ಬಸಂತ್ ಮುಖಾರಿ

ಬಸಂತ್ ಮುಖಾರಿ

ಅವತ್ತಿನಿಂದ ಡಾ.ಕೇಶವ ಕುಲಕರ್ಣಿ ಅವರು ಯಾವುದಾದರೂ ರಾಗದ ಬಗ್ಗೆ ಬರ್ದಿಲ್ವಲ್ಲ ಅಂತ ಹೇಳ್ತಾನೇ ಇದ್ರು. ಇವತ್ತು ಇದ್ದಕ್ಕಿದ್ದ ಹಾಗೆ ಈಗಿನ್ನೂ ವಸಂತ ಋತು ಅನ್ನೋದು ನೆನಪಾಯ್ತು. ಇವತ್ತು ಇಲ್ಲಿ ಕನ್ನಡಕೂಟದ ಕಾರ್ಯಕ್ರಮದಲ್ಲಿ ವಸಂತ ರಾಗದಲ್ಲಿ ಕೊಳಲು ಜುಗಲ್ಬಂದಿ ಅಂತಲೂ ನೋಡ್ದೆ, ಆದ್ರೆ ಇವತ್ತು ಬೇರೆ ಕೆಲಸ ಇರೋದ್ರಿಂದ ನಾನು ಕನ್ನಡಕೂಟದ ವಸಂತೋತ್ಸವ ಕಾರ್ಯಕ್ರಮಕ್ಕೆ ಚಕ್ಕರ್ ಹಾಕ್ಬೇಕಾಯ್ತು.

ಆದ್ರೆ ಹಿಂದೂಸ್ತಾನಿ ಪದ್ಧತಿಯಲ್ಲಿ ಕರ್ನಾಟಕ ಸಂಗೀತದ ವಸಂತಕ್ಕೆ ತೀರಾ ಹತ್ತಿರವಾದ ರಾಗ ಯಾವ್ದೂ ಇಲ್ಲವಲ್ಲ? ಬಸಂತ್ ರಾಗ ಹೆಸರಿನಲ್ಲಿ ಹತ್ತಿರವಾಗಿದ್ರೂ ರಾಗದ ಸ್ವರಗಳಲ್ಲಾಗಲೀ ಚಲನೆಯಲ್ಲಾಗಲೀ ಹತ್ತಿರವಿಲ್ಲ. ಇನ್ನು ಹಿಂದೂಸ್ತಾನಿಯ ಭಿನ್ನಷಡ್ಜ ರಾಗಕ್ಕೂ, ದಕ್ಷಿಣಾದಿಯ ವಸಂತಕ್ಕೂ ಸ್ವಲ್ಪ ಹೋಲಿಕೆ ಇದ್ದರೂ ಪೂರ್ತಿ ಒಂದೇ ಇಲ್ಲ. ಇರಲಿ, ಯಾವ ರಾಗ ನುಡಿಸಿದರು ಅಂತ ಆಮೇಲೆ ತಿಳ್ಕೊಂಡ್ರಾಯ್ತು.

ಆದ್ರೆ ವಸಂತ ಅನ್ನೋ ಹೆಸರು ಬರುವಂತಹ ದಕ್ಷಿಣಾದಿಯ ರಾಗಗಳು ಹಲವು ಇವೆ. ಹಿಂದೋಳ ವಸಂತ, ಶುದ್ಧವಸಂತ, ವಸಂತ ವರಾಳಿ, ವಸಂತ ಭೈರವಿ ಹೀಗೆ. ಇವುಗಳಲ್ಲಿ ವಸಂತ ಭೈರವಿ ಅನ್ನುವುದು ಸ್ವಲ್ಪ ಹಳೆಯ ರಾಗ. ಹದಿನಾಕು ಹದಿನೈದನೇ ಶತಮಾನದಲ್ಲಿ ಪ್ರಸಿದ್ಧವಾಗಿದ್ದ ರಾಗವೇ.
ವಿಜಯನಗರದ ಅಳಿಯ ರಾಮರಾಯನ ಕಾಲದಲ್ಲಿದ್ದ ರಾಮಾಮಾತ್ಯ ವಸಂತ ಭೈರವಿಯನ್ನ ಒಂದು ಮೇಳವಾಗಿಯೂ, ರಾಗವಾಗಿಯೂ ಹೇಳುತ್ತಾನೆ. ಅಂದಿನಿಂದ ಈ ರಾಗ ದಕ್ಷಿಣಾದಿ ಸಂಗೀತದಲ್ಲಿ ಹೆಚ್ಚಾಗಿ ಬದಲಾವಣೆಗಳನ್ನು ಕಾಣದೇ ಅದೇ ಲಕ್ಷಣಗಳನ್ನು ಉಳಿಸಿಕೊಂಡು ಬಂದಿದೆ. ಈ ರಾಗದ ಆರೋಹಣ ಅವರೋಹಣಗಳು ಹೀಗಿವೆ:

ಸ ರಿ ಗ ಮ ದ ನಿ ಸ
ಸ ನಿ ದ ಮ ಪ ಮ ಗ ರಿ ಸ

ಆರೋಹದಲ್ಲಿ ಪಂಚಮ ವರ್ಜ್ಯ - ಅಂದರೆ ಪಂಚಮವಿಲ್ಲ. ಅವರೋಹಣದಲ್ಲಿ ಪಂಚಮ ವಕ್ರ - ಅಂದರೆ ಅದುಯಾವಾಗಲೂ ’ದ ಮ ಪ ಮ’ ಎನ್ನುವ ಸಂಚಾರದಲ್ಲೇ ಬರಬೇಕು. ಪ್ರಕೃತಿ ಸ್ವರಗಳಾದ ಷಡ್ಜ ಪಂಚಮಗಳಲ್ಲದೇ ಶುದ್ಧ ರಿಷಭ, ಅಂತರಗಾಂಧಾರ, ಶುದ್ಧ ಮಧ್ಯಮ, ಶುದ್ಧ ಧೈವತ ಮತ್ತು
ಕೈಶಿಕಿ ನಿಷಾದಗಳು ಈ ರಾಗಕ್ಕೆ ಬರುವ ಸ್ವರಗಳು. ಮೇಳಗಳು ಎನ್ನುವ ವಿಂಗಡಣೆ ಮೊದಮೊದಲು ಬಂದಾಗ ಮೇಳವೆಂದರೆ ಏಳೂ ಸ್ವರಗಳು ಬಳಕೆಯಲ್ಲಿರಬೇಕೆಂಬುದಿತ್ತೇ ವಿನಾ ಆರೋಹಣ ಅವರೋಹಣಗಳೆರಡರಲ್ಲೂ ಏಳೂ ಸ್ವರಗಳು ಕ್ರಮವಾಗಿ ಬರಬೇಕೆನ್ನುವ ನಿಯಮವೇನಿರಲಿಲ್ಲ. ಹಾಗಾಗಿ ಸುಮಾರು ೧೫೫೦ರಲ್ಲಿ ರಾಮಾಮಾತ್ಯ ಬರೆದ ಸ್ವರಮೇಳ ಕಲಾನಿಧಿ ಯಲ್ಲಿ, ವಸಂತಭೈರವಿ ಒಂದು ಮೇಳವಾಗಿಯೂ, ರಾಗವಾಗಿಯೂ ವರ್ಣಿತವಾಗಿವೆ.

ನಂತರ ಸುಮಾರು ೧೬೫೦ರಲ್ಲಿ ವೆಂಕಟಮಖಿಯೂ ತನ್ನದೇ ಆದ ಎಪ್ಪತ್ತೆರಡು ಮೇಳಗಳ ವ್ಯವಸ್ಥೆಯನ್ನು ವಿವರಿಸಿದ ನಂತರ, ತನ್ನ ಕಾಲದಲ್ಲಿ ಪ್ರಸಿದ್ಧವಾಗಿದ್ದ ಮೇಳಗಳಲ್ಲಿ ವಸಂತಭೈರವಿಯನ್ನೂ ಒಂದಾಗಿ ಎಣಿಸಿ, ತನ್ನ ಪದ್ದ್ಧತಿಯಲ್ಲಿ ಇದು ಹದಿನಾಕನೇ ಮೇಳವಾಗುತ್ತದೆಂದು ವಿವರಿಸುತ್ತಾನೆ. ಅವನ ನಂತರ
ಎರಡು ಮೂರು ತಲೆಮಾರುಗಳಲ್ಲಿ ಬಂದ ಮುದ್ದುವೆಂಕಟಮಖಿಯು, ಈ ರಾಗಕ್ಕೆ ಕಟಪಯಾದಿ ಸಂಖ್ಯೆ ತಿಳಿಯಲು 'ವಾಟಿ' ಅನ್ನುವ ಮುನ್ನೊಟ್ಟು*(prefix) ಸಮೇತ ವಾಟೀವಸಂತಭೈರವಿ ಎಂದು ಕರೆದಿದ್ದಾನೆ.

ಹದಿನೆಂಟನೇ ಶತಮಾನದ ವಾಗ್ಗೇಯಕಾರರಾದ ತ್ಯಾಗರಾಜರೂ, ಮುತ್ತುಸ್ವಾಮಿ ದೀಕ್ಷಿತರೂ ವಸಂತಭೈರವಿಯಲ್ಲಿ ರಚನೆಗಳನ್ನು ಮಾಡಿದ್ದಾರೆ.
ತ್ಯಾಗರಾಜರ 'ನೀ ದಯರಾದಾ' ಎಂಬ ರಚನೆ ಬಹಳ ಪ್ರಸಿದ್ಧವೂ ಆಗಿದೆ:


೧೮ನೇ ಶತಮಾನದ ಹೊತ್ತಿಗೆ ಮೇಳಕರ್ತವಾಗಬೇಕಾದರೆ, ಯಾವ ಲಕ್ಷಣಗಳಿರಬೇಕು ಅನ್ನುವ ತಿಳಿವಿನಲ್ಲಿ ಸ್ವಲ್ಪ ಬದಲಾವಣೆಯಾಯಿತು. ಸಂಗೀತ ಪ್ರಪಂಚದಲ್ಲಿ ಇದು ನಡೆದುಕೊಂಡು ಹೋಗುವ ವಿಷಯವೇ. ಒಟ್ಟಿನಲ್ಲಿ ಏಳುಸ್ವರಗಳಿದ್ದರೆ ಸಾಕು ಅನ್ನುವದರ ಬದಲು, ಆರೋಹಣ ಅವರೋಹಣ ಎರಡೂ ಕಡೆ
ಏಳೂ ಸ್ವರಗಳು ಬರಬೇಕೆಂದೂ, ಅಷ್ಟೇ ಅಲ್ಲದೆ ಅವು ಕ್ರಮವಾಗಿಯೇ ಇರಬೇಕೆಂಬ ಹೊಸ ಕಲ್ಪನೆಯನ್ನು ಗೋವಿಂದಾಚಾರ್ಯನ ಸಂಗ್ರಹ ಚೂಡಾಮಣಿ ಅನ್ನುವ ಪುಸ್ತಕ ಮೊದಲ ಬಾರಿಗೆ ತೋರಿಸುತ್ತೆ. ಈ ಪುಸ್ತಕದಲ್ಲೇ ಕ್ರಮಸಂಪೂರ್ಣವಾದ ೭೨ ಮೇಳರಾಗಗಳ ಹೊಸದೊಂದು ಪಟ್ಟಿಯೂ
ಇದೆ. ಮೊದಲು ಸ್ವರಗಳು ವಕ್ರವೋ ವರ್ಜ್ಯವೋ ಆಗಿದ್ದ ವಸಂತ ಭೈರವಿ ಮೊದಲಾದ ರಾಗಗಳನ್ನು ಮೇಳಗಳನ್ನಾಗಿ ಪರಿಗಣಿಸುವುದು ನಿಂತುಹೋಗಿ, ಹದಿನಾಕನೇ ಮೇಳಕರ್ತವಾಗಿ ’ವಕುಳಾಭರಣ’ ಎಂಬ ಕ್ರಮ ಸಂಪೂರ್ಣ ರಾಗವನ್ನು ಕಲ್ಪಿಸಿಕೊಳ್ಳಲಾಯಿತು

ವಕುಳಾಭರಣದ ಆರೋಹ ಅವರೋಹಗಳು ಹೀಗೆ:
ಸ ರಿ೧ ಗ೩ ಮ೧ ಪ ದ೧ ನಿ೨ ಸ
ಸ ನಿ೨ ದ೧ ಪ ಮ೧ ಗ೩ ರಿ೧ ಸ

ಈ ಹೊಸ ಮೇಳಪದ್ಧತಿಯ ಮೇಳರಾಗಗಳು ಸುಮಾರು ಎಲ್ಲದರಲ್ಲೂ ರಚನೆಗಳನ್ನು ಮಾಡಿದ ತ್ಯಾಗರಾಜರು ವಕುಳಾಭರಣ ರಾಗದಲ್ಲೂ ಕೂಡ ರಚನೆಗಳನ್ನು ಮಾಡಿದ್ದಾರೆ. ಆದರೆ, ಅಸಂಪೂರ್ಣ ಮೇಳಪದ್ಧತಿಯ ಸಂಪ್ರದಾಯಕ್ಕೆ ಕಟ್ಟುಬಿದ್ದ ದೀಕ್ಷಿತರು ವಸಂತ ಭೈರವಿಯಲ್ಲಿ ರಚನೆ ಮಾಡಿದರೇ ಹೊರತು ವಕುಳಾಭರಣ ರಾಗವನ್ನು, ಅದರ ಸಾಧ್ಯತೆಗಳನ್ನು ಗಮನಿಸಲಿಲ್ಲ.

ಈ ವಕುಳಾಭರಣ ರಾಗಕ್ಕೆ ಸ್ವಲ್ಪ ಮಟ್ಟಿಗೆ ಹೋಲುವ ಹಿಜಾಜ್ ಎನ್ನುವ ಅರೇಬಿಯಾದ ಸಂಗೀತದ ರಾಗವೂ ಒಂದಿದ್ದು, ಅದು ಭಾರತೀಯ ಸಂಗೀತದಲ್ಲೂ (ಉತ್ತರಾದಿಯಲ್ಲಿ) ಹಿಜಾಜ್ ಎಂದೂ, ದಕ್ಷಿಣಾದಿಯಲ್ಲಿ ಹೆಜ್ಜುಜ್ಜಿ ಎಂದೂ ಬಳಕೆಯಲ್ಲಿತ್ತು. ೧೫-೧೮ನೇ ಶತಮಾನದ ಕಾಲದಲ್ಲಿ ಹೆಜ್ಜುಜ್ಜಿ ಬಳಕೆಯಲ್ಲೇ ಇದ್ದು ಅದನ್ನು ೧೩ನೇ ಮೇಳರಾಗವಾಗಿ ಪರಿಗಣಿಸಲಾಗುತ್ತಿತ್ತು. ನಂತರ ಸ್ವಲ್ಪ ಅದರ ರೂಢಿ ಎರಡೂ ಪದ್ಧತಿಗಳಲ್ಲಿ ಸ್ವಲ್ಪ ತಪ್ಪಿತು. ವಕುಳಾಭರಣವು
೧೯-೨೦ನೇ ಶತಮಾನದಲ್ಲಿ ಸ್ವಲ್ಪ ಜನಮನ್ನಣೆ ಗಳಿಸಿದ ನಂತರ ಹಿಂದೂಸ್ತಾನಿ ಪದ್ಧತಿಯಲ್ಲೂ ವಕುಳಾಭರಣವನ್ನೇ ಬಸಂತ್ ಮುಖಾರಿ ಎನ್ನುವ ಹೆಸರಿನಲ್ಲಿ ಅಳವಡಿಸಿಕೊಂಡು ಹಾಡಲಾಗುತ್ತಿದೆ. ಇದು ಇಪ್ಪತ್ತನೇ ಶತಮಾನದಲ್ ನಡುವೆ ಬಂದ ಬಳಕೆ. ಹಿಜಾಜ್ ರಾಗ ಹೇಗಿದ್ದರೂ ರೂಢಿ ತಪ್ಪಿದ್ದರಿಂದ ಸುಮಾರು ಅದನ್ನೇ ಹೋಲುವ ಬಸಂತ್ ಮುಖಾರಿ ಆ ಜಾಗಕ್ಕೆ ಬಂದಿದೆ ಎಂದರೂ ತಪ್ಪಿಲ್ಲ.

ಬಸಂತ್ ಮುಖಾರಿ ರಾಗವನ್ನು ಸದ್ಯಕ್ಕೆ ಭೈರವ್ ಥಾಟ್ ನಲ್ಲೇ ಹೇಳುವುದಾದರೂ, ಭೈರವ್ ಥಾಟಿನಲ್ಲಿಲ್ಲದ ಒಂದು ಸ್ವರ ಈ ರಾಗದಲ್ಲಿ ಬಂದಿರುವುದು ಅಲ್ಲಿಯ ೧೦ ಥಾಟ್ ಪದ್ಧತಿಗೆ ಒಂದು ರೀತಿ ತೊಡಕಾಗಿವೆ ಅನ್ನಬಹುದು. ಆದರೆ ಥಾಟ್ ಅನ್ನುವುದು ಒಂದು ವಿಂಗಡಣಾ ಕ್ರಮ ಮಾತ್ರ ಆದ್ದರಿಂದ, ಆ ಕಾರಣಕ್ಕಾಗಿ ಇಂತಹ ರಾಗಗಳನ್ನು ಒಳಗೊಳ್ಳಲು ಕರ್ನಾಟಕ ಸಂಗೀತದ ೭೨ ಮೇಳಪದ್ಧತಿಯನ್ನೇ ಹಿಂದೂಸ್ತಾನಿಗೂ ಅಳವಡಿಸಿಕೊಳ್ಳಬಹುದು ಅನ್ನುವ ಮಾತೂ ಇದೆ.
ಷಣ್ಮುಖಪ್ರಿಯ, ಸಿಂಹೇಂದ್ರಮಧ್ಯಮ, ಚಾರುಕೇಶಿ, ಧರ್ಮವತಿ ಮೊದಲಾದ ಹಲವಾರು ಮೇಳರಾಗಗಳು ಹಿಂದೂಸ್ತಾನಿಯಲ್ಲೂ ಈಗ ಜನಪ್ರಿಯವಾಗುವ ಹಿನ್ನಲೆಯಲ್ಲಿ ಇದು ಯೋಚಿಸಬಹುದಾದ ಮಾತು ಕೂಡ.

ಅದೇನೇ ಇರಲಿ, ಈ ವಸಂತ ಕಾಲದಲ್ಲಿ ಈ ಎರಡು ರಾಗಗಳ ಚರಿತ್ರ ನೆನಪಾಯ್ತು. ಅದಕ್ಕೇ ಬರೆದೆ, ಅಷ್ಟೇ!

-ಹಂಸಾನಂದಿ

Rating
No votes yet

Comments