ್ರಿಂದ ಪರ್ವಾಗಿಲ್ಲ ಅಷ್ಟೆ. ಆದ್ರೆ, ಒಂದು ನಿಜ. ವೇದಗಳ ಕಾಲದಲ್ಲಿ ಯಾವ ನಕ್ಷತ್ರವನ್ನ ಧ್ರುವ ಅಂತಿದ್ರೋ, ಈಗ ನಾವು ಯಾವುದನ್ನ ಧ್ರುವ ನಕ್ಷತ್ರ ಅಂತೀವೋ ಅವರಡು ಬೇರೆ ಬೇರೆ ಅನ್ನೋದನ್ನ ಮರೀಬೇಡಿ.
ಈಗ ಅಯನಾಂಶದ ಪರಿಣಾಮ ಸೂರ್ಯನ ಚಲನೆಯ ಮೇಲೆ ಹೇಗಾಗುತ್ತೆ ಅನ್ನೋದನ್ನ ನೋಡೋಣ. ಈ ಉತ್ತರ ದಿಕ್ಕು ಅನ್ನೋದೇ ಬದ್ಲಾಗೋದ್ರಿಂದ, ಸೂರ್ಯ ನಮಗೆ ಉತ್ತರಕ್ಕೆ ತಿರುಗೋದು ಬೇರೆ ಸಮಯದಲ್ಲಿ ಅಂತ ಭಾಸವಾಗುತ್ತೆ. ವರ್ಷಾನುಗಟ್ಟಲೆ, ನೋಡಿ ಆದ್ಮೇಲೆ, ಅದ್ರಿಂದ ಏನು ಗೊತ್ತಾಯ್ತು ಅಂದ್ರೆ, ವಸಂತ ವಿಷುವದ ದಿನ ಸೂರ್ಯ ಮೇಷರಾಶಿಯ ಆರಂಭದಲ್ಲಿ ( First point of Aries, ಮೇಷಾದಿ ಬಿಂದು) ಇಲ್ವೇ ಇಲ್ಲ! ಅದರ ಬದಲು ಮೀನ ರಾಶಿಯಲ್ಲೇ ಇದು ಆಗಿ ಬಿಡುತ್ತೆ. ಇದನ್ನ ಕೆಳಗಿನ ಚಿತ್ರದಲ್ಲಿ ತೋರ್ಸಿದೀನಿ. ಎರಡು ಸಾವಿರ ವರ್ಷದ ಹಿಂದೆ ಇದ್ದ ಸೂರ್ಯನ ಹಾದಿ ಹಳದಿ ಬಣ್ಣದಲ್ಲಿದೆ. ಇವತ್ತಿನ ಸೂರ್ಯನ ದಾರಿ ಕೇಸರಿ ಬಣ್ಣದಲ್ಲಿದೆ.
ಚಿತ್ರ - ೭
ಈಗ ನೋಡಿ. ಸೂರ್ಯನ ಪಥ ಆಕಾಶಮಧ್ಯರೇಖೆಯನ್ನ ದಕ್ಷಿಣದಿಂದ ಉತ್ತರಕ್ಕೆ ದಾಟೋದು ಸುಮಾರು ಹನ್ನೆರಡನೇ ಮೀನ ರಾಶಿಯ ಆರಂಭದಲ್ಲೇ ಆಗಿಹೋಗುತ್ತೆ. ಇದು ನಡೆಯೋದು ಪ್ರತಿ ವರ್ಷ ಮಾರ್ಚ್ ೨೧ರ ಸುಮಾರಿಗೆ. ಹಾಗೇ, ಸೂರ್ಯ ತನ್ನ ಅತೀ ದಕ್ಷಿಣದ ತುದಿಯಿಂದ ಉತ್ತರಕ್ಕೆ ಬರೋದು ಸೂರ್ಯ ೯ ನೆ ರಾಶಿಯಲ್ಲಿರೋವಾಗ್ಲೆ ಆಗಿಹೋಗುತ್ತೆ. ಇದೇ ನಿಜವಾದ ಉತ್ತರಾಯಣ ಪುಣ್ಯಕಾಲ. ಇದು ಈಗ ಡಿಸೆಂಬರ್ ೨೧ಕ್ಕೆ ಜರುಗತ್ತೆ ಪ್ರತೀ ವರ್ಷ.
ಪಾಶ್ಚಾತ್ಯ್ರರು ಏನು ಮಾಡ್ಕೊಂಡಿದಾರೆ ಅಂದ್ರೆ, ಪ್ರತಿ ವರ್ಷ ಆರಂಭವಾಗೋದು ಮೇಷಾದಿ ಬಿಂದುವಿನಿಂದ (First point of Aries) ಅಂತ ಹೇಳ್ತಾ, ಈ ಬಿಂದುವೇ ವರ್ಷೇ ವರ್ಷೆ ಹಿಂದಕ್ಕೆ ಹೋಗ್ತಿದೆ ಅಂತಾರೆ. ಅಂದ್ರೆ, ಮೇಷಾದಿ ಬಿಂದುಗೂ, ನಿಜವಾದ ಮೇಷರಾಶಿಗೂ ಸಂಬಂಧವನ್ನ ಅವರು ಕಡಿದು ಹಾಕಿಬಿಟ್ಟಿದಾರೆ. ಇದಕ್ಕೆ ಸಾಯನ ಪಂಚಾಂಗ ಅಂತ ಹೆಸರು. ಈಗ ಮೇಷಾದಿ ಬಿಂದು ಮೀನ ರಾಶಿಯಲ್ಲಿದೆ. ಇನ್ನು ಕೆಲವು ನೂರು ವರ್ಷಗಳಾದ್ಮೇಲೆ ಅದು ಕುಂಭ ರಾಶಿಗೆ ಹೋಗುತ್ತೆ. ಆದ್ರೆ, ಆಗ್ಲೂ ಅದನ್ನ ಮೇಷಾದಿ ಬಿಂದು ಅಂತ್ಲೇ ಕರ್ಯೋದು.
ಭಾರತದಲ್ಲಿ ನಾವು ನಿರಯನ ಪಂಚಾಂಗವನ್ನ ಉಪಯೋಗಿಸ್ತಿದೀವಿ. ಇದರಲ್ಲಿ ಮೇಷಾದಿ ಬಿಂದುವನ್ನ ನಾವು ಬದ್ಲಾಯಿಸ್ತಾ ಇಲ್ಲ. ಅದರ ಬದಲು ಸೂರ್ಯ ಇಂತಹ ನಕ್ಷತ್ರಕ್ಕೆ ಬಂದಾಗ ವರ್ಷದ ಆದಿ ಅಂತ ಹೇಳ್ತಾ ಇದೀವಿ. ಅದಕ್ಕೇ ವೇದಗಳಲ್ಲಿ ಅದು ಮೃಗಶಿರಾ ಆಗಿತ್ತು. ಬ್ರಾಹ್ಮಣಗಳಲ್ಲಿ ಕೃತ್ತಿಕಾ ಆಗಿತ್ತು. ಪುರಾಣಗಳಲ್ಲಿ ಅಶ್ವಿನಿ ಆಗಿತ್ತು. ಮತ್ತೆ ಈಗ ಇಪ್ಪತ್ತೊಂದನೆ ಶತಮಾನದಲ್ಲಿ ಅದು ಪೂರ್ವಾಭಾದ್ರ ಆಗಿದೆ!
ರಾಶಿಗಳು ಮಾತ್ರ ಎಲ್ಲಿದ್ದವೋ ಅಲ್ಲೇ ಇವೆ. ಅದಕ್ಕೇ, ಸೂರ್ಯ ಈಗಲೂ ಮೇಷ ರಾಶಿಯನ್ನ ಏಪ್ರಿಲ್ ಹದಿನಾಕಕ್ಕೇ ಸೇರ್ತಾನೆ. ಮಕರ ರಾಶಿಯನ್ನ ಜನವರಿ ಹದ್ನಾಕಕ್ಕೇ ಸೇರ್ತಾನೆ. ಅವೇ ಸಂಕ್ರಮಣಗಳು. ಅದಕ್ಕೇ ಮಕರ ಸಂಕ್ರಮಣ ಜನವರಿ ಹದಿನಾಕಕ್ಕೆ.
ಆದ್ರೆ, ಹೀಗೆ ಮಾಡಿರೋದ್ರಿಂದ ಏನಾಯ್ತಪ್ಪ ಅಂದ್ರೆ, ಮೊದಲಿಗೆ ಆ ಹಬ್ಬವನ್ನ ಆಚರಿಸ್ತಿದ್ದ ಕಾರಣವೇ ಮರೆತುಹೋಗೋ ಸಾಧ್ಯತೆ ಇದೆ! ಉತ್ತರಾಯಣ ಪ್ರಾರಂಭವಾಗುತ್ತೆ ಅಂತ ಮಕರ ಸಂಕ್ರಮಣವನ್ನ ಆಚರಿಸ್ತಿದ್ವಿ. ಈಗ ಜನವರಿ ೧೪ರ ಬದಲು ಡಿಸೆಂಬರ್ ೨೧ಕ್ಕೆ ನಿಜವಾದ ಉತ್ತರಾಯಣ ಶುರುವಾಗಿ ಹೋಗಿರತ್ತೆ. ಇದೊಂದೇ ತೊಂದ್ರೆ. ಜನವರಿ ಹದ್ನಾಕರ ದಿವಸ ನಾವು ಹಬ್ಬ ಆಚರಿಸಿದರೆ, ಅದು ಮಕರ ಸಂಕ್ರಮಣ ಆಗುತ್ತೆ- ಉತ್ತರಾಯಣ ಪುಣ್ಯಕಾಲ ಅಂತೂ ಆಗಲ್ಲ.
ಆದ್ರೆ, ಎಳ್ಳು ಬೆಲ್ಲ ತಿಂದು ಒಳ್ಳೇ ಮಾತಾಡಕ್ಕೆ, ಯಾವ ದಿನ ಆದ್ರೇನು? ಪರ್ವಾಗಿಲ್ಲ ಅಂತೀರಾ? ಅದು ನಿಜವೇ!
ಉತ್ತರಾಯಣವೇ ಆಗ್ಲಿ, ಮಕರ ಸಂಕ್ರಮಣವೇ ಆಗ್ಲಿ ; ಎಳ್ಳುತಿನ್ನಲಿ ಅಥವಾ ತಿನ್ನದೇ ಇರ್ಲಿ.
ಒಳ್ಳೇ ಮಾತಂತೂ, ಮರೀದೇ, ಆಡ್ತಾ ಇರೋಣ!
-ಹಂಸಾನಂದಿ
Comments
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
In reply to ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] by poornimas
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
In reply to ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] by hamsanandi
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]
In reply to ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ] by kpbolumbu
ಉ: Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]