ಡೆಲ್ಮಾಂಟ್, ಕನ್ನಡಿಗರಿಗೆ ಯಾಕೆ ಡಲ್ ಮಾಂಟ್ ಆಗಲಿದೆ ಗೊತ್ತ?

ಡೆಲ್ಮಾಂಟ್, ಕನ್ನಡಿಗರಿಗೆ ಯಾಕೆ ಡಲ್ ಮಾಂಟ್ ಆಗಲಿದೆ ಗೊತ್ತ?

ಹಣ್ಣಿನ ರಸ ಮಾರಲು ಸಿಂಗಾಪುರದಿಂದ ಭಾರತದ ಮಾರುಕಟ್ಟೆಗೆ ಬಂದಿಳಿದಿರುವ ಕಂಪನಿ ಡೆಲ್ಮಾಂಟ್.
ಭಾರತದೊಳಗೆ ಇದೀಗ ತಾನೆ ಕಾಲಿಡುತ್ತಿರುವ ಸಂಸ್ಥೆ ಇದಾಗಿರುವುದರಿಂದ ಬಹುಶಃ ಇವರಿಗೆ ಭಾರತದ ಭಾಷಾ ವೈವಿಧ್ಯತೆ ತಿಳಿದಿಲ್ಲ. ಹಾಗೆಯೇ ಇವರಿಗೆ ಕರ್ನಾಟಕದಲ್ಲಿ ಮಾರುಕಟ್ಟೆಯ ಉದ್ದಗಲದಲ್ಲಿ ತನ್ನ ಉತ್ಪನ್ನಗಳನ್ನು ಮಾರಲು ಸಾಧ್ಯವಾಗಲು ಕನ್ನಡದ ಬಳಕೆ ಎಷ್ಟು ಮುಖ್ಯ ಎಂದು ಇವರಿಗೆ ತಿಳಿದಿರಲಾರದು. ಇದು ಇವರ ಜಾಹಿರಾತುಗಳ ಮತ್ತು ಉತ್ಪನ್ನಗಳ ಮೇಲ್ಪದರಗಳಿಂದಲೂ ಎದ್ದು ಕಾಣುತ್ತಿದೆ.

ಇಲ್ಲಿಯ ವೈವಿಧ್ಯಮಯ ಮಾರುಕಟ್ಟೆಯನ್ನು ನಿಭಾಯಿಸಲು ಅನುಕೂಲವಾಗುವಂತೆ ಭಾರ್ತಿ ಎಂಟರ್-ಪ್ರೈಸೆಸ್ ಜೊತೆ ಸಹಭಾಗಿತ್ವ ಮಾಡಿಕೊಂಡು "ಭಾರ್ತಿ - ಡೆಲ್ಮಾಂಟ್ ಫ್ರೆಶ್ ಫುಡ್ಸ್ (http://fieldfreshfoods.in/)" ಹೆಸರಿನಡಿ ತನ್ನ ಉತ್ಪನ್ನಗಳನ್ನು ಮಾರುತ್ತಿದೆ. ಒಂದು ಮಾರುಕಟ್ಟೆಯನ್ನು ಗೆಲ್ಲಲು ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂಬುದು ಡೆಲ್ಮಾಂಟ್ ಬೆಳೆಸಿರುವ ಈ ಸಂಬಂಧದಿಂದ ಸುಲಭವಾಗಿ ಗೊತ್ತಾಗುತ್ತಿದೆ. ತನ್ನ ಉತ್ಪನ್ನಗಳಿಗೆ ಸೂಪರ್-ಮಾರ್ಕೆಟ್ ಗಳಲ್ಲಿ ಸೂಕ್ತ ಜಾಗ ಸಿಗುವಂತಾಗಲು ರಿಟೇಲ್ ಉದ್ದಿಮೆಗಳೊಂದಿಗೆ ಒಪ್ಪಂದ ಕೂಡ ಮಾಡಿಕೊಂಡಿದೆ ಭಾರ್ತಿ - ಡೆಲ್ಮಾಂಟ್.

ಇಷ್ಟೆಲ್ಲಾ ಸಿದ್ಧತೆ ಮಾಡಿಕೊಂಡರೂ, ಗ್ರಾಹಕರನ್ನು ಆಕರ್ಷಿಸುವಲ್ಲಿ ಭಾಷೆಯ ಮಹತ್ವವನ್ನು ಪರಿಗಣಿಸದೇ, ಭಾರ್ತಿ - ಡೆಲ್ಮಾಂಟ್ ಎಡವಿದಂತೆ ತೋರುತ್ತಿದೆ. ಇವರ ಪ್ಯಾಕೇಜ್-ಗಳಲ್ಲಾಗಲೀ, ಹೋರ್ಡಿಂಗ್-ಗಳಲ್ಲಾಗಲೀ ಅಥವಾ ಕನ್ನಡ ದಿನಪತ್ರಿಕೆಗಳಲ್ಲಿ ಮೂಡಿ ಬಂದ ಜಾಹಿರಾತುಗಳಲ್ಲಾಗಲೀ ಒಂದಕ್ಷರ ಕನ್ನಡ ಬಳಸಿಲ್ಲ.

"ಲೈಫ್ ಸ್ಟೈಲ್ ಫುಡ್ ಪ್ರಾಡಕ್ಟ್ಸ್" ಎಂಬ ವಿಭಾಗಕ್ಕೆ ಸೇರಲ್ಪಡುವ ಇವರ ಉತ್ಪನ್ನಗಳು, ಇಂಗ್ಲಿಷ್ ಬಲ್ಲ ಕೆಲವೇ ಜನತೆಯನ್ನು ಮಾತ್ರ ಆಕರ್ಷಿಸುತ್ತಿದೆ.
ಕೊಂಡಿಯಲ್ಲಿ ಕಂಡಂತೆ ಗೂಗಲ್ ನಂತಹ ಕಂಪನಿಗಳು ಭಾಷಾ ವೈವಿಧ್ಯತೆಯನ್ನು ಅರಿತು, ಆಂಗ್ಲದ ನಿಯಮಿತ ಹಿಡಿತ ಅರಿತು, ಅದಕ್ಕೆ ತಕ್ಕಂತೆ ಬದಲಾವಣೆ ಹೊಂದಿರುವುದರಿಂದಲೇ ಭಾರತದ ಮಾರುಕಟ್ಟೆಯಲ್ಲಿ ಅದರ ಸ್ಥಾನ ಉನ್ನತವಾಗಿರುವುದು. ಇಂದಿನ ಉದಾರೀಕೃತ ಮಾರುಕಟ್ಟೆಯಲ್ಲಿ ಯಾವುದೇ ಕಂಪನಿ ಈ ರೀತಿ ಬದಲಾವಣೆ ಮಾಡಿಕೊಳ್ಳದೇ ಮಾರುಕಟ್ಟೆಯಲ್ಲಿ ಬದುಕುಳಿಯಲು ಅಸಾಧ್ಯವೆಂದು ಭಾರ್ತಿ-ಡೆಲ್ಮಾಂಟ್ ನವರೂ ತಿಳಿಯಬೇಕಾಗಿದೆ.

ಈಗಾಗಲೇ ತುಂಬಿರುವ ಮಾರುಕಟ್ಟೆಯಲ್ಲಿ ಒಳ್ಳೆಯ ಪಾಲು ಸಂಪಾದಿಸಲು, "ಭಾರ್ತಿ - ಡೆಲ್ಮಾಂಟ್"-ಗೆ (ತನ್ನ ಜಾಹಿರಾತುಗಳಲ್ಲಿ) ತಾನೇ ನಿರ್ಮಿಸಿಕೊಂಡಿರುವ ಭಾಷೆ ಎಂಬ ಅಡ್ಡ-ಗೋಡೆ ದಾಟುವುದು ಅವಶ್ಯಕವಾಗಿದೆ.
ಭಾರ್ತಿ - ಡೆಲ್ಮಾ೦ಟ್ ತನ್ನ ಜಾಹಿರಾತುಗಳಲ್ಲಿ ಕನ್ನಡ ಬಳಸೋದ್ರಿಂದ, ಪ್ಯಾಕೇಜ್-ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ವಿವರಣೆ ನೀಡೋದ್ರಿಂದ, ಕರ್ನಾಟಕದ ಜನತೆಯನ್ನು ಸುಲಭವಾಗಿ ತಲುಪಬಹುದು, ಜನರ ನಂಬಿಕೆ ಗಳಿಸಬಹುದು. ಕನ್ನಡಿಗ ಗ್ರಾಹಕನನ್ನು ಸರಿಯಾಗಿ ಮುಟ್ಟುವ ಅವಶ್ಯಕತೆ ಅರಿತ "ಕೋಕಾ ಕೋಲಾ" ಕನ್ನಡಮಯ ಜಾಹೀರಾತು ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

"ಒಂದು ಉತ್ಪನ್ನದ ಬಗ್ಗೆ ವ್ಯಾಪಕ ಅರಿವು, ವ್ಯಾಪಾರವಾಗಿ ಬದಲಾಗುವುದರಲ್ಲಿ ಸಂದೇಹವಿಲ್ಲ" ಎಂಬುದು ಪ್ರತಿಯೊಬ್ಬ ಮಾರ್ಕೆಟಿಂಗ್ ಗುರುವೂ ಒಪ್ಪುವ ಮಾತು. ಮಾರ್ಕೆಟಿಂಗ್ ಸ್ಪೆಷಲಿಸ್ಟ್ ಮೇಸನ್ ಹಿಪ್ ಅವರ ಮಾತಿನಲ್ಲಿ ಹೇಳುವದಾದರೆ:
"If you make them understand why your product is great, they’ll buy dozens. But, if you can’t relate that to them in their language, then your idea or product is likely to be misunderstood, forgotten, and generally lost in the shuffle."

ಬನ್ನಿ, ಈ ಕಂಪನಿ-ಗೆ ಮಿಂಚೆ ಬರೆದು, ಅವರಿಗೆ ಕರ್ನಾಟಕದ ಮಾರುಕಟ್ಟೆಯಲ್ಲಿ ಕನ್ನಡದ ಪ್ರಾಶಸ್ತ್ಯ ಮತ್ತು ಇವರು ತೆಗೆದುಕೊಳ್ಳಬೇಕಾದ ಹೆಜ್ಜೆಗಳ ಬಗ್ಗೆ ಅರಿವು ಮೂಡಿಸೋಣ. ಯಾವುದೇ ಹೊಸ ಪದಾರ್ಥ ಕೊಳ್ಳುವಾಗ ಸಾಮಾನ್ಯವಾಗಿ ಇರುವ ಹಿಂಜರಿತ ಹೋಗಲಾಡಿಸಲು ಬೇಕಾದ ಮಾಹಿತಿ ಜನತೆಗೆ ಅರ್ಥವಾಗದಿದ್ದಲ್ಲಿ, ವ್ಯಾಪಾರ ಕುದುರಿಸುವುದು ಕಷ್ಟ ಎಂದು ಇವರಿಗೆ ನೆನಪು ಮಾಡಿಸೋಣ!
ಇವರು ಬದಲಾಗಿ, ಕನ್ನಡಿಗ ಗ್ರಾಹಕನಿಗೆ ತನ್ನದೇ ಭಾಷೆಯಲ್ಲಿ ಈ ಉತ್ಪನ್ನಗಳ ಒಳಿತು/ಕೆಡುಕುಗಳ ಮಾಹಿತಿ ದೊರೆಯುವಂತಾಗಲು ಕಾರಣರಾಗೋಣ.

ಮಿಂಚೆ: info@bhartidelmonte.in

ಜಾಗೃತ ಗ್ರಾಹಕರು / Jaagruta Graahakaru

Rating
No votes yet

Comments