ದೇವಿ ದರ್ಶನಮ್

ದೇವಿ ದರ್ಶನಮ್

ಕೆಲಸದ ಒತ್ತಡದ ಮಧ್ಯೆಯೂ ವಾರಾಂತ್ಯದಲ್ಲಿ ಸ್ವಲ್ಪ ಬಿಡುವು ಸಿಕ್ಕಿತು. ಅಂದು ಒಂದೆರಡು ಕ್ಯಾಸೆಟ್ ಹಾಡುಗಳನ್ನು ಡಿಜಿಟೈಸ್ ಮಾಡುವ ಕಾರ್ಯ ಕೈಗೊಂಡೆ. ಉಬುಂಟುವಿನಲ್ಲಿ ಸೌಂಡ್ ಕೇಳಿಸುತ್ತಿರಲಿಲ್ಲ. ಕೆಲವು ಸಿಸ್ಟಮ್‍ಗಳಿಗೆ ಸ್ವಲ್ಪ ಟ್ವೀಕ್ ಮಾಡಬೇಕಂತೆ. ಅಂತರ್ಜಾಲದಲ್ಲಿದ್ದ ಕೆಲವು ಸೂಚನೆಗಳನ್ನು ಪಾಲಿಸಿ ಉಬುಂಟುವಿನಲ್ಲಿ ಶಬ್ದ ಬರಿಸಿದ್ದಾಯಿತು. ನಂತರ ಸೌಂಡ್ ರೆಕಾರ್ಡರ್ ತೊಂದರೆ. ರೆಕಾರ್ಡ್ ಸರಿಯಾಗಿ ಆಗುತ್ತಿರಲಿಲ್ಲ. ವಾಲ್ಯೂಮ್ ಕಂಟ್ರೋಲ್ ತೆರೆದಾಗ ಇನ್ಪುಟ್ ಡಿವೈಸ್ ಯಾವುದೋ ಸೆಲೆಕ್ಟ್ ಆಗಿತ್ತು. ಕಡೆಗೆ ಅದನ್ನು analog inputಗೆ ಸರಿಪಡಿಸಿದ ನಂತರ ಎಲ್ಲವೂ ಸರಿಹೋಯಿತು. ಹಾಗೆ ಅಡಾಸಿಟಿ ಕೂಡ ತಂದಿದ್ದೆ. ಬರೋಬ್ಬರಿ ೩೦ ಪ್ಯಾಕೇಜ್ ಗಳನ್ನು ಸ್ಥಾಪಿಸಿದ ನಂತರ ರೆಕಾರ್ಡಿಂಗ್ ಶುರು. ಅಡಾಸಿಟಿ ನಿಜಾವಾಗಿಯೂ ಅದ್ಭುತ ತಂತ್ರಾಂಶ. ಆಡಿಯೋ ಪ್ರಾಸೆಸ್ಸಿಂಗ್ ತುಂಬಾ ಸುಲಭ. ಒಂದು ತೊಂದರೆ ಎಂದರೆ, ಕ್ಯಾಸೆಟ್ ಗಳನ್ನು ರೆಕಾರ್ಡ್ ಮಾಡಿದನಂತರ split-tracks-automatically ಆಪ್ಶನ್ ಇಲ್ಲ. ಆದರೂ ಪರ್ವಾಗಿಲ್ಲ. ರೆಕಾರ್ಡಿಂಗ್ ಕ್ವಾಲಿಟಿ ಅಂತು ಕ್ಯಾಸೆಟ್‍ನಲ್ಲಿ ಕೇಳಿದಂತೆ ಸ್ಪಷ್ಟವಾಗಿದೆ. ಸಣ್ಣ ವಾಲ್ಯೂಮಿನಲ್ಲಿ ರೆಕಾರ್ಡ್ ಮಾಡಿದೆ. ನಂತರ ಬೇಕಾದರೆ ಅಡಾಸಿಟಿಯಲ್ಲೇ amplify ಆಪ್ಶನ್ ಕೂಡ ಇದೆ. ನಾಯ್ಸ್ ಬರದಂತೆ ಆಂಪ್ಲಿಫೈ ಮಾಡುತ್ತದೆ.

ಮೊದಲ ರೆಕಾರ್ಡಿಂಗ್ ಸಂಗೀತ ಶಿವಕುಮಾರ್ ಹಾಡಿದ "ದೇವಿ ದರ್ಶನಮ್" ಧ್ವನಿ ಮುದ್ರಿಕೆ. ಅದರ ಸಂಗೀತ ಸಂಯೋಜನೆ, ಗಾಯನ, ಪಕ್ಕವಾದ್ಯ ಅದ್ಭುತ. ತುಂಬಾ ಹಳೆ ಕ್ಯಾಸೆಟ್. ಈಗೀಗ ಸಿಗುತ್ತದೋ ಇಲ್ಲವೋ. ತುಂಬಾ ಚೆನ್ನಾಗಿ ಹಾಡಿದ್ದಾರೆ. ವಿಶೇಷವಾಗಿ ಸುಬ್ರಾಯ ಶಾಸ್ತ್ರಿಗಳ ಜನನೀ ನಿನುವಿನ(ರೀತಿಗೌಳ), ದೀಕ್ಷಿತರ ಅನ್ನಪೂರ್ಣೆ ವಿಶಾಲಾಕ್ಷಿ(ಸಾಮ) ಮತ್ತು ಸರಸಿಜನಾಭ ಸೋದರಿ(ನಾಗಗಾಂಧಾರಿ), (ಇದನ್ನು ರಚಿಸಿದವರು ತಿಳಿದಿಲ್ಲ)ಸಾಮಗಾನಪ್ರಿಯೆ(ಆನಂದ-ಭೈರವಿ) ಗಳಂತೂ ಸೂಪರ್. ಕರ್ನಾಟಕ ಶಾಸ್ತ್ರೀಯ ಸಂಗೀತಾಸಕ್ತರು ಕೇಳಲೇಬೇಕಾದ ಧ್ವನಿ ಮುದ್ರಿಕೆ. ಉಳಿದವು ಚೆನ್ನಾಗಿಲ್ಲ ಅಂತ ಅಲ್ಲ. ಹಿಮಗಿರಿತನಯೆ(ಶುದ್ಧಧನ್ಯಾಸಿ) ಇಂದ ಹಿಡಿದು ಪಾಹಿಮಾಂ ಶ್ರೀ ರಾಜರಾಜೇಶ್ವರಿ(ಜನರಂಜನಿ)ವರೆಗಿನ ಎಲ್ಲಾ ಹಾಡುಗಳು ಸುಮಧುರವಾಗಿದೆ, ವಿಶೇಷವಾಗಿ ಸಂಗೀತ ಸಂಯೋಜನೆ.

ಎರಡನೆಯದು ಶ್ರೀ ವಿದ್ಯಾಭೂಷಣರ "ಉದಯರಾಗ". ಹೆಚ್.ಕೆ.ನಾರಾಯಣ್ ಅವರ ಸಂಗೀತ ಸಂಯೋಜನೆ, ದಾಸರ ಪದಗಳ ಸನ್ನಿವೇಶಕ್ಕೆ ಜೋಡಿಸುವ ರಾಗಗಳ ಬಗ್ಗೆ ಎರಡು ಮಾತಿಲ್ಲ. ವಿದ್ಯಾಭೂಷಣರ ಧ್ವನಿ ಮುದ್ರಿಕೆಗೆ ಹೆಚ್ಚಾಗಿ ಹೆಚ್.ಕೆ ನಾರಾಯಣ್ ಅವರ ಸಂಗೀತ ಸಂಯೋಜನೆ. ಇದರಲ್ಲಿ ತುಂಬಾ ಇಷ್ಟವಾಗಿದ್ದು ಭೌಳಿ ರಾಗದ ಏಳು ನಾರಾಯಣನೆ, ಬಿಲಹರಿ ರಾಗದ ಬೆಳಗು ಜಾವದಿ ಬಾರೋ ಹರಿಯೆ, ಮೋಹನ ರಾಗದ ರಂಗ ನಾಯಕ ಮತ್ತು ಮಧ್ಯಮಾವತಿ ರಾಗದ ಈಶ ನಿನ್ನ ಚರಣ ಭಜನೆ. ಅದರಲ್ಲೂ ಏಳು ನಾರಾಯಣನೆ, ಈಶ ನಿನ್ನ ಚರಣ ಭಜನೆ ಹಾಡುಗಳ ಸಂಗೀತ ಸಂಯೋಜನೆ ಅದ್ಭುತ.

ಮೂರನೆಯದು ವಿದ್ಯಾಭೂಷಣರದ್ದೆ ಆದ "ಕೃಷ್ಣನ ಕಂಡಿರಾ". ಇದರಲ್ಲೂ ಹೆಚ್.ಕೆ ನಾರಾಯಣ್ ಅವರ ಸಂಗೀತ ಹಾಗೂ ರಾಗಗಳ ಆಯ್ಕೆ ಅದ್ಭುತವಾಗಿದೆ. ಅಭೇರಿಯ ಮುರಳಿಯ ನಾದವ ಕೇಳಿ ಇಂದ ಖರಹರಪ್ರಿಯದ ಗುಮ್ಮನ ಕರೆಯದಿರೆ ವರೆಗೂ ಅದ್ಭುತ ಹಾಡುಗಾರಿಕೆ ಮತ್ತು ಸಂಗೀತ. ಅದರಲ್ಲೂ ಆರಭಿಯ ಕೃಷ್ಣಮೂರ್ತಿ ಕಣ್ಣಮುಂದೆ, ಮುಖಾರಿಯ ಮಕ್ಕಳ ಮಾಣಿಕವೆ, ಚಾರುಕೇಶಿಯ ನೀರೆ ತೋರೆಲೆ, ಖರಹರಪ್ರಿಯದ ಗುಮ್ಮನ ಕರೆಯದಿರಿ ಮನಸ್ಸಿಗೆ ಬಹಳ ಮುದ ನೀಡುತ್ತದೆ. ಗುಮ್ಮನ ಕರೆಯದಿರೆ ಹಾಡಿನಲ್ಲಿ ಕೃಷ್ಣನು ಯಶೋಧೆ ಬಳಿ ಗುಮ್ಮನನ್ನು ಕರೆಯದಂತೆ ವಿನಂತಿಸಿಕೊಳ್ಳುವುದು ಮತ್ತು ಅದಕ್ಕೆ ಖರಹರಪ್ರಿಯ ರಾಗ ಅದ್ಭುತವಾಗಿ ಹೊಂದಿಕೊಳ್ಳುತ್ತದೆ.

ಆಸಕ್ತರು ಈ ಧ್ವನಿ ಮುದ್ರಿಕೆ ಇಲ್ಲವೇ ಸಿಡಿ ಕೊಂಡು ಕೇಳಿ, ಬಹಳ ಚೆನ್ನಾಗಿದೆ.

Rating
No votes yet

Comments