ಟೆಕ್ ಸುದ್ದಿ - ವರ್ಚುಅಲ್ ಬಾಕ್ಸ್ ನಲ್ಲೀಗ ಆಟ ಆಡಿ, ಮಜಾ ಮಾಡಿ

ಟೆಕ್ ಸುದ್ದಿ - ವರ್ಚುಅಲ್ ಬಾಕ್ಸ್ ನಲ್ಲೀಗ ಆಟ ಆಡಿ, ಮಜಾ ಮಾಡಿ

  ವರ್ಚುಅಲ್ ಬಾಕ್ಸ್ - ಈಗಾಗಲೆ ಕಂಪ್ಯೂಟರಿನಲ್ಲಿ ನಡೀತಿರೋ ಆಪರೇಟಿಂಗ್ ಸಿಸ್ಟಂನ ಮೇಲೆ ಮತ್ತೊಂದು ಆಪರೇಟಿಂಗ್ ಸಿಸ್ಟಂ ಅನ್ನು, ಬೇರೆಯದೇ ಕಂಪ್ಯೂಟರ್ನಲ್ಲಿ ನೆಡೆಸಿ ಅದನ್ನು ನಮ್ಮ ಕಂಪ್ಯೂಟರ್ ತೆರೆಯ ಮೇಲೆಯೇ ಮೂಡುವಂತೆ ಮಾಡಬಲ್ಲ ತಂತ್ರಾಂಶ.

ವಿಂಡೋಸ್ ಬಳಸಿ ಅಭ್ಯಾಸವಿರುವವರಿಗೆ, ಗ್ನು/ಲಿನಕ್ಸ್ ಬಳಸಿ ನೋಡಿ ಅಂತಂದ್ರೆ ಸ್ವಲ್ಪ ಹಿಂದು ಮುಂದು ನೋಡ್ತಾರೆ.. ಅದಕ್ಕೇ, ನೀವೇನೂ ಅದನ್ನು ವಿಂಡೋಸ್ ಕಿತ್ತು ಹಾಕಿ ಬಳಸ ಬೇಕಿಲ್ಲಾ, ಈಗಿರುವ ವಿಂಡೋಸ್ ಮೇಲೆಯೇ ವರ್ಚುಅಲ್ ಬಾಕ್ಸ್ ಇನ್ಸ್ಟಾಲ್ ಮಾಡಿಕೊಳ್ಳಿ.. ಅದರ ಒಳಗೆ ಲಿನಕ್ಸ್ ಇನ್ಸ್ಟಾಲ್ ಮಾಡಿಕೊಳ್ಳಬಹುದು ಅಂತ ಹೇಳಿ ಅನೇಕ ಜನರಿಗೆ ಇದರ ಪರಿಚಯವನ್ನೂ ಮಾಡಿಸಿದ್ದಿದ್ದೆ. ಹಾಗೆಯೇ, ವಿಂಡೋಸ್ ಬಳಸಲಿಕ್ಕೆ ಮನಸ್ಸಿಲ್ಲದಿದ್ದರೂ, ಹೊಸದಾಗಿ ಬಂದ ವಿಂಡೋಸ್ -೭ ರಲ್ಲಿ ಏನಿದೆ ನೋಡಿಯೇ ಬಿಡೋಣ ಎಂದೆನಿಸಿದಾಗ, ಗ್ನು/ಲಿನಕ್ಸ್ ನಲ್ಲಿ ಕೆಲಸ ಮಾಡುತ್ತಿರುವ ಲ್ಯಾಪ್ಟಾಪ್ ನಲ್ಲಿ ವರ್ಚುಅಲ್ ಬಾಕ್ಸ್ ಇನ್ಸ್ಟಾಲ್ ಮಾಡಿಕೊಂಡು ಅದರಲ್ಲೇ ವಿಂಡೋಸ್ ೭ ನ ವರ್ಚುಅಲ್ ಪಿ.ಸಿ ಇನ್ಸ್ಟಾಲ್ ಮಾಡಿನೋಡಿದ್ದೂ ಆಯ್ತು.

- ಅಂದ್ರೆ ಹೊಸ ಸಿಸ್ಟಂ ಕೊಳ್ಳದೆ, ಇರುವ ಹಾರ್ಡ್ವೇರ್ ಅನ್ನೇ ಉಪಯೋಗಿಸಿ ಒಮ್ಮೆಲೆ ಒಂದಕ್ಕಿಂತ ಹೆಚ್ಚು ಆಪರೇಟಿಂಗ್ ಸಿಸ್ಟಂಗಳನ್ನು ಕಂಪ್ಯೂಟರಿನಲ್ಲಿ ಬಳಸಲಿಕ್ಕೆ ಅವಕಾಶ ದೊರೆಯಿತು ಅನ್ನಬಹುದು. 

 ಇಷ್ಟೇನಾ ಅಂದ್ರಾ? ಇನ್ನೂ ಬೇಕಷ್ಟಿದೆ ಮಾರಾಯ್ರೆ...

- ನಿಮ್ಮ ಕಂಪ್ಯೂಟರಿನಲ್ಲಿರುವ ಇಂಟರ್ನೆಟ್ ಅನ್ನೇ ನಿಮ್ಮ ವರ್ಚುಅಲ್ ಬಾಕ್ಸ್ ನಲ್ಲಿರೋ ಆಪರೇಟಿಂಗ್ ಸಿಸ್ಟಂ/ವರ್ಚುಅಲ್ ಪಿ.ಸಿ ಬಳಸಿಕೊಳ್ಳುತ್ತದೆ. ಅಲ್ಲಿಂದಲೂ ನೀವು ಚಾಟ್ ಇತ್ಯಾದಿ ಮಾಡಿಕೊಳ್ಳಬಹುದು. ನನ್ನ ಡಯಲಪ್ ಕೂಡ ಇದೇ ರೀತಿ ಕೆಲಸ ಮಾಡುತ್ತೆ ಗೊತ್ತಾ?

- ಲಿನಕ್ಸಾಯಣದ ಎಷ್ಟೋ ಲೇಖನಗಳ ಚಿತ್ರಪಟಗಳನ್ನು ಅಷ್ಟು ಚೆನ್ನಾಗಿ ಮೌಸ್ ಪಾಯಿಂಟರ್ ನ ಜೊತೆ ತಗೀಲಿಕ್ಕಾದದ್ದೂ ಇದರಿಂದಲೇ..

- ನಿಮ್ಮ ಸೌಂಡ್ ಕಾರ್ಡ್ ಕೂಡ ವರ್ಚುಅಲ್ ಪಿ.ಸಿ ನಲ್ಲಿ ಕೆಲಸ ಮಾಡಿಸಬಹುದು..

- ಯು.ಎಸ್.ಬಿ ಡ್ರೈವ್ ಅಂದ್ರಾ? ಅದನ್ನೂ ಸೇರಿಸಿಕೊಳ್ಳಿ..

- ಆಪರೇಟಿಂಗ್ ಸಿಸ್ಟಂ ಇನ್ಸ್ಟಾಲ್  ಮಾಡ್ಲಿಕ್ಕೆ ಬೇಜಾರಾ? ಲೈವ್ ಸಿ.ಡಿ ರನ್ ಮಾಡಿ ಬಿಡಿ.. ಅದೂ ಕೂಡ ನೀರು ಕುಡಿದಷ್ಟೇ ಸುಲಭ

-ಸಿ.ಡಿ ಯಿಂದ ನಿಧಾನವಾಗಿ ಲೈವ್ ಸಿ.ಡಿ ಕೆಲಸ ಮಾಡುತ್ತೆ ಅಂದ್ರಾ? ಸಿ.ಡಿಯನ್ನೂ ನಿಮ್ಮ ಕಂಪ್ಯೂಟರ್ಗೆ ಕಾಪಿ ಮಾಡಿಕೊಂಡು ಅದರ ಐ.ಎಸ್.ಓ ಇಮೆಜಿನಿಂದಲೇ ನಿಮ್ಮ ವರ್ಚುಅಲ್ ಪಿ.ಸಿ ಕೆಲಸ ಮಾಡುವಂತೆ ಮಾಡಬಹುದು... ಸಕತ್ ಫಾಸ್ಟ್ ಆಗಿ ಕೆಲಸ ಮಾಡುತ್ತೆ

- ನೆಟ್ವರ್ಕ್, ಸೆಕ್ಯೂರಿಟಿ ತಂತ್ರಾಂಶಗಳ ಮೇಲೆ ಅಭ್ಯಾಸ ಮಾಡುವವರಿಗೂ ಇದು ಒಂದು ವರದಾನ.. ಸಧ್ಯಕ್ಕೆ ಬ್ಯಾಕ್ಟ್ರಾಕ್ ಮೇಲೆ ಕೆಲಸ ಮಾಡಲು ನಾನು ವರ್ಚುಅಲ್ ಬಾಕ್ಸ್ ಬಳಸುತ್ತಿದ್ದೀನಿ...

ಮತ್ತೆ ಆಟದ ಬಗ್ಗೆ?

 ಹೌದು.. ನಾನು ಹೇಳ್ಬೇಕು ಅಂದದ್ದೂ ಅದರ ಬಗ್ಗೆನೆ. 

 ಕಂಪ್ಯೂಟರ್ ಗೇಮ್ಸ್ ಆಡುವವರಿಗೆ ವಿಂಡೋಸ್ ನ ಅನೇಕ ಗೇಮ್ ಗಳು ಇರಲೇ ಬೇಕು.. ಅದಕ್ಕೆ ಗ್ರಾಫಿಕ್ಸ್ ಕಾರ್ಡ್ ಕೆಲಸ ಮಾಡ್ಲೇ ಬೇಕು. ಇದೆಲ್ಲಾ ವರ್ಚುಅಲ್ ಬಾಕ್ಸ್ ಒಳಗೆ ಇನ್ಸ್ಟಾಲ್ ಮಾಡಿದ ವಿಂಡೋಸನಲ್ಲಿ ಆಗುತ್ತಾ? ಯಾಕಿಲ್ಲ

 ವರ್ಚುಅಲ್ ಬಾಕ್ಸ್ ನ ಡೆವೆಲಪರ್ಸ್ ತಂಡ ಇದರ ಮೇಲೆ ಈಗಾಗಲೇ ಬಹಳಷ್ಟು ಕೆಲಸ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾದ ವರ್ಚುಅಲ್ ಬಾಕ್ಸ್ ೩ ರ ಬೀಟಾ (ಇನ್ನೂ ಅಭಿವೃದ್ದಿ ಹಂತದಲ್ಲಿರುವ ತಂತ್ರಾಂಶದ ಆವೃತ್ತಿ)  ಆವೃತ್ತಿಯಲ್ಲಿ ವಿಂಡೋಸ್ ನ DirectX ೮ ಮತ್ತು ೯ ಡೈರೆಕ್ಟ್ ೩ಡ್ ಗ್ರಾಫಿಕ್ಸ್ ತಂತ್ರಜ್ಞಾನ ಕೆಲಸ ಮಾಡುವಂತೆ ಮಾಡಲಾಗಿದೆ. ಇದರ ಬಗೆಗಿನ ಹೆಚ್ಚಿನ ಮಾಹಿತಿ ಈ ಕೊಂಡಿಯಲ್ಲಿದೆ.

ಮತ್ತೇಕೆ ಯೋಚಿಸ್ತಿದ್ದೀರಿ.. ಎದ್ದು ಒಂದೆರಡು ಗೇಮ್ ಆಡ್ರಲ್ಲ ಮತ್ತೆ... 

 

 

Rating
No votes yet

Comments