Red Tape

Red Tape

ಬರಹ

ರೆಡ್ ಟೇಪ್ ಅಂದರೆ ಓರ್ವ ಇನಿಯ ತನ್ನ ಪ್ರೇಯಸಿಗೆ ನೀಡುವ ಉಡುಗೊರೆ ಯನ್ನು ಸುಂದರವಾಗಿ ಪ್ಯಾಕ್ ಮಾಡಿ ಕಟ್ಟುವ ಕೆಂಪು ಪಟ್ಟಿಯಲ್ಲ. ಇದು ನೌಕರ ಶಾಹಿ ಮತ್ತು ಬಳೆಕೆದಾರ ಎಂಬ ಬಡಪಾಯಿಯ ನಡುವಣ ಪ್ರೇಮ ಸಂಬಂಧ ಬೆಸೆಯುವ ವ್ಯವಸ್ಥೆ.

ಲಂಚವಿಲ್ಲದೆ ಕೆಲಸ ಮಾಡಲೊಲ್ಲದ ಭ್ರಷ್ಟ ನೌಕರರ, ಅಧಿಕಾರಿಗಳ ಸಂಗಮವಂತೆ ನಮ್ಮ ಭವ್ಯ ಭಾರತ. ಹೀಗೆಂದು ಪ್ರಮಾಣ ಪತ್ರ ನೀಡಿದ್ದು ಅಂತರ ರಾಷ್ಟ್ರೀಯ ಸಂಸ್ಥೆಯೊಂದು. ಯಾವುದಾರೂ ಒಂದು ಕಾರಣ ನೀಡಿ ಮೇಜಿನ ಮೇಲಿನಿಂದ ನೀತಿಯುತವಾಗಿ ಮಾಡದ ಕೆಲಸವನ್ನು ಮೇಜಿನಡಿಯಿಂದ ಚಾಚಕ್ಯತೆಯಿಂದ ಮಾಡುವ, ನಮ್ಮಿಂದ ಸೈಕಲ್ ತುಳಿಸೀ, ತುಳಿಸೀ ವಿಕೃತ ಆನಂದ ಪಡೆಯುವ ನೌಕರ ಶಾಹಿ, ಪ್ರಪಂಚ ಬದಲಾದರೂ ತಾನು ಬದಲಾಗಲಾರೆ ಎಂದು ಮೊಂಡು ಹಠ ತೊಟ್ಟಿರುವ ಸಮುದಾಯ. ಇದು ಭಾರತಕ್ಕೆ ಮಾತ್ರ ಸೀಮಿತ ಅಲ್ಲ. ಇದು aids ನಂತೆ. ಬಾಧಿಸದ ದೇಶ ಇಲ್ಲ.

ನಾನಿರುವ ಸೌದಿ ಕತೆ ಕೇಳಿ.
೨೦೦೮ ವರ್ಷದ ಕಂಪೆನಿಯ ಅಂತಿಮ ಬ್ಯಾಲೆನ್ಸ್ ಪ್ರಮಾಣ ಪತ್ರ ಪಡೆಯಲು ಬ್ಯಾಂಕಿಗೆ ಹೋದೆ. ನನ್ನ ಡಾಟಾ ಬಾಂಕಿನಲ್ಲಿದ್ದು ಕಂಪೆನಿಗೆ ಸಂಬಂಧಿಸಿದ ಯಾವುದೇ ಕೆಲಸಗಳಿಗೆ ನಾನು ಅದಿಕೃತ ವ್ಯಕ್ತಿ ಎಂದು ಕಂಪೆನಿ ಬ್ಯಾಂಕಿಗೆ ಪತ್ರ ನೀಡಿತ್ತು. ಆದರೂ ಬ್ಯಾಲೆನ್ಸ್ ಪತ್ರ ಪಡೆಯಲು authorization letter ತರುವಂತೆ ಹೇಳಿದರು. ಸರಿ ಅದನ್ನು ತಂದೆ. ಪತ್ರ ಸರಿಯಿಲ್ಲ, ಈ ಪ್ರಮಾಣ ಯಾವ ಕಾರ್ಯಕಾಗಿ ಎಂದು ನಮೂದಿಸಬೇಕು ಎಂದು ಹೇಳಿದರು. ನನಗೆ ಕೋಪ ಬಂದು ಕೇಳಿದೆ. ಬ್ಯಾಂಕಿನಲ್ಲಿ ಕಂಪೆನಿ deposit ಮಾಡಿದ ಹಣದ ಮೊತ್ತ ಮಾತ್ರ ಕೇಳುತ್ತಾ ಇರುವುದು. ನಿಮ್ಮಿಂದ ಲೋನ್ ಆಗಲಿ ಬೇರೆ ಯಾವುದೇ ಉಪಕಾರವನ್ನಾಗಲಿ ನಾನು ಬೇಡುತ್ತಿಲ್ಲ, ಅಷ್ಟಕ್ಕೂ ನಮ್ಮ ಬ್ಯಾಲೆನ್ಸ್ ಪತ್ರ ನೀಡಲು ನಿಮಗೇಕೆ ಇಲ್ಲದ ಸವಾಲು? ಅಲ್ಲದೆ ಈ ಪತ್ರಕ್ಕೆ ಚಾರ್ಜ್ ಸಹ ಮಾಡುತ್ತಿದ್ದೀರ ಎಂದು ಕೇಳಿದೆ. ಅದಕ್ಕವನ ಉತ್ತರ ಇಲ್ಲ this is our requirement ಎಂದು. ಸರಿ ಇವರ ಹತ್ತಿರ ತಲೆ ಚಚ್ಚಿಕೊಂಡು ಪ್ರಯೋಜನ ಇಲ್ಲ ಎಂದು ಮತ್ತೊಂದು ಲೆಟರ್ ತಯಾರು ಮಾಡಿ ತಂದೆ. ಅದನ್ನು ಓದಿ, this is ok ಎಂದು ಕಂಪ್ಯೂಟರ್ ನಿಂದ ಪ್ರಿಂಟ್ ಔಟ್ ತೆಗೆದ. ಈ ಪತ್ರಕ್ಕೆ ಸ್ಟಾಂಪ್ ( ಸೀಲು ) ನ ಅವಶ್ಯಕತೆ ಇದೆ, ನಾಳೆ ಕೊಡುತ್ತೇವೆ ಪತ್ರವನ್ನು. ನಾನಂದೆ ಈಗಲೇ ಸ್ಟಾಂಪ್ ಹಾಕಿ ಕೊಡಬಾರದೇ ಎಂದು. ಅದಕ್ಕೆ ಅವ ಹೇಳಿದ " no this is bank's policy to release the letter only after 24 hours of request". ಈಗ ಏನು ಹೇಳೋದು? ಹೊರಗೆ ೫೦ ಡಿಗ್ರಿ ಬಿಸಿಲಿನ ಧಗೆ, ಮುಂದಿರುವ ವ್ಯಕ್ತಿ ಸಾಲದು ಎಂಬಂತೆ ಮತ್ತಷ್ಟು ಉರಿಸುತ್ತಿದ್ದಾನೆ ಎಂದು ಬ್ಯಾಂಕಿನಿಂದ ಹೊರ ಬಂದೆ.

ಮೇಲೆ ಹೇಳಿದ ಬ್ಯಾಂಕಿನಿಂದ ಇಲ್ಲಿ ಉದ್ಯಮಿಯಾಗಿರುವ ನನ್ನ ಭಾವ ಅರ್ಧ ಮೊತ್ತ ನೀಡಿ mercedes ಕಾರ್ ಕೊಂಡರು. ತಿಂಗಳಿಗೆ ಇಷ್ಟು ಎಂದು ಕಂತು. ಕಂತು ಮುಗಿದ ನಂತರ ಕಾರಿನ ಪೇಪರ್ ತಮ್ಮ ಹೆಸರಿಗೆ ಮಾಡಿ ಕೊಳ್ಳಲು ಹೋದರೆ ಹಣ ಬಾಕಿ ಇದೆ ಕೊಡಲಾಗುವುದಿಲ್ಲ ಎಂದು ಉತ್ತರ. ಪರಿಶೀಲಿಸಿದಾಗ ೨೭ ಲಕ್ಷ ೫೦ ಸಾವಿರ ರೂಪಾಯಿ ಕಾರಿಗೆ ಪಾವತಿ ಮಾಡಿದ ನಂತರ ಉಳಿದದ್ದು ಎಷ್ಟು ಗೊತ್ತಾ? ಇಲ್ಲಿಯ ಒಂದು ರಿಯಾಲ್( ೧೨.೫ ರೂಪಾಯಿ ). ಆ ಒಂದು ರಿಯಾಲ್ ಪಾವತಿ ಮಡಿದ ನಂತರವೇ ಡಾಕ್ಯುಮೆಂಟ್ಸ್ ಸಿಕ್ಕಿದ್ದು.

ಹಿಂದೆಂದೋ ಓದಿದ ನೆನಪು.
ಸೋವಿಯತ್ ರಶ್ಶಿಯಾ ದಲ್ಲೂ ಇದೇ ರೀತಿಯ ನೌಕರ ಶಾಹಿಯ ತಲೆ ನೋವು. ಬಂಡವಾಳ ಶಾಹಿಯನ್ನು ಕಿತ್ತೊಗೆದರೂ ನೌಕರ ಶಾಹಿ ಉಳಿದುಕೊಂಡಿತು.

ಒಬ್ಬ ಪಿಂಚಣಿ ಪಡೆಯಲು ಸರಕಾರೀ ಕಚೇರಿಗೆ ಹೋಗುತ್ತಾನೆ. ಅಲ್ಲಿ ನೂರೆಂಟು ಸವಾಲುಗಳು, ಪ್ರಶ್ನೆಗಳು. ಅಧಿಕಾರಿ ಒಂದೊಂದೇ ಪತ್ರ ಕೇಳುತ್ತಾನೆ. ಮೊದಲಿಗೆ ಇವನ ಹುಟ್ಟಿನ ಪ್ರಮಾಣ ಪತ್ರ, ನಂತರ ಹೆಂಡತಿಯದು. ಅದಾದ ನಂತರ ತಾನು ವಾಸವಿರುವ ಸ್ಥಳದ ನಕ್ಷೆ, ಹೀಗೆ ಒಂದೊಂದಾಗಿ ಕೇಳುತ್ತಾ ಹೋದ ಅಧಿಕಾರಿಯ ಬೇಕುಗಳನ್ನು ವಿಧೇಯನಾಗಿ ತನ್ನ ಬ್ಯಾಗಿನಿಂದ ತೆಗೆದು ತೆಗೆದೂ ಕೊಡುತ್ತಿರುತ್ತಾನೆ. ಈ ರೀತಿ ತಾನು ಕೇಳಿದ್ದನ್ನೆಲ್ಲವನ್ನೂ ಕೊಡುತ್ತಿರುವ ಗಿರಾಕಿಯನ್ನು ನೋಡಿ ಅಧಿಕಾರಿಗೆ ಕೋಪ. ಇದೆಲ್ಲವನ್ನು ಎಣಿಸಿ, ಚೆನ್ನಾಗಿಯೇ ತಯಾರಾಗಿ ಬಂದಿದ್ದ ಈ ವ್ಯಕ್ತಿ. ಏನಾದರೂ ಸರಿ, ಇವನ ಪಿಂಚಣಿ ಕೊಡಬಾರದು ಎಂದು ಅಧಿಕಾರಿಯ ನಿಲುವು. ಪಿಂಚಣಿ ಪಡೆಯದೆ ಬಿಡೇ ಎಂದು ತ್ರಿವಿಕ್ರಮನಂತೆ ಹಠ ತೊಟ್ಟ ಬಡಪಾಯಿ. ಕೊನೆಗೆ ಸೋತೂ ಸೋಲೊಪ್ಪದ ಆಧಿಕಾರಿ ಬ್ರಹ್ಮಾಸ್ತ್ರ ಬಿಡುತ್ತಾನೆ, ತೆಗಿ ನಿನ್ನ "ಅತ್ತೆಯ ವಿವಾಹ ಪ್ರಮಾಣ" ಪತ್ರವನ್ನು ಎಂದು. ನೋಡ ನೋಡುತ್ತಿದ್ದಂತೆ ಬರುತ್ತದೆ ಬ್ಯಾಗಿನಿಂದ ಅತ್ತೆಮ್ಮನ ವಿವಾಹದ ಪ್ರಮಾಣ ಪತ್ರ. ಇದನ್ನು ನೋಡಿದ ಆಧಿಕಾರಿ ಸುಸ್ತಾಗಿ ಕೂಡಲೇ ತನ್ನ drawer ಒಳಗಿನಿಂದ ಪಿಸ್ತೋಲ್ ತೆಗೆದು ತನ್ನ ಹಣೆಗೆ ಗುಂಡು ಹೊಡೆದುಕೊಂಡು ಸಾಯುತ್ತಾನೆ. ಸತ್ತರೂ ಸರಿ ನಿನ್ನ ಕೆಲಸ ಮಾಡಿ ಕೊಡುವುದಿಲ್ಲ ಎಂಬ ಹಠ ಈ ಅಧಿಕಾರಿಯದು.

ನೀವೂ ಸಹ ಸಾಕಷ್ಟು ಚಪ್ಪಲಿಗಳನ್ನು ಸವೆಸಿ ಕೊಂಡಿರಬೇಕು, ತಾಲೂಕ್ ಆಫೀಸ್ ನಿಂದ D.C ಆಫೀಸ್ ವರೆಗೆ ಅಲ್ಲವೇ?
ಚಪ್ಪಲಿ ಜೊತೆಗೆ ಹಲ್ಲೂ ಸಹ ಸವೆದಿರಬೇಕು, ಮಸೆದೂ ಮಸೆದೂ.
ಬರೆದಾದರೂ ತೀರಿಸಿಕೊಳ್ಳಿ ಕೋಪವನ್ನು, ಹತಾಶೆಯನ್ನು.